Saturday, December 24, 2016

ಪತ್ನಿ ಮೇಲೆ ಪತಿಯಿಂದ ಹಲ್ಲೆ:
     ರಾತ್ರಿ ತಡವಾಗಿ ಮನೆಗೆ ಬಂದ ವಿಚಾರವನ್ನು ಪ್ರಶ್ನಿಸಿದ ಪತ್ನಿ ಮೇಲೆ ಆಕೆಯ ಪತಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮದಲ್ಲಿ ನಡೆದಿದೆ. ಅರುವತ್ತೋಕ್ಲು ಗ್ರಾಮದ ನಿವಾಸಿ ಕಿಶೋರ್ ಎಂಬವರು  ದಿನಾಂಕ 23-12-2016 ರಂದು ರಾತ್ರಿ ತಡವಾಗಿ ಮನೆಗೆ ಹೋದ ಬಗ್ಗೆ ಆತನ ಪತ್ನಿ ಶ್ರೀಮತಿ ವಿ.ಎಸ್. ಲಕ್ಷ್ಮಿ ವಿಚಾರಿಸಿದ್ದು ಇದರಿಂದ ಕೋಪಗೊಂಡ ಕಿಶೋರ್ ಪತ್ನಿ ಲಕ್ಷ್ಮಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ವ್ಯಕ್ತಿಯ ಸಾವು:
      ಕೇರಳ ಮೂಲದ ವ್ಯಕ್ತಿಯೋರ್ವ ಇಟ್ಟಿಗೆ ಕುಯ್ಯಲು ತನ್ನ ಸ್ನೇಹಿತರೊಂದಿಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಮತ್ತೂರು ಗ್ರಾಮಕ್ಕೆ ಬಂದಿದ್ದು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.  ಕೇರಳ ರಾಜ್ಯದ ಪುತ್ತಂವೀಡ್ ತೋಟಮುಕ್ಕುಬಯಲ ಗ್ರಾಮದ ವ್ಯಕ್ತಿ 35 ವರ್ಷ ಪ್ರಾಯದ ಸುನಿಲ್ ಎಂಬಾತ ತನ್ನ ಸ್ನೇಹಿತರೊಂದಿಗೆ ಕೆಲವು ದಿವಸಗಳ ಹಿಂದೆ ಮತ್ತೂರು ಗ್ರಾಮಕ್ಕೆ  ಬಂದು ಕೆಲಸ ಮಾಡಿಕೊಂಡಿದ್ದು, ಆತ ಅನಾರೋಗ್ಯಕ್ಕೆ ತುತ್ತಾಗಿದ್ದು ದಿನಾಂಕ 23-12-2016 ರಂದು ತಾನು ವಾವವಿದ್ದ ಮನೆಯಲ್ಲಿ ಸಾವನಪ್ಪಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಿ.ಟಿ. ವಾಹನಕ್ಕೆ ಬಸ್ ಡಿಕ್ಕಿ:
     ಚಲಿಸುತ್ತಿದ್ದ ಟಿ.ಟಿ. ವಾಹನಕ್ಕೆ ಹಿಂಬದಿಯಿಂದ ಬಂದ ಬಸ್ಸೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ಇದ್ದ ಎರಡು ವಾಹನಗಳು ಜಖಂಗೊಂಡ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹುದಿಕೇರಿಯಲ್ಲಿ ಸಂಭವಿಸಿದೆ.  ದಿನಾಂಕ 23-12-2016 ರಂದು ಬೆಂಗಳೂರಿನ ನಿವಾಸಿ ಗುಂಡು ಎಂಬವರು ಟಿ.ಟಿ. ವಾಹನದಲ್ಲಿ ಪ್ರವಾಸಕ್ಕೆ ಬಂದು ಪ್ರವಾಸಿಗರನ್ನು ಇರ್ಪು ಪಾಲ್ಸ್ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹುದಿಕೇರಿ ಎಂಬಲ್ಲಿ ಹಿಂಬದಿಯಿಂದ ಬಂದ ಬಸ್ಸು ಸದರಿ ಟಿ.ಟಿ. ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ. ವಾಹನ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ವಾಹನಗಳಿಗೂ ಡಿಕ್ಕಿ ಸಂಭವಿಸಿ ವಾಹನಗಳು ಜಖಂ ಗೊಂಡಿದ್ದು ಅಲ್ಲದೆ ಟಿ.ಟಿ. ವಾಹನದಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ಗಾಯಗೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  
ಅಕ್ರಮ ಮರಳು ಸಾಗಾಟ ಪತ್ತೆ:
      ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ  ವ್ಯಕ್ತಿಯನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ದಿನಾಂಕ 23-12-2016 ರಂದು ಆರೋಪಿಗಳಾದ ಮಹಮ್ಮದ್ ನಸೀಬ್ ಮತ್ತು ಎಂ.ಟಿ. ಲೋಕೇಶ್ ಎಂಬವರು ಅಕ್ರಮವಾಗಿ ಸ್ವರಾಜ್ ಮಜ್ದಾ ಲಾರಿಯಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎನ್. ಕುಮಾರ ಆರಾದ್ಯ ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ಆರೋಪಿಗಳನ್ನು ಲಾರಿ ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮೋಟಾರ್ ಸೈಕಲಿಗೆ ಲಾರಿ ಡಿಕ್ಕಿ ಸವಾರನ ದುರ್ಮರಣ:
      ದಿನಾಂಕ 23-12-2016 ರಂದು  ಮಡಿಕೇರಿ ತಾಲೋಕು ಪಾರಾಣೆ ಗ್ರಾಮದ ನಿವಾಸಿ ಅಪ್ಪನೆರವಂಡ ಸಿದ್ದು ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಶ್ರೀಮತಿ ಜ್ಯೋತಿ ರವರ ಪತಿ ಮಧುಗೌಡ ಎಂಬವರು ಮೋಟಾರ್ ಸೈಕಲಿನಲ್ಲಿ ವಿರಾಜಪೇಟೆ ನಗರದ ಚಿಕ್ಕಪೇಟೆ ಎಂಬಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾಗಿ ಬೈಕ್ ಸವಾರ ಮಧುಗೌಡ ಸ್ಥಳದಲ್ಲೇ ಸಾವನಪ್ಪಿದ್ದು, ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.