Sunday, July 3, 2016

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                   ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಗರಗಂದೂರು ಗ್ರಾಮದ ನಿವಾಸಿ ರಾಮು ಕೆ.ಡಿ. ಎಂಬವರು ಹಲವು ವರ್ಷಗಳಿಂದ ಮೂರ್ಚೆ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 02/07/2016ರಂದು ರಾಮುರವರ ಪತ್ನಿ ರತ್ನರವರು ಕೂಲಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ರಾಮುರವರಿಗೆ ಮೂರ್ಚೆ ರೋಗ ಜಾಸ್ತಿಯಾಗಿದ್ದು ಮನೆಯಲ್ಲಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದರೆನ್ನಲಾಗಿದೆ. ಅಸ್ವಸ್ಥ ರಾಮುರವರನ್ನು ಪಕ್ಕದ ಮನೆಯ ನಿವಾಸಿ ದೇವಿಕ ಎಂಬವರೊಂದಿಗೆ ಸೋಮವಾರಪೇಟೆ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ರಾಮುರವರು ಮೃತಪಟ್ಟಿರುವುದಾಗಿ ಕೆ.ಡಿ.ಬಾಲಕೃಷ್ಣ ಎಂಬವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ತಂದೆ ಮಗ ಕಾಣೆ ಪ್ರಕರಣ
                ತಂದೆ ಹಾಗೂ ಮಗ ಇಬ್ಬರು ಮನೆಯಿಂದ ಕಾಣೆಯಾದ ಪ್ರಕರಣ ಕುಶಾಲನಗರ ಬಳಿಯ ಕೂಡು ಮಂಗಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/06/2016ರಂದು ಕೂಡು ಮಂಗಳೂರು ನಿವಾಸಿ ಸಹನಾ ರೈ ಎಂಬವರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಆಕೆಯ ಪತಿ ಅರುಣ್‌ ಅಂಚನ್‌ ಎಂಬವರು ಮಗ ತುಷಾರ್‌ ಅಂಚನ್‌ ಎಂಬಾತನನ್ನು ಜೊತೆಯಲ್ಲಿ ಕರೆದುಕೊಂಡು ಎಲ್ಲಿಗೋ ಹೋಗಿದ್ದು ಇದುವರೆವಿಗೂ ಮನೆಗೆ ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದಾಖಲಾತಿ ತಿದ್ದುಪಡಿ, ವಂಚನೆ
              ದಾಖಲಾತಿಗಳನ್ನು ತಿದ್ದುಪಡಿ ಮಾಡಿ ವಂಚಿಸಿದ ಪ್ರಕರಣವೊಂದು ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 17/05/1992ರಂದು ಕುಶಾಲನಗರ ನಿವಾಸಿ ಹೆಚ್‌.ಎಸ್‌.ಅಶೋಕ ಎಂಬವರ ತಂದೆ ಸುರೇಶ್‌ರವರು ಕುಶಾಲನಗರದ ಗುಂಡೂರಾವ್‌ ಬಡಾವಣೆ ನಿವಾಸಿ ಉದಯ ಶಂಕರ್‌ ಎಂಬವರಿಂದ ಆಸ್ತಿ ಖರೀದಿಸಿದ್ದು ಸದ್ರಿ ಖರೀದಿ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಉದಯ ಶಂಕರ್‌ರವರ ಪತ್ನಿ ಎಸ್‌.ಯು.ಅರುಣ ರವರು ಎಸ್‌.ಯು.ಅರುಣಶಂಕರ್‌ ಎಂಬುದಾಗಿ ಸಹಿ ಮಾಡಿದ್ದು ನಂತರ ಸದ್ರಿ ಆಸ್ತಿಯ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಅರುಣ ಶಂಕರ್‌ರವರು ತನ್ನ ಹೆಸರು ಕೇವಲ ಎಸ್‌.ಯು.ಅರುಣ ಎಂದೂ ತಾನು ಯಾವುದೇ ದಾಖಲೆಗಳಿಗೆ ಸಹಿ ಮಾಡಿರುವುದಿಲ್ಲವೆಂದೂ ಹೇಳುತ್ತಾ, ತನ್ನ ಪತಿಯ ಹೆಸರನ್ನು ಉದಯಕುಮಾರ್‌ ಎಂದೂ ಹೇಳುತ್ತಾ ಮೋಸ ಮಾಡಿರುವುದಾಗಿ ಹೆಚ್‌.ಎಸ್‌.ಅಶೋಕರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಔಷಧಿ ಸೇವಿಸಿ ವಿದ್ಯಾರ್ಥಿನಿ ಸಾವು
                 ಯಾವುದೋ ಔಷಧಿ ಸೇವಿಸಿ ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾದ ಪ್ರಕರಣ  ಮಡಿಕೇರಿ ಸಮೀಪದ ಮುಕ್ಕೋಡ್ಲುವಿನಲ್ಲಿ ನಡೆದಿದೆ. ಮುಕ್ಕೋಡ್ಲು ನಿವಾಸಿ ಜಿ.ಎಸ್‌.ಲೋಕೇಶ್‌ ಎಂಬವರ ಮಗಳು ಕೃಷ್ಮಾ ಎಂಬಾಕೆಯು ಮಡಿಕೇರಿಯಲ್ಲಿ ಅಂತಿಮ ಪದವಿ ವ್ಯಾಸಂಗ  ಮಾಡುತ್ತಿದ್ದು  ಇತ್ತೀಚೆಗೆ ಕೆಲವು ದಿನಗಳಿಂದ ಅಸ್ವಸ್ಥಳಾಗಿದ್ದ ಕಾರಣಕ್ಕೆ ಮನೆಯಲ್ಲಿ  ಒಬ್ಬಳೇ ಇದ್ದು ದಿನಾಂಕ 27/06/2016ರಂದು ಮನೆಯಲ್ಲಿದ್ದ ಯಾವುದೋ ಔಷಧಿಯನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾಕೆಯನ್ನು ಚಿಕಿತ್ಸೆಗಾಗಿ ಮಡಿಕೇರಿಯ ಖಾಸಗಿ ಆಸ್ಪತ್ರೆಗೆ  ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ದಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.