Monday, October 31, 2016

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

         ಕ್ಷುಲ್ಲಕ ಕಾರಣದಿಂದ ವ್ಯಕ್ತಿಗಳಿಬ್ಬರು ಮತ್ತೋರ್ವ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ದೊಡ್ಡ ಅಬ್ಬೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 30-10-2016 ರಂದು ದೊಡ್ಡ ಅಬ್ಬೂರು ಗ್ರಾಮದ ನಿವಾಸಿ ಸಿ.ಎ ಸುಬ್ಬಯ್ಯ ಎಂಬವರು ಅವರ ಮನೆಯ ಪಕ್ಕದ ಕಾವೇರಪ್ಪ ಎಂಬವರಿಗ ಸೇರಿದ ಗದ್ದೆಯಲ್ಲಿ ಕರೆಂಟ್ ಕಂಬ ಹಾಕುವ ಸಂಬಂಧ ಗದ್ದೆಯ ಏರಿಯನ್ನು ಅಗೆದ ಕಾರಣಕ್ಕೆ ಆರೋಪಿಗಳಾದ ಚೇತನ್ ಹಾಗು ಚಂದ್ರ ರವರುಗಳು ಅಲ್ಲಿಗೆ ಬಂದು ಜಗಳ ಮಾಡಿ ದೊಣ್ಣೆಯಿಂದ ಸಿ.ಎ. ಸುಬ್ಬಯ್ಯನವರ ಮೇಲೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರೆಂಟ್ ಕಂಬ ಹಾಕುವ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:
  
         ಕರೆಂಟ್ ಕಂಬ ಹಾಕುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು ಒಬ್ಬಾತ  ಹಲ್ಲೆಗೊಳಗಾದ  ಬಗ್ಗೆ ಸೋಮವಾರಪೇಟೆ ತಾಲೋಕು ದೊಡ್ಡ ಅಬ್ಬೂರು ಗ್ರಾಮದಿಂದ ವರದಿಯಾಗಿದೆ. ಸೋಮವಾರಪೇಟೆ ಠಾಣಾ ವ್ಯಾಪ್ತಿಯ ದೊಡ್ಡ ಅಬ್ಬೂರು ಗ್ರಾಮ ನಿವಾಸಿ ಸಿ.ಜೆ. ಚೇತನ್ ಹಾಗು ಅದೇ ಗ್ರಾಮದ ಸಿ.ಎ. ಸುಬ್ಬಯ್ಯ ಎಂಬವರ ನಡುವೆ ಕರೆಂಟ್ ಕಂಬ ಹಾಕುವ ವಿಚಾರದಲ್ಲಿ ಜಗಳ ವಾಗಿದ್ದು, ಸಿ.ಎ. ಸುಬ್ಬಯ್ಯನವರು ಚೇತನ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಡುಕಿನ ಚಾಲನೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ, ಜಖಂ:

        ದುಡುಕಿನ ಚಾಲನೆಯಿಂದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾದ ಬಗ್ಗೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ವಿವೇಕಾನಂದ ಆಸ್ಪತ್ರೆಯ ಬಳಿ ನಡೆದಿದೆ. ದಿನಾಂಕ 30-10-2016 ರಂದು ಬೆಳಗಿನ ಜಾವ 5-00 ಗಂಟೆಯ ಸಮಯದಲ್ಲಿ ಡೆನ್ನಿ ಫಿಲಿಪ್ ಎಂಬವರು ತಮ್ಮ ಬಾಪ್ತು ಶಿಫ್ಟ್ ಡಿಸಾಯರ್ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜಖಂ ಗೊಂಡಿದ್ದು, ಟಿ.ಜೆ. ಬ್ರಿಜೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ:

