Wednesday, October 19, 2016

 ಅಕ್ರಮ ಗಾಂಜಾ ಪತ್ತೆ
                       ಅಕ್ರಮವಾಗಿ ಗಾಂಜಾ ಬೆಳೆದ ಪ್ರಕರಣವೊಂದನ್ನು  ಡಿಸಿಐಬಿ ಪೊಲೀಸರು  ಪತ್ತೆ  ಹಚ್ಚಿದ್ದಾರೆ. ಕುಶಾಲನಗರ ಬಳಿಯ ಕೂಡು ಮಂಗಳೂರು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ಬಿ.ಆರ್.ಲಿಂಗಪ್ಪನವರು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳೊಂದಿಗೆ  ದಿನಾಂಕ 18/10/2016ರಂದು ಕೂಡು ಮಂಗಳೂರಿನ ನಿವಾಸಿ ದೇವರಾಜು ಎಂಬವರು ಹಾರಂಗಿ ಹೊಳೆಯ ಸಮೀಪದ ಅವರ ಜಮೀನಿನಲ್ಲಿ ಬೆಳೆದಿದ್ದ 8ಗಾಂಜಾ ಗಿಡಗಳು ಮತ್ತು ಅವರ ತೋಟದ ಮನೆಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಒಣಗಿದ ಗಾಂಜಾವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸುಮಾರು 900 ಗ್ರಾಂ ತೂಕದ ಗಾಂಜಾ ಗಿಡಗಳು ಮತ್ತು ಒಣಗಿಸಿದ ಗಾಂಜಾದ ಬೆಲೆಯು ಸುಮಾರು ರೂ. 25,000/- ಎಂದು ಅಂದಾಜಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕರಾದ ಬಿ.ಆರ್‌. ಲಿಂಗಪ್ಪನವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಎನ್‌.ಟಿ.ತಮ್ಮಯ್ಯ, ವಿ.ಜಿ.ವೆಂಕಟೇಶ್, ಕೆ.ಎಸ್.ಅನಿಲ್‌ಕುಮಾರ್‌, ಕೆ.ಆರ್‌.ವಸಂತ ಮತ್ತು   ಕೆ.ಎಸ್.ಶಶಿಕುಮಾರ್ ಭಾಗವಹಿಸಿದ್ದರು. 

                       ಇತ್ತೀಚೆಗೆ  ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು ಆರೋಗ್ಯ ಮತ್ತು ವಿದ್ಯಾಭ್ಯಾಸಗಳಲ್ಲಿ ನಿರುತ್ಸಾಹ ತೋರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಧಾಳಿಗಳನ್ನು ನಡೆಸಿ ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು,  ಸಾರ್ವಜನಿಕರೂ ಸಹಾ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಯಾವುದಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ರವರು ಮನವಿ ಮಾಡಿಕೊಂಡಿರುತ್ತಾರೆ.

ಕಾರಿಗೆ ಡಿಕ್ಕಿ, ಹಾನಿ
                  ನಿಲ್ಲಿಸಿದ ಕಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 16/10/2016ರಂದು ನಗರದ ಹೊಸ ಬಡಾವಣೆ ನಿವಾಸಿ ಎನ್‌.ಪಿ.ಚೀಯಣ್ಣ ಎಂಬವರು ನಗರದ ಜನರಲ್ ತಿಮ್ಮಯ್ಯ ಶಾಲೆಯ ಬಳಿ ಅವರ ಕಾರು ಸಂಖ್ಯೆ ಕೆಎ-12-ಪಿ-5013ನ್ನು ನಿಲ್ಲಿಸಿ ಕೆಲಸದ ನಿಮಿತ್ತ ಶಾಲೆಗೆ ಹೋಗಿದ್ದು, ನಂತರ ಸಂಜೆ ವೇಳೆ ಮರಳಿ ಬಂದು ನೋಡಿದಾಗ ಅವರ ಕಾರಿಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ಡಿಕ್ಕಿ ಪಡಿಸಿ ನಿಲ್ಲಿಸದೇ ಹೋಗಿದ್ದು, ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇಗುಲ ಕಳವು ಯತ್ನ
