Wednesday, October 26, 2016

 ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

           ಪೊನ್ನಂಪೇಟೆಯ ಜೋಡುಬಟ್ಟಿ ಎಂಬಲ್ಲಿ ಮನೋಜ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಜೋಡುಬೆಟ್ಟಿಯ ಸುಮತಿರವರ ಬಾಡಿಗೆ ಮನೆಯಲ್ಲಿ ವಾಸವಿರುವ ಪಿ.ಸಿ.ವಿನೋದ್ ರವರ ತಮ್ಮ ವಿನೀಶ್ ನು ಅವಿವಾಹಿತನಾಗಿದ್ದು ತನ್ನ ತಾಯಿಯೊಂದಿಗೆ ಸಣ್ಣುವಂಡ ರಮೇಶರವರ ಬಾಡಿಗೆ ಮನೆಯಲ್ಲಿ ವಾಸವಿದ್ದು ಮರ ಕುಯ್ಯುವ ಕೆಲಸ ಮಾಡಿಕೊಂಡಿದ್ದು ದಿನಾಂಕ 24/10/2016 ರಂದು ರಾತ್ರಿ ವಿನೀಶನು ವಿಪರೀತ ಮದ್ಯಪಾನ ಮಾಡಿ ಮನೆಗೆ ಹೋಗಿದ್ದು, ರಾತ್ರಿ ಸಮಯದಲ್ಲಿ ಮನೆಯ ಮುಂದಿನ ಕಾಫಿ ತೋಟದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆತನಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿನೋದ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ

             ಗೋಣಿಕೊಪ್ಪ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹೆಚ್ ವೈ ರಾಜುರವರು ದಿನಾಂಕ 25-10-2016 ರಂದು ರಾತ್ರಿಯ ವೇಳೆ ಗಸ್ತಿನಲ್ಲಿರುವಾಗ ಬೆಳಗಿನ ಜಾವ 04-30 ಗಂಟೆಗೆ ಗೋಣಿಕೊಪ್ಪ ನಗರದ ಮಾರುಕಟ್ಟೆಯ ಹತ್ತಿರ ಕುಟ್ಟದ ಸಿಂಕೋನ ಕಾಲೋನಿಯ ನಿವಾಸಿ ಪಂಜರಿ ಎರವರ ಬೋಜ ಎಂಬಾತನು ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದವನನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 ವಿಷ ಕುಡಿದು ವ್ಯಕ್ತಿಯ ಆತ್ಮಹತ್ಯೆ 
              ದಿನಾಂಕ 17-10-2016 ರಂದು ಸಮಯ ರಾತ್ರಿ 08-30 ಗಂಟೆಗೆ ಶನಿವಾರಸಂತೆಯ ಕಿರುಬಹಳ್ಳ ಗ್ರಾಮದ ಮೋಹನ್ ರವರು ವಿಷ ಕುಡಿದು ಆತ್ಮ ಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥರಾದವರನ್ನು ಶನಿವಾರಸಂತೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅರಕಲಗೋಡುವಿನ ಸವಿ ಆಸ್ಪತ್ರೆ, ಮೈಸೂರಿನ ಕೆ ಆರ್ ಆಸ್ಪತ್ರೆ ಹಾಗೂ ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇದ್ದು ದಿನಾಂಕ 24-10-2016 ರಂದು ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ವಿಷ ಸೇವನೆಯ ಬಗ್ಗೆ ಮೋಹನ್ ರವರನ್ನು ವಿಚಾರ ಮಾಡಲಾಗಿ ಚಿಕ್ಕಂದೂರು ಗ್ರಾಮದ ತೇಜ ಮತ್ತು ದೊಡ್ಡ ಬಿಳಹ ಗ್ರಾಮದ ಉದಯ ಎಂಬುವವರು ಮೋಹನ್ ರವರಿಗೆ ಕ್ರಿಕೆಟ್ ಬೆಟ್ಟಿಂಗ್ ಹಣ ಕಟ್ಟುವಂತೆ ಒತ್ತಾಯ ಮಾಡಿದ್ದು ಮೋಹನ್ ರವರು 1 ಲಕ್ಷ ರೂಪಾಯಿ ಕಟ್ಟಿ 20 ಸಾವಿರ ರೂಗಳಿಗೆ ತನ್ನ ಬೈಕನ್ನು ಅಡವಿಟ್ಟು ಆ ಹಣವನ್ನೂ ಸಹಾ ತೇಜ ಮತ್ತು ಉದಯರವರಿಗೆ ಕೊಟ್ಟಿದ್ದರೆನ್ನಲಾಗಿದೆ. ನಂತರ ತೇಜ ಮತ್ತು ಉದಯರವರು ಇನ್ನೂ ಹೆಚ್ಚಿನ ಹಣ ಕೇಳಿದಾಗ ಮೋಹನ್ ರವರು ಹಣವಿಲ್ಲ ಎಂದು ಹೇಳಿದ್ದು ಆಗ ಅವರುಗಳು ಮೋಹನ್ ಗೆ ವಿಷ ಕುಡಿದು ಸಾಯುವಂತೆ ಹೇಳಿದ ಕಾರಣಕ್ಕೆ ಮೋಹನ್ ರವರು ಬೇಸರವಾಗಿ ವಿಷ ಕುಡಿದಿದ್ದು ದಿನಾಂಕ 25-10-2016 ರಂದು ಮೃತಪಟ್ಟಿರುವುದಾಗಿ ತಂದೆ ಶಂಕರರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಸ್ತಿ ವಿಚಾರದಲ್ಲಿ ಹಲ್ಲೆ
             ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದ ನಿವಾಸಿ ಹೊಟ್ಟೆಯಂಗಡ ಮೇದಪ್ಪರವರು ಸೆಪ್ಟಂಬರ್ ತಿಂಗಳಿನಲ್ಲಿ ಪತ್ನಿ ಕಮಲಾಕ್ಷಿಯವರೊಂದಿಗೆ ವಿದೇಶಕ್ಕೆ ಮಕ್ಕಳ ಹತ್ತಿರ ಹೋಗಿದ್ದು ದಿನಾಂಕ 15-09-2016 ರಂದು ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಚೋನಿರ ದಿನಕರರವರು ದೂರವಾಣಿ ಕರೆ ಮಾಡಿ ಗ್ಲೆನ್ ಲೋರ್ನಾ ಟಿ ತೋಟದ ಭಾಗದಲ್ಲಿರುವ ಕಾಫಿ ತೋಟದಲ್ಲಿ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಯಾರೋ ಕಳವು ಮಾಡಿರುತ್ತಾರೆಂದು ತಿಳಿಸಿದ್ದು, ವಿದೇಶದಿಂದ ಬಂದ ನಂತರ ವಿಚಾರಿಸಲಾಗಿ ತಮ್ಮ ನಾರಾಯಣರವರು ಗೇಟನ್ನು ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು, ದಿನಾಂಕ 24-10-2016 ರಂದು ಮೇದಪ್ಪನವರು ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣನನ್ನು ತೋಟದ ಗೇಟನ್ನು ಕಳವು ಮಾಡಿದ ಬಗ್ಗೆ ವಿಚಾರಿಸಿದಾಗ ನಾರಾಯಣ ಮತ್ತು ಅವರ ಆಳುಗಳಾದ ಮುತ್ತ.ಕೋಯಿಲೆ, ಕರಿಯ ಮತ್ತು ಬೆಳ್ಳಿ ರವರು ಮೇದಪ್ಪರವರನ್ನು ಹೊಡೆಯಲು ಬಂದು ಅಶ್ಲೀಲ ಶಬ್ದಗಳಿಂದ ಬೈದಿದ್ದು ತಮ್ಮ ನಾರಾಯಣನು ಪಿಸ್ತೂಲಿನಿಂದ ಎರಡು ಸುತ್ತು ಬೆದರು ಗುಂಡು ಹಾರಿಸಿ ಬೆದರಿಸಿರುವುದಾಗಿ ಮೇದಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ವಶ

