Saturday, October 29, 2016

ಹಾವು ಕಚ್ಚಿ ವ್ಯಕ್ತಿ ಸಾವು
                 ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 07/10/2016ರಂದು ಮಡಿಕೇರಿ ನಗರದ ಕನ್ನಂಡ ಬಾಣೆ ನಿವಾಸಿ ಆನಂದ ಬಿ.ಆರ್. ಎಂಬವರು ಬೆಳಗಿನ ಜಾವ ಮೂತ್ರ ವಿಸರ್ಜನೆಗೆಂದು ಮನೆಯ ಹೊರಗಡೆ ಹೋಗಿದ್ದಾಗ ಕತ್ತಲಿನಲ್ಲಿ ಯಾವುದೋ ವಿಷದ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 28/10/2016ರಂದು ಆನಂದರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಬೈಕ್‌ ಡಿಕ್ಕಿ
                       ಚಾಲಕನ ನಿಯಂತ್ರಣ ತಪ್ಪಿ ಮೋಟಾರು ಬೈಕೊಂದು ಮಗುಚಿಕೊಂಡ ಘಟನೆ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/10/2016ರಂದು ಮುಕ್ಕೋಡ್ಲು ನಿವಾಸಿಗಳಾದ ಡೆನಿಲ್‌ ಮತ್ತು ದಿನೇಶ್‌ ಎಂಬವರುಗಳು ಬೈಕೊಂದರಲ್ಲಿ ಮುಕ್ಕೋಡ್ಲುವಿನ ಅವರ ಮನೆಗೆ ಹೋಗುತ್ತಿರುವಾಗ ಮುಕ್ಕೋಡ್ಲು ಗ್ರಾಮದಲ್ಲಿ ಶಾಸಕ ಅಪ್ಪಚ್ಚು ರಂಜನ್‌ರವರ ತೋಟದ ಬಳಿ ಬೈಕಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕು ಚಾಲಕ ಡೆನಿಲ್‌ರವರ ನಿಯಂತ್ರಣ ತಪ್ಪಿ ಮಗುಚಿಕೊಂಡಿದ್ದು ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವತಿ ಮೇಲೆ ಹಲ್ಲೆ

                      ಕ್ಷುಲ್ಲಕ ಕಾರಣಕ್ಕಾಗಿ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮೇಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/10/2016ರಂದು ಮೇಕೇರಿ ನಿವಾಸಿ ಗೌರಮ್ಮ ಎಂಬವರ ಮಗಳು ನಿತ್ಯಶ್ರೀ ಎಂಬಾಕೆಯು ಸ್ನೇಹಿತೆಯೊಂದಿಗೆ ಮೇಕೆರಿಯಲ್ಲಿರುವ ಅವರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಮೂರ್ನಾಡು ನಿವಾಸಿ ಮಹೇಶ್‌ ಎಂಬಾತನು ಅಕೆಯನ್ನು ಅಡ್ಡಗಟ್ಟಿ ಆಕೆಯನ್ನು ಪ್ರೀತಿಸುವ ವಿಚಾರದಲ್ಲಿ ಜಗಳವಾಡಿ ಬ್ಲೇಡ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

                         ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 28/10/2016ರಂದು ಬೆಳಗಿನ ಜಾವ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ಗಸ್ತು ಕರ್ತವ್ಯ ಮಾಡಿಕೊಂಡಿರುವಾಗ ಕೊಟ್ಟಗೇರಿ ಸೇತುವೆ ಬಳಿ ಕೆಎ-12-ಎ-5533ರ ಮಿನಿ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮರಳು ಹಾಗೂ ಲಾರಿಯನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಬೈಕ್‌ ಡಿಕ್ಕಿ, ಇಬ್ಬರ ಸಾವು

                        ಮೋಟಾರು ಬೈಕ್‌ಗಳೆರಡು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾದ ಘಟನೆ ಪೊನ್ನಂಪೇಟೆ ಬಳಿಯ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 27/10/2016ರಂದು ಕಾರ್ಮಾಡು ನಿಟ್ಟೂರು ಗ್ರಾಮದ ನಿವಾಸಿಗಳಾದ ಶಶಿ ಮತ್ತು ಪಾಲ ಎಂಬವರುಗಳು ಕೆಎ-12-ಕ್ಯು-9780ರ ಮೋಟಾರು ಬೈಕಿನಲ್ಲಿ ಕಾರ್ಮಾಡು ನಿಟ್ಟೂರು ಗ್ರಾಮದ ಬ್ಯಾಂಕಿನ ಮುಂಭಾಗದಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ರಾಜ ಎಂಬವರು ಕೆಎ-12-ಹೆಚ್‌-6568ರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಶಿ ಮತ್ತು ಪಾಲರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಗಂಭೀರ ಗಾಯಗಳಾಗಿದ್ದ ಶಶಿ ಮತ್ತು ಪಾಲರವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾಲರವರು ಅದೇ ದಿನ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇನ್ನೋರ್ವ ಸುಳುಗೋಡು ನಿವಾಸಿ ಶಶಿರವರು ದಿನಾಂಕ 28/10/2016ರ ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾರದಲ್ಲಿ ಪರಸ್ಪರ ಹಲ್ಲೆ

             ಪೊನ್ನಂಪೇಟೆಯ ಹುದೂರು ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್, ಮೊಹಮ್ಮದ್, ಉಮ್ಮರ್ ಮತ್ತು ಅಬೂಬಕರ್ ರವರು ಅಣ್ಣ ತಮ್ಮಂದಿಯರಾಗಿದ್ದು ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ದಿನಾಂಕ 28-10-2016 ರಂದು ಅಬುಬಕರ್ ರವರು ತಂದೆಯ ಮನೆಗೆ ಹೋದಾಗ ಮನೆಯಲ್ಲಿದ್ದ ಸಹೋದರರಾದ ಇಸ್ಮಾಯಿಲ್, ಮೊಹಮ್ಮದ್, ಉಮ್ಮರ್ ಮತ್ತು ಅಬೂಬಕರಿಗೆ ಆಸ್ತಿಯ ವಿಚಾರದಲ್ಲಿ ಜಗಳವಾಗಿ ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು ಎರಡೂ ಕಡೆಯವರು ನೀಡಿದ ದೂರುಗಳ ಮೇಲೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.