Tuesday, December 29, 2015

ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಹತ್ಯೆ
                   ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಕುಟ್ಟ ಬಳಿಯ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 27-12-2015 ರಂದು ಕೋತೂರು ಗ್ರಾಮದ ಬೊಮ್ಮಾಡು ಹಾಡಿಯ ನಿವಾಸಿ ಜೇನು ಕರುಬರ ಮಾದೇವಿ ಎಂಬವರ  ಮಗಳಾದ ಪೂಜಾಳನ್ನು ಅದೇ ಹಾಡಿಯ ನಿವಾಸಿ ನಾಗಪ್ಪನ ಮಗ ಮುತ್ತಣ್ಣನು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ಮಾದೇವಿಯ ಗಂಡ ಕರಿಯಣ್ಣನು ನಾಗಪ್ಪನ ಮನೆಯಿಂದ ಪೂಜಾಳನ್ನು ಕರೆದುಕೊಂಡು ಬರುವುದಾಗಿ ಹೇಳಿ ಸಂಜೆ ವೇಳೆ ಮಗ ಮಾದೇಶನನ್ನು ಕರೆದುಕೊಂಡು ನಾಗಪ್ಪನ ಮನೆಗೆ ಹೋದರೆನ್ನಲಾಗಿದೆ. ನಂತರ ಕೆಲ ಸಮಯದ ನಂತರ ನಾಗಪ್ಪನ ಮನೆಯಲ್ಲಿ ಕರಿಯಣ್ಣ ಕಿರುಚಿದ ಶಬ್ದ ಕೇಳಿ ಮಾದೇವಿಯವರು ಕೂಡಲೆ ನಾಗಪ್ಪನ ಮನೆಗೆ ಹೋದಾಗ ಕರಿಯಣ್ಣನೊಂದಿಗೆ ನಾಗಪ್ಪ, ಬೊಳ್ಳ, ದಾದು ಜಗಳ ಮಾಡುತ್ತಿದ್ದು ಮೂವರೂ ಸೇರಿ ಕಬ್ಬಿಣದ ಪೈಪ್‌ ಮತ್ತು ದೊಣ್ಣೆಯಿಂದ ಕರಿಯಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹೊರಟು ಹೋಗಿದ್ದು  ಕೂಡಲೇ ಮಾದೇವಿಯವರು ಅವರ ಸಾಹುಕಾರರಾದ ಜಾಜಿರವರಿಗೆ ವಿಷಯ ತಿಳಿಸಿದ ಮೇರೆ ಅವರು ಜೀಪನ್ನು ಕಳುಹಿಸಿಕೊಟ್ಟಾಗ ಮಾದೇವಿಯವರು ಕರಿಯಣ್ಣನನ್ನು ಜೀಪಿನಲ್ಲಿ  ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು  ದಿನಾಂಕ 28-12-2015 ರಂದು ಬೆಳಿಗ್ಗೆ ಕರಿಯಣ್ಣನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                    ಜಗಳ ಬಿಡಿಸಲು ಹೋದ ಇಬ್ಬರಿಗೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ನಗೆದಲ್ಲಿ ನಡೆದಿದೆ. ಸೋಮವಾರಪೇಟೆ ಬಳಿಯ ಕಾಗಡಿಕಟ್ಟೆ ನಿವಾಸಿ ಉಮೈರಾ ಎಂಬಾಕೆಯು ದಿನಾಂಕ 28/12/2015 ರಂದು ಆಕೆಯ ಭಾವನ ಪತ್ನಿ ಜುಬೈದಾ ಮತ್ತು ಮಕ್ಕಳೊಂದಿಗೆ ಉಬೈದ್ ಎಂಬವರ ಕೆಎ-05-ಎಂ-ಡಿ-3476 ರ ಕಾರಿನಲ್ಲಿ ಸೋಮವಾರಪೇಟೆ ಸಂತೆಗೆ ಬಂದಿದ್ದು  ದಿನಸಿ ಸಾಮಗ್ರಿಗಳನ್ನು ತೆಗೆದುಕೊಳ್ಳುವ ಸಲುವಾಗಿ ನಗರದ ಕಾವೇರಿ ಸ್ಟೋರ್ ಗೆ ಹೋಗಲು ಕಾರಿನಲ್ಲಿ ಹೋಗುತ್ತಿರುವಾಗ  ಕಾವೇರಿ ಸ್ಟೋರ್ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ತುಂಬ ಜನರು ನಿಂತಿದ್ದು ಉಮೈರಾ ಮತ್ತು ಉಬೈದ್ ರವರು ಇಳಿದು ಹೋಗಿ ನೋಡಿದಾಗ ಅವರ ಮನೆಯ ಪಕ್ಕದ ವಾಸಿ ಸನಾಶ್ ಎಂಬ ಹುಡುಗನಿಗೆ ಕೆಲವರು ಹೊಡೆಯುತ್ತಿದ್ದು ಉಮೈರಾ ಮತ್ತು ಉಬೈದ್ ರವರು ಬಿಡಿಸಲು ಹೋದಾಗ ಅವರಲ್ಲಿ ಒಬ್ಬ ಉಮೈರಾರವರನ್ನು ಬೈದು ಆಕೆಯ ಕುತ್ತಿಗೆಗೆ ಕೈಹಾಕಿ ಬಟ್ಟೆಯನ್ನು ಹಿಡಿದು ಎಳೆದು ಆಕೆಯನ್ನು ತಳ್ಳಿದ್ದಲ್ಲದೆ ಉಬೈದ್ ರವರಿಗೆ ಸಹ ದೊಣ್ಣೆಯಿಂದ ಬೆನ್ನಿಗೆ ಹೊಡೆದಿದ್ದು ಆಗ  ರವಿ ಎಂಬುವವರು ಬಂದು ಅವರೆಲ್ಲರನ್ನು ಸಮಾಧಾನ ಮಾಡಿದರು. ನಂತರ ಉಮೈರಾ ಮತ್ತು ಉಬೈದ್ ರವರು ಕಾರಿನ ಹತ್ತಿರ ಬಂದು ಕಾರಿನಲ್ಲಿ ಕುಳಿತುಕೊಂಡಾಗ ಒಬ್ಬ ವ್ಯಕ್ತಿ ಬಂದು ಕಾರಿನ ಮುಂದಿನ ಬಾನೆಟ್ ಗೆ ದೊಣ್ಣೆಯಿಂದ ಹೊಡೆದು ಜಖಂಗೊಳಿಸಿ ಆತನ ಹೆಸರು ಸಂತೋಷ್ ಎಂಬುದಾಗಿಯೂ ಆತನು ಏನು ಮಾಡಿದರೂ ಸೋಮವಾರಪೇಟೆಯಲ್ಲಿ ಕೇಳುವರು ಯಾರು ಇಲ್ಲ ಎಂಬುದಾಗಿ ಹೇಳಿದ್ದು ನಂತರ ಉಮೈರಾರವರು ಅವರ ಬಟ್ಟೆಯನ್ನು ಸರಿ ಮಾಡಿಕೊಳ್ಳುವಾಗ ಆಕೆಯ ಕುತ್ತಿಗೆಯಲ್ಲಿದ್ದ ಸರ ಗಲಾಟೆಯಲ್ಲಿ ಬಿದ್ದು ಹೋಗಿರುವುದು ತಿಳಿದಿರುತ್ತದೆ. ನಂತರ ವಿಚಾರಿಸಿದಾಗ ಸಂತೋಷ್‌ ಮತ್ತು ಹರ್ಷಿತ್‌ ಎಂಬವರು ಉಮೈರಾ ಮತ್ತು ಉಬೈದ್‌ರವರ ಮೇಲೆ ಹಲ್ಲೆ ನಡೆಸಿದವರೆಂದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ತೊಟಕ್ಕೆ ಅಕ್ರಮ ಪ್ರವೇಶ, ಬೆಳೆ ಹಾನಿ
               ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಫಿಯನ್ನು ಕುಯ್ದು ಹಾನಿಗೊಳಿಸಿದ ಘಟನೆ ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಸುಂಟಿಕೊಪ್ಪ ನಿವಾಸಿ ಕೆ.ಎಂ.ಇಬ್ರಾಹಿಂ ಎಂಬವರು ಗರಗಂದೂರು ಗ್ರಾಮದ ಕೆ.ಎಂ.ಲಕ್ಷ್ಮಣ ಎಂಬವರಿಂದ 24.03.1995 ರಲ್ಲಿ 20 ಎಕರೆ ಕಾಫಿ ತೋಟ ಖರೀದಿ ಮಾಡಿ ಅದರ ಬಾಪ್ತು ಕ್ರಯ ರೂ 8.50 ಲಕ್ಷದ ಪೈಕಿ ರೂ.8.35 ಲಕ್ಷ ಪಾವತಿಸಿದ್ದು ಇನ್ನು ಉಳಿದ 15,000 ರೂ.ಗಳನ್ನು ನೋಂದಣಿ ಕಾಲಕ್ಕೆ ನೀಡುವಂತೆ ಒಪ್ಪಂದವಾಗಿದ್ದು ಹಾಲಿ ಕಾಫಿ ತೋಟವು ಕೆ.ಎಂ.ಇಬ್ರಾಹಿಂರವರ ಸ್ವಾಧಿನದಲ್ಲಿದ್ದು  ದಿನಾಂಕ 28.12.2015 ರಂದು ಬೆಳಿಗ್ಗೆ ಲಕ್ಷ್ಮಣರವರು ಕೆ.ಎಂ.ಇಬ್ರಾಹಿಂದರವರ ಸ್ವಾಧೀನದಲ್ಲಿರುವ ಕಾಫಿ ತೋಟಕ್ಕೆ ತಮ್ಮ 10 ಜನ ಕಾರ್ಮಿಕರೊಂದಿಗೆ ಅಕ್ರಮ ಪ್ರವೇಶ ಮಾಡಿ ಕಾಫಿ ಫಸಲನ್ನು ಕುಯ್ಯುತ್ತಿರುವುದಾಗಿ ಕೆ.ಎಂ.ಇಬ್ರಾಹಿಂರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಬೈಕು ಡಿಕ್ಕಿ
