Saturday, October 1, 2016


ಅಕ್ರಮ ಮರಳು ಸಾಗಾಟ ಪ್ರಕರಣ, ಆರೋಪಿ ಬಂಧನ:

    ಕಾನೂನು ಬಾಹಿರವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

    ದಿನಾಂಕ 29-9-2016 ರಂದು ರಾತ್ರಿ ಪೊನ್ನಂಪೇಟೆ ಠಾಣಾ ಸರಹದ್ದಿನ ಕೋಣನಕಟ್ಟೆ ಗ್ರಾಮದ ರೂಬಿ ಎಸ್ಟೇಟ್ ಬಳಿ ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಜಯರಾಮ್ ರವರು ಸಿಬ್ಬಂದಿಯೊಂದಿಗೆ ಕೋಣನಕಟ್ಟೆ ಗ್ರಾಮದ ರೂಬಿ ಕಾಫಿ ತೋಟದ ಹತ್ತಿರ ದಾಳಿ ನಡೆಸಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ (ಸಂಖ್ಯೆ:ಕೆಎ-2 ಎ-7783) ಯನ್ನು ವಶಕ್ಕೆ ಪಡೆದು  ಆರೋಪಿ ಚಾಲಕ ಮುದ್ದಿಯಡ ಮಹೇಶ್, ಸುಳುಗೋಡು ಗ್ರಾಮ ಇವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.  ಆರೋಪಿತನ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ  ಅಕ್ರಮ ಮರಳು ಸಾಗಾಟ ಪ್ರಕರಣ ಸೇರಿದಂತೆ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ  ಒಟ್ಟು 18 ಪ್ರಕರಣಗಳು ದಾಖಲಾಗಿರುತ್ತವೆ.

    ಸಾರ್ವಜನಿಕರು ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ರವರು ಮನವಿ ಮಾಡಿಕೊಂಡಿರುತ್ತಾರೆ.
 
