Wednesday, December 7, 2016

ಅಕ್ರಮ ಮರಳು ಸಾಗಾಟ
                        ದಿನಾಂಕ 06/12/2016ರ ಮುಂಜಾನೆ ಮಡಿಕೇರಿ ಸಮೀಪದ ಐಕೊಳ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್‌.ಪ್ರದೀಪ್‌ ಮತ್ತು ಮಡಿಕೇರಿ ಗ್ರಾಮಾಂತರ ಪಿಎಸ್‌ಐ ಶಿವಪ್ರಕಾಶ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಮೂರ್ನಾಡು ಕೊಂಡಂಗೇರಿ ರಸ್ತೆಯಲ್ಲಿ ಐಕೊಳ ಕಡೆಯಿಂದ ಕೆಎ-12-ಎ-4716ರ ಮಿನಿಲಾರಿ ಬರುತ್ತಿದ್ದು ಅದನ್ನು ತಡೆದಾಗ ಅದರ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಓಡಿ ಹೋಗಿದ್ದು, ಸಿಪಿಐ ಮತ್ತು ಪಿಎಸ್‌ಐರವರುಗಳು ಹೋಗಿ ನೋಡಿದಾಗ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದು ಕಂಡು ಬಂದಿರುವುದಾಗಿ ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವ್ಯಕ್ತಿಯ ಸಾವು
                        ದಿನಾಂಕ 06/12/2016ರಂದು ಮೂರ್ನಾಡು ನಿವಾಸಿ ಸೀನ ಎಂಬವರು ಮೂರ್ನಾಡಿನ ಕೂರ್ಗ್‌ ಮೆಡಿಕಲ್‌ ಅಂಗಡಿಯ ಮುಂದೆ ಬಿದ್ದು ಮೃತಪಟ್ಟಿದ್ದು ಮೃತ ಸೀನರವರು ಅತೀವ ಮದ್ಯ ವ್ಯಸನಿಯಾಗಿದ್ದು ಮೂರ್ಛೆರೋಗ ಇರುವ ಕಾರಣ ಮೃತರಾಗಿರಬಹುದಾಗಿ ಸೀನರವರ ಮಗಳು ಅನಿತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರಿಮೆಣಸು ಕಳವು 
                     ದಿನಾಂಕ 20/10/2016ರಂದು ಎಮ್ಮೆಮಾಡು ನಿವಾಸಿ ಕೆ.ಪಿವಿನೋದ್‌ ಎಂಬವರು ತೋಟದ ಉಗ್ರಾಣದಲ್ಲಿಟ್ಟಿದ್ದ ಕಾಫಿ ಹಾಗೂ ಕರಿಮೆಣಸನ್ನು ಮಾರಾಟ ಮಾಡಲು ಉಗ್ರಾಣಕ್ಕೆ ಹೋದಾಗ ಉಗ್ರಾಣದ ಬಾಗಿಲಿನ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಿದಾಗ 4 ಚೀಲ ಕಾಫಿ ಮತ್ತು 1 ಚೀಲ ಕರಿಮೆಣಸು ಕಳುವಾಗಿದ್ದು ಕಂಡು ಬಂದಿದ್ದು ಪೊಲೀಸ್‌ ದೂರು ನೀಡಿರುವುದಿಲ್ಲ. ದಿನಾಂಕ 05/12/2016ರಂದು ಕುಡಿಯರ ಅರುಣ ಮತ್ತು ಅಶೋಕ ಎಂಬವರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬೇರೆ ಪ್ರಕರಣ ಸಂಬಂಧ ವಿಚಾರಣೆ ಮಾಡುವ ಸಂದರ್ಭದಲ್ಲಿ ಕೆ.ಪಿ.ವಿನೋದ್‌ರವರ ಉಗ್ರಾಣದಿಂದ ಕಾಫಿ ಹಾಗೂ ಕರಿಮೆಣಸು ಕಳವು ಮಾಡಿರುವ ಪ್ರಕರಣವನ್ನು ಒಪ್ಪಿಕೊಂಡಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರ ಕಳವು 
