Tuesday, April 23, 2013

ಕಾಡಾನೆ ಧಾಳಿ, ಗಾಯಾಳು ಸಾವು 
       ಕಾಡಾನೆ ಧಾಳಿಯಿಂದ ಗಾಯಗೊಂಡ ವ್ಯಕ್ತಿ ಮೃತ ಪಟ್ಟಿರುವ ಘಟನೆ ಸೋಮವಾರಪೇಟೆ ಬಳಿಯ ಅಡಿನಾಡೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 19.04.2013 ರಂದು ರಾತ್ರಿ 07:30 ಪಿ.ಎಂ.ಗೆ ಅರಣ್ಯ ರಕ್ಷಕ ಪರಮೇಶ್‌ರವರೊಂದಿಗೆ ಅರಣ್ಯ ವೀಕ್ಷಕರಾದ ಕುಟ್ಟಪ್ಪರವರು ಬಾಣವಾರ ಶಾಖೆಯ ಅರಣ್ಯದಲ್ಲಿ  ಆಡಿನಾಡೂರು ಕೂಡು ರಸ್ತೆಯ ಗಸ್ತಿನಲ್ಲಿ ಗಸ್ತು ಕರ್ತವ್ಯ ಮಾಡಿಕೊಂಡಿರುವಾಗ್ಗೆ ಎದುರಿನಿಂದ ಬಂದ ಒಂದು ಕಾಡಾನೆಯು ಕುಟ್ಟಪ್ಪ ಮತ್ತು ಪರಮೇಶರವರನ್ನು ಕಂಡು ಅಟ್ಟಿಸಿಕೊಂಡು ಬಂದಾಗ ಕುಟ್ಟಪ್ಪನವರು ಜೀವ ರಕ್ಷಣೆಗಾಗಿ ಮರವನ್ನು ಹತ್ತಲು ಪ್ರಯತ್ನಿಸಿದ್ದು, ಅವರ ಪ್ರಯತ್ನ ಸಫಲವಾಗದೆ ಕಾಡಾನೆ ಅವರ ಬಳಿ ಬಂದು ಸೊಂಡಿಲಿನಿಂದ ಹಿಡಿದು ಎಳೆದು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅವರ ಎದೆಯ ಭಾಗ ಹಾಗೂ ಶರೀರದ ಕೆಲವು ಭಾಗಗಳು ಜಖಂಗೊಂಡಿದ್ದು  ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಹಾಸನದ ಮಂಗಳ ಆಸ್ಪತ್ರೆಗೆ ದಾಖಲು ಪಡಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಲಕಿಯ ಮೇಲೆ ದೊಣ್ಣೆಯಿಂದ ಹಲ್ಲೆ 
       ಬಾಲಕಿಯೊಬ್ಬರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಮೂರ್ನಾಡು ಸಮೀಪದ ಕೋಡಂಬೂರು ಗ್ರಾಮದಲ್ಲಿ ನಡೆದಿದೆ.  ಕೋಡಂಬೂರು ಗ್ರಾಮದ ವಾಸು ಎಂಬವರ 14 ವರ್ಷ ಪ್ರಾಯದ ಮಗಳು ಮೇಘ ಎಂಬಾಕೆಯು  ದಿನಾಂಕ 22-04-2013 ರಂದು ತಂದೆ ತಾಯಿ, ಬೇಬಿ, ಅಕ್ಕಾ ವೀಣಾ ಹಾಗೂ ಚಿಕ್ಕಪ್ಪನ ಮಗಳಾದ ರೀನಾರವರ ಜೊತೆ ಚೆಯ್ಯಂಡಾಣೆ ಗ್ರಾಮಕ್ಕೆ ಊರ ಹಬ್ಬ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿ ಊರಿನವರಾದ ಹಾಗೂ ನೆರೆಮನೆಯವರಾದ ಪ್ರಮೋದ್, ಪ್ರಸನ್ನ ಮತ್ತು ಕಿಶೋರ್‌ರವರು ಬಂದಿದ್ದು  ಸಾಯಂಕಾಲ ಪ್ರಮೋದ್ ಎಂಬಾತನು ಆತನ ಮೊಬೈಲ್‌ನಿಂದ ಮೇಘರವರ ಹಾಗೂ ಅವರ ಅಕ್ಕ ವೀಣಾ, ಮತ್ತು ರೀನಾರವರ ಫೋಟೋವನ್ನು ತೆಗೆದುಕೊಂಡಿರುವುದು ನೋಡಿ ಹಬ್ಬ ಮುಗಿಸಿ ಮನೆಗೆ ಬಂದು ಮನೆಯ ಅಂಗಳದಲ್ಲಿ ಇರುವಾಗ್ಗೆ ಪ್ರಮೋದ್, ಪ್ರಸನ್ನ ಮತ್ತು ಕಿಶೋರ್‌ರವರು ಬಂದಾಗ ಮೇಘರವರು ಅವರ  ಫೋಟೋವನ್ನು ಪ್ರಮೋದ್ ನ  ಮೊಬೈಲ್‌ನಲ್ಲಿ ತೆಗೆದ ಬಗ್ಗೆ ಆಕ್ಷೇಪಿಸಿದ್ದು, ಆಗ ಪ್ರಮೋದ್ ಹಾಗೂ ಇತರರು ಅಶ್ಲೀಲ ಪದಗಳಿಂದ ಆಕೆಯನ್ನು ನಿಂದಿಸಿ ಪ್ರಮೋದ್‌ನು ಅಲ್ಲೇ ಇದ್ದ ಮರದ ದೊಣ್ಣೆಯಿಂದ ಮೇಘರವರ ತಲೆಯ ಮುಂಭಾಗಕ್ಕೆ ಹೊಡೆದು ನೋವುಪಡಿಸಿದ್ದು, ಆಕೆಯು ಬೊಬ್ಬೆ ಹಾಕಿದಾಗ ತಂದೆ ವಾಸು ಹಾಗು ಚಿಕ್ಕಪ್ಪನವರಾದ ಮಾದಪ್ಪನವರು ಬಂದಾಗ ಆರೋಪಿಗಳು ದೊಣ್ಣೆಯನ್ನು ಅಲ್ಲೇ ಬಿಸಾಡಿ ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಮುರಿದು ಚಿನ್ನಾಭರಣ ಹಾಗೂ ಕರಿಮೆಣಸು ಕಳವು 
       ಮನೆಯ ಬೀಗ ಮುರಿದು ಪ್ರವೇಶಿಸಿ ರೂ. 39,000/- ಮೌಲ್ಯದ ಚಿನ್ನಾಭರಣ ಹಾಗೂ  ಕರಿಮೆಣಸನ್ನು ಕಳವು ಮಾಡಿದ ಪ್ರಕರಣ ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ಎಂಬಲ್ಲಿ ನಡೆದಿದೆ. ನಾಪೋಕ್ಲಿನ ಕಲ್ಲುಮೊಟ್ಟೆ ನಿವಾಸಿ ಎಂ.ಪಿ.ಪದ್ಮನಾಭ ಎಂಬವರು ದಿನಾಂಕ 17/04/2013ರಂದು ಕಾಶರಗೋಡಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ದಿನಾಂಕ 22/04/2013ರ ಸಂಜೆ ಮನೆಗೆ ವಾಪಾಸು ಬಂದಾಗ ಯಾರೋ ಅಪರಿಚಿತ ಕಳ್ಳರು ಮನೆಯ ಹಿಂಭಾಗದ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯ ಅಲ್ಮೈರಾವನ್ನು ಒಡೆದು ಅದರೊಳಗಿದ್ದ ಚಿನ್ನದ ನೆಕ್ಲೇಸ್ ಹಾಗೂ ಮನೆಯಲ್ಲಿದ್ದ 30 ಕೆ.ಜಿ.ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
        ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/04/2013ರಂದು ಬಿಳಿಗೇರಿ ಗ್ರಾಮದ ನಿವಾಸಿ ದೇಜಪ್ಪ ಎಂಬವರ ಪತ್ನಿ ಶಾರದ ಎಂಬಾಕೆಯು ಮಾದಾಪುರ ಗ್ರಾಮಕ್ಕೆ ಹೋಗಿದ್ದು ವಾಪಾಸು ಮನೆಗೆ ಬಂದು ನೋಡುವಾಗ ಆಕೆಯ ಪತಿ ದೇಜಪ್ಪನು ಯಾವುದೋ ವಿಷ ಸೇವಿಸಿ ವಾಂತಿ ಮಾಡಿಕೊಂಡಿರುವುದನ್ನು ನೋಡಿ ಕೂಡಲೇ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾಧಿಕಾರಿಯವರು ದೇಜಪ್ಪ ಮೃತನಾಗಿರುವುದಾಗಿ ತಿಳಿಸಿದ್ದು, ದೇಜಪ್ಪನವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಾರದರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣ ಕಳವು 
       ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುರಿದು ಒಳ ಪ್ರವೇಶಿಸಿ ಭಾರೀ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.ದಿನಾಂಕ 13-4-2013 ವಿರಾಜಪೇಟೆಯ ನೆಹರುನಗರದ ನಿವಾಸಿ ಮೋಹನ್ ಎಂಬವರು ತನ್ನ ಹೆಂಡತಿ ಮಕ್ಕಳೊಂದಿಗೆ ಹೆಂಡತಿಯ ಊರು ಕೇರಳದ ಕೊಳಿತಟ್ಟು ಎಂಬಲ್ಲಿಗೆ ಹೋಗಿದ್ದು ದಿನಾಂಕ 22-4-2013 ವಾಪಾಸು ಮನೆಗೆ ಬಂದು ನೋಡುವಾಗ್ಗೆ ಯಾರೋ ಕಳ್ಳರು ಮನೆಯ ಹಿಂಭಾಗದ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗೆ ಮಲಗುವ ಕೋಣೆಯ ಬೀರುವಿನಲ್ಲಿಟ್ಟಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ  ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ರಿಕ್ಷಾ ಡಿಕ್ಕಿ, ರಿಕ್ಷಾ ಪ್ರಯಾಣಿಕನ ಸಾವು 
      ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿಯಾಗಿ ರಿಕ್ಷಾ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ದಿನಾಂಕ 22/04/2013ರಂದು ಗೋಣಿಕೊಪ್ಪದ ಅರ್ವತೊಕ್ಲು ಗ್ರಾಮದ ಶಹಜಾನ್ ಎಂಬವರು ತಮ್ಮ ಆಟೋ ರಿಕ್ಷಾ ಸಂಖ್ಯೆ ಕೆಎ-12-6597 ರಲ್ಲಿ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ವಾಪಾಸ್ಸು ಬರುತ್ತಿರುವಾಗ್ಗೆ ಪರಿಚಯವಿರುವ ಕೇರಳದ ಕೂತುಪರಂಬುವಿನ ಸಲೀಂನು ಆಟೋರಿಕ್ಷಾದಲ್ಲಿ ಹತ್ತಿ ಚೆನ್ನಂಗೊಲ್ಲಿ ಪೈಸಾರಿಯಿಂದ ಗೋಣಿಕೊಪ್ಪ ಮೈಸೂರು ಮುಖ್ಯ ತಾರು ರಸ್ತೆಯಲ್ಲಿ ಬರುವಾಗ ಮೈಸೂರು ಕಡೆಯಿಂದ ಬರುತ್ತಿದ್ದ ಕೆಎ-01-ಎಬಿ-1782 ರ ಖಾಸಗಿ ಬಸ್ಸು ಚಾಲಕನು ಬಸ್ಸನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಶಹಜಾನ್ ರವರು ರಸ್ತೆಗೆ ಹಾರಿ ಗಾಯವಾಗಿರುವುದಲ್ಲದೆ, ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕ ಸಲೀಂನು ಆಟೋ ರಿಕ್ಷಾವು ಬಸ್ಸಿನ ಮುಂಭಾಗದ ಒಳಭಾಗಕ್ಕೆ ಸೇರಿದ ಕಾರಣ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ  ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