Thursday, June 30, 2016

ಗಂಡಸು ಕಾಣೆ ಪ್ರಕರಣ
               ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬ ಮನೆಗೆ ಬಾರದೆ ಕಾಣೆಯಾದ ಘಟನೆ ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 26/06/2016ರಂದು ಕೆದಮುಳ್ಳೂರು ಗ್ರಾರಾಮದ ಬಾರಿಕಾಡು ನಿವಾಸಿ ಮಣಿಕಂಠನ್‌ ಎಂಬವರು ಕೆಲಸದ ನಿಮಿತ್ತ ಎಲ್ಲಿಗೋ ಹೋಗಿದ್ದು ನಂತರ ಮದ್ಯಾಹ್ನ ಪತ್ನಿ ದಿವ್ಯರವರಿಗೆ ಮೊಬೈಲ್‌ ಕರೆ ಮಾಡಿ ತಾನು ಮಡಿಕೇರಿಯಲ್ಲಿರುವುದಾಗಿಯೂ ಪಿರಿಯಾಪಟ್ನದಲ್ಲಿ ಕೆಲಸವಾಗಿದ್ದು ಅಲ್ಲಿಗೆ ಹೋಗುವುದಾಗಿ ಹೇಳಿ ಹೋದಾತನು ಇಲ್ಲಿಯವರೆಗೂ ಮನೆಗೆ ಮರಳಿ  ಬಂದಿರುವುದಿಲ್ಲವೆಂದು ಮಣಿಕಂಠನ್‌ರ ಪತ್ನಿ ದಿವ್ಯಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು  ಮೊಕದ್ದಮೆ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ಕರಿ ಮೆಣಸು ಬಳ್ಳಿಗಳನ್ನು ಕಡಿದು ನಾಶ
                   ಅಕ್ರಮವಾಗಿ ತೋಟಕ್ಕೆ ಪ್ರವೇಶಿಸಿ ಕರಿಮೆಣಸು ಬಳ್ಳಿಗಳನ್ನು ಕಡಿದು ನಾಶಗೊಳಿಸಿದ ಘಟನೆ ನಾಫೋಕ್ಲು ಬಳಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ. ಕುಂಬಳದಾಳು ಗ್ರಾಮದ ನಿವಾಸಿ  ಬೊಬ್ಬಿರ ಗಿರೀಶ್‌ ಎಂಬವರಿಗೆ ಗ್ರಾಮದಲ್ಲಿ ಕಾಫಿ ತೋಟವಿದ್ದು ದಿನಾಂಕ 26/06/2016ರಂದು ಅವರು ತೋಟಕ್ಕೆ ಹೋದಾಗ ತೋಟದಲ್ಲಿದ್ದ ಸುಮಾರು 10-20 ವರ್ಷದ 25 ಕರಿ ಮೆಣಸು ಬಳ್ಳಿಗಳನ್ನು ಕಡಿದು ನಾಶಗೊಳಿಸಿದ್ದು ಸುಮಾರು ರೂ.ಒಂದು ಲಕ್ಷಗಳಷ್ಟು ನಷ್ಟವಾಗಿದ್ದು  ದಿನಾಂಕ 29/06/2016ರಂದು ಗಿರೀಶ್‌ರವರು ಬಸ್‌ ತಂಗುದಾಣದ ಬಳಿ ನಿಂತಿರುವಾಗ ಅವರ ತಮ್ಮ ಮೋಹನ ಅಲ್ಲಿಗೆ ಬಂದು ಕೈಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ತನ್ನ ತಾಯಿ ಮೀನಾಕ್ಷಿ ಮತ್ತು ತಮ್ಮ ಮೋಹನರವರು ತನ್ನ ತೋಟಕ್ಕೆ ಪ್ರವೇಶಿಸಿ ಕರಿ ಮೆಣಸು ಬಳ್ಳಿಗಳನ್ನು ಕಡಿದು ನಾಶಗೊಳಿಸಿರಬಹುದಾಗಿ ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ನಾಫೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ.