                    ದಿನಾಂಕ 03/12/2016ರಂದು ಪುಲಿಯೇರಿ ನಿವಾಸಿ ಹಂಚಿಬೆಟ್ಟ ತೋಟದ ಮಾಲೀಕ ವಿವಿಯನ್‌ ರಾಡ್ರಿಗಸ್‌ರವರು ಮೈಸೂರಿಗೆ ಹೋಗಿದ್ದು ದಿನಾಂಕ 05/12/2016ರಂದು ಮರಳಿ ಮನೆಗೆ ಬಂದಾಗ ತೋಟದ ಕೆಲಸಗಾರ ಸುಬ್ರಮಣಿರವರು ತೋಟದಲ್ಲಿ ಒಣಗಿ ನಿಂತಿದ್ದ ಸುಮಾರು 45,000 ರೂಪಾಯಿ ಬೆಲೆಯ ಬೀಟೆ ಮರವನ್ನು ಯಾರೋ ಕಳವು ಮಾಡಿರುವ ಬಗ್ಗೆ ತಿಳಿಸಿದ್ದು, ವಿವಯನ್‌ ರಾಡ್ರಿಗಸ್‌ರವರು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                     ದಿನಾಂಕ 05/12/2016ರಂದು ಸೋಮವಾರಪೇಟೆ ಬಳಿಯ ತಲ್ತರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಆನಂದ ಎಂಬವರು ರಾತ್ರಿ ವೇಳೆ ವಿಷ ಸೇವಿಸಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತರಾಗಿದ್ದು, ಮೃತ ಆನಂದರವರು ಅತೀವ ಮದ್ಯವ್ಯಸನಿಯಾಗಿದ್ದು ಎದೆ ಣೊಡವಿನಿಮದ ಬಳಲುತ್ತಿದ್ದು ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಸಾಗಾಟ
                ದಿನಾಂಕ 05/12/2016ರಂದು ಬೆಳಗಿನ ಜಾವ ಶನಿವಾರಸಂತೆ ಪಿಎಸ್‌ಐ ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಕೊಡ್ಲಿಪೇಟೆ ಮುಖ್ಯ ರಸ್ತೆಯಲ್ಲಿ ಮಾಗಲು ಗ್ರಾಮದ ಕಡೆಯಿಂದ ಕೆಎ-45-1023ರ ಲಾರಿಯಲ್ಲಿ ಅಕ್ರಮವಾಗಿ ಅನಲ್‌ತಾರಿ ಮತ್ತು ಗೇರು ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಮೈಕಲ್‌, ಆದರ್ಶ ಮತ್ತು ತೀರ್ಥರಾಜ ಎಂಬವರನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಲೆಯಲ್ಲಿ ಹಣ ಕಳವು
                    ದಿನಾಂಕ 05/12/2016ರಿಂದ 06/12/2016ರ ನಡುವೆ ರಾತ್ರಿ ವೇಳೆ ಯಾರೋ ಕಳ್ಳರು ಮಾದಾಪುರದ ಸರ್ಕಾರಿ ಪ್ರೌಢ ಶಾಲೆಯ ಬೀಗ ಮುರಿದು ಮುಖ್ಯ ಶಿಕ್ಷಕರ ಕಚೇರಿಯನ್ನು ಪ್ರವೇಶಿಸಿ ಅಲ್ಲಿದ್ದ ಎರಡು ಆಲ್ಮೆರಾಗಳ ಬೀಗ ಒಡೆದು ಒಟ್ಟು ರೂ 2,500/- ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ  


ಶಾಲೆಯಲ್ಲಿ ಹಣ ಕಳವು
                  ದಿನಾಂಕ 05/12/2016ರಿಂದ 06/12/2016ರ ನಡುವೆ ರಾತ್ರಿ ವೇಳೆ ಯಾರೋ ಕಳ್ಳರು ಮಾದಾಪುರದ ಸರ್ಕಾರಿಮಾದರಿ ಪ್ರಾಥಮಿಕ ಶಾಲೆಯ ಬೀಗ ಮುರಿದು ಮುಖ್ಯ ಶಿಕ್ಷಕರ ಕಚೇರಿಯನ್ನು ಪ್ರವೇಶಿಸಿ ಅಲ್ಲಿದ್ದ  ಆಲ್ಮೆರಾಗಳ ಬೀಗ ಒಡೆದು ಒಟ್ಟು ರೂ 3,200/- ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ  

