Friday, September 23, 2016

ಚೀಟಿ  ವ್ಯವಹಾರ, ಸೈಟು ಕೊಡಿಸುವುದಾಗಿ ವಂಚನೆ: 

     ಚೀಟಿ ಹಣದ ವ್ಯವಹಾರದಲ್ಲಿ ಮನೆ ಸೈಟು ಕೊಡಿಸುವುದಾಗಿ ನಂಬಿಸಿ ವಂಚಿಸಿದ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ಬೋಯಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಎನ್. ಶಾಂತ ಎಂಬವರು ಅದೇ ಗ್ರಾಮದ ನಿವಾಸಿ ಗೌರಮ್ಮ ಎಂಬವರು ನಡೆಸುತ್ತಿದ್ದ ಚೀಟಿಗೆ ಸೇರಿದ್ದು, ಸದರಿ ಗೌರಮ್ಮನವರು ಚೀಟಿ ಹಣದಲ್ಲಿ ಸೈಟು ಕೊಡಿಸುವುದಾಗಿ ನಂಬಿಸಿ ಹಣ ಮತ್ತು ಚಿನ್ನಾಭರಣವನ್ನು ಪಡೆದು ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    
     ಸಾರ್ವಜನಿಕರು ಯಾವುದೇ ಅನಧಿಕೃತ ಚೀಟಿ ವ್ಯವಹಾರ ಮತ್ತು ಯಾವುದೇ ರೀತಿಯ ಸ್ಕೀಂ ನಂತಹ ಹಣದ ವ್ಯವಹಾರದಲ್ಲಿ ತೊಡಗಿ ಮೋಸಹೋಗುವ ಸಾಧ್ಯತೆಗಳು ಇರುವುದರಿಂದ ಅಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವುದರಿಂದ ವಂಚನೆಗೊಳಗಾಗುವುದನ್ನು ತಪ್ಪಿಸಬಹುದಾಗಿದೆ.

ಹೆಂಗಸು ಕಾಣೆ:  

     ಆಸ್ಪತ್ರೆಗೆ  ಹೋದ ವೃದ್ದ ಮಹಿಳೆಯೊಬ್ಬರು ಕಾಣೆಯಾದ ಘಟನೆ ನಡೆದಿದೆ. ಶನಿವಾರಂತೆ ಠಾಣಾ ಸರಹದ್ದಿನ ಕೊಡ್ಲಪೇಟೆ ಗ್ರಾಮದ ದೇವರಾಜು ಎಂಬವರ ಅತ್ತೆ 70 ವರ್ಷ ಪ್ರಾಯದ ರುದ್ರಮ್ಮ ಎಂಬವರು ದಿನಾಂಕ 23-9-2016 ರಂದು ಮಂಡಿ ನೋವಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ದೇವರಾಜುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಕಳ್ಳಬಟ್ಟಿ ತಯಾರಿಕೆ:

     ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡುತ್ತಿದ್ದ ವ್ಯಕ್ತಿ ಮನೆಗೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಈ ದಿನ ದಿನಾಂಕ 23-9-2016 ರಂದು 2-30 ಗಂಟೆಗೆ ಹೊಸಗುತ್ತಿ ಹೊಸಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಆಚಾರಿ ರವರ ಮನೆಗೆ ದಾಳಿ ಮಾಡಿ ವೆಂಕಟೇಶ್ ರವರು ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾರ್ ನಲ್ಲಿ ದಾಂದಲೆ:

     ಮದ್ಯ ಸೇವಿಸಲು ಬಂದ ಮೂವರು ವ್ಯಕ್ತಿಗಳು ಬಾರ್ ನಲ್ಲಿ ದಾಂದಲೆ ನಡೆಸಿ ಒಬ್ಬಾತನ  ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  ಸೋಮವಾರಪೇಟೆ ನಗರದ ನಿವಾಸಿ ನಿಂಗರಾಜ್ ಎಂಬವರು ಟೆಕ್ಮಾಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ  ಸಂಜೆ 7-30 ಪಿ.ಎಂ.ಗೆ  ನೇಗಳ್ಳೆ ಗ್ರಾಮದ ಸಂತು ಹಾಗು ಕಂಬಳ್ಳಿ ಗ್ರಾಮದ ರವಿ ಮತ್ತು  ಚೌಡ್ಲು ಗ್ರಾಮದ ವಿನೋದ್ ರವರುಗಳು  ಮದ್ಯ ಸೇವನೆಗೆ ಬಾರ್ ಗೆ ಬಂದು  ಅವರ ನಡುವೆ ಜಗಳವಾಗಿ  ಸಂತು ಎಂಬವನು ವಿನೋದ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಬಾರ್ ನಲ್ಲಿದ್ದ ಮದ್ಯದ ಬಾಟಲಿಗಳನ್ನು ಮತ್ತು ಕುಡಿಯುವ ಗ್ಲಾಸ್ ಗಳನ್ನು ಒಡೆದುಹಾಕಿ ಅಂದಾಜು 12000 ರೂ.ಗಳಷ್ಟು ನಷ್ಟಪಡಿಸಿರುತ್ತಾರೆಂದು ಫಿರ್ಯಾದಿ ನಿಂಗರಾಜ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.