                    ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಫೇಟೆ ನಗರದಲ್ಲಿ ನಡೆದಿದೆ. ಪೊನ್ನಂಪೇಟೆ ನಗರದಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಪೊನ್ನಂಪೇಟೆ ನಿವಾಸಿ ಬಸ್ಸಿನಲ್ಲಿ ನಿರ್ವಾಹಕ ಕೆಲಸ ಮಾಡಿಕೊಂಡಿರುವ ಸುಬ್ರಮಣಿ ಎಂಬವರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪಿ.ಬಿ.ಉಷಾ ಎಂಬವರು ದಿನಾಂಕ 23/06/2016ರಂದು ಮಗಳನ್ನು ಕಾಲೇಜಿಗೆ ಸೇರಿಸುವ ಸಲುವಾಗಿ ಬೆಂಗಳೂರಿಗೆ ಹೋಗಿ ದಿನಾಂಕ 27/06/2016ರಂದು ಮರಳಿ ಮನೆಗೆ ಬಂದಾಗ ಸುಬ್ರಮಣಿಯವರು 4 ದಿನಗಳಿಂದ ಕ್ಯಾಂಟೀನ್‌ ತೆರೆಯದ ಬಗ್ಗೆ ಜಗಳವಾಡಿ ಉಷಾರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸಿ ಹೆಂಚು ಮತ್ತು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಡಾನೆ ಸಾವು, ಗುಂಡೇಟು ಶಂಕೆ
                ತೋಟದಲ್ಲಿ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಪೊನ್ನಂಪೇಟೆ ಬಳಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 21/06/2016ರಂದು ಸುಳುಗೋಡು ನಿವಾಸಿ ಕೊಕ್ಕೇಂಗಡ ಪ್ರಸನ್ನ ಎಂಬವರು ತಿತಿಮತಿ ಅರಣ್ಯ ವಲಯಾಧಿಕಾರಿ ಕೆ.ಪಿ.ಗೋಪಾಲರವರಿಗೆ ದೂರವಾಣಿ ಕರೆ ಮಾಡಿ ಅವರ ತೋಟದಲ್ಲಿ ಗಂಡು ಕಾಡಾನೆಯೊಂದು ಸತ್ತು ಬಿದ್ದಿರುವುದಾಗಿ ತಿಳಿಸಿದ್ದು ಅರಣ್ಯ ವಲಯಾಧಿಕಾರಿ ಗೋಪಾಲರವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪ್ರಸನ್ನರವರ ತೋಟದಲ್ಲಿ ಗಂಡು ಕಾಡಾನೆಯೊಂದರ ಕಳೇಬರ ಕಂಡು ಬಂದಿದ್ದು ಮೇಲ್ನೋಟಕ್ಕೆ ಗುಂಟೇಟಿನಿಂದ ಸಾವಿಗೀಡಾಗಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರನ್ನು ನ್ಯಾಯಾಲಯದ ನಿರ್ದೇಶನದಂತೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶುಲ್ಕ ಪಡೆದು ವಂಚನೆ
                    ಮದ್ಯ ಮಾರಾಟ ನವೀಕರಣದ ಶುಲ್ಕ ಪಡೆದು ವಂಚಿಸಿದ ಘಟನೆ ಸೋಮವಾರಪೇಟೆ ಬಳಿಯ ಬೇಳೂರು ಎಂಬಲ್ಲಿ ನಡೆದಿದೆ. ಬೇಳೂರು ಗ್ರಾಮದ ನಿವಾಸಿ ಆನಂದ ಬಸಪ್ಪ ಎಂಬವರು ಅವರು ಅಧ್ಯಕ್ಷರಾಗಿರುವ ಬೇಳೂರು ಕ್ಲಬ್‌ಗೆ ಸಂಬಂಧಿಸಿದ ಸಿಎಲ್‌-4 ಶ್ರೇಣಿಯ ಮದ್ಯ ಮಾರಾಟ ಪರವಾನಗಿಯನ್ನು ನವೀಕರಿಸುವ ಸಲುವಾಗಿ ದಿನಾಂಕ 20/06/2016ರಂದು ಸೋಮವಾರಪೇಟೆ ನಗರದಲ್ಲಿರುವ ಅಬಕಾರಿ ಇಲಾಖೆಯ ಉದ್ಯೋಗಿ ಜೀವನ್‌ ಎಂಬವರಿಗೆ ರೂ.2,30,000 ನವೀಕರಣ ಶುಲ್ಕ ಪಾವತಿಸಿ ರಸೀತಿ ಪಡೆದಿದ್ದು ನಂತರ ದಿನಾಂಕ 24/06/2016ರಂದು ಆನಂದ ಬಸಪ್ಪರವರು ಸೋಮವಾರಪೇಟೆಯ ಅಬಕಾರಿ ಇಲಾಖೆಗೆ ಹೋಗಿ ವಿಚಾರಿಸಿದಾಗ ಜೀವನ್‌ರವರು ಸದ್ರಿ ಶುಲ್ಕವನ್ನು ಸರ್ಕಾರಿ ಖಾತೆಗೆ ಪಾವತಿಸದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.