Wednesday, January 6, 2016

ಪರಸ್ಪರ ಸ್ಕೂಟರ್‌ ಡಿಕ್ಕಿ; ಇಬ್ಬರಿಗೆ ಗಾಯ
                    ಪರಸ್ಪರ ಸ್ಕೂಟರ್‌ಗಳು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಸೋಮವಾರಪೇಟೆ ನಗರದ ಬಸವೇಶ್ವರ ರಸ್ತೆ ನಿವಾಸಿ ಪ್ರವೀಣ ಎಂಬವರು ಅವರ ಸ್ನೇಹಿತ ದಿನೇಶ್ ರವರೊಂದಿಗೆ ಕೆಎ-02-ಕ್ಯೂ-9086 ರ ಸ್ಕೂಟರ್ ನಲ್ಲಿ ಹಾಲು ತರುವ ಸಲುವಾಗಿ ಸೋಮವಾರಪೇಟೆಗೆ ಬಂದು ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿರುವಾಗ ಸ್ಕೂಟರ್ ಅನ್ನು ದಿನೇಶ್ ರವರು ಓಡಿಸುತ್ತಿದ್ದು ನಗರದ ಗಾಂಧಿ ವೃತ್ತದ ಬಳಿ ಮುಂದಿನಿಂದ ಜಗದೀಶ್ ಎಂಬವರು ಕೆಎ-12-ಕ್ಯೂ-0851ರ ಸ್ಕೂಟಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ದಿನೇಶ್‌ರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರವೀಣ ಮತ್ತು ಜಗದೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪತಿ ಪತ್ನಿ ಮೇಲೆ ಹಲ್ಲೆ
                      ನಡೆದುಕೊಂಡು ಹೋಗುತ್ತಿದ್ದ ಪತಿ ಹಾಗೂ ಪತ್ನಿಯ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ಮಡಿಕೇರಿ ಸಮೀಪ ಅರುವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಅರುವತೊಕ್ಲು ನಿವಾಸಿ ಅನಿತಾ ಮತ್ತು ಅವರ ಗಂಡ ಸೀನಪ್ಪರವರು ನಡೆದುಕೊಂಡು ಬರುವಾಗ ಅದೇ ಗ್ರಾಮದವರಾದ ತೆನ್ನೀರ ಶಶಿ ಮತ್ತು ಮುಂಜಾಂದಿರ ಬೋಪು ನಾಣಯ್ಯನವರು ಒಂದು ಕಾರಿನಲ್ಲಿ ಬಂದು ಅನಿತಾರವರ ಕೈಹಿಡಿದು ಎಳೆದಾಡಿ, ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗುವಾಗ ತಡೆಯಲು ಬಂದ ಸೀನಪ್ಪರವರಿಗೆ  ಕಲ್ಲಿನಿಂದ ಮೂಗಿಗೆ ಹೊಡೆದು ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                       ಹಣದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಭಾಗಮಂಡಲ ಬಳಿಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 05/01/2016ರಂದು ಅಯ್ಯಂಗೇರಿ ಗ್ರಾಮದ ಮಹಮದ್‌ ಎಂಬವರ ಕಾಫಿ ಗೋಡಾನಿನ ಬಳಿ ಅಯ್ಯಂಗೇರಿ ಗ್ರಾಮದ ಪಿ.ಎಸ್‌.ಮಹಮದ್‌ ಎಂಬವರಿಗೆ ಕುಂಞಿ ಅಹಮದ್‌ ಎಂಬವರು ಸಿಕ್ಕಿದಾಗ ಕುಂಞಿ ಅಹಮದ್‌ರವರು ನೀಡ ಬೇಕಾದ ಬಾಕಿ ಹಣ ರೂ.10,000/-ವನ್ನು ಪಿ.ಎಸ್‌.ಮಹಮದ್‌ರವರು ವಾಪಾಸು ಕೇಳಿದಾಗ ಕುಂಞಿ ಅಹಮದ್‌ರವರು ಜಗಳವಾಡಿ ಪಿ.ಎಸ್‌.ಮಹಮದ್‌ರವರಿಗೆ ಹಲ್ಲೆ ಮಾಡಿರುವುದಾಗಿ ನೀಡಿದ  ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಲಾರಿ ಡಿಕ್ಕಿ
