ವಾಹನ ಅಫಘಾತ, ಬೈಕ್ ಸವಾರನಿಗೆ ಗಾಯ.
- ಕಾರು ಹಾಗೂ ಮೋಟಾರು ಸೈಕಲ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕೈಕೇರಿಯಲ್ಲಿ ನಡೆದಿದೆ. ದಿನಾಂಕ 22/10/2011ರಂದು ಕೈಕೇರಿಯ ಪಡಿಕಲ್ ಜಂಕ್ಷನ್ ಬಳಿ ಕಳತ್ಮಾಡು ಗ್ರಾಮದ ಸತೀಶ್ ಎಂಬವರು ಅವರ ಕಾರಿನಲ್ಲಿ ಗೋಣಿಕೊಪ್ಪದ ಕಡೆಗೆ ಬರುತ್ತಿರುವಾಗ ಅರುತೊಕ್ಲು ಗ್ರಾಮದ ಶರತ್ ಎಂಬಾತನು ಆತನ ಮೋಟಾರು ಸೈಕಲ್ ಸಂ.ಕೆಎ-16-ಹೆಚ್-4652ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿನ ಬಲ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿದ್ದು, ಬೈಕ್ ಸವಾರ ಶರತ್‌ಗೂ ಸಹ ಗಾಯಗಳಾದ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಸ್ತಿ ವಿವಾದದಲ್ಲಿ ಮಹಿಳೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
- ಆಸ್ತಿ ವಿವಾದದಿಂದ ತಮ್ಮನೇ ಅಕ್ಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2011ರಂದು ರಾತ್ರಿ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ಸಿ.ಕೆ.ಗಣೇಶ ಎಂಬಾತನು ತನ್ನ ಅಕ್ಕ ಸಿ.ಕೆ.ಪಾರ್ವತಿ ಎಂಬಾಕೆಯೊಂದಿಗೆ ಆಸ್ತಿ ವಿಚಾರದಲ್ಲಿ ಜಗಳವಾಡಿ ಕೈಯಿಂದ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಗರ ಸಭಾಧ್ಯಕ್ಷರಿಗೆ ದೂರವಾಣಿ ಮೂಲಕ ನಿಂದನೆ, ಬೆದರಿಕೆ
- ದಿನಾಂಕ 22/10/2011ರಂದು ಮಡಿಕೇರಿ ನಗರ ಸಭಾಧ್ಯಕ್ಷ ಹೆಚ್.ಎಂ.ನಂದಕುಮಾರ್‌ರವರಿಗೆ ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ಅಶ್ಲೀಲ ಶಬ್ದಗಳಿಂದ ವಿನಾಕಾರಣ ನಿಂದಿಸೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಂಬಿಕೆ ದ್ರೋಹ, ಪ್ರಕರಣ ದಾಖಲು
- ಮಡಿಕೇರಿಯ ಕಾವೇರಿ ಹಾಲ್ ಮುಂಭಾಗದಲ್ಲಿರುವ ಅರಸ್ ಕಾರ್ ಸರ್ವೀಸ್ ಸೆಂಟರ್ ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಅನೀಶ್ ಪೂವಯ್ಯ ಎಂಬಾತನು ವಿವಿಧ ಗ್ರಾಹಕರಿಂದ ಕಾರ್ ಖರೀದಿಸುವ ಬಗ್ಗೆ ಮುಂಗಡವಾಘಿ ಹಣ ಪಡೆದುಕೊಂಡು ಅದನ್ನು ಸಂಸ್ಥೆಗೆ ಪಾವತಿಸದೆ ಸುಮಾರು ರೂ 14 ಲಕ್ಷದಷ್ಟು ಹಣಕ್ಕೆ ಮೋಸ ಮಾಡಿರುವುದಾಗಿ ಸದ್ರಿ ಸಂಸ್ಥೆಯ ವ್ಯವಸ್ಥಾಪಕ ಅಪ್ಪಣ್ಣ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
