Sunday, July 17, 2016

 ಸಾರ್ವಜನಿಕರ ಮಾಹಿತಿಗಾಗಿ:
     ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಸುಮಾರು 5 ದೇವಸ್ಥಾನ ಕಳವು ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ದೇವಸ್ಥಾನ ಕಳವು ಮಾಡುವ ಕಳ್ಳರ ತಂಡವೊಂದು ಸಂಚರಿಸುತ್ತಿದ್ದು, ಕಳ್ಳತನ ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಕೆಳಕಾಣಿಸಿದ ಕ್ರಮಗಳನ್ನು ಅನುಸರಿಸಿ ಕಳ್ಳತನ ತಡೆಗಟ್ಟಲು ಮತ್ತು ಆರೋಪಿ ಮತ್ತು ಮಾಲುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಇಲಾಖೆಗೆ ಸಹಕರಿಸಲು ಕೋರಿದೆ.

1) ದೇವಾಲಯಕ್ಕೆ ಸಂಬಂಧಪಟ್ಟ ಚಿನ್ನಾಭರಣಗಳನ್ನು ದೇವಾಲಯದಲ್ಲಿ ಇಡದೇ ಲಾಕರ್ ನಲ್ಲಿ ಇಡುವ ವ್ಯವಸ್ಥೆ ಮಾಡುವುದು.
2) ಸಾಧ್ಯವಾದಲ್ಲಿ ದೇವಾಲಯಗಳಲ್ಲಿ ಸೆಕ್ಯುರಿಟಿ ಗಾರ್ಡಗಳನ್ನು ನೇಮಕಮಾಡುವುದು.
3) ಉತ್ತಮ ಗುಣಮಟ್ಟದ ಸಿ.ಸಿ. ಕ್ಯಾಮರಾಗಳನ್ನು ದೇವಾಲಯದ ಪ್ರಮುಳ ಸ್ಥಳಗಲ್ಲಿ ಸುಸಜ್ಜಿತವಾಗಿ ಅಳವಡಿಸುವುದು.
4) ದೇವಸ್ಥಾನ ಅಕ್ಕಪಕ್ಕದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುವುದು.
5) ದೇವಸ್ಥನದ ಕಳ್ಳತನದ ಬಗ್ಗೆ ಯಾವುದೇ ವ್ಯಕ್ತಿಗಳ ಬಗ್ಗೆ ಅನುಮಾನ/ಸಂಶಯಗಳಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗಳಿಗೆ ಮತ್ತು ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ:08272-228330, 08272-220720, 100 ಗೆ ದೂರವಾಣಿ ಮೂಲಕ ತಿಳಿಸುವುದು.
ಅಪರಾಧ ಪ್ರಕರಣಗಳು:

ಅಕ್ರಮ ಪ್ರವೇಶ, ತಂತಿ ಬೇಲಿ ಹಾನಿ:

     ಆಸ್ತಿ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತಂತಿ ಬೇಲಿಯನ್ನು ಕಿತ್ತು ನಷ್ಟ ಪಡಿಸಿದ ಘಟನೆ ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 14.07.2016 ರಂದು ಸಂಜೆ 5.00 ಗಂಟೆಗೆ ನಾಲ್ಕೇರಿ ಗ್ರಾಮದಲ್ಲಿ ಪಿರ್ಯಾದಿ ಗುಡಿಯಂಗಡ ಜಿ ನಾಚ್ಚಪ್ಪ ತಂದೆ ಲೇಟ್ ಗಣಪತಿ ಪ್ರಾಯ 73 ವರ್ಷ ಇವರ ಬಾಪ್ತು ಸರ್ವೆ ನಂ 20/20 ರ 5.60 ಕಾಫಿ ತೋಟಕ್ಕೆ ಆರೋಪಿ ಚೆಪ್ಪುಡಿರ ಕಾರ್ಯಪ್ಪ ಎಂಬವರು ಅಕ್ರಮ ಪ್ರವೇಶ ಮಾಡಿ ತಂತಿ ಬೇಲಿಯನ್ನು ಕಿತ್ತು ಅಂದಾಜು 6,000/- ರೂ ನಷ್ಟ ಪಡಿಸಿ ಸದರಿ ಕಾಫಿ ತೋಟದ ಪೈಕಿ ಅಂದಾಜು ಒಂದು ಎಕರೆ ಕಾಫಿ ತೋಟವನ್ನು ತಮ್ಮ ತೋಟಕ್ಕೆ ಒತ್ತುವರಿ ಮಾಡಿ ಕೊಂಡಿರುರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಬಾಲಕನ ಆತ್ಮಹತ್ಯೆ:
     ನಾಪೋಕ್ಲು ಗ್ರಾಮದ ಕುಲ್ಲೇಟಿರ ಕಾಳಪ್ಪರವರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಬೆಟ್ಟ ಕುರುಬರ ಮಾರ ಎಂಬವರ ಮಗ ಮಹೇಶ ಎಂಬಾತನು ನಾಪೋಕ್ಲು ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು , ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡುತ್ತಿದ್ದು ಅದಕ್ಕೆ ಶಾಲೆಗೆ ಹೋಗದ್ದಿದ್ದರೆ ಕೂಲಿ ಕೆಲಸಕ್ಕೆ ಬಾ ಎಂದು ಹೇಳಿದ್ದಕ್ಕೆ ಬರುವುದಿಲ್ಲ. ಗ್ಯಾರೇಜ್ ಕೆಲಸಕ್ಕೆ ಹೋಗುತ್ತೇನೆಂದು ತಿಳಿಸಿದ್ದರಿಂದ ಫಿರ್ಯಾದಿ ಒಪ್ಪದ್ದರಿಂದ ಬೇಸರ ಮಾಡಿಕೊಂಡು ದಿನಾಂಕ 07-07-2016 ರಂದು ಸಂಜೆ 6-30 ಗಂಟೆಗೆ ಕಳೆ ನಾಶಕ ಸೇವಿಸಿ, ಚಿಕಿತ್ಸೆ ಬಗ್ಗೆ ನಾಪೋಕ್ಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮಹೇಶ ಮೃತಪಟ್ಟಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಟಾರ್ ಸೈಕಲ್ ಗೆ ಟ್ರಾಕ್ಟರ್ ಡಿಕ್ಕಿ, ಒಬ್ಬನ ದುರ್ಮರಣ, ಮತ್ತೊಬ್ಬನಿಗೆ ಗಾಯ:

