Friday, November 25, 2016

ಕೊಡಗು ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ, ದರೋಡೆಯಾದ 12 ಗಂಟೆಯಲ್ಲೇ  ಮಾಲು ಸಮೇತ ಆರೋಪಿತರ ಬಂಧನ          
 
         ಕೊಡಗು ಜಿಲ್ಲೆ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 147/16 ಗೆ ಸಂಬಂಧಿಸಿದಂತೆ, ದಿನಾಂಕ 24-11-2016 ರಂದು ಬೆಳಗ್ಗೆ ಹೊಸಪಟ್ನ ಗ್ರಾಮದ ಹೆಚ್. ಬಿ ಶಿವಕುಮಾರ್ ರವರ ಮನೆಯಲ್ಲಿ ಯಾರೋ ಅಪರಿಚಿತರು ಡಕಾಯಿತಿ ಮಾಡಿದ ಬಗ್ಗೆ ಮಾಹಿತಿ ಬಂದ ಕೂಡಲೇ ಸಿಪಿಐ ಕುಶಾಲನಗರ ಹಾಗೂ ಪಿಎಸ್ಐ ಕುಶಾಲನಗರ ಗ್ರಾಮಾಂತರ, ಪಿಎಸ್ಐ ಸುಂಟಿಕೊಪ್ಪ, ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಯವರು ಡಿವೈಎಸ್ ಪಿ ಕುಶಾಲನಗರರವರ ನೇತೃತ್ವದಲ್ಲಿ ಪೊಲೀಸ್ ಬಾತ್ಮೀದಾರರ ಸಹಾಯದೊಂದಿಗೆ ರಾತ್ರಿ 8.30 ಸಮಯಕ್ಕೆ ನಾಲ್ವರು ಆರೋಪಿಗಳನ್ನು ಪತ್ತೆ ಮಾಡಿದ್ದು ಸದರಿಯವರ ವಿವರ ಈ ಕೆಳಕಂಡಂತೆ ಇರುತ್ತದೆ.

1) ಅಬ್ದುಲ್ ರೆಹಮಾನ್ @ ಜಿಯಾ ತಂದೆ ಮೊಹಮ್ಮದ್, 24 ವರ್ಷ, ಲಾರಿ ಚಾಲಕ, ಸರ್ಕಾರಿ ಕಾಲೇಜ್ ಪಕ್ಕ, ಗಾಂಧಿ ಪಾರ್ಕ್, ಉಪ್ಪಿನಂಗಡಿ, ದಕ್ಷಿಣ ಕನ್ನಡ ಜಿಲ್ಲೆ.

2) ಮೊಹಮ್ಮದ್ ಹನೀಫ್, ತಂದೆ ಲೇ: ಉಮ್ಮರಬ್ಬಿ, 28 ವರ್ಷ, ಗುಜರಿ ವ್ಯಾಪಾರ, ಸುಂದರಿ ಬಾಗ್, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 19 ಕಳವು, ಮನೆಗಳವು, ಕೊಲೆ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

 3) ಮೊಹಮ್ಮದ್ ಫಯಾಜ್ ತಂದೆ ಅಬುಬಕರ್, 28 ವರ್ಷ, ಧಕ್ಕೆ ಮಾರ್ಕೆಟ್ನಲ್ಲಿ ಮೀನು ವ್ಯಾಪಾರ, ಸಬಾಸ್ಟೀನ್ ಕಾಲೇಜ್ ಹಿಂಬಾಗ, ತೊಕ್ಕೊಟ್ಟು, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 13 ಕೊಲೆ, ಕಳವು, ಡಕಾಯಿತಿ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

 4) ಜಾಫರ್ ಸಾಧಿಕ್, ತಂದೆ ಕೆ. ಎಸ್. ಅಬ್ಬಾಸ್, 25 ವರ್ಷ, ಟೈಲರ ಕೆಲಸ, ಫ್ಯಾಷನ್ ಪ್ಯಾಲೇಸ್, ಕುನಿಲ್ ಸೆಂಟರ್, ಹಂಪನಕಟ್ಟೆ ಮುಖ್ಯರಸ್ತೆ, ಮಂಗಳೂರು, ವಾಸ: ಕೆ. ಎಸ್. ಮಂಜಿಲ್, ಟಿ. ಸಿ.ರೋಡ್, ಅಕ್ಕರೆಕೆರೆ, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

