Wednesday, October 5, 2016

ಮೋಟಾರ್ ಸೈಕಲ್ ಡಿಕ್ಕಿ ವಿದ್ಯಾರ್ಥಿನಿಯರಿಬ್ಬರಿಗೆ ಗಾಯ:
     ಮೋಟಾರ್ ಸೈಕಲ್ ವೊಂದು ರಸ್ತೆ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡ ಘಟನೆ ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ಬಳಿ ನಡೆದಿದೆ.  ಈ ದಿನ ದಿನಾಂಕ 5-10-2016 ರಂದು ಬೆಳಿಗ್ಗೆ 9-30 ಗಂಟೆಯ ಸಮಯದಲ್ಲಿ  ಕು: ರಶ್ಮಿ ಮತ್ತು ಕು: ರುಚಿತ ಎಂಬ ಇಬ್ಬರು ವಿದ್ಯಾರ್ಥಿನಿಯರು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ಕಡೆಗೆ ರಸ್ತೆ ದಾಟುತ್ತಿದ್ದಾಗ  ಗುಡ್ಡೆಹೊಸೂರಿನ ಕಡೆಯಿಂದ  ರಸಲ್ ಪುರ ಗ್ರಾಮ, ಬಾಳುಗೋಡು ಕುಶಾಲನಗರದ ನಿವಾಸಿ ನಂದ ಕುಮಾರ್ ಎಂಬಾತ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ವಿದ್ಯಾರ್ಥಿನಿಯರಿಬ್ಬರ ತಲೆ ಹಾಗು ಶರೀರಕ್ಕೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆ ಸಂಬಂಧ ಕುಶಾಲಗರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ಕ್ಷುಲ್ಲಕ ಕಾರಣ ಮಗನ ಮೇಲೆ ತಂದೆಯಿಂದ ಹಲ್ಲೆ:
     ಮದ್ಯಸೇವಿಸಿ ಮನೆಗೆ ಬಂದ ವಿಚಾರವನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ತಂದೆ ತನ್ನ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ವಿರಾಜಪೇಟೆ ನಗರದ ನೆಹರು ನಗರದಲ್ಲಿ ನಡೆದಿದೆ.  ದಿನಾಂಕ 4-10-2016 ರಂದು ನೆಹರುನಗರದ  ನಿವಾಸಿ ಎ.ಕೆ. ಪೌಲೋಸ್ ಎಂಬವರು ಕೂಲಿ ಕೆಲಸ ಮುಗಿಸಿ ರಾತ್ರಿ 8-45 ಗಂಟೆಗೆ ಮನೆಯಲ್ಲಿ ಇರುವಾಗ್ಗೆ  ಅವರ ತಂದೆ ಥೋಮಸ್ ಎಂಬವರು ಮದ್ಯಸೇವಿಸಿ  ಮನೆಗೆ ಬಂದಿದ್ದು, ಅದನ್ನು ವಿಚಾರಿಸಿದ ಫಿರ್ಯಾದಿಯವರೊಂದಿಗೆ ಜಗಳ ಮಾಡಿದ ತಂದೆ ಥೋಮಸ್ ಏಕಾಏಕಿ ಕತ್ತಿಯಿಂದ ಹಲ್ಲೆ ನಡೆಸಿ ಕಾಲಿನ ಮಂಡಿ ಮತ್ತು ತಲೆಯ ಹಿಂಭಾಗಕ್ಕೆ ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.