Tuesday, September 20, 2016

ಕಳವು ಪ್ರಕರಣ ಭೇದಿಸಿದ ಪೊಲೀಸರು, ಮಾಲು ಸಮೇತ ಆರೋಪಿಗಳ ಬಂಧನ:
 

     ವಿರಾಜಪೇಟೆ ತಾಲೋಕು, ಗೋಣಿಕೊಪ್ಪ ನಗರದ 8ನೇ ಬ್ಲಾಕ್ ನಿವಾಸಿಯಾದ ಸಪ್ತಗಿರಿ ಮೆಡಿಕಲ್ಸ್ ನ ಮಾಲೀಕರಾದ ಹೆಚ್.ವಿ ಕೃಷ್ಣಪ್ಪ ರವರು ದಿನಾಂಕ:26/08/2015 ರಂದು ರಾತ್ರಿ ಮನೆಯ ಬಾಗಿಲನ್ನು ಹಾಕಿ ಮಲಗಿದ್ದು, ಮನೆಯ ಮೇಲ್ಬಾಗದ ಸಿಟ್ ಔಟ್ ನ ಬಾಗಿಲನ್ನು ಮುಚ್ಚಿದ್ದು ಚಿಲಕ ಹಾಕದೇ ಇದ್ದು, ಮರುದಿನ ಬೆಳಗಿನ ಜಾವ 5-00 ಗಂಟೆ ಮನೆ ಒಳಗಡೆ ನೋಡಿದಾಗ ಮನೆಯ ಮೇಲ್ಗಡೆ ಬಾಗಿಲಿನ ಮೂಲಕ ಯಾರೋ ಕಳ್ಳರು ಒಳಗೆ ಬಂದು ದೇವರ ಗುಡಿಯಿಂದ ಚಿಕ್ಕ ಪುಟ್ಟ ದೇವರ ವಿಗ್ರಹಗಳನ್ನು ಹಾಗೂ ಹಾಲಿನ ಪಕ್ಕದಲ್ಲಿರುವ ಕೊಣೆಯ ಒಳಗೆ ಮರದ ಬೀರನ್ನು ಅಲ್ಲೇ ಇಟ್ಟಿದ್ದ ಕೀ ಮೂಲಕ ತೆರೆದು ಅದರಲ್ಲಿದ್ದ ನಗದು ರೂ 50 ಸಾವಿರ ಮತ್ತು ಬೀರುವಿನಲ್ಲಿದ್ದ ಲಾಕರ್ ಕೀ ಯಿಂದ ಲಾಕರ್ ತೆರೆದು ಒಳಗಡೆ ಇಟ್ಟಿದ್ದ 4.50 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.


     ಪ್ರಕರಣದ ತನಿಖೆ ಬಗ್ಗೆ ಶ್ರೀ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್‌, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಡಿವೈ.ಎಸ್.ಪಿ ವಿರಾಜಪೇಟೆ ಉಪ ವಿಭಾಗ ರವರಮಾರ್ಗದರ್ಶನದಂತೆ ಗೋಣಿಕೊಪ್ಪ ಸಿಪಿಐ ಶ್ರೀ ಪಿ.ಕೆ.ರಾಜು ಮತ್ತು ಅವರ ತಂಡ ಪ್ರಕರಣವನ್ನು ಭೇದಿಸಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

1). ಮನು ವಿ.ಎಂ.@ ರವಿ @ ಶೂಟಿಂಗ್ ಮನು@ ಗೋವಾ ತಂದೆ ಮಣಿ ವಿ.ಎಂ.ಪ್ರಾಯ: 31 ವರ್ಷ, ಕೂಲಿ ಕೆಲಸ,ವಾಸ ಗೊಟ್ಟಡ ಪೈಸಾರಿ, ಕಳತ್ಮಾಡು ಗ್ರಾಮ ವಿರಾಜಪೇಟೆ ತಾಲ್ಲೂಕು.
2) ಎಂ.ಎಸ್‌.ಮೂರ್ತಿ ತಂದೆ:ಸುಂದರ ಪ್ರಾಯ 28 ವರ್ಷ,ಕೂಲಿ ಕೆಲಸ,ವಾಸ:ಗೊಟ್ಟಡ ಪೈಸಾರಿ,ಕಳತ್ಮಾಡು ಗ್ರಾಮ
3) ಅಲೆಕ್ಸ್ @ ಚೋಟು ತಂದೆ:ಥೋಮಸ್ ಮೈಕಲ್ ಪ್ರಾಯ 24 ವರ್ಷ,ಪೈಟಿಂಗ್ ಕೆಲಸ ಮನೆ ನಂ.317, ನೆಹರು ನಗರ, ಮೀನ್ ಜಮಾಲ್ ಮನೆ ಹತ್ತಿರ, ವಿರಾಜಪೇಟೆ.

     ಮೇಲ್ಕಂಡ ಆರೋಪಿತರಿಂದ ಒಟ್ಟು 5 ಲಕ್ಷ ಮೌಲ್ಯದ 136 ಗ್ರಾಂ ಚಿನ್ನಾಭರಣಗಳನ್ನು, 6 ಹಿತ್ತಾಳೆಯ ದೇವರ ವಿಗ್ರಹಗಳು, ರೂ. 10,000/- ನಗದು ಹಣ ಹಾಗೂ ಸುಜುಕಿ ಬೈಕ್ ಅನ್ನು ವಶಪಡಿಸಿಕೊಂಡಿರುತ್ತಾರೆ.

     1ನೇ ಆರೋಪಿತನು ಪ್ರಕರಣ ದಾಖಲಾದ ನಂತರ ಸುಮಾರು ಒಂದು ವರ್ಷ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದು, ಈತನನ್ನು ದಿನಾಂಕ: 16/09/2016 ರಂದು ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡಿದ್ದು, ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಈತನ ಮೇಲೆ ಮಾಡಲಾಗಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ, ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಕಳ್ಳತನ ಪ್ರಕರಣ, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಈತನು ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡ ನಂತರ ಗೋಣಿಕೊಪ್ಪಲಿಗೆ ಬಂದು ಕೃತ್ಯ ಎಸಗಿರುವುದಾಗಿದೆ. 1ನೇ ಆರೋಪಿಯು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು 3ನೇ ಆರೋಪಿಯು ಸಹಕರಿಸಿ ಆತನಿಂದ 15,000/- ರೂ ಕಮೀಷನ್ ಹಣ ಪಡೆದುಕೊಂಡಿದ್ದು ಈತನನ್ನು ಕೂಡ ದಸ್ತಗಿರಿ ಮಾಡಲಾಗಿರುತ್ತದೆ.

        ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರೀ ಪಿ.ಕೆ.ರಾಜು, ಸಿಪಿಐ, ಗೋಣಿಕೊಪ್ಪ, ಗೋಣಿಕೊಪ್ಪ ಪೊಲೀಸ್‌ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶ್ರೀ.ಹೆಚ್.ವೈ.ರಾಜು, ಎಎಸ್ಐ ಶ್ರೀ.ಹೆಚ್.ವೈ.ಹಮೀದ್, ಸಿಬ್ಬಂದಿಯವರಾದ ಹೆಚ್.ಕೆ.ಕೃಷ್ಣ, ಟಿ.ಕೆ.ಮೋಹನ್, ಬಿ.ಎಸ್.ನಾಗೇಶ್, ಜಿ.ಕುಮಾರ, ಬಿ.ವಿ.ಹರೀಶ್‌, ಎಂ.ಯು.ಅಬ್ದುಲ್‌ಮಜೀದ್‌ ಪಿ.ಎ.ಮಹಮದ್‌ಅಲಿ ಹಾಗೂ ಮಹಿಳಾ ಸಿಬ್ಬಂದಿ ಪೂರ್ಣಿಮರವರು ಭಾಗವಹಿಸಿದ್ದರು.


ಸರಗಳ್ಳತನ, ಪ್ರಕರಣ ದಾಖಲು:      ದಿನಾಂಕ 19-09-2016 ರಂದು ಪಿರ್ಯಾದಿ ಶ್ರೀಮತಿ ಯು.ಜೆ ಸಿ.ಸುದಾ ರವರು ಕೂಡಿಗೆ ಗ್ರಾಮದ ತಮ್ಮ ಮನೆಯಲ್ಲಿದ್ದಾಗ ಸಮಯ ಸಂಜೆ 04-00 ಗಂಟೆಗೆ ಮನೆಯ ಬಳಿ ಯಾರೋ ಒಬ್ಬ ವ್ಯಕ್ತಿ ಕಪ್ಪು ಹೆಲ್ಮೆಟ್ ಧರಿಸಿಕೊಂಡು ಬಂದು ನಿಮ್ಮ ಗಂಡನ ಪೊನ್ ನಂಬರ್ ಬೇಕು, ನಾನು ಶುಂಠಿ ತೆಗೆದುಕೊಂಡಿದ್ದೇನೆ. ಲಾರಿ ಬಾಡಿಗೆಗೆ ಬೇಕು ಎಂದು ಕೇಳಿ, ಫಿರ್ಯಾದಿ ಪೋನ್ ನಂಬರ್ ನೀಡಿದ್ದು, ಸದರಿ ವ್ಯಕ್ತಿ ಪೊನ್ ಮಾಡುವಂತೆ ನಟನೆಮಾಡಿ ನೀವು ಪೋನ್ ನಂಬರ್ ಕೊಡಲಿಲ್ಲ ಸುಳ್ಳು ಹೇಳಿದ್ದಿರಿ ಎಂದು ಫಿರ್ಯಾದಿಯೊಂದಿಗೆ ಜಗಳವಾಡಿ ಮನೆಯ ಪಕ್ಕದಲ್ಲಿ ಇಟ್ಟಿದ್ದ ಕಬ್ಬಿಣದ ಪೈಪು ತುಂಡನ್ನು ತೆಗೆದು ಫಿರ್ಯಾದಿಯವರ ಮೇಲೆ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಯತ್ನಿಸಿದಾಗ ಫಿರ್ಯಾದಿಯವರು ಮಾಗಲ್ಯ ಸರವನ್ನು ಹಿಡಿದುಕೊಳ್ಳುವಷ್ಟರಲ್ಲಿ ಮಾಂಗಲ್ಯ ಸರದ ಒಂದು ತುಂಡನ್ನು ಎಳೆದು ತುಂಡರಿಸಿಕೊಂಡು ಸ್ಥಳದಿಂದ ಮೊಟಾರ್ ಸೈಕಲ್ ನಲ್ಲಿ ಹೆಬ್ಬಾಲೆ ಕಡೆ ಹೊರಟು ಹೋಗಿತುತ್ತಾನೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.