Monday, October 17, 2016

ಅಂಗಡಿ ಕಳವು

                       ಅಂಗಡಿಗೆ ರಾತ್ರಿ ಯಾರೋ ಕಳ್ಳರು ಒಳನುಗ್ಗಿ ಅಂಗಡಿಯಲ್ಲಿದ್ದ ಭಾರೀ ಮೌಲ್ಯದ ನಗದು ಹಾಗೂ ಸಂಬಾರ ಪದಾರ್ಥ ಗಳನ್ನು ಕಳವು ಮಾಡಿದ ಘಟನೆ ಮಡಿಕೇರಿ ಬಳಿಯ ತಾಳತ್ಮನೆಯಲ್ಲಿ ನಡೆದಿದೆ. ತಾಳತ್ಮನೆಯಲ್ಲಿರುವ ಕೂರ್ಗ್ ಸ್ಪೈಸಸ್ ಅಂಗಡಿಯನ್ನು ದಿನಾಂಕ 14-10-2016 ರಂದು ರಾತ್ರಿ ವೇಳೆ ಅಂಗಡಿಯ ನಿರ್ವಾಹಕರಾದ ಯಾಸಿನ್ ರವರು ಮುಚ್ಚಿ ಮನೆಗೆ ಹೋಗಿದ್ದು ಮಾರನೆಯ ದಿನ 15-10-2016 ರಂದು ಅಂಗಡಿ ತೆರೆಯಲೆಂದು ಬಂದಾಗ ಯಾರೋ ಕಳ್ಳರು ಪಕ್ಕದ ಕ್ಯಾಂಟೀನಿನ ಬಾಗಿಲು ಮುರಿದು ನಂತರ ಕ್ಯಾಂಟೀನಿನ ಮೂಲಕ ಸ್ಪೈಸಸ್ ಅಂಗಡಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ ರೂ 20,000 ನಗದು ಸೇರಿದಂತೆ ಸುಮಾರು 1,75,000 ರೂಗಳ ಸಂಬಾರ ಪದಾರ್ಥಗಳನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ರಸ್ತೆ ಅಪಘಾತ ಮೂವರ ದುರ್ಮರಣ

                        ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ ಘಟನೆ ಸೋಮವಾರಪೇಟೆ ತಾಲ್ಲೋಕಿನ ಬಸವನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಆನೆಕಾಡುವಿನ ಹತ್ತಿರ ನಡೆದಿದೆ. ದಿನಾಂಕ 15-10-2016 ರಂದು ಬೆಳಿಗ್ಗೆ 01-45 ಗಂಟೆಗೆ ಮಡಿಕೇರಿಗೆ ಪ್ರವಾಸಕ್ಕೆಂದು ಬಂದು ವಾಪಾಸ್ಸು ಮೈಸೂರಿಗೆ ಹೋಗುತ್ತಿದ್ದ ಕೆಎ-04-ಎಂ.ಸಿ-7805 ರ ಮಾರುತಿ ಬಲೆನೋ ಕಾರನ್ನು ಚಾಲಕ ನಂದೀಶರವರು ಅತೀ ವೇಗ ಮತ್ತು ಅಜಾಗರೂಕತೆಯಿಂಧ ಚಾಲನೆ ಮಾಡಿ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾಗಿ ಮಗುಚಿಕೊಂಡು ಮೈಸೂರಿನ ನಿವಾಸಿಗಳಾದ ಕಾರಿನ ಚಾಲಕ ನಂದೀಶ, ಚೇತನ್ ಮತ್ತು ರವಿಚಂದ್ರರವರು ಮೃತಪಟ್ಟಿದ್ದು ಪ್ರತಾಪ್, ಶಿವಕುಮಾರ್ ಮತ್ತು ಹೇಮಚಂದ್ರರವರಿಗೆ ಗಾಯಗಳಾಗಿದ್ದು ಗಾಯಾಳುಗಳು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅಪರಿಚಿತ ಮಹಿಳೆ ಶವ ಪತ್ತೆ

                         ದಿನಾಂಕ 16-10-2016 ರಂದು ನಾಕೂರು ಶಿರಂಗಾಲ ಗ್ರಾಮದ ಲೋಹಿತಾಶ್ವರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಅಲ್ಲಿ ಏನೋ ವಾಸನೆ ಬರುತ್ತಿದ್ದು ಹೋಗಿ ನೋಡಲಾಗಿ ಸುಮಾರು 10-12 ದಿವಸಗಳ ಹಿಂದೆ ಮೃತಪಟ್ಟ ಮಹಿಳೆಯ ಮೃತ ಶರೀರವಾಗಿದ್ದು ಮಾಂಸ ಖಂಡಗಳು ಪೂರ್ತಿ ಕರಗಿ ಹೋಗಿದ್ದು, ನೀಲಿ ಬಣ್ಣದ ಸೀರೆ, ಮಾಸಲು ಕಂದು ಬಣ್ಣದ ಲಂಗ, ಮಾಸಲು ಬಿಳಿ ಬಣ್ಣದ ರವಿಕೆ ಧರಿಸಿದ್ದು ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮದ್ಯ ವಶ ಆರೋಪಿ ಬಂಧನ

                            ಸರ್ಕಾರದ ಪರವಾನಿಗೆ ಇಲ್ಲದೇ ಶನಿವಾರಸಂತೆ ನಗರದ ಯಶಸ್ವಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಕರಿಗೆ ಮದ್ಯದ ಪ್ಯಾಕೇಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕುಮಾರ್ ಎಂಬುವವರನ್ನು ಶನಿವಾರಸಂತೆ ಪೊಲೀಸ್ ಉಪ ನಿರೀಕ್ಷಕರಾದ ಹೆಚ್ ಎಂ ಮರಿಸ್ವಾಮಿಯವರು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿರುತ್ತಾರೆ.