          ಮೇಲ್ಕಂಡ ಆರೋಪಿಗಳನ್ನು ವಿಚಾರಣೆ ಮಾಡಲಾಗಿ ದಿನಾಂಕ 23-11-2016 ರಂದು ಮೇಲ್ಕಂಡ ಆರೋಪಿಗಳು ಇನ್ನಿತರೆ ಆರೋಪಿಗಳಾದ ನಿಜಾಮ್ @ ನಿಜ್ಜು, ಮಜೀದ್, ಸಲಿಯಾತ್ @ ಸಲಿತ್, ಜಲಾಲ್ ರವರೊಂದಿಗೆ ಸೇರಿ ಇನ್ನೋವಾ ಕಾರನ್ನು ತಮಗೆ ಪರಿಚಯವಿರುವ ಅಲಿ ರವರ ಸಹಾಯದಿಂದ ಬಾಡಿಗೆ ಪಡೆದು ಮಂಗಳೂರಿನಿಂದ ಮಡಿಕೇರಿಗೆ ಬಂದು ಮಡಿಕೇರಿಯ ಆಟೋಚಾಲಕ ಕೃಷ್ಣ ನನ್ನು ಬೇಟಿ ಮಾಡಿ ಎಲ್ಲರೂ ಒಟ್ಟಿಗೆ ಸೇರಿ ಸಂಚು ರೂಪಿಸಿ ರಾತ್ರಿ 11 ಗಂಟೆಯವರೆಗೆ ಮಡಿಕೇರಿಯಲ್ಲಿ ಸುತ್ತಾಡಿಸಿದ ನಂತರ ಕೃಷ್ಣ ಎಲ್ಲರನ್ನು ಕುಶಾಲನಗರಕ್ಕೆ ಕರೆತಂದು ಯಾವುದೋ ಒಂದು ರೂಮಿಗೆ ಕರೆತಂದು ವಿಶ್ರಾಂತಿ ಪಡೆಯುವಂತೆ ರಾತ್ರಿ ಊಟವನ್ನು ರೂಮಿಗೆ ತಂದು ಕೊಟ್ಟಿದ್ದಾಗಿ ತಿಳಿದು ಬಂದಿರುತ್ತದೆ. ನಂತರ ಬೆಳಿಗ್ಗೆ 5 ಗಂಟೆಗೆ ಮಡಿಕೇರಿ ಆಟೋಚಾಲಕ ಕೃಷ್ಣ ಕುಶಾಲನಗರಕ್ಕೆ ಬಂದು ಎಲ್ಲರನ್ನು ಎಚ್ಚರಗೊಳಿಸಿ ಎಲ್ಲರೂ ಸೇರಿ ಇನ್ನೊವಾ ಕಾರಿನಲ್ಲಿ ಹೊರಟು ಮಾರ್ಗ ಮಧ್ಯೆ ಇನ್ನೊವಾ ಕಾರಿನ ನಂಬರ್ ಪ್ಲೇಟನ್ನು ಬದಲಿಸಿ, ಹೊಸಪಟ್ನದ ಕಡೆಗೆ ಹೊರಟು ಶಿವಕುಮಾರ್ ರವರ ಮನೆಯನ್ನು ತಲುಪಿದ್ದು, ಪೂರ್ವನಿಯೋಜಿತವಾದಂತೆ ಮನೆಯ ಬಾಗಿಲು ತೆರೆಯುವವರೆಗೆ ಮನೆಯ ಬಳಿಯ ಕಾಫಿ ತೋಟದಲ್ಲಿ ಕಾದು ಕುಳಿತು, ಇವರಲ್ಲಿ ಹನೀಫ್ ಹಾಗೂ ಜಲಾಲ್ ರವರು ಮಂಕಿ ಕ್ಯಾಪ್ ಧರಿಸಿದ್ದರು.
          ವಿಶ್ವನಾಥ್ ರವರು ಶಿವಕುಮಾರ್ ರವರ ಮನೆಯ ಮುಂಬಾಗಿಲಿನ ಬೆಲ್ ಮಾಡಿದ್ದು, ಆಗ ಶಿವಕುಮಾರ್ ರವರು ಮನೆಯ ಬಾಗಿಲು ತೆರೆದು ವಿಶ್ವನಾಥ್ ರವರು ಒಳಗೆ ಪ್ರವೇಶಿಸುತ್ತಿದ್ದಂತೆ, ಶಿವಕುಮಾರ್ ರವರು ಅವರಿಗೆ ಹೂವನ್ನು ತರಲು ಹೇಳಿದಾಗ ವಿಶ್ವನಾಥ್ ರವರು ಹಿಂಬದಿಯ ಬಾಗಿಲನ್ನು ತರೆದು ಮನೆಯ ಪಕ್ಕದಲ್ಲಿರುವ ಹೂಗಿಡದಿಂದ ಹೂ ತರಲು ಹೋದಾಗ, ಎಲ್ಲಾ ಆರೋಪಿಗಳು ವಿಶ್ವನಾಥ್ ರವರಿಗೆ ಲಾಂಗ್ ತೋರಿಸಿ ಮುಂದಿನ ಬಾಗಿಲಿಗೆ ಬೀಗ ಹಾಕಿ ವಿಶ್ವನಾಥ್ ರವರೊಂದಿಗೆ ಹಿಂಬದಿಯ ಬಾಗಿಲಿನಿಂದ ಒಳಪ್ರವೇಶಿಸಿ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ ಅವರ ಕೈ ಕಾಲುಗಳನ್ನು ಬಟ್ಟೆ ಹಾಗೂ ಪ್ಯಾಕಿಂಗ್ ಟೇಪ್ ನಿಂದ ಕಟ್ಟಿಹಾಕಿ ತಮ್ಮೊಂದಿಗಿದ್ದ ಚಾಕುವಿನಿಂದ ಇರಿದು ಮನೆಯ ಹಾಲ್ ನಲ್ಲಿ ನೆಲದ ಮೇಲೆ ಮಲಗಿಸಿದ್ದು, ಮನೆಯ ದೇವರ ಕೋಣೆಯಿಂದ ಹಾಲ್ ಗೆ ಬರುತ್ತಿದ್ದ ಶಿವಕುಮಾರ್ ರವರಿಗೆ ಲಾಂಗ್ ತೋರಿಸಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ಬಟ್ಟೆ ಹಾಗೂ ಪ್ಯಾಕಿಂಗ್ ಟೇಪ್ ನಿಂದ ಕಟ್ಟಿಹಾಕಿದ್ದಾರೆ. ಮುಂಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ ಶಿವಕುಮಾರ್ ರವರ ಸ್ನೇಹಿತರಾದ ಈಶ್ವರ್ ರವರು ಹಿಂಬದಿಯ ಬಾಗಿಲಿನ ಬಳಿ ಬಂದವರನ್ನು ಚಾಕುವಿನಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ ಹಿಂಬದಿಯ ಬಾಗಿಲಿನ ಬಳಿ ಕೂರಿಸಿ, ಮನೆಯ ಲಾಕರ್ ಹಾಗೂ ಇನ್ನಿತರೆ ಕಪಾಟುಗಳನ್ನು ತಡಕಾಡಿ ಸಿಕ್ಕ ಸಣ್ಣ ಪುಟ್ಟ ಚಿನ್ನಾಭರಣಗಳನ್ನು ಜೇಬಿನಲ್ಲಿ ಹಾಕಿಕೊಂಡಿದ್ದು, ಉಳಿದಂತೆ ಕೃಷ್ಣ ಹಾಗೂ ನಿಜಾಮ್ ತಮ್ಮೊಂದಿಗೆ ತಂದಿದ್ದ ಬ್ಯಾಗ್ ನಲ್ಲಿ ಮನೆಯಲ್ಲಿದ್ದ 40 ಲಕ್ಷ ಬೆಲೆಬಾಳುವ ವಜ್ರ, ಚಿನ್ನಾಭರಣ, ಬೆಳ್ಳಿ ನಾಣ್ಯಗಳು, ಚಿನ್ನದ ನಾಣ್ಯಗಳನ್ನು ಒಂದು ಕ್ಯಾರಿಬ್ಯಾಗ್ ನಲ್ಲಿ ತುಂಬಿಕೊಂಡು ಶಿವಕುಮಾರ್ ರವರ ರಿವಾಲ್ವರ್ ನೊಂದಿಗೆ ಹಿಂಬದಿಯ ಬಾಗಿಲಿನ ಮೂಲಕ ರಸ್ತೆ ಪ್ರವೇಶಿಸುತ್ತಿದ್ದಂತೆ, ಹಿಂಬದಿಯ ಬಾಗಿಲ ಬಳಿ ಕೂತಿದ್ದ ಈಶ್ವರ್ ರವರು ಬೊಬ್ಬೆ ಹಾಕಿದ್ದು ಎಲ್ಲರೂ ಗಾಬರಿಯಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದು, ಅವರಲ್ಲಿ ಆರೋಪಿಗಳಾದ ಕೃಷ್ಣ, ನಿಜಾಮ್ @ ನಿಜ್ಜು, ಮಜೀದ್, ಸಲಿಯಾತ್ @ ಸಲಿತ್, ಜಲಾಲ್ ರವರುಗಳು ಕಳವು ಮಾಡಿದ ಆಭರಣಗಳಿದ್ದ ಬ್ಯಾಗಿನೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿರುತ್ತದೆ.
 ಮೇಲ್ಕಂಡ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
 1) 42,700-00 ರೂ ನಗದು, 2) 4 ಚಿನ್ನದ ಉಂಗುರ, 3) 2 ಚಿನ್ನದ ಚೈನು, 4) 1 ನೆಕ್ಲೇಸ್, 5) 1 ಕರಿಮಣಿ ಪದಕ,            6) 2 ಚಿನ್ನದ ಬಳೆಗಳು, 7) ಕಪ್ಪು ಮಣಿಗಳುಳ್ಳ ಬಳೆ, 8) ಪರ್ಫ್ಯೂಮ್ ಬಾಟಲ್, 9) ಸಿಗಾರ್ ಲೈಟ್, 10) ಒಂದು ರಿವಾಲ್ವರ್, 11) ಎರಡು ಲಾಂಗ್