        ವ್ಯಕ್ತಿಯೊಬ್ಬರ ಮೇಲೆ ಮತ್ತೋರ್ವ ವ್ಯಕ್ತಿ  ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೆಸಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 30-10-2016 ರಂದು ಸಂಜೆ 5-15 ಗಂಟೆಯ ಸಮಯದಲ್ಲಿ ಬೆಸಗೂರು ಗ್ರಾಮದ ನಿವಾಸಿ ಪಿ.ಕೆ. ಗಣಪತಿ ಎಂಬವರು ತಮ್ಮ ತೋಟದ ಬೇಲಿಯನ್ನು ಪೊನ್ನಿಮಾಡ ಕುಟ್ಟಪ್ಪ ಎಂಬವರು ಕಡಿಯುತ್ತಿರುವುದನ್ನು ಗಮನಿಸಿ ಅದನ್ನು ವಿಚಾರಿಸಿದ್ದು, ಇದೇ ವಿಚಾರವಾಗಿ  ಸದರಿ ಪೊನ್ನಿಮಾಡ ಕುಟ್ಟಪ್ಪನವರು ಪಿ.ಕೆ. ಗಣಪತಿಯವರ ಮೇಲೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಅಲ್ಲದೆ ಗಣಪತಿಯವರ ಪತ್ನಿ ಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

      ಪಾದಚಾರಿಗೆ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದ ತೆಲುಗರಬೀದಿಯಲ್ಲಿ ನಡೆದಿದೆ. ವಿರಾಜಪೇಟೆ ನಗರದ ತೆಲುಗರಬೀದಿ ನಿವಾಸಿ ಶ್ರೀಮತಿ ಮೀನಾಕ್ಷಿ ಎಂಬವರು ದಿನಾಂಕ 30-10-2016 ರಂದು 4-20 ಪಿ.ಎಂ.ಗೆ ತೆಲುಗರಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವಿರಾಜಪೇಟೆ ತಾಲೋಕು ಕಾವಾಡಿ ಗ್ರಾಮದ ನಿವಾಸಿ ಹೆಚ್.ಬಿ. ಕಾಳಪ್ಪ ಎಂಬವರು ತಮ್ಮ ಮೋಟಾರ್ ಸೈಕಲನ್ನು ದುಡುಕಿನಿಂದ ಚಾಲಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಮೀನಾಕ್ಷಿರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೀನಾಕ್ಷಿಯವರು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ:

      ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ವಿರಾಜಪೇಟೆ ನಗರ ಪೊಲೀಸರು ದಾಳಿ ನಡೆಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ವಿರಾಜಪೇಟೆ ನಗರ ಠಾಣಾ ಪಿ.ಎಸ್.ಐ. ಶ್ರೀ ಜೆ.ಕೆ. ಸುಬ್ರಹ್ಮಣ್ಯ ರವರಿಗೆ ದೊರೆತ ಮಾಹಿತಿ ಮೇರೆಗೆ ರಾಮನಗರದ ಕಡೆಯಿಂದ ವಿರಾಜಪೇಟೆ ನಗರದ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಆರೋಪಿ ಕಲ್ಲುಬಾಣೆ ನಿವಾಸಿ ಅಬ್ದುಲ್ ಸಮ್ಮದ್ ರವರನ್ನು ಮರಳು ತುಂಬಿದ ಲಾರಿ ಸಮೇತವಾಗಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ದಾಳಿ ಅಕ್ರಮ ಮರಳು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ:

        ದಿನಾಂಕ 22-10-2016 ರಂದು ವಿರಾಜಪೇಟೆ ನಗರ ಠಾಣಾಧಿಕಾರಿ ಶ್ರೀ ಜೆ.ಕೆ. ಸುಬ್ರಹ್ಮಣ್ಯ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ 30-10-2016 ರಂದು ಸಂಜೆ 6-30 ಗಂಟೆಗೆ ಸಿಬ್ಬಂದಿಯೊಂದಿಗೆ ಕಂಡಂಗಾಲ ಗ್ರಾಮದಲ್ಲಿ ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿ ಆರೋಪಿ ನೊರೇರ ನಾಣಯ್ಯ ಎಂಬವರನ್ನು ಹಾಗು ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ದಾರಿ ತಡೆದು ನಗದು ದರೋಡೆ:

         ವ್ಯಕ್ತಿಯೊಬ್ಬರು ಕೇರಳದ ಕಡೆಗೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಮೋಟಾರ ಸೈಕಲನ್ನು ಅಡ್ಡಗಟ್ಟಿ ನಗದು ಹಣ ದರೋಡೆ ಮಾಡಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಗ್ರಾಮದಲ್ಲಿ ನಡೆದಿದೆ. ಫಿರ್ಯಾದಿ ಕೆ.ವೈ. ಸಂಶುದ್ದೀನ್, ತಂದೆ ಕೆ ಹೆಚ್ ಯೂಸುಫ್, ಪ್ರಾಯ 40 ವರ್ಷ, ವ್ಯಾಪಾರ ವೃತ್ತಿ, ವಾಸ ಲೆಕಂಬ ಸ್ಟ್ರೀಟ್ ಸಿಡ್ನಿ ಆಸ್ಟ್ರೇಲಿಯಾ ಸ್ವಂತ ಊರು ಕಿಕ್ಕೇರೆ ಕೋಕೇರೆ ಗ್ರಾಮ ಚೇಯಂಡಾಣೆ ಅಂಚೆ, ಇವರು ದಿನಾಂಕ 29-10-2016 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಮೋಟಾರ್ ಸೈಕಲ್ ನಲ್ಲಿ ತನ್ನ ತಂದೆಯ ಮನೆ ಕಿಕ್ಕೆರೆಯಿಂದ ವಿರಾಜಪೇಟೆಯ ಮೂಲಕ ಕೇರಳಕ್ಕೆ ಹೋಗುತ್ತಿದ್ದಾಗ ಬಾವಲೀ ಗ್ರಾಮದ ಹತ್ತಿರ ಅವರ ದೂರದ ಸಂಭಂದಿ ಆರೋಪಿ ಎರೆಟೆಯಂಡ ಮಸುದ್ ಎಂಬವರು ಮೂಟಾರ್ ಸೈಕಲ್ ನಿಲ್ಲಿಸುವಂತೆ ಕೇಳಿಕೊಂಡ ಮೇರೆ ಪಿರ್ಯಾದಿಯವರು ಮೋಟಾರ್ ಸೈಕಲ್ ನಿಲ್ಲಿಸಿದ್ದು ತಾನು ನಿನ್ನೊಂದಿಗೆ ವಿರಾಜಪೇಟೆಗೆ ಬರುವುದಾಗಿ ತಿಳಿಸಿದ ಮೇರೆಗೆ ಸದರಿಯಾತನನ್ನು ತನ್ನ ಹಿಂಬಾಗದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಕಲ್ಲು ಮೊಟ್ಟೆ ಎಂಬ ಜಾಗದಲ್ಲಿ ತಲುಪಿದಾಗ ಎರೆಟೆಯಂಡ ಮಸುದ್ ತನಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ತಿಳಿಸಿ  ಮೋಟಾರ್ ಸೈಕಲ್ ನಿಲ್ಲಿಸಲು ಹೇಳಿದ್ದು ಅದರಂತೆ ಮೋಟಾರ್ ಸೈಕಲ್ ನಿಂದ ಇಳಿದು ಹೋಗಿ ತನ್ನ ಮೊಬೈಲ್ ನಿಂದ ಯಾರಿಗೋ ಕರೆ ಮಾಡಿದ್ದು ನಂತರ ಅಲ್ಲಿಂದ  ಮುಂದೆ ಬಂದಾಗ ನಾಲ್ಕನೇ ಮೈಲಿನ ಹತ್ತಿರದ ಬೈಕನ್ನು ಅಡ್ಡ ದಾರಿಯಲ್ಲಿ ತಿರುಗಿಸಲು ಹೇಳಿ ಸ್ವಲ್ಪ ಮುಂದೆ ಹೋದಾಗ ಹಿಂಬಾಗದಿಂದ ಬಂದ ಒಂದು ಪಲ್ಸರ್ ಮೋಟಾರ್ ಸೈಕಲ್ ನಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಮೋಟಾರ್ ಸೈಕಲ್ ಅನ್ನು ಫಿರ್ಯಾದಿ ಬೈಕಿಗೆ ಅಡ್ಡಲಾಗಿ ನಿಲ್ಲಿಸಿ  ಫಿರ್ಯಾದಿ ತನ್ನ ಮೋಟಾರ್ ಸೈಕಲನ್ನು  ನಿಲ್ಲಿಸಿದಾಗ ಸದರಿ ಇಬ್ಬರು ವ್ಯಕ್ತಿಗಳು ಬೈಕಿನಿಂದ ಇಳಿದು ಬಂದು ಅದರಲ್ಲಿ ಒಬ್ಬಾತ ಪಿರ್ಯಾದಿಯವರಿಗೆ ಚಾಕು ತೋರಿಸಿ 1,00,000/- ರುಪಾಯಿ ಕೊಡು ಇಲ್ಲದಿದ್ದರೆ ಈ ಚಾಕುವಿನಿಂದ ಇರಿದು ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದು ಅಷ್ಟರಲ್ಲಿ ಫಿರ್ಯಾದಿ ಬೈಕಿನಲ್ಲಿದ್ದ ವ್ಯಕ್ತಿ ಬೈಕಿನಿಂದಿಳಿದು ಫಿರ್ಯಾದಿಯ ಬಾಯಿಗೆ ಮುಷ್ಠಿಯಿಂದ ಗುದ್ದಿ ಹಣ ಕೊಡುವಂತೆ ಹೇಳಿದ್ದು ಹಣ ಇಲ್ಲ ಎಂದು ಹೇಳಿದಾಗ ಅದೇ ಎರೆಟೆಯಂಡ ಮಸುದ್ ಪಿರ್ಯಾದಿಯವರ ಜೇಬಿನಲ್ಲಿದ್ದ 52.000/- ರೂಗಳನ್ನು ಕಿತ್ತುಕೊಂಡು ಅವರೆಲ್ಲಾ  ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