                    ದೇವಸ್ಥಾನದ ಹುಂಡಿಯನ್ನು ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ಸಿದ್ದಾಪುರ ಬಳಿಯ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 18/10/2016ರಂದು ಮುಂಜಾನೆ 3:00 ಗಮಟೆಗೆ ಇಂಜಿಲಗೆರೆ ಪುಲಿಯೇರಿ ನಿವಾಸಿ ಟಿ.ಎ.ಪ್ರಕಾಶ ಎಂಬವರು ಮನೆಯಲ್ಲಿ ಮಲಗಿರುವಾಗ ಅವರ ಮನೆಯ ಪಕ್ಕದಲ್ಲಿರುವ ಮುತ್ತಪ್ಪ ದೇವಸ್ಥಾನದ ಬಳಿ ಯಾವುದೋ ವಾಹನ ನಿಂತ ಶಬ್ದ ಕೇಳಿ ಅವರು ಮನೆಯ ಹೊರಗಡೆ ಬಂದು ನೋಡಿದಾಗ ಓರ್ವ ಅಪರಿಚಿತ ವ್ಯಕ್ತಿಯು ದೇವಸ್ಥಾನದ ಕಾಣಿಕೆ ಹುಂಡಿಯ ಬಳಿ ನಿಂತುಕೊಂಡು ಯಾವುದೋ ವಸ್ತುವಿನಿಂದ ಕಾಣಿಕೆ ಡಬ್ಬದ ಬೀಗವನ್ನು ಮುರಿಯಲು ಯತ್ನಿಸುತ್ತಿದ್ದುದನ್ನು ಕಂಡು ಟಿ.ಎ.ಪ್ರಕಾಶರವರು ಅಲ್ಲಿಗೆ ಹೋಗಿರುವುದಾಗಿದೆ. ಆಗ  ಅವರನ್ನು ಕಂಡ ಆ ಅಪರಿಚಿತ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದು, ದೇವಸ್ಥಾನದ ಬಳಿ ಕೆಎ-43-ಹೆಚ್-7265 ಸಂಖ್ಯೆಯ ಒಂದು ಮೋಟಾರು ಸೈಕಲ್ ನಿಂತಿರುವುದನ್ನು ಕಂಡು ಅದನ್ನು ಪ್ರಕಾಶ್‌ರವರು ಅವರ ಮನೆಯಲ್ಲಿ ನಿಲ್ಲಿಸಿ ಪೊಲೀಸರಿಗೆ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ
                 ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 18/10/2016ರ ಮುಂಜಾನೆ ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಣ್ಣರವರು ಗಸತಿನಲ್ಲಿರುವಾಗ ದೊಡ್ಡಮೆಳ್ತೆ ಗ್ರಾಮದ ಹೊನ್ನಮ್ಮನ ಕೆರೆಯ ಕಡೆಯಿಂದ  ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಪಿಎಸ್‌ಐ ಶಿವಣ್ಣ ಮತ್ತು ಸಿಬ್ಬಂದಿಗಳು ದೊಡ್ಡ ಮೆಳ್ತೆ ಗ್ರಾಮದ ಹೊನ್ನಮ್ಮನ ಕೆರೆಯ ಬಳಿ ತೆರಳಿ ಹೊಂಚು ಹಾಕಿದ್ದು, ಆ ಸಮಯಕ್ಕೆ ಕಾವಡಿಕಟ್ಟೆಯಿಂದ ಅಬ್ಬೂರು ಕಟ್ಟೆ ಕಡೆಗೆ ಕೆಎ-12-ಬಿ-0241 ಹಾಗೂ ಕೆಲ್‌-09-ಎಇ-7502ರ ರ ಸಂಖ್ಯೆಯ  ಎರಡು ಟಿಪ್ಪರ್ ಲಾರಿಗಳು ಬಂದಿದ್ದು, ಅವುಗಳನ್ನು ಪಿಎಸ್‌ಐರವರು ನಿಲ್ಲಿಸಿದಾಗ ಲಾರಿಗಳ ಚಾಲಕರಾದ ಕಲ್ಕಂದೂರು ಗ್ರಾಮದ ಸುರೇಶ ಮತ್ತು