Tuesday, October 13, 2015

ದಾರಿ ತಡೆದು ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ, ಕೊಲೆ ಬೆದರಿಕೆ:

     ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿ ಕೊಲೆಬೆದರಿಕೆಯೊಡ್ಡಿದ ಘಟನೆ ಸೋಮವಾರಪೇಟೆ ಠಾಣೆ ವ್ಯಾಪ್ತಿಯ ಶಾಂತಳ್ಳಿ ಎಂಬಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಯಡೂರು ಗ್ರಾಮದ ನಿವಾಸಿ ಪಿರ್ಯಾದಿ ಮಂಜುನಾಥ ಎಂಬವರು ತಮ್ಮ ಸಹೋದರನೊಂದಿಗೆ ಶಾಂತಳ್ಳಿಯಲ್ಲಿರುವ ತಮ್ಮ ಅಜ್ಜಿಯನ್ನು ನೋಡುವ ಸಲುವಾಗಿ ದಿನಾಂಕ 11/10/2015 ರಂದು ರಾತ್ರಿ 8-45 ಗಂಟೆಗೆ ಶಾಂತಳ್ಳಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮಾವನ ಮಗ ಜನಾರ್ಧನ ಎಂಬುವವರು ಕೈಯಲ್ಲಿ ಕತ್ತಿಯೊಂದಿಗೆ ಬಂದು ದಾರಿ ತಡೆದು ಹಳೇ ದ್ವೇಷದಿಂದ ಕತ್ತಿಯಿಂದ ತುಟಿಯ ಬಾಗಕ್ಕೆ ಕಡಿದ ಪರಿಣಾಮ ತುಟಿಯ ಕೆಳಬಾಗ ಸ್ವಲ್ಪ ತುಂಡಾಗಿ ಬಿದ್ದಿರುವುದಾಗಿ ಹಾಗು ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ:

     ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರು ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಯಡೂರು ಗ್ರಾಮದ ನಿವಾಸಿ ಎಂ. ಈಶ್ವರ ಎಂಬವರ ಮನೆಗೆ ಅವರ ಅಕ್ಕನ ಮಗನಾದ ಕೆ.ಆರ್. ಮಂಜುನಾಥ ದಿನಾಂಕ 11-10-2015 ರಂದು ರಾತ್ರಿ 9-00 ಗಂಟೆಯ ವೇಳೆಯಲ್ಲಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿ ಎಂ.ಈಶ್ವರರವರ ಮಗನಾದ ಜನಾರ್ಧನರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣದ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮನೆಯಿಂದ ಚಿನ್ನಾಭರಣ ಕಳವು:

     ಸೋಮವಾರಪೇಟೆ ತಾಲೋಕು ಮಾದಾಪುರದ ವಾಸಿ ಶ್ರೀಮತಿ ದಿವ್ಯ ಎಂಬವರ ಮನೆಯಲ್ಲಿನ ಬೀರುವಿನಲ್ಲಿಟ್ಟಿದ ತಾಳಿ ಚೈನು ಮತ್ತು ಅವರ ತಾಯಿಯ ಚಿನ್ನದ ಚೈನು ಕಳ್ಳತನವಾಗಿದ್ದು, ಸದರಿ ಚಿನ್ನಾಭರಣವನ್ನು ಅವರ ಪಕ್ಕದ ಮನೆಯ ನಿವಾಸಿ ಜ್ಯೋತಿ ಎಂಬವರು ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ಇರುವ ವಾಹನವನ್ನು ವ್ಯಕ್ತಿಗೆ ಮಾರಿ ವಂಚನೆ:

     ಖಾಸಗಿ ಸಂಸ್ಥೆಯೊಂದರಲ್ಲಿ ಸಾಲವಿರುವ ವಾಹನವನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಹಣ ಪಡೆದು ವಂಚಿಸಿರುವ ಘಟನೆ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ನಡೆದಿದೆ. ಕೂಡ್ಲುರು ಗ್ರಾಮದ ಶರತ್ @ ತಾಂಡವೇಶ್ವರ, ಹಾಗು ಹೆಬ್ಬಾಲೆ ಗ್ರಾಮದ ನಿವಾಸಿ ರಮೇಶ ಎಂಬವಗಳು ಸೇರಿ ಮಹೀಂದ್ರ ಪೈನಾನ್ಸ್ ನಲ್ಲಿ ಸಾಲವಿರುವ ಕಾರೊಂದನ್ನು ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಎಸ್.ಎಸ್. ಪಾಲಾಕ್ಷ ಎಂಬುವರಿಗೆ ಮಾರಾಟ ಮಾಡಿದ್ದು, ಸದರಿ ಕಾರನ್ನು ಮಹೀಂದ್ರ ಪೈನಾನ್ಸ್ ರವರು ದಿನಾಂಕ 5-10-2015 ರಂದು ವಶಕ್ಕೆ ಪಡದುಕೊಂಡಿದ್ದು, ಶರತ್ ಹಾಗು ರಮೇಶರವರು ಸಾಲದ ವಿಚಾರವನ್ನು ತಿಳಿಸದೇ 1.29 ಲಕ್ಷ ಹಣವನ್ನು ಪಡೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಧಿಯ ಆಸೆ ತೋರಿಸಿ ಮಹಿಳೆಯ ಕೊಲೆ:

   ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನಂದಿನೆರವಂಡ ಪೌತಿ ಸೋಮಯ್ಯನವರ ಮಗ ನಾಣಯ್ಯ ನವರ ಪತ್ನಿ ಆಶಾರವರನ್ನು ದಿನಾಂಕ 10-10-2015 ರಂದು ಅದೇ ಗ್ರಾಮದ ಅಯ್ಯಂಡ ಧರಣಿ ಎಂಬವರ ಮನೆಗೆ ಸದರಿ ಆಶಾರವರು ಪೂಜೆಗೆ ಬಂದಿದ್ದವರನ್ನು ಬಂಧಿಸಿ ಧರಣಿ ಮತ್ತು ಅವರ ಮಕ್ಕಳಾದ ಕವನ್‌ ಕಾರ್ಯಪ್ಪ, ಭವನ್‌ ಚಂಗಪ್ಪ ಮತ್ತು ದೇವರು ಬರುವ ಕಳ್ಳಸ್ವಾಮಿಯಾದ ಇಕ್ಬಾಲ್‌ ಅಲಿಯಾಸ್‌ ದುರ್ಗದತ್ತ ಕಾಳಿದಾಸ ನಿಧಿಯ ಆಸೆಗಾಗಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.