Wednesday, September 14, 2016


ನಗದು ದರೋಡೆ ಪ್ರಕರಣ ಪತ್ತೆ.
                     ಇತ್ತೀಚೆಗೆ ಶ್ರೀಮಂಗಲ ವ್ಯಾಪ್ತಿಯಲ್ಲಿ ಅಪರಾತ್ರಿ ವೇಳೆ ನಡೆದ ಭಾರೀ ನಗದು ಹಾಗೂ ಕಾರು ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಹ್ಚ್ಇದ ಪೊಲೀಸರು ಆರೋಪಿಗಳನ್ನು ಬಂಧಿಸಿ ದರೋಡಯಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

                      ದಿನಾಂಕ 16-08-2016 ರಂದು ರಾತ್ರಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೇರಳದ ತಾಮರಚೇರಿ ಕಡೆಗೆ ಕೆಎಲ್-57-ಎಂ-2587 ರ ಇನೋವಾ ಕಾರಿನಲ್ಲಿ ಅಸೀಫ್ ಎಂಬವರು ಅವರ ಇಬ್ಬರು ಸ್ನೇಹಿತರೊಂದಿಗೆ 38 ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನಡು ರಾತ್ರಿ 12.45 ಗಂಟೆಗೆ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್ ಬಳಿ ಇನೋವಾ ಕಾರನ್ನು ಹಿಂಬಾಲಿಸಿಕೊಂಡು ಬಂದ ಒಂದು ಜೈಲೋ ಕಾರಿನಲ್ಲಿದ್ದ 8-10 ಜನ ಅಪರಿಚಿತ ಯುವಕರು ಇನೋವಾ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿ ನಿಲ್ಲಿಸಿ ಕಾರಿನಲ್ಲಿದ್ದ ಆಸಿಫ್ ಮತ್ತು ಇನ್ನಿಬ್ಬರನ್ನು ಹೊರಗೆ ಎಳೆದು, ಕಬ್ಬಿಣದ ರಾಡಿನಿಂದ ಥಳಿಸಿ ಇನೋವಾ ಕಾರು ಸಮೇತ, ಕಾರಿನಲ್ಲಿದ್ದ 38 ಲಕ್ಷ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು ಶ್ರೀಮಂಗಲ ಪೊಲೀಸ್ ಠಾಣೆ ಮೊ.ಸಂ 65/2016 ಕಲಂ 397 ಐಪಿಸಿ ರಂತೆ ಪ್ರಕರಣ ನೊಂದಾಯಿಸಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳಿಂದ ವಶಪಡಿಸಿಕೊಂಡನಗದುಹಣ

                       ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಹಣ, ಕಾರು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಾದ ಶ್ರೀ ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ವಿರಾಜಪೇಟೆ ಡಿಎಸ್‌ಪಿ ನಾಗಪ್ಪರವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಕಾರ್ಯಾಚರಣೆ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇರಳದ ಇರಿಟ್ಟಿಯ ನಿವಾಸಿ ಚೀನಿಕಾಡ್‌ ಅಜಿತ್‌ ಎಂಬಾತನನ್ನು ತಮಿಳು ನಾಡಿನ ಸೇಲಂನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯದಲ್ಲಿ ಸುಮಾರು 16 ಜನರು ಭಾಗಿಯಾಗಿರುವುದನ್ನು ತಿಳಿದು ಬಂದಿದ್ದು ಈ ಆರೋಪಿಗಳ ಪೈಕಿ ಕೇರಳ ರಾಜ್ಯದ ಕಣ್ಣನೂರು, ತಲಚೇರಿ ಮತ್ತು ಮಾನಂದವಾಡಿಗಳಲ್ಲಿ ಕಾರ್ಯಾಚರಣೆ ನಡೆಸಿ ವಿಶಾಖ್‌, ಶರಣುಕುಮಾರ್‌, ಅರುಣ್‌ ಕುಮಾರ್, ನಿಖಿಲ್‌ ಕುಮಾರ್, ಮುನಾಫ್‌ ಮತ್ತು ಶೌಕತ್‌ ಎಂಬವರನ್ನು ವಶಕ್ಕೆ ಪಡೆದು ಬಂಧಿಸಲಾಗಿರುತ್ತದೆ.
ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡ

                 ವಿಚಾರಣೆಯ ಸಮಯದಲ್ಲಿ ಆರೋಪಿಗಳು ಪ್ರಕರಣದ ಫಿರ್ಯಾದಿ ಆಸಿಫ್‌ರವರಿಂದ ದರೋಡೆ ಮಾಡಿದ ರೂ,29,73,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ಝೈಲೋ ಕಾರು, ವ್ಯಾಗನ್‌-ಆರ್‌ ಕಾರು ಮತ್ತು ಎರಡು ಪಲ್ಸರ್‌ ಮೋಟಾರು ಬೈಕ್‌ಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇನ್ನೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದು ಪ್ರಸ್ತುತ ವಶಪಡಿಸಿಕೊಂಡಿರುವ ಹಣ ಮತ್ತು ವಾಹನಗಳ ಒಟ್ಟು ಮೌಲ್ಯ ರೂ.50 ಲಕ್ಷಗಳಾಗಿರುತ್ತದೆಂದು ಅಂದಾಜಿಸಲಾಗಿದೆ.