       ಸದರಿ ಆರೋಪಿತರುಗಳು ಇನ್ನೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಕೂಲಂಕುಷವಾಗಿ ವಿಚಾರಣೆಯಾಗಬೇಕಾಗಿರವುದರಿಂದ ಸದರಿ ಪ್ರಕರಣದ ತನಿಖೆಯನ್ನು ಸಿಪಿಐ ಕುಶಾಲನಗರರವರು ಕೈಗೊಂಡಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಮದ್ಯಪಾನದ ಅಮಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದಲ್ಲಿ ನಡೆದಿದೆ. ಕೆ. ಬಾಡಗ ಗ್ರಾಮದ ಮುಕ್ಕಾಟೀರ ಬಿದ್ದಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ 27 ವರ್ಷ ಪ್ರಾಯದ ಗಣೇಶ ಎಂಬಾತ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಊಟದ ವಿಚಾರದಲ್ಲಿ ಪತ್ನಿಜೊತೆ ಜಗಳ ಮಾಡಿಕೊಂಡಿದ್ದು, ರಾತ್ರಿ ಸಮಯದಲ್ಲಿ ಮನೆಯ ಹತ್ತಿರದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ

     ಸಾಲ ಮರುಪಾವತಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ಸೋಮವಾರಪೇಟೆ ತಾಲೋಕು ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ ಶ್ರೀಮತಿ ಲಲಿತ ಎಂಬವರ ಪತಿ ಲಿಂಗರಾಜು ಎಂಬವರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಾನು ಪಡೆದ ಸಾಲದ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸದರಿಯವರ ಪತ್ನಿ ಲಲಿತರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೋದಾಮಿನಿಂದ ಕಾಫಿ ಕಳ್ಳತನ

    ಗೋದಾಮಿನಲ್ಲಿ ಶೇಖರಿಸಿಟ್ಟ ಕಾಫಿ ಹಾಗು ಪಂಪ್ ಹೌಸ್ ಬಳಿ ಇಟ್ಟ ಬ್ಯಾಟರಿ ಕಳ್ಳತನವಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಕೆ.ಎಂ. ತಿಮ್ಮಯ್ಯ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಅಳವಡಿಸಿದ 12 ವೋಲ್ಟ್ ನ ಬ್ಯಾಟರಿಯನ್ನು ದಿನಾಂಕ 25-9-2016 ರಂದು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ನಂತರ ದಿನಾಂಕ 23-11-2016 ರಂದು ಕೆ.ಎಂ. ತಿಮ್ಮಯ್ಯ ಎಂಬವರಿಗೆ ಸೇರಿದ ಕಾಫಿ ಗೋದಾಮಿನಿಂದ 34 ಬ್ಯಾಗ್ ಕಾಫಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಫಿರ್ಯಾದಿ ಕೆ.ಎಂ. ತಿಮ್ಮಯ್ಯ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.