Saturday, October 15, 2016

ಕೂಲಿ ಕೆಲಸದ ವಿಚಾರದಲ್ಲಿ ವ್ಯಕ್ತಿಗೆ ಕೊಲೆ ಬೆದರಿಕೆ:

     ಕೂಲಿ ಕಾರ್ಮಿಕನೊಬ್ಬ ತೋಟದಲ್ಲಿ ಕೆಲಸ ನೀಡುವ ವಿಚಾರದಲ್ಲಿ ಕಾಫಿ ತೋಟದ ಫೀಲ್ಡ್ ಆಫೀಸರ್ ರವರನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಿದ್ದಾಪುರದ ಬಿಬಿಟಿಸಿ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ. ದಿನಾಂಕ 8-10-2016 ರಂದು ಬಾಡಗ ಬಾಣಂಗಾಲ ಗ್ರಾಮದಲ್ಲಿರುವ ಮೈಲಾತ್ ಪುರ ಬಿಬಿಟಿಸಿ, ಕಾಫಿ ತೋಟದ ಕಾರ್ಮಿಕ ದೇವು ಎಂಬಾತ ಕಂಪೆನಿ ತೋಟದಲ್ಲಿ ಕೆಲಸ ಕೇಳಿದ್ದು, ಆತನಿಗೆ ತನ್ನ ತಾಯಿಯನ್ನು ಕರೆದುಕೊಂಡು ಬರುವಂತೆ ತೋಟದ ಫೀಲ್ಡ್ ಆಫೀಸರ್ ಕರುಂಬಯ್ಯ ನವರು ಸೂಚಿಸಿದ ವಿಚಾರಚಲ್ಲಿ ಕೋಪಗೊಂಡ ಕಾರ್ಮಿಕ ದೇವು ಕತ್ತಿಯನ್ನು ಹಿಡಿದುಕೊಂಡು ಬಂದು ಕರುಂಬಯ್ಯನವರಿಗೆ ಅವಾಚ್ಯ ಶಬ್ದಗಳಿಂದ ಬೀದು ಕೊಲೆ ಮಾಡುವುದಾಗಿ ನೀಡಿದ ದೂರನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಗಳ ಶವ ಪತ್ತೆ:


     ಇಬ್ಬರು ಅಪರಿಚಿತ ವ್ಯಕ್ತಿಗಳ ಶವಗಳು ಗೋಣಿಕೊಪ್ಪ ನಗರದ ಮಾರ್ಕೇಟ್ ಮಳಿಗೆ ಮತ್ತು ಪ್ಯಾರಾಗನ್ ಅಂಗಡಿ ಮುಂಭಾಗ ಪತ್ತೆಯಾದ ಬಗ್ಗೆ ವರದಿಯಾಗಿದೆ. ದಿನಾಂಕ 14-10-2016 ರಂದು ಗೋಣಿಕೊಪ್ಪ ನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿರುವ ರಾಜ ಎಂಬ ವ್ಯಕ್ತಿಯು ಬೆಳಗ್ಗೆ 6-00 ಗಂಟೆಯ ಸಮಯದಲ್ಲಿ ಬಸ್ಸು ನಿಲ್ದಾಣದ ಕಡೆಯಿಂದ ಮಾರ್ಕೇಟ್ ಕಡೆಗೆ ನಡೆದುಕೊಂಡುಹೋಗುತ್ತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿಯ ಶವವು ಮಾರ್ಕೇಟ್ ನ ಖಾಲಿ ಮಳಿಗೆಯೊಂದರಲ್ಲಿ ಪತ್ತೆಯಾಗಿದೆ. ಹಾಗೆಯೇ ನಗರದ ಪ್ಯಾರಾಗನ್ ಬೇಕರಿ ಕಟ್ಟಡದ ಮುಂಭಾಗದಲ್ಲಿ ಬೇಕರಿ ಮಾಲಿಕ ಶಾಜಿ ರವರು ದಿನಾಂಕ 14-10-2016 ರಂದು ಬೆಳಿಗ್ಗೆ 8-30 ಗಂಟೆಗೆ ಅಂಗಡಿಯನ್ನು ತೆರೆಯಲು ಬಂದಾಗ ಅಪರಿಚಿತ ವ್ಯಕ್ತಿಯ ಶವವು ಬಿದ್ದಿರುವುದು ಕಂಡುಬಂದಿದ್ದು ಗೋಣಿಕೊಪ್ಪ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿ ಅಣ್ಣೀರ ಪ್ರವೀಣ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಅಸ್ಸಾಂ ಮೂಲಕ ವ್ಯಕ್ತಿ ಅಮರ್ ಎಂಬಾತ ದಿನಾಂಕ 11-10-2016 ರಂದು ಲೈನುಮನೆಯಿಂದ ಹೊರಗೆ ಹೋಗಿದ್ದು, ಬಾಡಗರಕೇರಿ ಗ್ರಾಮದಲ್ಲಿರುವ ದೇವರ ಕಾಡಿಗೆ ಸೇರಿದ ಜಾಗದಲ್ಲಿ ಮರವೊಂದಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ, ಆರೋಪಿ ಪೊಲೀಸ್ ವಶಕ್ಕೆ:

      ವ್ಯಕ್ತಿಯೊಬ್ಬರು ಕೇರಳ ರಾಜ್ಯ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿನ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶ್ರೀಮಂಗಲ ಠಾಣಾಧಿಕಾರಿ ಶ್ರೀ ಬಿ.ಎಸ್. ಶ್ರೀಧರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಶ್ರೀಮಂಗಲ ಪಟ್ಟಣದಲ್ಲಿರುವ ಮಂಗಳದೀಪ ಹೋಟೇಲ್ ಪಕ್ಕದಲ್ಲಿ ಕುಟ್ಟ ಗ್ರಾಮದ ನಿವಾಸಿ ಎಂ. ರಾಜ ಎಂಬ ವ್ಯಕ್ತಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿ ಆರೋಪಿಯಿಂದ ಲಾಟರಿ ಟಿಕೇಟ್ ಹಾಗು ನಗದು ರೂ.5880/- ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿ:

     ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ವ್ಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ದುಬಾರೆಯಲ್ಲಿ ನಡೆದಿದೆ. ದಿನಾಂಕ 14-10-2016 ರಂದು ಕುಶಾಲನಗರ ಠಾಣಾ ಸಿಬ್ಬಂದಿ ಯೊಬ್ಬರು ದುಬಾರೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಸಂದರ್ಭದಲ್ಲಿ ಆರೋಪಿ ಅನುಪುರುಷೋತ್ತಮ್ ಎಂಬ ವ್ಯಕ್ತಿ ಧೂಮಪಾನ ಮಾಡಿದ ವಿಚಾರದಲ್ಲಿ ತಿಳುವಳಿಕೆ ನೀಡಿದ ಕಾರಣಕ್ಕೆ ಪೊಲೀಸ್ ಸಿಬ್ಬಂದಿಯ ಸಮವಸ್ತ್ರವನ್ನು ಹಿಡಿದು ಎಳೆದಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದಿ ಬೈದು ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ:

     ಅಕ್ರಮ ಮರಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 14-10-2016 ರಂದು ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಪರಶಿವಮೂರ್ತಿರವರಿಗೆ ದೊರೆತ ಮಾಹಿತಿ ಆದಾರದ ಮೇರೆಗೆ ಸೋಮವಾರಪೇಟೆ ಠಾಣಾ ಸರಹದ್ದಿನ ವಣಗೂರುಕೊಪ್ಪ ಎಂಬಲ್ಲಿ ಆರೋಪಿ ಟಿಪ್ಪರ್ ಸಂ.ಕೆಎ-12-ಎ-5321ರ ಚಾಲಕ ಮಧು, ಕುಂದಳ್ಳಿ ಗ್ರಾಮ ಇವರು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಮತ್ತು ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಬೈಕ್ ಗೆ ಕಾರು ಡಿಕ್ಕಿ, ಸವಾರನಿಗೆ ಗಾಯ:

      ಮೋಟಾರ್ ಬೈಕ್ ಗೆ ಕಾರೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಾವಡಿ ಕಟ್ಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-10-2016 ರಂದು ಎಸ್.ಹೆಚ್. ಶಂಕರ, ಹಾನಗಲ್ಲು ಗ್ರಾಮ ಇವರು ತಮ್ಮ ಮೋಟಾರ್ ಸೈಕಲ್ ನಲ್ಲಿ ತಮ್ಮ ಮನೆಗೆ ಕಾವಾಡಿ ಕಟ್ಟೆ ಗ್ರಾಮಕ್ಕೆ ಹೋಗುತ್ತಿದ್ದಾಗ ಶನಿವಾರಸಂತೆ ಕಡೆಯಿಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಬೈಕ್ ಸವಾರನು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.  

ಅಕ್ರಮ ಜಾನುವಾರು ಸಾಗಾಟ, ಪ್ರಕರಣ ದಾಖಲು:

     ಅಕ್ರಮವಾಗಿ ಗೂಡ್ಸ್ ಆಟೋದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಶ್ರೀಮ ಪರಶಿವಮೂರ್ತಿ ರವರು ದಿನಾಂಕ 14-102-106 ರಂದು ಬೆಳಿಗ್ಗೆ 5-30 ಗಂಟೆಗೆ ಶನಿವಾರಸಂತೆ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭ ಲಭಿಸಿದ ಮಾಹಿತಿ ಮೇರೆಗೆ ಬೆಸೂರು ಗ್ರಾಮದ ಪ್ರೌಡಶಾಲೆಯ ಹತ್ತಿರ ಆರೋಪಿ ಕೊಡ್ಲಿಪೇಟೆಯ ಕೂಡ್ಲೂರು ಗ್ರಾಮದ ನಿವಾಸಿ ಕೆ.ಬಿ. ಬಸವೇಗೌಡ ಎಂಬವರು ಆಪೇ ಗೂಡ್ಸ್ ಆಟೋ ವಾಹನದಲ್ಲಿ ಅಕ್ರಮವಾಗಿ 2 ಜಾನುವಾರುಗಳನ್ನು ವ್ಯವಸ್ಥಿರ ರೀತಿಯಲ್ಲಿ ಸಾಗಾಟ ಮಾಡದೆ ಕ್ರೂರ ರೀತಿಯಲ್ಲಿ ಜಾನುವಾರುಗಳಿಗೆ ಹಿಂಸೆ ಯಾಗುವ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.