     ಫಿರ್ಯಾದಿ ಶ್ರೀಮತಿ ಸ್ವಪ್ನ ದೇಚಮ್ಮ, ಕೋಟೂರು ಗ್ರಾಮ ಇವರು ದಿನಾಂಕ 16-06-2016 ರಂದು ಕೊಡವ ಸಂಪ್ರದಾಯದಂತೆ ಬಣ್ಣಮೊಟ್ಟೆ ನಾಲ್ಕೇರಿ ಗ್ರಾಮದ ಮುಕ್ಕಾಟೀರ ನವೀನ್ ಅಯ್ಯಪ್ಪ ಎಂಬುವವರನ್ನು ಹುದಿಕೇರಿ ಕೊಡವ ಸಮಾಜದಲ್ಲಿ ವಿವಾಹವಾಗಿದ್ದು ವಿವಾಹದ ಸಮಯದಲ್ಲಿ ಪಿರ್ಯಾದಿಯವರ ತವರು ಮನೆಯಿಂದ  ಚಿನ್ನಾಭರಣ ಮತ್ತು ಗೃಹ ಉಪಯೋಗಿ ವಸ್ತುಗಳನ್ನು ನೀಡಿದ್ದು, ಅಲ್ಲದೆ ಪುನಃ ರೂ 10,00,000/- ಹಣವನ್ನು ವರದಕ್ಷಿಣೆಯಾಗಿ ತರಬೇಕೆಂದು ಪ್ರತಿದಿನ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 28-10-2016 ರಂದು ಬೆಳಿಗ್ಗೆ ಸಮಯ ಸುಮಾರು 08:30 ಗಂಟೆಗೆ ಪಿರ್ಯಾದಿಯವರ ಗಂಡ ನವೀನ್ ಅಯ್ಯಪ್ಪ ಹಾಗೂ ಅತ್ತೆ ಬೋಜಮ್ಮರವರು ಫಿರ್ಯಾದಿಯವರ ಮೇಲೆ ಕೈಯಿಂದ ಹಲ್ಲೆ ಮಾಡಿ ಕೈ ಬೆರಳುಗಳನ್ನು ತಿರುಗಿಸಿ ನೋವುಂಟುಮಾಡಿ ನಿನ್ನ ತವರು ಮನೆಯಿಂದ 10,00,000/- ರೂ ಗಳನ್ನು ತರಬೇಕೆಂದೂ ಇಲ್ಲದಿದ್ದರೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಪಿರ್ಯಾದಿಯವರು ಅಲ್ಲಿಂದ ತಪ್ಪಿಸಿಕೊಂಡು ತನ್ನ ತವರು ಮನೆ ಕೋಟೂರಿಗೆ ಹೋಗಿ ನೆಲೆಸಿರುವುದಾಗಿಯೂ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.