Tuesday, October 4, 2016

 ಪೊಲೀಸ್‌ ಅಧೀಕ್ಷಕರಿಂದ ಕಾರಾಗೃಹ ಪರಿಶೀಲನೆ

                ಮಡಿಕೇರಿಯಜಿಲ್ಲಾ ಕಾರಾಗೃಹದಲ್ಲಿರುವ ಬಂಧಿಗಳು ಜೈಲಿನೊಳಗೆ ಕಾನೂನು ಬಾಹಿರವಾಗಿ ನಿಷೇಧಿತ ವಸ್ತುಗಳಾದ ಮೋಬೈಲ್‌ ಫೋನ್‌ಗಳನ್ನು ಬಳಸಿ ಅಪರಾಧ ಕೃತ್ಯಗಳಿಗೆ ಸಂಚು ಮಾಡುತ್ತಿರುವುದಾಗಿಯೂ ಅಲ್ಲದೆ ಅಕ್ರಮವಾಗಿ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತಿದ್ದು ಈ ಬಗ್ಗೆ ಕಾರಾಗೃಹ ಅಧೀಕ್ಷರವರಿಗೆ ಕಾರಾಗೃಹದಲ್ಲಿರುವ ಬಂಧಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದಾಗ ಕಾರಾಗೃಹ ಅಧೀಕ್ಷಕರು ಜಿಲ್ಲಾ ಕಾರಾಗೃಹದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಬಂಧಿಗಳಿದ್ದು ಈ ಕಾರ್ಯಾಚರಣೆಗೆ ಸಿಬ್ಬಂದಿಗಳ ಕೊರತೆಯಿರುವುದರಿಂದ ಪೊಲೀಸ್‌ ಇಲಾಖೆಯ ಸಹಕಾರ ಕೋರಿದ ಮೇರೆಗೆ ದಿನಾಂಕ 03/10/2016ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರು ಪೊಲೀಸ್‌ ಅಧಿಕಾರಿಗಳೊಂದಿಗೆ ಕರ್ಣಂಗೇರಿಯ ಜಿಲ್ಲಾ ಕಾರಾಗೃಹಕ್ಕೆ ದಿಢೀರ್‌ ಧಾಳಿ ನಡೆಸಿ ಕಾರಾಗೃಹವನ್ನು ಪರಿಶೀಲಿಸಿದರು, ಪರಿಶೀಲನೆಯ ವೇಳೆಯಲ್ಲಿ ಕಾರಾಗೃಹದಲ್ಲಿರುವ ಬಂಧಿಗಳು ಕಾರಾಗೃಹದ ನಿಯಮಗಳನ್ನು ಮೀರಿ ಅಕ್ರಮವಾಗಿ ಕಾರಾಗೃಹದ ಸ್ನಾನ ಗೃಹ, ಶೌಚಗೃಹಗಳಲ್ಲಿ ಬಚ್ಚಿಟ್ಟಿದ್ದ 6 ಮೊಬೈಲ್‌ ಫೋನ್‌ಗಳು, 4 ಮೊಬೈಲ್‌ ಚಾರ್ಜರ್, 2 ಮೊಬೈಲ್ ಬ್ಯಾಟರಿಗಳು, ಆಕ್ಸಾ ಬ್ಲೇಡ್ ಮತ್ತು ಚಾಕು ಮುಂತಾದ ಸಣ್ಣ ಆಯುಧಗಳು ಮತ್ತು ವಿವಿಧ ಬಂಧಿಗಳ ಬಳಿ ಸುಮಾರು ರೂ.31,655/- ಗಳಷ್ಟು ನಗದು ಹಣ ಪತ್ತೆಯಾಗಿವೆ. ಈ ಬಗ್ಗೆ ಕಾರಾಗೃಹ ಅಧೀಕ್ಷಕರಾದ ಸಂಜಯ್‌ ಜಿತ್ತಿಯವರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮೊ.ಸಂ.240/2016 ವಿಧಿ 424 ಐಪಿಸಿ ಮತ್ತು 45 ಪ್ರಿಸನರ್ಸ್ ಕಾಯ್ದೆ ಹಾಗೂ 4 ಮತ್ತು 25(ಬಿ) ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

               ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತಹಸೀಲ್ದಾರರಾದ ಎ.ಎ.ಕುಸುಮ ಮತ್ತು ಪೊಲೀಸ್‌ ಅಧಿಕಾರಿಗಳಾದ ಮಡಿಕೇರಿ ಡಿಎಸ್‌ಪಿ ಎಸ್‌.ಬಿ.ಛಬ್ಬಿ, ಮಡಿಕೇರಿ ಗ್ರಾಮಾಂತರ ವತ್ತ ನಿರೀಕ್ಷಕ ಬಿ.ಆರ್.ಪ್ರದೀಪ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ, ಡಿಸಿಐಬಿ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪ, ಡಿಎಆರ್‌ನ ನಿರೀಕ್ಷಕರಾದ ತಿಮ್ಮಪ್ಪ ಗೌಡ, ನಗರ ಠಾಣಾ ಪಿಎಸ್‌ಐ ಎಂ.ಎಂ.ಭರತ್, ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸ್‌ಐಗಳಾದ ಶಿವಪ್ರಕಾಶ್, ಹೆಚ್‌.ಎಸ್.ಭೋಜಪ್ಪ, ಸಂಚಾರಿ ಠಾಣೆ ಪಿಎಸ್‌ಐ ಸಂತೋಷ್ ಕಶ್ಯಪ್‌ ಅಲ್ಲದೆ ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿಗಳು ಹಾಗೂ ಮಡಿಕೇರಿ ನಗರ ಠಾಣೇ, ಮಡಿಕೇರಿ ಗ್ರಾಮಾಂತರ ಠಾಣೇ, ಡಿಸಿಐಬಿ, ಡಿಎಸ್‌ಬಿ, ಎ.ಎನ್‌.ಎಸ್‌ ಮತ್ತು ಕೆಎಸ್‌ಆರ್‌ಪಿ ಇತರೆ ಪೊಲೀಸ್‌ ಸಿಬ್ಬಂದಿಗಳು ಧಾಳಿಯಲ್ಲಿ ಪಾಲ್ಗೊಂಡಿದ್ದರು.

                    ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಹಲವು ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದಾಗಿ ಇತ್ತೀಚೆಗೆ ಕೆಲವು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕಾರಾಗೃಹಕ್ಕೂ ದಿಢೀರ್‌ ಧಾಳಿ ನಡೆಸಿ ಪರಿಶೀಲಿಸಿರುವುದಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮುಂದಕ್ಕೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದವಾಗದಂತೆ ಕಾರಾಗೃಹಕ್ಕೆ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿಯೂ ಅವರು ತಿಳಿಸಿದ್ದಾರೆ.


 ಬೈಕ್‌ಗೆ ಕಾರು ಡಿಕ್ಕಿ
                     ಬೈಕ್‌ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರನಿಗೆ ಗಾಯಗಳಾದ ಘಟನೆ ಶನಿವಾರಸಂತೆ ಬಳಿಯ ಎಡೆಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 03/10/2016ರಂದು ಕೊಡ್ಲಿಪೇಟೆ ಬಳಿಯ ಬೆಂಬಳೂರು ನಿವಾಸಿ ಲತೇಶ್‌ ಎಂಬವರು ಅವರ ಕೆಎ-10-ಜೆ-5515ರ ಮೋಟಾರು ಬೈಕಿನಲ್ಲಿ ಶನಿವಾರಸಂತೆಯಿಂದ ಚಂಗಡಹಳ್ಳಿಗೆ ಹೋಗುತ್ತಿರುವಾಗ ಎಡೆಹಳ್ಳಿಯ ಬಳಿ ಬೈಕನ್ನು ರಸ್ತೆ ಬದಿ ನಿಲ್ಲಿಸುತ್ತಿರುವ ಸಮಯದಲ್ಲಿ ಹಿಂಬದಿಯಿಂದ ಕೆಎ05-ಪಿ-6220ರ ಮಾರುತಿ ಓಮ್ನಿ ವ್ಯಾನನ್ನು ಅದರ ಚಾಲಕ ಸುರೇಶ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲತೇಶ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಲತೇಶ್‌ರವರ ಕೈಮೂಳೆ ಮುರಿದಿದ್ದು ಬೈಕಿಗೂ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



ಅಕ್ರಮ ಮದ್ಯ ಸಾಗಾಟ ಪತ್ತೆ
                     ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 03/10/2016ರಂದು ಬಾಳಾಜಿ ಗ್ರಾಮದ ನಿವಾಸಿ ಕೆ.ಎಸ್.ಗಿರೀಶ್‌ ಎಂಬವರು ಅವರ ಕೆಎ-04-ಎಂಬಿ-7268ರ ಕಾರಿನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ 90 ಎಂ.ಎಲ್‌ನ ಸುಮಾರು 96 ಪ್ಯಾಕೆಟುಗಳಷ್ಟು ಮದ್ಯವನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊನ್ನಂಪೇಟೆ ಠಾಣಾ ಪಿಎಸ್‌ಐ ಎಸ್‌.ಎನ್‌.ಜಯರಾಮ್‌ರವರು ಆರೋಪಿ ಗಿರೀಶ್‌ರವರನ್ನು ಬಂಧಿಸಿ, ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.