                    ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿ.ವೈ.ಎಸ್.ಪಿ. ನಾಗಪ್ಪರವರ ನೇತೃತ್ವದಲ್ಲಿ ಗೋಣಿಕೊಪ್ಪ ಸಿಪಿಐ ಪಿ.ಕೆ. ರಾಜು, ಕುಟ್ಟ ಸಿಪಿಐ ಸಿ.ಎನ್‌. ದಿವಾಕರ, ವಿರಾಜಪೇಟೆ ಸಿಪಿಐ ಶಾಂತ ಮಲ್ಲಪ್ಪ, ಶ್ರೀಮಂಗಲ ಪಿಎಸ್ಐ ಬಿ.ಎಸ್‌. ಶ್ರೀಧರ್, ಕುಟ್ಟ ಪಿಎಸ್ಐ ಎಸ್‌.ಎಸ್‌. ರವಿಕಿರಣ್‌ ಮತ್ತು ಸಿಬ್ಬಂದಿಗಳಾದ ದೊಡ್ಡಯ್ಯ, ಟಿ.ಕೆ. ರವಿ, ಪಿ.ಜಿ. ದೇವರಾಜು, ಎಂ.ಎಸ್.ರಂಜಿತ್, ಶರತ್, ಗಣೇಶ, ಗಣಪತಿ, ಸಿದ್ದಾರ್ಥ, ಮನು, ದಿನೇಶ್, ಹಸೈನಾರ್, ತಮ್ಮಯ್ಯ, ಧನುಂಜಯ, ಮಧು, ಮಜೀದ್, ಕೃಷ್ಣಮೂರ್ತಿ, ಸುಕುಮಾರ್, ರಮೇಶ, ವೀರೇಶ್ ಮತ್ತು ರಾಮಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

ಜೀಪಿಗೆ ಬಸ್ ಡಿಕ್ಕಿ ಇಬ್ಬರಿಗೆ ಗಾಯ:
                     ದಿನಾಂಕ 13-09-2016 ರಂದು ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದ ನಿವಾಸಿ ದರ್ಶನ್‌ ಎಂ.ಎಂ ರವರು ತಮ್ಮ ಬಾಪ್ತು ಕೆಎ-12-ಎನ್‌-2925 ರ ಮಹೇಂದ್ರ ಜೀಪಿಲ್ಲಿ ಚಾಲಕ ಪವನ್‌ರವರೊಂದಿಗೆ ಕಡಗದಾಳುವಿನಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿರುವಾಗ ಸಮಯ 2-20 ಪಿಎಂಗೆ ಇಬ್ನಿವಳವಾಡಿ ಗ್ರಾಮದ ಇಬ್ನಿರೆಸಾರ್ಟ್‌ ನ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ಕೆಎ-18-ಎಫ್‌-439 ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೀಪಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪು ಜಖಂಗೊಂಡು ಜೀಪು ಚಾಲಕ ಪವನ್‌, ಮೇದಪ್ಪ ಗೌರವ ಶೆಟ್ಟಿ ಹಾಗೂ ಪಿರ್ಯಾದಿ ದರ್ಶನ್ ರವರಿಗೆ ಗಾಯಗಳಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ:
                      ಅಪರಿಚಿತ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಸಿದ್ದಾಪುರ ಠಾಣಾ ಸರಹದ್ದಿನ ದುಬಾರೆ ಇ ಎಸ್ಟೇಟ್ ನಲ್ಲಿ ಅಪರಿಚಿತ ಅಂದಾಜು 40 ವರ್ಷ ಪ್ರಾಯದ ವ್ಯಕ್ತಿಯು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಅಪಘಾತ ಇಬ್ಬರಿಗೆ ಗಾಯ:
                       ದಿನಾಂಕ: 11.09.2016ರಂದು ಸಮಯ ರಾತ್ರಿ 08.30 ಗಂಟೆಗೆ ಜಗ ಮತ್ತು ಅಶೋಕ್ ಕುಮಾರ್ ಎಂಬವರು ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದು ಕೊಡಗರ ಹಳ್ಳಿಯ ಮಾರುತಿ ನಗರದ ಹತ್ತಿರ ಸದರಿ ಮೋಟಾರ್ ಸೈಕಲ್ ಗೆ ದನವೊಂದು ಅಡ್ಡಲಾಗಿ ಬಂದು ಅದನ್ನು ತಪ್ಪಿಸಲು ಹೋದ ಮೋಟಾರ್ ಸೈಕಲ್ ಸವಾರ ಜಗ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ರಸ್ತೆಗೆ ಬಿದ್ದ ಕಾರಣ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಜಗ ಹಾಗು ಅಶೋಕ್ ಕುಮಾರ್ ರವರು ಗಾಯಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.