ಅಂಗಡಿಗೆ ನುಗ್ಗಿದ ಕಾರು
                ದಿನಾಂಕ 06/12/2016ರಂದು ಶಾಂತಳ್ಳಿ ನಿವಾಸಿ ಎಸ್‌.ಜಿ.ಮೇದಪ್ಪ ಎಂಬವರ ಕಾರು ಸಂಖ್ಯೆ ಕೆಎ-12-ಜೆಡ್‌-4344ರ ಚಾಲಕ ಪ್ರತಾಪ್‌ ಎಂಬಾತನು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿರುವ ಬೇಕರಿಯೊಂದಕ್ಕೆ ನುಗ್ಗಿ ಬೇಕರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಮಗುಚಿ ವ್ಯಕ್ತಿ ಸಾವು 
                  ದಿನಾಂಕ 05/12/2016ರಂದು ಹುದಿಕೇರಿ ಬಳಿಯ ಬೆಳ್ಳೂರು ನಿವಾಸಿ ಮೊಣ್ಣಪ್ಪ ಎಂಬವರು ಹೈಸೊಡ್ಲೂರು ಗ್ರಾಮದ ಬಳಿ ಅವರ ಕಾರಿನಲ್ಲಿ ಹೋಗುತ್ತಿರುವಾಗ ಮುಂದುಗಡೆ ಕಳ್ಳೇಂಗಡ ಕಾಳಪ್ಪ ಎಂಬವರು ಅವರ ಕೆಎ-12-7416ರ ಮೋಟಾರು ಸೈಕಲನ್ನು ಅತಿ ವೇಗ ಮತ್ತು  ಅಜಾಗರೂಕತೆಯಿಂದ  ಚಾಲಿಸಿದ ಪರಿಣಾಮ ಬೈಕು ರಸ್ತೆಯಲ್ಲಿ  ಮಗುಚಿಕೊಂಡು  ತೀವ್ರವಾಗಿ ಗಾಯಗೊಂಡ  ಕಾಳಪ್ಪನವರನ್ನು ಚಿಕಿತ್ಸೆಗಾಗಿ ಮಡಿಕೇರಿಗೆ ಸಾಗಿಸುತ್ತಿರುವಾಗ ಮೂರ್ನಾಡು ಬಳಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿವಾದ ಪರಸ್ಪರ ಹಲ್ಲೆ
                 ದಿನಾಂಕ 06/12/2016ರಂದು ಶ್ರೀಮಂಗಲ ಬಳಿಯ ಬೀರುಗ ಗ್ರಾಮದಲ್ಲಿ ಕಳ್ಳಿಚಂಡ ನಾಚಪ್ಪ ಎಂಬವರು  ಮಾಣಿರ ವಾಸು  ಎಂಬವರಿಂದ ಲೀಸಿಗೆ ಪಡೆದಿದ್ದ ತೋಟದಲ್ಲಿ ಕಾಫಿ ಕುಯ್ಲು ಮಾಡುತ್ತಿರುವಾಗ ಅಲ್ಲಿಗೆ ಮಾಣಿರ ವಿಜಯ ನಂಜಪ್ಪ, ರವಿ, ಸೋಮಣ್ಣ, ವಿಕ್ರಂ, ಧನು ಮತ್ತು ಗಂಗಮ್ಮ ಎಂಬವರು ಬಂದು  ತೋಟದ ಲೀಸ್‌ ವಿಚಾರವಾಗಿ  ಜಗಳವಾಡಿ ತೋಟದಲ್ಲಿ  ಕಾಫಿ ಕುಯ್ಯುತ್ತಿದ್ದ ಕಾರ್ಮಿಕರನ್ನು ಬೆದರಿಸಿ  ಓಡಿಸಿದ್ದು, ಕಳ್ಳಿಚಂಡ ನಾಚಪ್ಪನವರ ಮೇಲೆ ಗುಂಡು ಹಾರಿಸಿರುವುದಾಗಿ ಕಳ್ಳಿಚಂಡ  ನಾಚಪ್ಪನವರು ಶ್ರೀಮಂಗಲ  ಠಾಣೆಯಲ್ಲಿ  ದೂರು ನೀಡಿದ್ದು ಇದೇ ವಿಚಾರಕ್ಕೆ  ಸಂಬಂಧಿಸಿದಂತೆ  ಕಳ್ಳಿಚಂಡ ಸುನಿಲ್‌ ಮತ್ತು ಇತರರು ಸೇರಿಕೊಂಡು  ಮಾಣಿರ ವಿಜಯ ನಂಜಪ್ಪನವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು  ಶ್ರೀಮಂಗಲ ಪೊಲೀಸರು ಎರಡೂ ಪ್ರಕರಣಗಳನ್ನು   ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.