Tuesday, June 7, 2016

ಅಪ್ರಾತ್ತ ಬಾಲಕಿ ಕಾಣೆ ಪ್ರಕರಣ ದಾಖಲು:

     ಶಾಲೆಗೆ ಹೋಗುವ ವಿಚಾರದಲ್ಲಿ ಬೇಸರಗೊಂಡ 9ನೇ ತರಗತಿ ವಿದ್ಯಾರ್ಥಿಯೊಬ್ಬಳು ಕಾಣೆಯಾದ ಘಟನೆ ಮಡಿಕೇರಿ ತಾಲೋಕು ಬಾವಲಿ ಗ್ರಾಮದಲ್ಲಿ ನಡೆದಿದೆ. ಬಾವಲಿ ಗ್ರಾಮದ ನಿವಾಸಿ ಶ್ರೀಮತಿ ಬೇಬಿ ಎಂಬವರ ಮಗಳಾದ 15 ವರ್ಷ ಪ್ರಾಯದ ಹೆಚ್.ಇ. ಪ್ರಿಯಾ ಎಂಬಾಕೆ ಪಾರಣೆ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸದರಿ ಶಾಲೆಗೆ ಹೋಗಲು ಇಷ್ಟ ಇಲ್ಲದೇ ಇರುವ ಕಾರಣ ಬೇಸರಗೊಂಡಿದ್ದು ದಿನಾಂಕ 31-5-2015 ರಂದು ಪಕ್ಕದ ಮನೆಯ ನಿವಾಸಿ ಕವಿತಾ ಎಂಬವರಲ್ಲಿ ಹೋಗಿದ್ದು ಅಲ್ಲಿಂದ ಕಾಣೆಯಾಗಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಾಗದ ವಿಚಾರದಲ್ಲಿ ಬೇಲಿ ಕಿತ್ತು ಹಾನಿ, ಕೊಲೆ ಬೆದರಿಕೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೆಕೇರಿ ಗ್ರಾಮದ ನಿವಾಸಿ ಶ್ರೀಮತಿ ಜಯಲಕ್ಷ್ಮಿ ಎಂಬವರಿಗೆ ಸೇರಿದ ಜಾಗದಲ್ಲಿ ಅವರ ಮನೆ ಇದ್ದು ಸದರಿ ಜಾಗಕ್ಕೆ ಬೇಲಿಯನ್ನು ನಿರ್ಮಿಸಿಕೊಂಡಿದ್ದು, ಅದೇ ಗ್ರಾಮದ ಮೇಚನ ಚಿಣ್ಣಪ್ಪ ಎಂಬವರು ದಿನಾಂಕ 4-6-2016 ರಂದು ಮದ್ಯಪಾನ ಮಾಡಿಕೊಂಡು ಬಂದು ಜಾಗಕ್ಕೆ ಹಾಕಿದ ತಂತಿಬೇಲಿಯನ್ನು ಕಿತ್ತು ಹಾಕಿದ್ದು ಅಲ್ಲದೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದ್ವೇಷದ ಹಿನ್ನೆಲೆ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಬಿ.ಎ. ದಿನೇಶ್ ಎಂಬವರನ್ನು ದಿನಾಂಕ 6-6-2016 ರಂದು ಅಮ್ಮತ್ತಿ ನಗರದಲ್ಲಿ ಆರೋಪಿಗಳಾದ ಮಧು, ಬೋಪಣ್ಣ, ಕೀರ್ತಿ ಮತ್ತು ಪವಿತ್ರ ಎಂಬವರು ದಾರಿ ತಡೆದು ನಿಲ್ಲಿಸಿ ಹಲ್ಲೆ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆ:

      ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದ ನಿವಾಸಿ ಪಣಿಎರವರ ಕಾಳಿ ಎಂಬವರ ಗಂಡ ಚಾಣೆ ಎಂಬ ವ್ಯಕ್ತಿಯನ್ನು ಪಣಿ ಎರವರ ಚಿಣ್ಣ ಎಂಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿ ಬಾಗಲು ಹೊಡೆದು ಕಳವು:

      ದಿನಾಂಕ 05.06.2016 ರಂದು ರಾತ್ರಿ 10.30ಗಂಟೆಗೆ ಮಡಿಕೇರಿ ನಗರದ ಶಾಂತಿನಿಕೇತನ ನಿವಾಸಿ ಪಿರ್ಯಾದಿ ಶ್ರೀಮತಿ ಪವಿತ್ರ ಎಂಬವರು ಸುಂಟಿಕೊಪ್ಪದಲ್ಲಿರುವ ತಮ್ಮ ಮೊಬೈಲ್ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 06.06.2016 ರಂದು ಸಮಯ 10.15 ಎ ಎಮ್ ಗೆ ತನ್ನ ಮೊಬೈಲ್ ಅಂಗಡಿಗೆ ಬಂದು ಬಾಗಿಲು ತೆಗೆಯಲು ನೋಡಿದಾಗ ತನ್ನ ಅಂಗಡಿಗೆ ಹಾಕಿದ ಬೀಗ ವನ್ನು ಯಾರೋ ಒಡೆದಿರುವುದು ಕಂಡು ಬಂದಿದ್ದು, ಒಳಗೆ ಹೋಗಿ ಪರಶೀಲಿಸಿದಾಗ ಅಂಗಡಿಯ ಶೊಕೇಸ್ ನಲ್ಲಿದ್ದ ವಿವಿದ ಕಂಪೆನಿಯ 12 ಮೋಬೈಲ್ ಸೆಟ್ ಗಳು ಕಾಣೆಯಾಗಿದ್ದು ಅವುಗಳ ಮೌಲ್ಯ 51.199 ರೂ .ಅಲ್ಲದೆ ಡ್ರಾಯರ್ ನಲ್ಲಿದ ಚಿಲ್ಲರೆ ಹಣ 1,040 ರೂ ಹಾಗೂ ಡ್ರಾಯರ್ ನಲ್ಲಿದ್ದ ಪರ್ಸ್‌ ನಲ್ಲಿದ್ದ ರೂ 37,800 ಕಾಣೆಯಾಗಿದ್ದು ಎಲ್ಲಾ ಒಟ್ಟು ಸೇರಿ 90,039 ರೂ ಗಳಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.