Wednesday, October 22, 2014

ಅಕ್ರಮ ಪಟಾಕಿ ಮಾರಾಟ, ಓರ್ವನ ಬಂಧನ 
      ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಸಿದ್ದಾಪುರ ನಗರದಲ್ಲಿ ಓರ್ವ ವ್ಯಕ್ತಿ ಯಾವುದೇ ರಹದಾರಿ ಇಲ್ಲದೆ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣೆಯ ಎ.ಎಸ್‌.ಐ ಹೆಚ್‌.ವೈ.ರಾಜುರವರು ಸಿಬ್ಬಂದಿಗಳೊಂದಿಗೆ ಸಿದ್ದಾಪುರ ನಗರದ ಮುಖ್ಯ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಬಟ್ಟೆ ಅಂಗಡಿಯ ಬಳಿ ತೆರಳಿದಾಗ ಸಿದ್ದಾಪುರ ನಿವಾಸಿ ಪಿ.ಧರ್ಮರಾಜು ಎಂಬವರು ಅಂಗಡಿಯ ಮುಂದೆ ಯಾವುದೇ ರಹದಾರಿ ಇಲ್ಲದೆ ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಧರ್ಮರಾಜುರವರನ್ನು ಬಂಧಿಸಿ ಆತನಿಂದ ಸುಮಾರು ರೂ.6,000/- ಬೆಲೆ ಬಾಳುವ ಪಟಾಕಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
     ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಕರ್ಣಂಗೇರಿಯ ನಿವಾಸಿ ಕೊಕ್ಕಲೆರ ಕಾವೇರಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿರುವ ಗೀತಾ ಎಂಬಾಕೆಯ ಪತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ ಜನಾರ್ಧನ ಎಂಬವರು ಮನೆಯ ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
     ಗೀತಾರವರು ಮೃತ ಜನಾರ್ಧನರವನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದು, ನಂತರದ ದಿನಗಳಲ್ಲಿ ಪತಿಯ ಮನೆ ತೊರೆದು ಕರ್ಣಂಗೇರಿಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಕೌಟುಂಬಿಕ ಹೊಂದಾಣಿಕೆಯ ಕೊರತೆಯೇ ಜರ್ನಾರ್ಧನರವರ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. 

ಆಸ್ತಿ ವಿವಾದ ವ್ಯಕ್ತಿಗೆ ಕೊಲೆ ಬೆದರಿಕೆ 
        ಆಸತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಕೊಲೆ ಬೆದರಿಕೆ ಒಡ್ಡಿರುವ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 23/09/2014ರಂದು ಹೆಗ್ಗಳ ನಿವಾಸಿ ಕೆ.ರಾಜ ಎಂಬವರು ನಗರದ ಮುಸ್ಲಿಂ ಸಮುದಾಯದ ಸ್ಮಶಾನದ ಬಳಿ ಕೆಲಸ ಮಾಡಿಕೊಂಡಿರುವಾಗ ಕೇರಳದ ಕೋಯಿಕ್ಕೋಡ್ ನಿವಾಸಿಗಳಾದ ಪ್ರದೀಶ್‌, ವಿನೋದ್‌ ಹಾಗೂ ವಿರಾಜಪೇಟೆಯ ಆರ್ಜಿ ನಿವಾಸಿ ಆಲ್ಬರ್ಟ್‌ ಡಿ'ಸೋಜಾರವರು ಬಂದು ರಾಜರವರ ಕೋಯಿಕ್ಕೋಡ್‌ ನಗರದ ಚೇವಾಯೂರ್‌ನಲ್ಲಿರುವ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕೋಯಕ್ಕೋಡ್‌ ನಗರಕ್ಕೆ ಕೂಡಲೇ ಬರುಂತೆ ಬಲಾತ್ಕರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ರಾಜರವರು ನ್ಯಾಯಾಲಯಕ್ಕೆ ನೀಡಿದ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ನೀಡಿದ ನಿರ್ದೇಶನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ಬೈಕ್‌ ಅಫಘಾತ, ಓರ್ವನಿಗೆ ಗಾಯ 
      ಚಾಲಕನ ನಿಯಂತ್ರಣ ತಪ್ಪಿ ಬೈಕೊಂದು ಅಫಘಾತಕ್ಕೀಡಾದ ಘಟನೆ ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2014ರಂದು ಮೈಸೂರಿನ ನಿವಾಸಿಗಳಾದ ರಾಹುಲ್‌, ಸಿದ್ದೇಶ್‌ ಮತ್ತು ಶ್ರೇಯಸ್‌ ಎಂಬವರುಗಳು ಎರಡು ಬೈಕುಗಳಲ್ಲಿ ಪ್ರವಾಸಕ್ಕೆಂದು ಕೊಡಗಿಗೆ ಬಂದಿದ್ದು, ನಾಪೋಕ್ಲು ಸಮೀಪದ ಚೇಲಾವರ ಜಲಪಾತ ವೀಕ್ಷಿಸಿಕೊಂಡು ವಾಪಾಸು ನಾಪೋಕ್ಲು ಕಡೆ ಹೋಗುತ್ತಿರುವಾಗ ಕೊಳಕೇರಿ ಬಳಿ ಶ್ರೇಯಸ್‌ನು ಆತ ಚಾಲಿಸುತ್ತಿದ್ದ ಕೆಎ-09-ಇಟಿ-7957ರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಆತನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದ ಪರಿಣಾಮ ಶ್ರೇಯಸ್‌ಗೆ ಗಂಭೀರ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅತೀವ ಮದ್ಯಪಾನ, ವ್ಯಕ್ತಿಯ ಸಾವು 
      ಅತೀವ ಮದ್ಯಪಾನದಿಂದಾಗಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಶನಿವಾರಸಂತೆ ಬಳಿಯ ಗುಡುಗಳಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 20/10/2014ರಂದು ಗುಡುಗಳಲೆ ನಿವಾಸಿ ರಾಜಸ್ಥಾನ ಮೂಲದ ಹೇಮಾ ಎಂಬವರ ಪತಿ ರಾಂಸಿಂಗ್‌ ಎಂಬಾತನು ವಿಪರೀತ ಮದ್ಯಪಾನ ಮಾಡಿಕೊಂಡು ಎಲ್ಲಿಯೋ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆಯಾದರೂ ಎದ್ದೇಳದ ಕಾರಣ ಪತ್ನಿ ಹೇಮಾರವರು ಹೋಗಿ ನೋಡುವಾಗ ರಾಂಸಿಂಗ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.