Wednesday, October 12, 2016

ಮೋಟಾರ್ ಸೈಕಲ್ ಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

       ದಂಪತಿಗಳು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡ ಘಟನೆ ಮಡಿಕೇರಿ ಹತ್ತಿರದ ಬೋಯಿಕೇರಿಯಲ್ಲಿ ಸಂಭವಿಸಿದೆ. ಕಣ್ಣನೂರು ಜಿಲ್ಲೆಯ ಪಿನರಾಯಿ ಗ್ರಾಮದ ನಿವಾಸಿ ಶಿಜೇಶ ಹಾಗು ಅವರ ಪತ್ನಿ ನಿಮಿಷ ರವರುಗಳು ದಿನಾಂಕ 11-10-2016 ರಂದು 3-00 ಪಿ.ಎಂ. ಗೆ ಅವರ ಬಾಪ್ತು ಬೈಕ್ ನಂ KL-58-T-4655 ರಲ್ಲಿ ಕುಶಾಲನಗರದ ಬಳಿಯ ಗೋಲ್ಡನ್ ದೇವಸ್ಥಾನಕ್ಕೆ ಹೋಗಿ ನಂತರ ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿರುವಾಗ ಮಡಿಕೇರಿ ಬಳಿಯ ಬೋಯಿಕೇರಿ ಎಂಬಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲಿಸಿಕೊಂಡು ಬಂದು ಫಿರ್ಯಾದಿ ಶಿಜೇಶ್ ರವರು ಚಾಲನೆಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಜಖಂಗೊಂಡು ಶಿಜೇಶ್ ಹಾಗೂ ಅವರ ಪತ್ನಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಆಟೋ ರಿಕ್ಷಾ ಅವಘಡ ಇಬ್ಬರಿಗೆ ಗಾಯ:

      ದಿಡೀರನೆ ಎದುರಾದ ಪಶುವೊಂದಕ್ಕೆ  ಡಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋ ರಿಕ್ಷಾ ರಸ್ತೆಗೆ ಮಗುಚಿಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಕುಶಾಲನಗರದ ಬಿ.ಎಸ್.ಆರ್.ಗಾರ್ಡನ್ ಬಳಿ ನಡೆದಿದೆ. ದಿನಾಂಕ 10/10/2016 ರಂದು ರಾತ್ರಿ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಜೋಸೆಫ್ ಎಂಬವರ ಮಗಳು ಸುಪ್ರತಾ ಮತ್ತು ಪತ್ನಿ ಅನಿತಾ ಮತ್ತು ಶೋಬಿತಾ ಎಂಬವರು ಬೆಂಗಳೂರಿಗೆ ಹೋಗುವ ಸಲುವಾಗಿ ಮನೆಯ ಹತ್ತಿರದಿಂದ ಕೆ ಎ 12 ಬಿ 3479 ನಂಬರಿನ ಆಟೋ ಹತ್ತಿ ಕುಶಾಲನಗರ ಬಸ್ ನಿಲ್ದಾಣಕ್ಕೆ ಹೊರಟಿದ್ದು, ಕುಶಾಲನಗರದ ಬಿ ಎಂ ಮುಖ್ಯ ರಸ್ತೆಯ ಬಿ ಎಸ್ ಆರ್ ಗಾರ್ಡನ್ ಬಾರ್ ಹತ್ತಿರ ತಲುಪುವಾಗ್ಗೆ ಆಕಸ್ಮಿಕವಾಗಿ ಎದುರಿನಿಂದ ಬಂದ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿಕೊಂಡ ಪರಿಣಾಮ ಆಟೋದಲ್ಲಿದ್ದ ಸುಪ್ರಿತಾ ಮತ್ತು ಅನಿತಾರವರಿಗೆ ಗಾಯಗಳಾಗಿದ್ದು, ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.