ಅಬ್ಬೂರುಕಟ್ಟೆ ಗ್ರಾಮದ ಜಗದೀಶ ಎಂಬವರುಗಳು ಎರಡೂ ಲಾರಿಗಳನ್ನು ನಿಲ್ಲಿಸಿ ಇಳಿದು ಓಡಿ ಹೋಗಿದ್ದು, ಪಿಎಸ್‌ಐರವರು ಲಾರಿಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 20,000/- ಮೌಲ್ಯದ ಮರಳು ಪತ್ತೆಯಾಗಿದ್ದು, ಸೋಮವಾರಪೇಟೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                         ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 18/10/2016ರಂದು ತಲ್ತರೆಶೆಟ್ಟಳ್ಳಿ ನಿವಾಸಿ ಆನಂದ ಎಂಬವರು ಅವರ ಮನೆಯಲ್ಲಿರುವಾಗ ಅಲ್ಲಿಗೆ ಅದೇ ಗ್ರಾಮದ ನಿವಾಸಿಗಳಾದ ವಿಜಿ, ಗೋಪಾಲ ಮತ್ತು ಸಣ್ಣಮ್ಮ ಎಂಬವರುಗಳು ಬಂದಿದ್ದು, ವಿಜಿಯವರು ಆನಂದರವರನ್ನು ಕುರಿತು ವಿಜಿಯ ತಂದೆಗೆ ಸಾಲ ಕೊಡುವಂತೆ ಕೇಳಿದ್ದು ಅದನ್ನು ನಿರಾಕರಿಸಿದ ಆನಂದರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಭಾರಿ ಮೌಲ್ಯದ ಚಿನ್ನಾಭರಣ ಕಳವು
                          ಮನೆ ನುಗ್ಗಿದ ಕಳ್ಳರು ಅಪಾರ ಮೊತ್ತದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕೊಡ್ಲಿಪೇಟೆ ನಗರದಲ್ಲಿ ನಡೆದಿದೆ. ಕೊಡ್ಲಿಪೇಟೆ ನಿವಾಸಿ ಔರಂಗಜೇಬ್‌ ಎಂಬವರು ದಿನಾಂಕ 17/10/2016ರಂದು ಅವರ ಸ್ನೇಹಿತರ ಮನೆಯಲ್ಲಿ ಹಬ್ಬಕ್ಕೆಂದು ತೆರಳಿದ್ದು, ಮನೆಯಲ್ಲಿದ್ದ ಪತ್ನಿ ಮಕ್ಕಳು ಮನೆಯ ಮಹಡಿಯಲ್ಲಿ ಮಲಗಿದ್ದರೆನ್ನಲಾಗಿದೆ. ಔರಂಗಜೇಬ್‌ರವರು ಹಬ್ಬ ಮುಗಿಸಿ ಅಪರಾತ್ರಿ  2:30 ಗಂಟೆಯ ವೇಳೆಗೆ ಮನೆಗೆ ಹೋದಾಗ ಮನೆಯ ಬಾಗಿಲಿನ ಬಳಿ ಇರುವ ಕಿಟಕಿಯ ಗಾಜುಗಳು ಒಡೆದು ಬಿದ್ದಿರುವುದನ್ನು ಕಂಡು ಒಳಹೋಗಿ ನೊಡಿದಾಗ ಅವರ ಕಚೇರಿಯಲ್ಲಿರುವ ಕಡತಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅವರ ತಾಯಿ ಮಲಗುವ ಕೋಣೆಯ ಬೀರುವಿನಲ್ಲಿಟ್ಟಿದ್ದ ಸುಮಾರು ರೂ.1,50,000/- ಮೌಲ್ಯದ ಚಿನ್ನಾಭರಣಗಳು ಕಳವಾಘಿರುವುದು ಕಂಡು ಬಂದಿದ್ದು, ಯಾರೋ ಕಳ್ಳರು ಮನೆಯ ಕಿಟಕಿಯ ಗಾಜು ಮುರಿದು ಒಳ ಪ್ರವೇಶಿಸಿ  ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ಕಳವು
