Tuesday, January 19, 2016

ಅತಿಯಾದ ಮದ್ಯಪಾನ, ವ್ಯಕ್ತಿ ಸಾವು:

     ವಿಪರೀತ ಮದ್ಯಪಾನ ಮಾಡಿ ಕಟ್ಟಡವೊಂದರ ವೆರಾಂಡದಲ್ಲಿ ಮಲಗಿದ್ದ ವ್ಯಕ್ತಿ ಸಾವನಪ್ಪಿದ ಘಟನೆ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಾರ್ಮಾಡು ಗ್ರಾಮದಲ್ಲಿ ಮಹೇಶ್ ಯಾನೆ ಮಲ್ಲ ಎಂಬ ವ್ಯಕ್ತಿಯು ಸುಮಾರು 5 ವರ್ಷಗಳಿಂದ ಅಮ್ಮತ್ತಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಆತನು ಎ.ಪಿ.ಸಿ.ಎಂ.ಎಸ್. ಕಟ್ಟಡದ ವೆರಾಂಡದಲ್ಲಿ ಮಲಗಿಕೊಳ್ಳುತ್ತಿದ್ದು, ಆತನು ಪ್ರತಿ ದಿವಸ ಕೂಲಿ ಕೆಲಸ ಮಾಡಿಕೊಂಡು ಸಂಜೆ ಸಮಯದಲ್ಲಿ ವಿಪರೀತ ಮದ್ಯಪಾನ ಮಾಡುತ್ತಿದ್ದು, ದಿನಾಂಕ: 17-01-16 ರಂದು ರಾತ್ರಿ ವಿಪರೀತ ಮದ್ಯಪಾನ ಮಾಡಿಕೊಂಡು ಮಲಗಿದ್ದು, ವಿಪರೀತ ಚಳಿಯಿಂದಾಗಿ ಹಾಗೂ ಮದ್ಯಪಾನ ಮಾಡಿದ್ದರಿಂದ ಆತನು ರಾತ್ರಿ ವೇಳೆಯಲ್ಲಿ ಮೃತಪಟ್ಟಿರುತ್ತಾನೆಂದು ಕಾರ್ಮಾಡು ಪಂಚಾಯ್ತಿ ಅಧಿಕಾರಿ ಕೆ.ಎ. ತಮ್ಮಯ್ಯ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ಪಾದಚಾರಿಗೆ ಮೋಟಾರ್ ಸೈಕಲ್ ಡಿಕ್ಕಿ:

    ಪಾದಚಾರಿಯೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಸೇತುವೆ ಬಳಿ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎ.ವಿ. ಜೋಸೆಫ್ ಎಂಬವರು ದಿನಾಂಕ 18-1-2016 ರಂದು ರಾತ್ರಿ 8-30 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮುಂಭಾಗದಿಂದ ಮೋಟಾರ್ ಸೈಕಲ್ ಸವಾರನೊಬ್ಬ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎ.ವಿ. ಜೋಸಿಫ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ರಸ್ತೆಮೇಲೆ ಬಿದ್ದು ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ನೇಣಿಗೆ ಶರಣಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ನಿಡುಗಣೆ ಗ್ರಾಮದಲ್ಲಿ ನಡೆದಿದೆ. ಕೆ.ಸಿ.ಆಗಸ್ಟಿನ್‌ ಪಾಣತ್ತೂರು, ಕಾಸರಗೋಡು ಇವರು ಹಾಲಿ ಕೆ. ನಿಡುಗಣೆ ಗ್ರಾಮದಲ್ಲಿರುವ ಪಾರ್ವತಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಅವರ ತಂದೆಯು ಆಸ್ತಿಯನ್ನು ಯಾರಿಗೋ ಮಾರಾಟ ಮಾಡಿರುವ ವಿಚಾರದಲ್ಲಿ ಮಾನಸಿಕ ಕಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18.01.2016 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಹ್ಮದ್ ಅಬ್ದುಲ್ಲಾ ಮುನಿರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಕಾರು ಅಪಘಾತ  ಸಾವನಪ್ಪಿದ ಚಾಲಕ:

    ನಾಪೋಕ್ಲು ಠಾಣಾ ಸರಹದ್ದಿನ ಬೇಂಗೂರು ಗ್ರಾಮದ ನಿವಾಸಿ ಮಂದಪಂಡ ಎನ್. ಪವನ್ ಎಂಬವರು ದಿನಾಂಕ 18-1-2016 ರಂದು ಮದ್ಯಾಹ್ನ ತಮ್ಮ ಬಾಪ್ತು ಕಾರಿನಲ್ಲಿ ಗೋಣಿಕೊಪ್ಪ ದಿಂದ ಬೇಂಗೂರು ಗ್ರಾಮದಲ್ಲಿರುವ ತಮ್ಮ ಮನೆಗೆ ಸ್ನೇಹಿತರಾದ ವಿಜಯ್, ಸುರೇಶ ಮತ್ತು ಸೋಮಯ್ಯರವರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರುಗುಂದ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಚಾಲಕ ಪವನ್ ರವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಸಮಯದಲ್ಲಿ ಸದರಿ ಪವನ್ ರವರು ಸಾವನಪ್ಪಿದ್ದು, ವಿಜಯ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡಾನೆ ದಾಳಿ ಮಹಿಳೆ ದುರ್ಮರಣ:

     ಶ್ರೀಮತಿ ಮಾರಿಯಮ್ಮ ಗಂಡ ಪಾಳಯ್ಯ,  ಕೂಲಿಕೆಲಸ, ವಾಸ : ಟಾಟಾ ಕಾಫಿ ತೋಟದ ಲೈನ್ಮನೆ, ಪಳ್ಳಕೆರೆ, ಆನಂದಪುರ ತೋಟ. ಇವರು ತಮ್ಮ ಪಕ್ಕದ ಮನೆಯ ನಿವಾಸಿಯಾದ ಕಾಶೀಶ್ವರಿ (40) ನವರೊಂದಿಗೆ ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ಸೋಮಯಂಡ ನಾಣಯ್ಯನವರ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದು, ಕಾಶೀಶ್ವರಿಯವರು ಊಟದ ಬ್ಯಾಗ್‌‌ನ್ನು ರಸ್ತೆಯಲ್ಲಿಟ್ಟಿದ್ದದನ್ನು ತರಲು ಹೋದಾಗ ಕಾಡಾನೆಯು ತೋಟದ ಒಳಗಿನಿಂದ ಬಂದು ರಸ್ತೆಯಲ್ಲಿದ್ದ ಕಾಶೀಶ್ವರಿಯ ಮೇಲೆ ದಾಳಿ ನಡೆಸಿದ್ದು ತೀವ್ರವಾಗಿ ಗಾಯಗೊಂಡ ಸದರಿ ಮಹಿಳೆ ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.