ದೇವಳದ ಭಂಡಾರದಿಂದ ನಗದು ಕಳವು:
      ದೇವಾಲಯದ ಚಿಲಕವನ್ನು ಮುರಿದು ಗರ್ಭಗುಡಿಯಿಂದ ಭಂಡಾರ ಪೆಟ್ಟಿಗೆಯಿಂದ ಹಣವನ್ನು ಕಳ್ಳತನ ಮಾಡಿದ ಘಟನೆ ವಿರಾಜಪೇಟೆ ಸಮೀಪದ ಕಡಂಗ ಮರೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 29-9-2016 ರಂದು ರಾತ್ರಿ  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗಮರೂರು ಗ್ರಾಮದಲ್ಲಿರುವ ಶ್ರೀ ಭಗವತಿ ಈಶ್ವರ ದೇವಾಲಯದ  ಹೆಬ್ಬಾಗಿಲಿನ ಚಿಲಕವನ್ನು ಕಬ್ಬಿಣದ ರಾಡಿನಿಂದ ಮುರಿದು  ಒಳ ಪ್ರವೇಶಿಸಿ ದೇವಾಲಯದ ಗರ್ಭಗುಡಿಯಲ್ಲಿದ್ದ  ಭಂಡಾರ ಪೆಟ್ಟಿಗೆಯನ್ನು  ದೇವಾಲಯದ ಹಿಂಬದಿಗೆ ಹೊತ್ತುಕೊಂಡು ಹೋಗಿ  ಪೆಟ್ಟಿಗೆಯಲ್ಲಿದ್ದ 20,000/- ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು,  ಈ ಕಳ್ಳತನವನ್ನು ಪಾಲಂಗಾಲ ಗ್ರಾಮದ ಶ್ರೀಮತಿ ಕರಿನೆರವಂಡ  ಪಾರ್ವತಿ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಾಪುಣಿ ಹಾಗು ಇತರರು ಸೇರಿ ಮಾಡಿರುವುದಾಗಿ ಸಂಶಯವಿರುವುದಾಗಿ ದೇವಾಲಯದ ತಕ್ಕರಾದ ಕರವಟ್ಟೀರ ಪಿ. ಕಾವೇರಪ್ಪ @ ರಾಜ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಜಿಗುಪ್ಸೆ ವಿದ್ಯಾರ್ಥಿನಿ ಆತ್ಮಹತ್ಯೆ:
    ವಿದ್ಯಾರ್ಥಿನಿಯೊಬ್ಬಳು  ಓದಿನ ವಿಚಾರದಲ್ಲಿ ಜಿಗುಪ್ಸೆಗೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಹತ್ತಿರದ ಕಲ್ಲುಬಾಣೆಯಲ್ಲಿ ನಡೆದಿದೆ.  ಆರ್ಜಿ ಗ್ರಾಮದ ನಿವಾಸಿ ಮಧು ಎಂಬವರ ಮಗಳು  15 ವರ್ಷ ಪ್ರಾಯದ  ಕು:ಲಿಮ್ ಶಾ ಎಂಬಾಕೆ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ  10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಓದಿನ ವಿಚಾರದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ತಂದೆ ಮಧು ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದ ಬೀಗ ಮುರಿದು ಕಳವು:
      ದೇವಾಲಯದ ಬೀಗ ಮುರಿದು ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ವಿರಾಜಪೇಟೆ ತಾಲೋಕು ಬೇಟೋಳಿ ಗ್ರಾಮದಲ್ಲಿ ನಡೆದಿದೆ.  ಬೇಟೋಳಿ ಗ್ರಾಮದಲ್ಲಿರುವ  ಶ್ರೀ ಭದ್ರಕಾಳಿ ದೇವಾಸ್ಥಾನಕ್ಕೆ ದಿನಾಂಕ 29-9-2016ರ ಬೆಳಿಗ್ಗೆ 10-00 ಗಂಟೆ ಮತ್ತು 30-9-2016 ರ ಬೆಳಿಗ್ಗೆ 7-00 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು  ನುಗ್ಗಿ ಗರ್ಭಗುಡಿಯಿಂದ ಅಂದಾಜು 15,000/- ರೂ. ಬೆಲೆಬಾಳುವ  ದೇವರಿಗೆ ತೊಡಿಸುವ  ಹಾಗು ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ದೇವಾಲಯದ ಅಧ್ಯಕ್ಷರಾದ ಬೊಳ್ಳಪಂಡ ಮೋಪಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
ಮೋಟಾರ್ ಸೈಕಲ್ ಕಳವು:
     ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ  ಕೂಡುಮಂಗಳೂರು ಗ್ರಾಮದ ನಿವಾಸಿ ಎಂ.ಎಸ್. ಮಹೇಶ್ ಎಂಬವರು ದಿನಾಂಕ 26-9-2016 ರಂದು ತಮ್ಮ ಬಾಪ್ತು ಮೋಟಾರ್ ಸೈಕಲ್ ಸಂಖ್ಯೆ:ಕೆ1-2 ಎಲ್ 2224 ನ್ನು ಕುಶಾಲನಗರದಲ್ಲಿರುವ ಅಥಿತಿ ಹೋಟೇಲಿನ ಮುಂಭಾಗದಲ್ಲಿ  ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು,  ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಎಂ.ಎಸ್. ಮಹೇಶ್ ರವರ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಟಾರ್ ಸೈಕಲ್ ಗೆ ಕಾರು ಡಿಕ್ಕಿ:
    ಮೋಟಾರ್ ಸೈಕಲಿಗೆ ಕಾರೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ  ಕುಶಾಲನಗರ ಸಮೀಪದ ಅಮ್ಮನವರ ರೆಸಾರ್ಟ್ ಬಳಿ ನಡೆದಿದೆ.  ದಿನಾಂಕ 29-9-2016 ರಂದು ನಂಜರಾಯಪಟ್ಟಣ ಗ್ರಾಮದ ನಿವಾಸಿ ಅಂತೋಣಿ ಪ್ರಾನ್ಸಿಸ್ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದಿಂದ ನಂಜರಾಯಪಟ್ಟಣದ ಕಡೆಗೆ ಹೋಗುತ್ತಿದ್ದಾಗ  ಅಮ್ಮನವರ ರೆಸಾರ್ಟ್ ಒಳಗಿನಿಂದ ಬಂದ ಕಾರನ್ನು ಅದರ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಅಂತೋಣಿರವರು ಬೈಕ್ ಸಮೇತವಾಗಿ ರಸ್ತೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕ್ಷುಲ್ಲಕ ಕಾರಣ ಮಹಿಳೆ ಮೇಲೆ ಮೂವರಿಂದ ಹಲ್ಲೆ:
     ಕ್ಷುಲ್ಲಕ ಕಾರಣಕ್ಕೆ ಮೂವರು ಸೇರಿ ಮಹಿಳೆಯೊಬ್ಬರಿಗೆ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ಕಾಳಮ್ಮ ಕಾಲೋನಿನಲ್ಲಿ ನಡೆದಿದೆ. ಕಾಳಮ್ಮ ಕಾಲೋನಿ ನಿವಾಸಿ ಮೀನಾಕ್ಷಿ ಎಂಬವರು ದಿನಾಂಕ 28-9-2016 ರಂದು ತಮ್ಮ ಮನೆಯಲ್ಲಿ  ತಮ್ಮ ಪತಿ ರಾಜುರವರು ಗೋಪಾಲ ಎಂಬವರ ಜೊತೆಯಲ್ಲಿ ಕೆಲಸಕ್ಕೆ ಹೋಗುವುದು ಬೇಡ ಎಂದ ವಿಚಾರದಲ್ಲಿ  ಆರೋಪಿ ಗೋಪಾಲ, ಮಹಾದೇವಿ ಮತ್ತು ಬಸವರಾಜು ರವರು ಫಿರ್ಯಾದಿ ಮೀನಾಕ್ಷಿರವರ ಮನೆಯೊಳಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಲ್ಲೆ ನಡೆಸಿದ್ದು, ಈ ಸಂಬಂಧ  ದಿನಾಂಕ 30-9-2016 ರಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.