Thursday, January 21, 2016

ಬಿಲ್ ಕಲೆಕ್ಟರ್ ರೊಬ್ಬರಿಂದ  ಸರಕಾರಕ್ಕೆ ಲಕ್ಷಾಂತರ ಹಣ ವಂಚನೆ:

     ನಾಗರೀಕರಿಂದ ವಸೂಲಿ ಮಾಡಿದ ತೆರಿಗೆ ಹಣವನ್ನು ನಗರ ಸಭೆಗೆ ಬಿಲ್ ಕಲೆಕ್ಟರ್ ರೊಬ್ಬರು ಸಂದಾಯ ಮಾಡದೆ ವಂಚಿಸಿದ ಘಟನೆ ಮಡಿಕೇರಿ ನಗರ ಸಭೆಯಲ್ಲಿ ನಡೆದಿದೆ. ಮಡಿಕೇರಿ ನಗರ ಸಭೆಯಲ್ಲಿ 07-08-2009 ರಿಂದ 28-06-2014 ರವರೆಗೆ ಸ್ವಾಮಿ ಎನ್. ಎಂಬುವವರು ಕರ ವಸೂಲಿಗಾರರಾಗಿ ಕರ್ತವ್ಯ ಮಾಡಿಕೊಂಡಿದ್ದು, ಸದರಿಯವರು ನಗರ ಸಭೆಗೆ ಸೇರಿದ ಕಟ್ಟಡ ಮತ್ತು ಇತರ ತೆರಿಗೆ ವಸೂಲಾತಿ ಮಾಡುತ್ತಿದ್ದು, ಈ ಸಂದರ್ಭ ನೀರಿನ ತೆರಿಗೆ, ಮಳಿಗೆಗಳ ಮಾಲೀಕರಿಂದ ಬಾಡಿಗೆ ಹಣವಾಗಿ ಒಟ್ಟು ರೂ 7,09,298/- ಹಣವನ್ನು ವಸೂಲಿ ಮಾಡಿ ಇದರಲ್ಲಿ ನಗರ ಸಭೆಗೆ ಒಟ್ಟು 86,891/- ರೂ ವನ್ನು ಜಮೆ ಮಾಡಿ ಉಳಿದ ಹಣ ರೂ. 6,22,407/- ರೂ ಗಳನ್ನು ನಗರ ಸಭೆಗೆ ವಂಚಿಸಿ ಮೋಸ ಮಾಡಿರುರುತ್ತಾರೆಂದು ನಗರ ಸಭೆಯ ಪೌರಾಯುಕ್ತೆ ಶ್ರೀಮತಿ ಪುಷ್ಪಾವತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಂಡಸು ಕಾಣೆ:

     ವಿರಾಜಪೇಟೆ ನಗರದ ಪಂಜರು ಪೇಟೆಯ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿರಾಜಪೇಟೆ ಗಾಂಧೀನಗರದ ನಿವಾಸಿ ಎಸ್.ಪಿ.ಸೋಮಶೇಖರ್ (26) ರವರು ದಿನಾಂಕ 8-1-2016 ರಿಂದ ಅಂಗಡಿಗೆ ಕೆಲಸಕ್ಕೆ ಬಾರದೆ ಕಾಣೆಯಾಗಿರುತ್ತಾರೆಂದು ಸದರಿಯವರ ಅಣ್ಣ ಎಸ್.ಪಿ ಚಂದ್ರ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವ್ಯಕ್ತಿಯೊಬ್ಬರಿಂದ ಪಿಡಿಓ ರವರ ಕರ್ತವ್ಯಕ್ಕೆ ಅಡ್ಡಿ:

    ಶ್ರೀ ಜಿ.ಎಲ್. ಧನಂಜಯ ಎಂಬವರು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ರೇಣುಕಾರವರ ಪತಿ ಮೇದಪ್ಪರವರು ದಿನಾಂಕ 05-01-2016 ರಂದು ಮದ್ಯಾಹ್ನ 03.00 ಗಂಟೆ ವೇಳೆಗೆ ಪಂಚಾಯ್ತಿ ಕಛೇರಿಗೆ ಬಂದು ವಿನಾ ಕಾರಣ ಪಿಡಿಓರವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಒಡ್ಡಿದ್ದು ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಪಘಾತ ಇಬ್ಬರಿಗೆ ಗಾಯ:

     ದಿನಾಂಕ 17-1-2016 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಅತ್ತೂರು ಗ್ರಾಮದ ನಿವಾಸಿ ಮಂಜು ಹಾಗು ಅವರ ಸ್ನೇಹಿತ ರಮೇಶ್ ರವರುಗಳು ಪೊನ್ನಂಪೇಟೆ ನಗರದ ಕೃಷ್ಣ ಕಾಲೋನಿ ನಿವಾಸಿ ತಮ್ಮಣ್ಣ ಎಂಬವರ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿ ಫಿರ್ಯಾದಿ ಮಂಜು ಮತ್ತು ರಮೇಶ್ ರವರುಗಳಿಗೆ ಗಾಯಗಳಾಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಗಳಿಂದ ಅಕ್ರಮ ಪ್ರವೇಶ, ಅಡಿಕೆ ಕಳ್ಳತನ:

     ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಮುಗುಟಗೇರಿ ಗ್ರಾಮದ ನಿವಾಸಿಗಳಾದ ಎಂ.ಎಂ. ಗಣಪತಿ, ಎಂ.ಜಿ. ಪ್ರಕಾಶ್ ಮತ್ತು ಎಂ.ಜಿ. ಪ್ರಜೀತ್ ರವರುಗಳು ದಿನಾಂಕ 15/11/2015 ರಂದು ಫಿರ್ಯಾದಿ ಎಂ.ಎಂ. ಬೋಪಣ್ಣ ರವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ರೂ. 15,000/- ಬೆಲೆ ಬಾಳುವ ಅಡಿಕೆಯನ್ನು ಕಳ್ಳತನ ಮಾಡಿದ್ದು ಇದನ್ನು ವಿಚಾರಿಸಿದ ಫಿರ್ಯಾದಿಯವರನ್ನು ಎಂ.ಎಂ. ಗಣಪತಿ ಮತ್ತು ಎಂ.ಜಿ. ಪ್ರಜೀತ್ ರವರು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.