               ದಿನಾಂಕ 25-10-2016 ರಂದು ಸಮಯ ಬೆಳಿಗ್ಗೆ 4-30 ಗಂಟೆಗೆ ಸೋಮವಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಎಂ ಶಿವಣ್ಣನವರು ಸಿಬ್ಬಂದಿಯವರೊಂದಿಗೆ ಗಸ್ತುವಿನಲ್ಲಿರುವಾಗ ಕಲ್ಕಂದೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕೂತಿ ಕಡೆಯಿಂದ ಸೋಮವಾರಪೇಟೆಗೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಕೆಎ-46-6721 ರ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ.

ಜೂಜಾಟ ಆಡುತ್ತಿದ್ದ 6 ಜನರ ಬಂಧನ

               ದಿನಾಂಕ 23-10-2016 ರಂದು ಕುಶಾಲನಗರದ ಗುಡ್ಡೆಹೊಸೂರು ಗ್ರಾಮದ ವಿ.ಎಸ್.ಎಸ್.ಎನ್ ಬ್ಯಾಂಕ್ ಕಟ್ಟಡದ ಮೇಲ್ಬಾಗದ ಕೋಣೆಯಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಜೂಜಾಟವಾಡುತ್ತಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟ ಆಡುತ್ತಿದ್ದ ಗುಡ್ಡೆಹೊಸೂರುವಿನ ನಿವಾಸಿಗಳಾದ ಹರೀಶ, ರಂಜಯ್, ಚಿಕ್ಕಬೆಟ್ಟಗೇರಿಯ ಗಣೇಶ, ಚರಿಕುಮಾರ, ಕೊಡಗರಹಳ್ಳಿಯ ಚಿನ್ನಪ್ಪ, ತ್ಯಾಗತ್ತೂರುವಿನ ರಾಮಚಂದ್ರರವರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ 80,100 ರೂಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕೊಲೆ ಬೆದರಿಕೆ

                 ಹಾಕತ್ತೂರು ಗ್ರಾಮದ ತೊಂಬತ್ತುಮನೆಯ ನಿವಾಸಿ ಸುಬ್ಬಯ್ಯ ಮತ್ತು ಕಾಶಿ, ಮಲ್ಲಿಗೆಯವರಿಗೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ದಿನಾಂಕ 25-10-2016 ರಂದು ಸುಬ್ಬಯ್ಯನವರು ತನ್ನ ಸ್ಕೂಟರ್ ನಲ್ಲಿ ತೊಂಬತ್ತು ಮನೆಯಿಂದ ಹಾಕತ್ತೂರಿಗೆ ಹೋಗುತ್ತಿದ್ದಾಗ, ದೇವಣಿರ ಮನೆಯವರ ತೋಟದ ಹತ್ತಿರ ಹರೀಶ, ರಮೇಶ, ಕಾಶಿ ಮತ್ತು ಮಲ್ಲಿಗೆಯವರು ತಡೆದು ನಿಲ್ಲಿಸಿ ಬಾಯಿಗೆ ಬಂದಂತೆ ಅಶ್ಲೀಲ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಸುಬ್ಬಯ್ಯನವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.