ತಾಯಿ ಮಗಳ ದಾರುಣ ಸಾವು

                         ಸೋಮವಾರಪೇಟೆ ತಾಲ್ಲೋಕಿನ ಕೊಡ್ಲಿಪೇಟೆ ಎಂಬಲ್ಲಿ ಕಲ್ಲುಕೋರೆ ಗುಂಡಿಗೆ ಬಟ್ಟೆ ಒಗೆಯಲು ತೆರಳಿದ್ದ ಹಾಸನ ಜಿಲ್ಲೆಯ ಶೋಭ ಮತ್ತು ಅವರ ಮಗಳು ವಿದ್ಯಾಶ್ರಿಯವರು ಮೃತಪಟ್ಟಿರುವ ಘಟನೆ ನಡೆದಿದೆ. ದಿನಾಂಕ 16-10-2016 ರಂದು 10-00 ಗಂಟೆಗೆ ಕಲ್ಲುಕೋರೆ ಗುಂಡಿಯಲ್ಲಿ ಶೋಭರವರು ಬಟ್ಟೆ ಒಗೆಯುತ್ತಿದ್ದಾಗ ನೀರಿನಲ್ಲಿ ಆಟವಾಡುತ್ತಿದ್ದ ಅವರ 10 ವರ್ಷದ ಮಗಳು ವಿದ್ಯಾಶ್ರೀಯು ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿದಾಗ ಅವಳನ್ನು ರಕ್ಷಿಸಲು ಹೋದ ಶೋಭರವರು ಸಹಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತರು ಹಾಸನ ಜಲ್ಲೆಯ ಹೊಳೆನರಸಿಪುರ ತಾಲ್ಲೋಕಿನವರಾಗಿದ್ದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾರಿಯನ್ನು ಹಿಂದಕ್ಕೆ ಚಾಲಿಸಿ ವ್ಯಕ್ಸಿಗೆ ಡಿಕ್ಕಿ

                     7 ನೇ ಹೊಸಕೋಟೆ ಗ್ರಾಮದ ಅಂದಗೋವೆಯಲ್ಲಿರುವ ಕಲ್ಲುಕೋರೆಯಲ್ಲಿ ದಿನಾಂಕ 29-08-2016 ರಂದು ಸುಬ್ರಮಣಿ ಎಂಬುವವರು ಕೆಎ-12-ಬಿ-0164 ರ ಲಾರಿಗೆ ಕಲ್ಲುಗಳನ್ನು ಲೋಡು ಮಾಡುತ್ತಿರುವಾಗ್ಗೆ ಚಾಲಕ ಮಹಮ್ಮದ್ ರವರು ಯಾವುದೇ ಸೂಚನೆ ಕೊಡದೇ ಅಜಾಗರೂಕತೆಯಿಂದ ಲಾರಿಯನ್ನು ಹಿಂದಕ್ಕೆ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ಸುಬ್ರಮಣಿಯವರಿಗೆ ಗಾಯಗಳಾಗಿದ್ದು ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆದು ತಡವಾಗಿ ಪುಕಾರು ನೀಡಿದ್ದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತಾರೆ. 

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

                     ಸೋಮವಾರಪೇಟೆ ತಾಲ್ಲೋಕಿನ ಕಾರೆಕೊಪ್ಪ ಗ್ರಾಮದ ನಿವಾಸಿ 35 ವರ್ಷ ಪ್ರಾಯದ ಸಂತೋಷ ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು ದಿನಾಂಕ 16-10-2016 ಸಂತೋಷರವರು ಕುಡಿದ ಅಮಲಿನಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಮಾಡಿನ ಕೌಕೋಲಿಗೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ತಾಯಿ ಜಯಮ್ಮರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.

ಕ್ಲುಲ್ಲಕ ಕಾರಣಕ್ಕೆ ಹಲ್ಲೆ

                       ದಿನಾಂಕ 16-10-2016 ರಂದು ತಿತಿಮತಿ ಗ್ರಾಮದ ಚೆಪ್ಪುಡಿರ ಕವಿತಾರವರ ಲೈನ್ ಮನೆಯಲ್ಲಿ ವಾಸವಿರುವ ಪಣಿಎರವರ ಶೈಲಾ ಮತ್ತು ಪಕ್ಕದ ಮನೆಯಲ್ಲಿ ವಾಸವಿರುವ ಕವಿತ ಮತ್ತು ಗಾಯತ್ರಿ ಎಂಬುವವರ ಮದ್ಯೆ ಶೌಚಾಲಯದ ಕೋಣೆಯಲ್ಲಿ ಕೋಳಿ ಸಾಕುವ ವಿಚಾರದಲ್ಲಿ ಜಗಳವಾಗಿ ಕವಿತ ಮತ್ತು ಗಾಯತ್ರಿಯವರು ಶೈಲಾರವರ ಮೇಲೆ ಹಲ್ಲೆ ಮಾಡಿದ್ದು ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.