Monday, March 21, 2016

ಕಾರು ಮತ್ತು ಪಿಕ್ ಅಪ್ ಮುಖಾಮುಖಿ ಇಬ್ಬರಿಗೆ ಗಾಯ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಲ್ಲಲೆಕಾಡು ಎಂಬಲ್ಲಿ ದಿನಾಂಕ 19-3-2016 ರಂದು ಅರೆಕಾಡು ಗ್ರಾಮದ ನಿವಾಸಿ ಸಿ.ಜಿ ಸಂಬಯ್ಯನವರು ಚಲಾಯಿಸುತ್ತಿದ್ದ ಕಾರಿಗೆ ಕೆಎ-12-8544ಎ ಪಿಕ್ ಅಪ್ ವಾಹನ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಸಿ.ಜೆ. ಸಂಬಯ್ಯ ಮತ್ತು ಅರುಣ ಎಂಬವರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಹಲ್ಲೆಯ ಬೆದರಿಕೆ:

 ದಿನಾಂಕ 15-03-2016 ರಂದು ವಿರಾಜಪೇಟೆ ತಾಲೋಕು ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾಡಗ ಗ್ರಾಮದ ವಾಸಿ ಪಿರ್ಯಾಧಿ ಶ್ರೀಮತಿ ಲೀಲಾ ಕುಟ್ಟಪ್ಪನವರ ಕಾಫಿ ತೋಟಕ್ಕೆ ಆರೋಪಿಗಳಾದ ಬಿ.ಕೆ. ಅಪ್ಪಯ್ಯ ಮತ್ತು ನಂಜಪ್ಪ ಎಂಬವರು ಅಕ್ರಮ ಪ್ರವೇಶ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಆಳುಗಳನ್ನು ಬೆದರಿಸಿ ಓಡಿಸಿದ್ದು, ಅಲ್ಲದೆ ಕೆಲಸದವರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಗಳ ಮುಖಾಮುಖಿ ಡಿಕ್ಕಿ:

     ಸೋಮವಾರಪೇಟೆ ತಾಲೂಕು ಕಿರಗಂದೂರು ಗ್ರಾಮದ ನಿವಾಸಿ ಹೆಚ್.ಎಸ್. ದೇವಯ್ಯ ನವರ ಮಗ 19 ವರ್ಷದ ಪ್ರಮೋದ್ ದಿನಾಂಕ 19-3-2016 ರಂದು ರಾತ್ರಿ 7.30 ಗಂಟೆಗೆ ತನ್ನ ಬಾಪ್ತು ಕೆಎ 12 ಕ್ಯೂ 6383 ರ ಬೈಕ್ ನಲ್ಲಿ ಮನೆಯ ಕಡೆಗೆ ಹೋಗುತ್ತಿರುವಾಗ ಸೋಮವಾರಪೇಟೆಯ ಜೆಸಿ ವೇದಿಕೆಯ ಬಳಿ ಎದುರಿನಿಂದ ಬಂದ ಕೆಎ 12 ಈ 8479 ರ ಬೈಕ್ ನ್ನು ಅದರ ಸವಾರ ಅತಿವೇಗದಿಂದ ಓಡಿಸಿಕೊಂಡು ಬಂದು ಪ್ರಮೋದ್ ಚಾಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರಮೋದ್ ಗೆ ತಲೆಗೆ, ಮೂಗಿನ ಭಾಗಕ್ಕೆ, ಹಣೆಯ ಭಾಗಕ್ಕೆ ರಕ್ರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗುಂಪೊಂದರಿಂದ ಮೇಲೆ ಹಲ್ಲೆ ಕೊಲೆಗೆ ಯತ್ನ:

