Friday, September 30, 2016

ದರೋಡೆ ಯತ್ನ ಪ್ರಕರಣ, ಆರೋಪಿಗಳ ಬಂಧನ
                ಇತ್ತೀಚೆಗೆ ಕುಶಾಲನಗರ ಬಳಿ ಆಟೋ ಚಾಲಕರೊಬ್ಬರನ್ನು ಕೊಲೆ ಮಾಡಲೆತ್ನಿಸಿ, ರಿಕ್ಷಾ ದರೋಡೆ ಮಾಡಲು ಯತ್ನಿಸಿದ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

                 ದಿನಾಂಕ 07/09/2016ರಂದು ಕುಶಾಲನಗರ ಗಂಧದಕೋಟೆ ನಿವಾಸಿ ಆಟೋ ರಿಕ್ಷಾ ಚಾಲಕರಾದ ಎಂ.ಎಂ. ಮಹಮದ್ ಎಂಬವರ ರಿಕ್ಷಾವನ್ನು ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಮುಸ್ಸಂಜೆ ವೇಳೆ ಕೆಲವು ಅಪರಿಚಿತರು ಬಾಡಿಗೆಗೆ ಪಡೆದು ಹಾರಂಗಿ ರಸ್ತೆಯ ಚಿಕ್ಕತ್ತೂರು ಬಳಿ ಆಟೋ ನಿಲ್ಲಿಸಿ ಚಾಲಕ ಮಹಮದ್ ರವರ ಮೇಲೆ ಕತ್ತಿ ಹಾಗೂ ಚಾಕುವಿನಿಂದ ತೀವ್ರತರ ಹಲ್ಲೆ ನಡೆಸಿ 500 ರೂಪಾಯಿ ನಗದು ಹಾಗೂ ರಿಕ್ಷಾವನ್ನು ಕಿತ್ತುಕೊಂಡು ಹೋಗಿರುವುದಾಗಿ ಮಹಮದ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

                 ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಿಸಿಐಬಿ ವಿಭಾಗಕ್ಕೆ ವಹಿಸಿ ವಿವಿಧ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಡಿಸಿಐಬಿ ನಿರೀಕ್ಷಕರಾದ ಬಿ.ಆರ್.ಲಿಂಗಪ್ಪನವರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡ ತಂಡವು ಈ ಪ್ರಕರಣದಲ್ಲಿ ಸುಮಾರು ಏಳು ಜನರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಕುಶಾಲನಗರದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಹೆಚ್.ಆರ್.ಪಿ.ಕಾಲೋನಿ ಯ ಸಿ.ಎಸ್.ಮಧು, ಗುಡ್ಡೆಹೊಸೂರು ನಿವಾಸಿ ಉಮೇಶ್ ಮತ್ತು ಅವರ ಸಹಚರರಾದ ಕುಶಾಲನಗರದ ರವಿ ಆರ್, ಆಕಾಶ್ ಬಿ ಆರ್ ಮತ್ತು ಕೆ.ಆರ್.ಪೇಟೆಯ ಯೋಗೇಶ್ ಎಂಬವರನ್ನು ಡಿಸಿಐಬಿ ತಂಡವು ದಿನಾಂಕ 28/09/2016ರಂದು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಕತ್ತಿಯನ್ನು ಆರೋಪಿಗಳಿಂದ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಾದ ಚನ್ನಪಟ್ಟಣದ ಸೋಮಶೇಖರ ಮತ್ತು ಕೆ.ಆರ್.ಪೇಟೆಯ ನಟರಾಜ ಎಂಬವರನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

                 ಬಂಧಿತ ಆರೋಪಿಗಳ ವಿಚಾರಣೆ ನಡೆಸಿದಾಗ ಮಧು ಹಾಗೂ ಉಮೇಶ್ ರವರು ಪ್ರಚೋದನೆ ನೀಡಿ ಉಳಿದ ಆರೋಪಿಗಳಿಗೆ ಹತ್ಯಾರುಗಳನ್ನು ಒದಗಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ತಿಳಿದು ಬಂದಿರುತ್ತದೆ. ಈ ರೀತಿ ಪ್ರಚೋದಿಸಿ ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯ ಕದಡುವ ವ್ಯಕ್ತಿಗಳನ್ನು ಬಂಧಿಸಿ ಪೊಲೀಸ್ ಇಲಾಖೆಯು ಈಗಾಗಲೇ ಕಠಿಣ ಕಾನೂನು ಕ್ರಮ ಜರುಗಿಸಿದ್ದು ಇನ್ನು ಮುಂದೆಯೂ ಈ ರೀತಿಯಾಗಿ ಸಮಾಜದ ಶಾಂತಿ ಕದಡುವ ವ್ಯಕ್ತಿಗಳ ಬಗ್ಗೆ ತಿಳಿದು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಪೊಲೀಸ್ ಇಲಾಖೆಯು ಅಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಪ್ರಸಾದ್ ರವರು ಕೋರಿಕೊಂಡಿದ್ದಾರೆ.

               ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಬಿ.ಆರ್.ಲಿಂಗಪ್ಪನವರ ನೇತೃತ್ವದಲ್ಲಿ ಎಎಸ್ಐ ಹಮೀದ್, ಎನ್.ಟಿ.ತಮ್ಮಯ್ಯ, ಅನಿಲ್ ಕುಮಾರ್, ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ಕೆ.ಆರ್.ವಸಂತ, ಶಶಿಕುಮಾರ್, ಮಹೇಶ್, ರಾಜೇಶ್ ಮತ್ತು ಗಿರೀಶ್ ರವರು ಭಾಗವಹಿಸಿದ್ದು ತನಿಖಾ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ರೂ. 20,000/- ಬಹುಮಾನ ಘೋಷಿಸಿರುತ್ತಾರೆ. 