                  ಬೈಕಿಗೆ ಲಾರಿಯೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ಬಳಿಯ ಮಾಕುಟ್ಟದಲ್ಲಿ ನಡೆದಿದೆ. ಪಿರಿಯಾಪಟ್ನ ನಿವಾಸಿ ಎನ್‌.ಜಿ.ಅಣ್ಣಯ್ಯ ಎಂಬವರು ಕೇರಳ ರಾಜ್ಯದ ಪೆರಾವೂರಿನ ರಶ್ಮಿ ಆಸ್ಪತ್ರೆಯಲ್ಲಿ ಸುಮಾರು 6 ವರ್ಷದಿಂದ ಕೆಲಸ ಮಾಡಿ ಕೊಂಡಿದ್ದು, ದಿನಾಂಕ: 02-01-16 ರಂದು  ಶಬರಿಮಲೈ ಯಾತ್ರೆಗೆ ಹೋಗುವ ಬಗ್ಗೆ ತಂದೆ ತಾಯಿಯವರಿಗೆ ತಿಳಿಸಲು  ಆಸ್ಪತ್ರೆಯ ವೈದ್ಯರಾದ ಕಮಲ್ ರವರ ಬಾಪ್ತು ಕೆಎ-36-ಯು-4794 ಮೋಟಾರ್ ಸೈಕಲಿನಲ್ಲಿ ನೀಲವಾಡಿ ಗ್ರಾಮಕ್ಕೆ ಬಂದು ವಾಪಾಸು ದಿನಾಂಕ: 03-01-16ರಂದು ಬೆಳಿಗ್ಗೆ ಮನೆಯಿಂದ ಪೆರಾವೂರಿಗೆ ಮಾಕುಟ್ಟದ ಬಳಿ ತಲುಪುವಾಗ ಎದುರುಗಡೆಯಿಂದ ಲಾರಿ ನಂ.ಡಬ್ಲ್ಯೂಬಿ-41-ಜಿ-8922ರ ಚಾಲಕ ಶಬೀರ್‌ ಮಲ್ಲಿಕ ಎಂಬಾತನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಣ್ಣಯ್ಯನವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಅಣ್ಣಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಮೋಟಾರು ಬೈಕ್‌ ಡಿಕ್ಕಿ
                   ನಿಲ್ಲಿಸಿದ್ದ ಕಾರಿಗೆ ಮೋಟಾರು ಬೈಕನ್ನು ಡಿಕ್ಕಿಪಡಿಸಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಬಿ.ಆರ್‌.ಶೆಟ್ಟಿ ಎಂಬವರು ದಿನಾಂಕ 05-01-2016 ರಂದು ಬೆಳಿಗ್ಗೆ ವಿರಾಜಪೇಟೆ ನಗರದ ಆತ್ರೇಯ ಆಸ್ವತ್ರೆಯ ಮುಂಭಾಗದ ಸಾರ್ವಜನಿಕ ರಸ್ತೆಯ ಎಡ ಭಾಗದಲ್ಲಿ ಅವರ ಬಾಪ್ತು KA-19 MF -763 ರ ಕಾರನ್ನು ನಿಲ್ಲಿಸಿ ಕಾಫಿ ಕುಡಿಯಲು ಹೋದ ವೇಳೆ ಯಾರೋ ಒಬ್ಬಅಪರಿಚಿತ ಮೋಟಾರ್ ಬೈಕ್ ಸವಾರ ಆತನ ಮೋಟಾರ್ ಬೈಕ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಶೆಟ್ಟಿಯವರ ಕಾರಿಗೆ ಡಿಕ್ಕಿ ಪಡಿಸಿ ಜಖಂಪಡಿಸಿದಲ್ಲದೆ ಮೋಟಾರ್ ಬೈಕ್ ಅನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ
                        ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಶನಿವಾರಸಂತೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 05.01.2016 ರಂದು ಕೊಡ್ಲಿಪೇಟೆ ಉಪ ಠಾಣೆಯ ಸಿಬ್ಬಂದಿ ಸೋಮಶೇಖರ್‌ರವರು ಕೊಡ್ಲಿಪೇಟೆ ಉಪ ಠಾಣೆಯಲ್ಲಿರುವಾಗ ಬೆಳಗಿನ ಜಾವ ನ್ಯಾಯದ ಹಳ್ಳ ಹೊಳೆಯಿಂದ ಬೆಸೂರು ಗ್ರಾಮದ ಕಡೆಗೆ ಒಂದು ಟ್ರಾಕ್ಟರ್ ನಲ್ಲಿ ಮರಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಮುಖ್ಯ ಆರಕ್ಷಕ ಸೋಮಶೇಖರ್‌ರವರು ಸ್ಥಳಕ್ಕೆ ಹೋದಾಗ ಮರಳು ತುಂಬಿಸಿಕೊಂಡು ಒಂದು ಟ್ರ್ಯಾಕ್ಟರ್ ಹೋಗುತ್ತಿದ್ದು, ಅದನ್ನು ಹಿಂಬಾಲಿಸಿಕೊಂಡು ಹೋಗಿ ಟ್ರಾಕ್ಟರ್ ಚಾಲಕನಿಗೆ ಟ್ರಾಕ್ಟರ್ ಅನ್ನು ನಿಲ್ಲಿಸುವಂತೆ ಸೂಚಿಸಿದಾಗ ಆತನು ಸ್ವಲ್ಪ ದೂರ ಮುಂದಕ್ಕೆ ಹೋಗಿ ಟ್ರಾಕ್ಟರ್ ಅನ್ನು ನಿಲ್ಲಿಸಿ ಓಡಿ ಹೋಗಿದ್ದು ನಂತರ ಪರಿಶೀಲಿಸಲಾಗಿ ಟ್ರ್ಯಾಕ್ಟರ್ ನಂಬರ್ ಕೆ.ಎ-12-ಟಿ-4602 ಆಗಿದ್ದು ಟ್ರ್ಯಾಕ್ಟರ್ ಚಾಲಕನು ಸರ್ಕಾರದ ಸೊತ್ತಾದ ಮರಳನ್ನು ಸಂಬಂಧ ಪಟ್ಟ ಇಲಾಖೆಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸುಮಾರು 5,000/- ಮೌಲ್ಯದ ಮರಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ದೇವಸ್ಥಾನ ಕಳವು ಯತ್ನ
                            ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಲು ಯತ್ನಿಸಿದ ಘಟನೆ ಶನಿವಾರಸಂತೆ ಬಳಿಯ ಕೊಡ್ಲಿಪೇಟೆಯಲ್ಲಿ ನಡೆದಿದೆ. ದಿನಾಂಕ 05-01-2016 ರಂದು ಬೆಳಗಿನ ಜಾವ ಪ್ರಕರಣದ ಫಿರ್ಯಾದಿ ಮೂತ್ರ ಮಾಡಲು ಮನೆಯ ಹೊರಗೆ ಬಂದು ಮೂತ್ರ ಮಾಡಿ ಮನೆಯ ಒಳಗೆ ಹೋಗುತ್ತಿರುವಾಗ ಸಮೀಪದ ಬಸವೇಶ್ವರ ದೇವಸ್ಥಾನದ ಒಳಗಿನಿಂದ ಜೋರಾದ ಶಬ್ದ ಕೇಳಿ ದೇವಸ್ಥಾನದ ಹತ್ತಿರ ಹೋಗಿ ನೋಡಲಾಗಿ ಬೀಟಿಕಟ್ಟೆ ನಿವಾಸಿ ಸಂತೋಷ್‌ ಎಂಬಾತನು ಟಾರ್ಚ್ ಬೆಳಕಿನ ಸಹಾಯದಿಂದ ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿರುವ ಹುಂಡಿಯನ್ನು ಒಡೆಯುತ್ತಿರುವುದು ಕಂಡು ಬಂದಿದ್ದು ಫಿರ್ಯಾದಿಯವರನ್ನು ನೋಡಿ ದೇವಸ್ಥಾನದ ಕಾಂಪೌಂಡನ್ನು ಹಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿ.ವಿ.ಎಸ್. ಸ್ಕೂಟರ್ ನಂ ಕೆ.ಎ-09-ಡಬ್ಲ್ಯೂ 874 ರಲ್ಲಿ ಹೊರಟು ಹೋಗಿದ್ದು ನಂತರ ಫಿರ್ಯಾದಿ ಮತ್ತು ಊರಿನವರು ಮೇಲ್ಕಂಡ ಆರೋಪಿಯನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದು, ದೇವಸ್ಥಾನದ ಹುಂಡಿಯನ್ನು ಒಡೆದು ಕಳ್ಳತನ ಮಾಡಲು ಪ್ರಯತ್ನಿಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.