     ದಿನಾಂಕ 19-03-2016 ರಂದು ಪಿರ್ಯಾದಿ ಪಿ.ಬಿ ಶಾಹಿದ್ ತನ್ನ ಸ್ನೆಹಿತರಾದ ರಾಶೀದ್, ನೌಷಾದ್ ಮತ್ತು ನಿಸ್ಸಾರ್ ರವರುಗಳೊಂದಿಗೆ ಚೆರಿಯಪರಂಬುವಿನಲಿ ನಡೆಯುತ್ತಿದ್ದ ಉರೂಸ್ ಹೋಗಿ ವಾಪಾಸು ಬಂದು ನಿಸ್ಸಾರ್ ಎಂಬಾತನನ್ನು ಆತನ ಮನೆಗೆ ಬಿಡಲು ಅವರ ಸ್ನೇಹಿತನ ಆಟೋ ನಂ. ಕೆಎ-12-ಎ-0477 ರಲ್ಲಿ ಕೆನರಾ ಬ್ಯಾಂಕ್ ಬಳಿ ರಾತ್ರಿ 10-30 ಗಂಟೆಯಲ್ಲಿ ಹೋಗುತ್ತಿದ್ದಾಗ ಒಂದು ಆಟೋ ಮತ್ತು ಪಿಕ್ಅಪ್ನಲ್ಲಿದ್ದ ಪ್ರದೀಪ ಮತ್ತು ಇತರ 10-ರಿಂದ 15 ಜನರು ಕೂಗಿದ್ದು ಏನು ಎಂದು ಕೇಳಿದಾಗ ಏಕಾಏಕಿ ಲಾಂಗ್ ಮತ್ತು ದೊಣ್ಣೆಗಳಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಫಿರ್ಯಾದಿಯ ಬಲ ಹೆಬ್ಬೆರಳಿಗೆ ಮತ್ತು ರಾಶೀದ್ನ ಹಣೆ, ಎಡ ಮೊಣಕೈ, ಎರಡು ಕಾಲುಗಳಿಗೆ ಹೊಡೆದು ಗಾಯಗೊಳಿಸಿರುತ್ತಾರೆ ಮತ್ತು
ನೌಷಾದ್ ಎಂಬಾತನ ಬಲ ಮೊಣಕೈಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಕೊಟ್ಟಿಗೆಯಿಂದ ಎತ್ತು ಕಳವು:

      ನಾಪೋಕ್ಲು ಠಾಣಾ ಸರಹದ್ದಿನ ಕೈಕಾಡು ಗ್ರಾಮದ ಎನ್.ಎಸ್ ಬೆಳ್ಯಮ್ಮಯ್ಯ ಎಂಬವರು 2 ಹಸು, 2 ಎತ್ತು ಸಾಕಿದ್ದು ದಿನಾಂಕ 13-03-2016 ರಂದು ಸಂಜೆ 17-00 ಗಂಟೆಗೆ ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟಿ ಹಾಕಿದ್ದು, ದಿನಾಂಕ 14-03-2016 ರಂದು ಬೆಳಿಗ್ಗೆ 08-00 ಗಂಟೆಗೆ ದನ ಬಿಚ್ಚಲು ಹೋದಾಗ 2 ಹಸು ಮತ್ತು ಒಂದು ಎತ್ತು ಇದ್ದು ಮತ್ತೊಂದು ಎತ್ತು ಕಾಣೆಯಾಗಿರುವುದು ಕಂಡು ಬಂದಿದ್ದು, ಸದರಿ ಎತ್ತನ್ನು ಪಾರಾಣೆ ನಿವಾಸಿಗಳಾದ ಗಿರೀಶ ಮತ್ತು ಪೂವಯ್ಯ ಎಂಬವರು ಕದ್ದು ಮಾರಾಟ ಮಾಡಿರುವುದಾಗಿ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೊಬೈಲ್ ಅಂಗಡಿಯಿಂದ ಹಣ ಮತ್ತು ಮೋಬಲ್ ಗಳ ಕಳವು:

     ದಿನಾಂಕ 19-03-2016ರಂದು ರಾತ್ರಿ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ಹೆಚ್,ಬಿ. ಲೋಕೇಶ್ ಎಂಬವರಿಗೆ ಸೇರಿದ ಅಂಗಡೆಯ ಮೇಲ್ಛಾವಣಿಗೆ ಅಳವಡಿಸಿದ ಶೀಟ್ ಗಳನ್ನು ಒಡೆದು ಅಂಗಡಿಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಶೋ ಕೇಸ್ ನಲ್ಲಿ ಇಟ್ಟಿದ್ದ ನೋಕಿಯಾ ಮತ್ತು ಕಾರ್ಬನ್ ಕಂಪೆನಿಯ ಸುಮಾರು ಹತ್ತು ಮೊಬೈಲ್ ಗಳು ಹಾಗು ಕಾಶ್ ಕೌಂಟರ್ ನಲ್ಲಿ ಇದ್ದ ಚಿಲ್ಲರೆ ಹಾಗು 1500/ ರೂಗಳು ಕಳವು ಮಾಡಿದ್ದು ಅವುಗಳ ಒಟ್ಟು ಮೊತ್ತ 24,500/ ರೂ ಆಗಬಹುದು ಎಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.