                ಬಸ್ಸಿಗೆ ಬೈಕೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಡೆದಿದೆ. ದಿನಾಂಕ: 28-12-15ರಂದು ಕೆಎ-09-ಎಫ್-4174ರ ಕೆ.ಎಸ್‌.ಆರ್‌.ಟಿ.ಸಿ ಬಸ್ಸನ್ನು ಅದರ ಚಾಲಕ ಎಂ.ಎನ್‌. ಜಗದೀಶ್‌ ಎಂಬವರು ಚಾಲಿಸಿಕೊಂಡು ಮೈಸೂರಿನಿಂದ ಹೊರಟು ವಿರಾಜಪೇಟೆಗೆ ತಲುಪಿ ಅಲ್ಲಿಂದ ಹೆಗ್ಗಳಕ್ಕಾಗಿ ತೋರಕ್ಕೆ ಹೋಗುತ್ತಿರುವಾಗ ತೋರ ಗ್ರಾಮದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕೆಎಲ್-59-ಎ-7380ರ ಮೋಟಾರ್ ಬೈಕ್ ನ ಚಾಲಕನು ಮೋಟಾರ್ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಗದೀಶ್‌ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಚಾಲಕ ಹಾರಿ ಬಸ್ಸಿನ ಗ್ಲಾಸ್ ಗೆ ತಾಗಿ ಗ್ಲಾಸ್ ಒಡೆದು ಹೋಗಿದ್ದು ಮೋಟಾರ್ ಬೈಕ್ ನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಯುವತಿಯ ಮೇಲೆ ಅತ್ಯಾಚಾರ.
                ಯುವತಿಯೊಬ್ಬಳನ್ನು ನಂಬಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ಶನಿವಾರಸಂತೆ ಬಳಿಯ ಗೋಪಾಲಪುರದ ನಿವಾಸಿ ಕೃಷ್ಣಪ್ಪ ಎಂಬವರ ಮಗಳು ನಳಿನಿ ಎಂಬಾಕೆ ಶನಿವಾರಸಂತೆಯ ಪಾದರಕ್ಷೆ  ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 24/12/2015ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಲು ಬಸ್‌ ಕಾಯುತ್ತಿರುವಾಗ ಆಕೆಗೆ ಪರಿಚಯವಿರುವ ಮಾದೇಗೋಡು ಗ್ರಾಮದ ರಿಕ್ಷಾ ಚಾಲಕ ಮಂಜು ಎಂಬಾತನು ಬಂದು ರಿಕ್ಷಾ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಲು ಕರೆದು ಆಕೆ ನಿರಾಕರಿಸಿದಾಗ ಬಲವಂತವಾಗಿ ಆಕೆಯನ್ನು ರಿಕ್ಷಾಕ್ಕೆ ಹತ್ತಿಸಿಕೊಂಡು ನಂತರ ಆಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಮಂಜುವಿನ ಭಾವನ ಮನೆಯಲ್ಲಿ ತಂಗಿದ್ದು ಅಲ್ಲಿದ್ದ ಮೂರು ದಿನಗಳ ಕಾಲ ಆಕೆಯ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದು ನಂತರ ದಿನಾಂಕ 27/122015ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಆಕೆಯನ್ನು ಶನಿವಾರಸಂತೆಗೆ ಹೋಗುವಂತೆ ಹೇಳಿ ಆತನು ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.