Thursday, January 7, 2016

ಬ್ಯಾಂಕ್ ಖಾತೆ ವಿವರ ಪಡೆದು ವಂಚನೆ:

     ಅಪರಿಚಿತ ವ್ಯಕ್ತಿಯೊಬ್ಬರು ತಾನು ಬ್ಯಾಂಕ್ ಮೇನೇಜರ್ ಎಂಬುದಾಗಿ ದೂರವಾಣಿ ಮೂಲಕ ಮಹಿಳೆಯೊಬ್ಬರಿಂದ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಹಣ ಡ್ರಾ ಮಾಡಿ ವಂಚಿಸಿದ ಘಟನೆ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ಮಡಿಕೇರಿ ನಗರ ಠಾಣಾ ಸರಹದ್ದಿನ ಗದ್ದಿಗೆ ಬಳಿ ವಾಸವಾಗಿರುವ ಶ್ರೀಮತಿ ಜುಬೈದಾ ಎಂಬವರು ಇಂಡಿಯನ್ ಓವರ್‌ ಸಿಸ್‌ ಬ್ಯಾಂಕಿನಲ್ಲಿ ತಮ್ಮಹಾಗು ತಮ್ಮ ಗಂಡನ ಹೆಸರಿನಲ್ಲಿ  ಜಂಟಿ ಖಾತೆಯನ್ನು ಹೊಂದಿದ್ದು,    ದಿನಾಂಕ 06-01-2016 ರಂದು ಶ್ರೀಮತಿ ಜುಬೈದಾರವರ ಮೊಬೈಲ್‌ಗೆ  ಕರೆಮಾಡಿದ ಯಾರೊ ಒಬ್ಬ ವ್ಯಕ್ತಿ ಹಿಂದಿ ಹಾಗು ಕನ್ನಡ ಬಾಷೆಯಲ್ಲಿ ಮಾತನಾಡುತ್ತ ನಾನು ಇಂಡಿಯನ್ ಓವರ್ಸಿಸ್ ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿ ನಿಮ್ಮ ಎ.ಟಿ.ಎಂ ಕಾರ್ಡ ಬ್ಲಾಕ್ ಆಗಿದೆ ಎಂದು ತಿಳಿಸಿ ಎ.ಟಿ.ಎಂ ಕಾರ್ಡ್‌ ಹಾಗು ಪಿನ್‌ ನಂಬರ್‌ನ್ನು ಪಡೆದುಕೊಂಡು ಶ್ರೀಮತಿ ಜುಬೈದಾರವರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 8 ಭಾರಿ ರೂ. 4,510=00, 2,510=00, 1,010=00, 510=00, 5,010=00, 5,010=00, 5,010=00, ಮತ್ತು 5,010=00 ರೂಗಳಂತೆ ಒಟ್ಟು 28,580=00 ರೂಪಾಯಿ ಹಣ ಡ್ರಾ ಮಾಡಿ ವಂಚಿಸಿರುತ್ತಾರೆಂದು ಸದರಿ ಶ್ರೀಮತಿ ಜುಬೈದಾರವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಹಿನ್ನೆಲೆ, ವ್ಯಕ್ತಿಗಳಿಂದ ಅಕ್ರಮ ಪ್ರವೇಶ, ಆಸ್ತಿ ಹಾನಿ, ಕೊಲೆ ಬೆದರಿಕೆ:
    ಆಸ್ತಿ ವಿವಾದದ ಹಿನ್ನಲೆಯಲ್ಲಿ ಸುಮಾರು 10-15 ಜನರು ಮಹಿಳೆಯೊಬ್ಬರಿಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಕಾಫಿ, ಮೆಣಸು ಕೃಷಿಯನ್ನು ಕಿತ್ತು ನಷ್ಟ ಪಡಿಸಿ ಪಸಲನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 6-1-2016 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ಶ್ರೀಮತಿ ಕಳ್ಳೆಂಗಡ ಲತಾ ಎಂಬುವವರಿಗೆ ಸೇರಿದ ಜಾಗದಲ್ಲಿ ಆರೋಪಿಗಳಾದ ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಪ್ರೇಮ, ಪ್ರವೀಣ್, ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಚೋಡುಮಾಡ ಸೂರಜ್ ಸುಬ್ಬಯ್ಯ, ಅಳಮೇಂಗಡ ಬೋಸ್ ಮಂದಣ್ಣ, ಕಾಟಿಮಾಡ ಶರಿನ್, ಮಲ್ಲೇಂಗಡ ಜೀವನ್, ಮಲ್ಲೇಂಗಡ ವಿನಸ್, ಮುಕ್ಕಾಟಿರ ಸೋಮಯ್ಯ, ಪಿ.ಎ. ಪ್ರಭುಕುಮಾರ್, ಪೋರಂಗಡ ಡಾಲಿ ಚಿಟ್ಟಿಯಪ್ಪ ಹಾಗು ಇನ್ನಿತರರು ಸೇರಿ ಅಕ್ರಮ ಪ್ರವೇಶ ಮಾಡಿ ತೋಟಕ್ಕೆ ಅಳವಡಿಸಿದ ತಂತಿಬೇಲಿಯನ್ನು ಕಿತ್ತು, ತೋಟದಲ್ಲಿ ಬೆಳೆದ ಕಾಫಿ, ಮೆಣಸು ಬಳ್ಳಿಗಳನ್ನು ಕಿತ್ತು ನಷ್ಟ ಪಡಿಸಿದ್ದು, ತೋಟದಲ್ಲಿದ್ದ ಕಾಫಿ ಮತ್ತು ಅಡಿಕೆಯನ್ನು ತೆಗೆದು ಕಳ್ಳತನ ಮಾಡಿದ್ದು, ಅಲ್ಲದೆ ಫಿರ್ಯಾದಿ ಶ್ರೀಮತಿ ಕಳ್ಳೇಂಗಡ ಲತಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.