Thursday, October 6, 2016

ಅಕ್ರಮ ಬೀಟಿ ಮರ ಪತ್ತೆ:
      ಅಕ್ರಮ ಬೀಟಿ ಮರಗಳನ್ನು ಸಾಗಾಟ ಮಾಡಲು ಸಂಗ್ರಹಿಸಿರು ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪಿ. ರಾಜೇಂದ್ರ ಪ್ರಸಾದ್ , ಐಪಿಎಸ್, ರವರ ಮಾರ್ಗದರ್ಶನದ ಮೇರೆಗೆ ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪನವರು ಹಾಗು ಸಿಬ್ಬಂದಿಗಳು ದಿನಾಂಕ 5-10-2016 ರಂದು ವಿರಾಜಪೇಟೆ ತಾಲೋಕು ಹುದಿಕೇರಿ ಗ್ರಾಮದ ತೀತೀರ ಸೋಮಯ್ಯ ಎಂಬವರ ಕಾಫಿ ತೋಟದಲ್ಲಿ ದಾಳಿ ನಡೆಸಿ ಬೇಗೂರು ಗ್ರಾಮದ ಬೆಂಜಂಡ ಕಾಶಿ ಮತ್ತು ಕೇರಳದ ಮರ ವ್ಯಾಪಾರಿ ಪ್ರಕಾಶ್ ಎಂಬವರು ಬೀಟಿ ಮತ್ತು ಹಸಲು ಮರದ ನಾಟಾಗಳನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುವ ಉದ್ದೇಶದಿಂದ ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ 34 ಬೀಟಿ ಮರದ ನಾಟಾಗಳನ್ನು ಮತ್ತು 16 ಹಲಸು ಮರದ ನಾಟಾಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದು, ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
           ಕಾರ್ಯಾಚರಣೆಯಲ್ಲಿ ಡಿಸಿಐಬಿ  ನಿರೀಕ್ಷಕ ಶ್ರೀ ಬಿ.ಆರ್. ಲಿಂಗಪ್ಪ, ಎಎಸ್ಐ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್ ಮತ್ತು ಕೆ.ಆರ್. ವಸಂತ ರವರು ಭಾಗವಹಿಸಿದ್ದರು.
         ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಅರಣ್ಯ ಸಂಪತ್ತಿನ ಅಕ್ರಮ ಕಳ್ಳಸಾಗಾಣಿಕಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದು ಸಾರ್ವಜನಿಕರು ಈ ಬಗ್ಗೆ  ಮಾಹಿತಿಗಳನ್ನು ನೀಡಿ ಸಹಕರಿಸಬೇಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮನವಿ ಮಾಡಿದ್ದಾರೆ.
 
ಮಾರುತಿ ವ್ಯಾನ್ ಅವಘಡ ಒಬ್ಬರಿಗೆ ಗಾಯ:
      ಮಾರುತಿ ವ್ಯಾನ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಒಬ್ಬಾತ ಗಾಯಗೊಂಡ ಘಟನೆ ನಡೆದಿದೆ.  ದಿನಾಂಕ 5-10-2016 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಗುಂಡೂರಾವ್ ಕಾಂಪೌಂಡ್ ನಿವಾಸಿ ಅಕ್ರಂ, ಅಸ್ಲಂ ರವರು ಅಪ್ಸರ್ ಎಂಬವರು ಚಾಲನೆ ಮಾಡುತ್ತಿದ್ದ ಮಾರುತಿ ವ್ಯಾನ್ ನಲ್ಲಿ ಸೋಮವಾರಪೇಟೆ ಕಡೆಯಿಂದ ಶನಿವಾರಸಂತೆ ಕಡೆಗೆ ಪ್ರಯಾಣಿಸುತ್ತಿದ್ದಾಗ ಗೋಪಾಲಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಚಾಲಕ ಅಪ್ಸರ್ ರವರು ವಾಹನದ ನಿಯಂತ್ರಣ ಕಳೆದುಕೊಂಡ ಕಾರಣ ವಾಹನವು ರಸ್ತೆಯಲ್ಲಿ ಮಗುಚಿ ಬಿದ್ದು, ಸದರಿ ವಾಹನದಲ್ಲಿದ್ದ ಅಸ್ಲಂ ರವರು ಗಾಯಗೊಂಡಿದ್ದಾರೆ.  ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಜಾಗದ ವಿಚಾರ, ಕೊಲೆ ಬೆದರಿಕೆ:
     ಜಾಗದ ವಿಚಾರದಲ್ಲಿ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.  ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ಬಳಿಯ ಮಳ್ಳೇಪುರ ಗ್ರಾಮದ ಫಜಿಲಾ ಬಾನು ಹಾಗು ನೆರೆಯ ಅಬ್ದುಲ್ ರಬ್ ಎಂಬವರಿಗೆ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ದಿನಾಂಕ 3-9-2016 ರಂದು ಅಬ್ದುಲ್ ರಬ್ ರವರು ಈ ವಿಚಾರದಲ್ಲಿ ಫಜಿಲಾ ಬಾನುರವರೊಂದಿಗೆ ಜಗಳವಾಡಿ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.