ಪೊಲೀಸ್ ದಾಳಿ ಅಕ್ರಮ ಗಾಂಜಾ ವಶ:

       ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗ ಪೊಲೀಸ್ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪನವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಕ್ರಮವಾಗಿ ವಾಹನಗಳಲ್ಲಿ ಗಂಜಾವನ್ನು ಸಾಗಾಟ ಮಾಡುತ್ತಿದ್ದವನ್ನು ಪತ್ತೆಹಚ್ಚಿರುತ್ತಾರೆ.

      ವಿರಾಜಪೇಟೆಯಿಂದ ಮೂರ್ನಾಡಿಗೆ ಅಕ್ರಮವಾಗಿ ಮಾದಕ ವಸ್ತುವಾದ ಗಂಜಾವನ್ನು ಮಾಟಾಟ ಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ವಾಹನಗಳಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಆದಾರದ ಮೇರೆಗೆ ದಿನಾಂಕ 29-9-2016 ರಂದು ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪ ಹಾಗು ಸಿಬ್ಬಂದಿಗಳು ಮೂರ್ನಾಡಿನ ಗೌಡ ಸಮಾಜದ ಬಳಿ ದಾಳಿ ಮಾಡಿ ಆರೋಪಿಗಳಿಂದ ಸುಮಾರು ರೂ.3,50,000/- ದಷ್ಟು ಭಾರೀ ಮಾರುಕಟ್ಟೆ ಬೆಲೆಯ  3 ಕೆ.ಜಿ. 900 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ ಮೌಲ್ಯದ  ಮಾರುತಿ-800 ಕಾರು ಸಂಖ್ಯೆ:ಕೆಎ-05 ಎಂಎ-4862, ಮತ್ತು ರೂ 50 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಸಂಖ್ಯೆ:ಕೆಎ-12 ಜೆ-203ರನ್ನು ವಶಕ್ಕೆ ಪಡೆದು ಆರೋಪಿಗಳಾದ    ವಿರಾಜಪೇಟೆ ನಗರದ ನಿವಾಸಿಗಳಾದ ಇಲಿಯಾಜ್ ಆಹಮ್ಮದ್, ಕೆ.ಹೆಚ್. ಸತ್ತಾರ್, ಉದಯ @ ಉಮ್ಮರ್, ಸಮೀರ್, ಎಸ್.ಎಂ. ಮಹಮ್ಮದ್ ತಾರೀಫ್ ಮತ್ತು ಹೊಳೆನರಸಿಪುರದ ಹಮೀರ್ ಪಾಶಾ ರವರುಗಳನ್ನು ರವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

       ಕಾರ್ಯಾಚರಣೆಯಲ್ಲಿ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರ ಬಿ.ಆರ್. ಲಿಂಗಪ್ಪ, ಎಎಸ್ಐ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್, ನಿರಂಜನ್ ಮತ್ತು ಕೆ.ಆರ್. ವಸಂತರವರುಗಳು ಭಾಗಿಯಾಗಿದ್ದು ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರವರು ನಗದು ಬಹುಮಾನ ಘೋಷಿಸಿರುತ್ತಾರೆ. 
 
              ಇತ್ತೀಚೆಗೆ  ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು ಆರೋಗ್ಯ ಮತ್ತು ವಿದ್ಯಾಭ್ಯಾಸಗಳಲ್ಲಿ ನಿರುತ್ಸಾಹ ತೋರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಧಾಳಿಗಳನ್ನು ನಡೆಸಿ ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು,  ಸಾರ್ವಜನಿಕರೂ ಸಹಾ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಯಾವುದಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ರವರು ಮನವಿ ಮಾಡಿಕೊಂಡಿರುತ್ತಾರೆ.

 ಮನೆ ಕಳ್ಳತನ

                       ಮನೆಯ ಬಾಗಿಲು ಮುರಿದು ನಗದು ಹಣವನ್ನು ಕಳವು ಮಾಡಿದ ಪ್ರಕರಣ ವಿರಾಜಪೇಟೆ ಬಳಿಯ ಪೆರುಂಬಾಡಿಯಲ್ಲಿ ನಡೆದಿದೆ. ದಿನಾಂಕ 27-09-2016 ರಂದು ಪೆರುಂಬಾಡಿ ನಿವಾಸಿ ಸಾಜಿದಾ ಪಿ ಎಂ ಎಂಬ ಮಹಿಳೆಯು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿಕೊಂಡು ಅಮ್ಮತ್ತಿಗೆ ಹೋಗಿದ್ದು ದಿನಾಂಕ 29-09-2016 ರಂದು ಮನೆಗೆ ಬಂದಾಗ ಮನೆಯ ಹಿಂಬಾಗಿಲು ತೆರೆದಿದ್ದು ಸಂಶಯ ಬಂದು ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿ ಕುರಾನ್ ಪುಸ್ತಕದೊಳಗೆ ಇಟ್ಟಿದ್ದ ರೂ 10 ಸಾವಿರ ನಗದನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

                 ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ನಾಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-09-2016 ರಂದು ನಾಂಗಾಲ ನಿವಾಸಿ ಲಕ್ಷ್ಮಿ ಎಂಬುವವರ ತಂದೆ ನಂಜುಂಡೇಗೌಡ ಎಂಬವರು ರಾತ್ರಿ ವೇಳೆ ಮನೆಯ ಹೊರಗಡೆ ಕಟ್ಟೆಯಲ್ಲಿ ವಿಷ ಪದಾಥಱವನ್ನು ಸೇವಿಸಿದ್ದು ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ನಂಜುಂಡೇಗೌಡರು ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.