Sunday, August 14, 2016

ಹಳೆ ವೈಷಮ್ಯ, ಹಲ್ಲೆ
                  ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಬಳಿಯ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ರಾತ್ರಿ ವೇಳೆ ಕಟ್ಟೇಪುರ ನಿವಾಸಿ ಹನುಮೇಗೌಡ ಎಂಬವರು ಅವರ ಪತ್ನಿಗೆ ಮಾತ್ರೆ ತರಲೆಂದು ಅಂಗಡಿಗೆ ಹೋಗಿ ವಾಪಾಸು ಮನೆಗೆ ಬರುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ದರ್ಶನ್‌, ಪ್ರಜ್ವಲ್‌ ಮತ್ತು ಗೋಪಾಲಕೃಷ್ಣ ಎಂಬವರು ಸೇರಿಕೊಂಡು ಹಳೆ ದ್ವೇಷದಿಂದ ಹನುಮೇಗೌಡರವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು ಹನುಮೇಗೌಡರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ, ಓರ್ವನ ಬಂಧನ
                      ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 13/08/2016 ರಂದು ಪೊನ್ನಂಪೇಟೆ ನಗರದ  ಬಸ್‌ ನಿಲ್ದಾಣದ ಬಳಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ಅಪ್ಪು ಎಂಬಾತನನ್ನು ಬಂಧಿಸಿದ ಪೊನ್ನಂಪೇಟೆ ಪೊಲೀಸರು ಆತನಿಂದ ಲಾಟರಿ ಮತ್ತು ರೂ. 2430/- ನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.