Tuesday, January 26, 2016

ಮಹಿಳೆಯ ಮೇಲೆ ಹಲ್ಲೆಗೆ ಹತ್ನ, ಕೊಲೆ ಬೆದರಿಕೆ:

     ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ಪಂಚಾಯ್ತಿ ಅದ್ಯಕ್ಷೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 23-1-2016 ರಂದು ಮದ್ಯಾಹ್ನ 02:00 ಗಂಟೆಗೆ ವಾಲ್ನೂರು ಗ್ರಾಮದ ನಿವಾಸಿ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಎಂಬವರು ತನ್ನ ಮಗ ಮಂಜುನಾಥನೊಂದಿಗೆ ಪಂಚಾಯಿತಿ ಕೆಲಸದ ಬಗ್ಗೆ ಪಿ.ಡಿ.ಓ. ರವರ ಜೊತೆ ಹೋಗಿದ್ದಾಗ ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ, ಅವರ ತಮ್ಮ ವಿವೇಕ ಮತ್ತು ಅವರ ತಂದೆ ರಾಮಪ್ಪ ಸೇರಿ ಅಲ್ಲಿಗೆ ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಅಲ್ಲದೆ ಮಂಜುನಾಥನವರ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವ ವಿಚಾರದಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರುಗಳ ಮುಖಾಮುಖಿ ನಾಲ್ಕು ಮಂದಿಗೆ ಗಾಯ: 

    ದಿನಾಂಕ 24-01-2016 ರಂದು ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ ಫಿರ್ಯಾದಿ ಸುಂದರೇಶ ಆರಾಧ್ಯ ರವರು ತನ್ನ ಸಂಸಾರ ಸಮೇತ ಮೈಸೂರಿನಿಂದ ಮಂಗಳೂರಿಗೆ ತಮ್ಮ ಬಾಪ್ತು ಡಸ್ಟರ್ ಕಾರು ಸಂಖ್ಯೆ ಕೆಎ-45 ಎಂ-3212 ರಲ್ಲಿ ಹೋಗುತ್ತಿದ್ದಾಗ ರಾತ್ರಿ ಸಮಯ ಸುಮಾರು 11-45 ಪಿ.ಎಂ.ಗೆ ಬೋಯಿಕೇರಿ ಎಂಬಲ್ಲಿ ಎದುರುಗಡೆಯಿಂದ ಒಂದು ಕಾರನ್ನು ಅದರ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಸುಂದರೇಶರವರು ಚಾಲನೆ ಮಾಡುತ್ತಿದ್ದ ಕಾರಿಗೆ ಢಿಕ್ಕಿ ಪಡಿಸಿದ್ದು, ಪರಿಣಾಮವಾಗಿ ಕಾರಿನಲ್ಲಿದ್ದ ಫಿರ್ಯಾದಿ ಹಾಗೂ ಅವರ ಪತ್ನಿ ಹೇಮಲತಾ, ರೇವಣ್ಣ, ಅತ್ತೆ ರತ್ನಮ್ಮ ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೌಟುಂಬಿಕ ಕಲಹ ಪತ್ನಿಯಿಂದ ಪತಿ ಮೇಲೆ ಹಲ್ಲೆ:

    ಪತಿ ಪತ್ನಿ ನಡುವಿನ ಕಲಹದಿಂದ ಪತ್ನಿ ತನ್ನ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಕುರ್ಚಿಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ನಿವಾಸಿ ಅಜ್ಜಮಾಡ ಪೂಣಚ್ಚ ರವರು ಸುಮಾರು 10 ವರ್ಷಗಳ ಹಿಂದಿ ಕವಿತಾ ಎಂಬವರನ್ನು ಮದುವೆಯಾಗಿದ್ದು ಇವರುಗಳ ನಡುವೆ ಆಗಿಂದಾಗ್ಗೆ ಜಗಳವಾಗುತ್ತಿದ್ದು, ದಿನಾಂಕ 24-1-2016 ರಂದು ಪೂಣಚ್ಚರವರ ಮೇಲೆ ಪತ್ನಿ ಕವಿತಾ ಜಗಳ ಮಾಡಿ ಮರದ ಬ್ಯಾಟ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪೂಣಚ್ಚನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಪರಿಚಿತನಿಂದ  ಮೊಬೈಲ್ ದರೋಡೆ:

     ಗೋಣಿಕೊಪ್ಪ ನಗರದ ನಿವಾಸಿ ಉಪನ್ಯಾಸಕಿ ಟಿ.ಎನ್. ಅಕ್ಷತಾ ರವರು ದಿನಾಂಕ 23/01/2016 ರಂದು ಸಂಜೆ 6-45 ಪಿ.ಎಂ ಗೆ ಗೋಣಿಕೊಪ್ಪ ನಗರದ ಹಳೆ ಅಂಚೆ ಕಚೇರಿ ಎದುರು ನಡೆದುಕೊಂಡು ಹೋಗುತ್ತಿರುವಾಗ್ಗೆ ಯಾರೋ ಒಬ್ಬ ದರೋಡೆ ಕೋರ ಅಕ್ಷತಾರವರ ಕೈಯಲಿದ್ದ ಪರ್ಸ ಮತ್ತು ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿ ಪರ್ಸ್ ಕೆಳಗಡೆ ಬಿದ್ದುಹೋಗಿದ್ದು, ಆ ಸಂದರ್ಭದಲ್ಲಿ ರೂ 14000 ರೂ ಬೆಲೆ ಬಾಳುವ ಮೊಬೈಲ್ ಪೊನನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ರಿಕೇಟ್ ಆಟದ ವಿಚಾರದಲ್ಲಿ ಇಬ್ಬರ ನಡುವೆ ಜಗಳ 2 ಪ್ರಕರಣ ದಾಖಲು:

      ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆಯ ನಿವಾಸಿಗಳಾದ ಡಿ.ಪಿ. ಪ್ರಶಾಂತ್ ಹಾಗು ಡಿ.ಎಸ್. ಅರ್ಪಿತ್ ತಮ್ಮ ಸ್ನೇಹಿತರೊಂದಿಗೆ ದಿನಾಂಕ 23-1-2016 ರಂದು ಸಂಜೆ 4-00 ಗಂಟೆಗೆ ಕೊಡ್ಲಪೇಟೆ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕ್ರಿಕೇಟ್ ಆಟವಾಡುತ್ತಿದ್ದಾಗ ಡಿ.ಸಿ. ಪ್ರಶಾಂತ್ ಮತ್ತು ಡಿ.ಎಸ್. ಅರ್ಪಿತ್ ನಡುವೆ ಬೌಲಿಂಗ್ ಮಾಡುವ ವಿಚಾರದಲ್ಲಿ ಜಗಳವಾಗಿ ಅರ್ಪಿತ್ ಕ್ರಿಕೇಟ್ ಆಡುವ ವಿಕೇಟ್ ನಿಂದ ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದು, ಪ್ರಶಾಂತ್ ಒಂದು ದೊಣ್ಣೆಯಿಂದ ಅರ್ಪಿತ್ ಮೇಲೆ ಹಲ್ಲೆ ನಡೆಸಿರುತ್ತಾನೆಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.