                       ಅಂಗಡಿಯೊಂದರಿಂದರಿಂದ ಹಣ ಕಳವು ಮಾಡಿದ ಪ್ರಕರಣ ವಿರಾಜಪೇಟೆ ನಗರದಲ್ಲಿ ನಡೆದಿದೆ.  ವಿರಾಜಪೇಟೆ ನಗರದ ಮೀನುಪೇಟೆಯ ಬಳಿ ಎಂ.ಪಿ.ಕುಶಾಲಪ್ಪ ಎಂಬವರು ಸಿಮೆಂಟ್‌ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದಾಗಿದೆ. ದಿನಾಂಕ 18/10/2016ರಂದು ಅವರು ಎಂದಿನಂತೆ ವ್ಯಾಪಾರ ಮಾಡಿಕೊಂಡಿರುವಾಗ ಸುಮಾರು 11 ಗಮಟೆಯ ವೇಳೆಗೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಸುಮಾರು 20 ಚೀಲಗಳಷ್ಟು ಸಿಮೆಂಟ್ ಬೇಕಾಗಿದೆ ಎಂದು ಕೇಳಿದ್ದು ಕುಶಾಲಪ್ಪನವರು ಅವರಿಬ್ಬರನ್ನು ಅಂಗಡಿಯಲ್ಲಿ ಬಿಟ್ಟು ವಾಹನ ಮತ್ತು ಲೋಡರ್ಸ್ ಗಳನ್ನು ಕರೆದುಕೊಂಡು ಬರಲು ನಗರಕ್ಕೆ ಹೋದರೆನ್ನಲಾಗಿದೆ. ಸುಮಾರು 10 ನಿಮಿಷ ಬಿಟ್ಟು ಕುಶಾಲಪ್ಪನವರು ಅಂಗಡಿಗೆ ಬಂದಾಗ ಸಿಮೆಂಟ್  ಕೇಳಿದ ಇಬ್ಬರೂ ವ್ಯಕ್ತಿಗಳು ಅಲ್ಲಿ ಇಲ್ಲದಿದ್ದು, ಸಂಶಯ ಬಂದು ಪರಿಶೀಲಿಸಿದಾಗ ಅವರ ಮೇಜಿನ ಡ್ರಾಯರ್‌ ತೆರೆದಿದ್ದು ಅಲ್ಲಿ ಪರ್ಸ್‌ನಲ್ಲಿಟ್ಟಿದ್ದ ಸುಮಾರು 50,000/- ರೂಪಾಯಿಗಳಷ್ಟು ನಗದನ್ನು ದಾಖಲಾತಿ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ
                          ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಲ್ಲಿ ನಡೆದಿದೆ. ಕಂಡಂಗಾಲ ನಿವಾಸಿಗಳಾದ ಜೇನುಕುರುಬರ ರಾಜು ಮತ್ತು ಆತನ ಪತ್ನಿ ರಾಜಮ್ಮ ಎಂಬವರು ದಿನಾಂಕ 18/10/2016ರಂದು ವಿರಾಜಪೇಟೆ ನಗರಕ್ಕೆ ಬಂದು ಮನೆ ಸಾಮಗ್ರಿಗಳನ್ನು ಖರೀದಿಸ ಮನೆಗೆ ಹೋಗಿದ್ದು ರಾತ್ರಿ ಇಬ್ಬರೂ ಮದ್ಯಪಾನ ಮಾಡಿ ಮಲಗಿದ್ದರೆನ್ನಾಲಾಗಿದೆ. ಮಾರನೇ ದಿನ 19/10/2016ರಂದು ರಾಜುರವರು  ಎದ್ದು ನೋಡಿದಾಗ ಪತ್ನಿ ರಾಜಮ್ಮ ಮನೆಯ ಒಳಗಿನ ಕೋಣೆಯ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತೆ ರಾಜಮ್ಮ ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಈ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                         ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 18/10/2016ರಂದು ಚೌಡ್ಲು ನಿವಾಸಿ ಸುನಿಲ್‌ ಕುಮಾರ್‌ ಎಂಬವರು ಚೌಡ್ಲು ಗ್ರಾಮದ ಉದಯಕುಮಾರ್‌ರವರ ಮನೆಯ ಬಳಿ ನಿಲ್ಲಿಸಿದ್ದ ಅವರ ವಾಹನವನ್ನು ಹೊರ ತೆಗೆಯುವ ಸಲುವಾಗಿ ಅಲ್ಲೇ ನಿಲ್ಲಿಸಿದ್ದ ಪಿಕ್‌ ಅಪ್ ವಾಹನವನ್ನು ತೆಗೆಯುವಂತೆ ಅಲ್ಲೇ ನಿಂತಿದ್ದ ಪಿಕ್‌ ಅಪ್ ವಾಹನದ ಸುಧಾ ಮತ್ತು ಸುರೇಶ್‌ ಎಂಬವರಿಗೆ ತಿಳಿಸಿದ ವಿಚಾರವಾಗಿ ಸುಧಾ ಮತ್ತು ಸುರೇಶ್‌ರವರು ಸುನಿಲ್‌ ಕುಮಾರ್‌ರವರೊಂದಿಗೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.