      ದಿನಾಂಕ 16-07-2016 ರಂದು ಸಮಯ 09.00 ಎ.ಎಂ.ಗೆ ಸಿದ್ಧಾಪುರ ಠಾಣಾ ಸರಹದ್ದಿಗೆ ಸೇರಿದ ಕೋಟೆಬೆಟ್ಟ ಥಾರು ರಸ್ತೆಯಲ್ಲಿ ಫಿರ್ಯಾದಿಯವರು ನಂ. KA 12 E 3727 ರ ಟ್ರಾಕ್ಟರ್ ನ ನಂ. KA 12 E 3728 ರ ಟ್ರೈಲರ್ ನಲ್ಲಿ ಶಿವಯ್ಯ, ಉದಯರವರೊಂದಿಗೆ ಸಿಮೆಂಟ್ ಚೀಲಗಳ ಮೇಲೆ ಕುಳಿತುಕೊಂಡು ದೇವರಪುರ ಕಡೆಗೆ ಹೋಗುತ್ತಿದ್ದಾಗ ನಂ. KA 12 E8205 ರ ಮೋಟಾರ್ ಸೈಕಲ್ ನಲ್ಲಿ ಮೇಸ್ತ್ರಿ ಸುರೇಶರವರು ಹಿಂಬದಿಯಲ್ಲಿ ಸಜ ಎಂಬುವವರನ್ನು ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಹಿಂಬದಿಯಿಂದ ಹೋಗುತ್ತಿದ್ದ ಚಾಲಕ ಮುತ್ತುರವರು ಟ್ರಾಕ್ಞರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಏಕಾಏಕಿ ಬಲಕ್ಕೆ ತಿರುಗಿಸಿ ಸುರೇಶರವರು ಬರುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಟ್ರಾಕ್ಟರ್ ಸುರೇಶ ಮತ್ತು ಸಜನ ಮೇಲೆ ಹರಿದ ಪರಿಣಾಮ ಸುರೇಶ ಮತ್ತು ಸಜ ಇಬ್ಬರು ಗಾಯಗೊಂಡಿದ್ದು, ಇಬ್ಬರನ್ನು ಚಿಕಿತ್ಸೆ ಬಗ್ಗೆ ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ ಮೇರೆಗೆ ಸುರೇಶನು ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಗಂಡಸಿನ ಮೃತಹೇಹ ಪತ್ತೆ, ಪ್ರಕರಣ ದಾಖಲು:

     ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ಬೈಪಾಸ್ ರಸ್ತೆಯಲ್ಲಿರುವ ಪರಮೇಶ್ವರ್ ಎಂಬವರಿಗೆ ಸೇರಿದ ಅಂಗಡಿ ಮಳಿಗೆಯ ಕಟ್ಟಡದ ಕೆಳ ಭಾಗದಲ್ಲಿ ಅಂದಾಜು 65-70 ವರ್ಷ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಸದರಿ ವ್ಯಕ್ತಿ ಯಾವುದೇ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿ ಹಾಗು ಆತನ ವಾರಿಸುದಾರರು ಯಾರೂ ಇರುವುದು ಕಂಡುಬಂದಿರುವುದಿಲ್ಲ ವೆಂದು ಫಿರ್ಯಾದಿ ಜಿ.ಪಿ ಕುಶಾಲಪ್ಪ, ಪಿಡಿಒ, ಶನಿವಾರಸಂತೆ ಇವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಬಾಲಕನ ಸಾವು:

     ವಿರಾಜಪೇಟೆ ತಾಲ್ಲೂಕು, ಕಡಂಗ ಮರೂರು ಗ್ರಾಮದ ನಿವಾಸಿ ಪಿ.ಎಂ. ಉಮ್ಮರ್ ಎಂಬವರ ಮಗ 14ವರ್ಷ ಪ್ರಾಯದ ಶಲಾವುದ್ದೀನ್ ಎಂಬಾತ ಕದನೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ನಾಲ್ಕನೇಯ ಮೈಲ್ ನಲ್ಲಿ ಈ ದಿನ ದಿನಾಂಕ 17-07-16ರಂದು ಪೂವಯ್ಯ, ನವರ ಪತ್ನಿ ಗಂಗವ್ವ, ರವರ ಗದ್ದೆಯಲ್ಲಿ ಕೆಸರು ಗದ್ದೆಯ ಪುಟ್ ಬಾಟ್ ಪಂದ್ಯಾಟ ವೀಕ್ಷಿಸಲು ಹೋಗಿದ್ದು, ಸದರಿ ಪಂದ್ಯಾಟವನ್ನು ವೀಕ್ಷಿಸುತ್ತಿದ್ದವನು ಪಕ್ಕದಲ್ಲೇ ಇದ್ದ ಕೆರೆಯ ಹತ್ತಿರ ಆಟವಾಡಲೆಂದು ತೆರಳಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.