Tuesday, January 3, 2017

ಏಲಕ್ಕಿ ಕೃಷಿ ಹಾನಿ ವ್ಯಕ್ತಿ ಮೇಲೆ ಹಲ್ಲೆ: 

     ಏಲಕ್ಕಿ ಕೃಷಿಯನ್ನು ಜಾನುವಾರು ಹಾನಿಪಡಿಸಿದ ವಿಚಾರವನ್ನು ಪ್ರಶ್ನಿಸಿದ ವಿಚಾರದಲ್ಲಿ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕು ಬೆಟ್ಟದಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಟ್ಟದಳ್ಳಿ ಗ್ರಾಮದ ನಿವಾಸಿ ಹೆಚ್.ಎನ್. ಹೊನ್ನಪ್ಪ ಎಂಬವರಿಗೆ ಸೇರಿದ ತೋಟದಲ್ಲಿ ಏಲಕ್ಕಿ ಕೃಷಿಯನ್ನು ಮಾಡಿದ್ದು ಸದರಿ ಏಲಕ್ಕಿ ಗಿಡಗಳನ್ನು ಚಂಗಪ್ಪ ಎಂಬವರ ದನಗಳು ತಿಂದು ಹಾನಿ ಮಾಡಿದ್ದು ಈ ವಿಚಾರವನ್ನು ಫಿರ್ಯಾದಿ ಹೆಚ್.ಎನ್. ಹೊನ್ನಪ್ಪನವರು ಆರೋಪಿತ ಚಂಗಪ್ಪನವರಲ್ಲಿ ವಿಚಾರಿಸಿದ ಕಾರಣ, ಸದರಿ ಚಂಗಪ್ಪನವರು ಕತ್ತಿಯಿಂದ ಹೊನ್ನಪ್ಪನವರ ಮೇಲೆ ಹಲ್ಲೆನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ:

     ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೀಗೂರು ಗ್ರಾಮದ ನಿವಾಸಿ ಐಯ್ಯಂಡ ಎಂ. ದಿನೇಶ್ ಎಂಬವರ ಚಿಕ್ಕಪ್ಪ ಲವ (55) ರವರು ಅವಿವಾಹಿತರಾಗಿದ್ದು ಸದರಿಯವರು 4-5 ವರ್ಷದಿಂದ ಪಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 2-1-2017 ರಂದು ತಾನು ವಾಸವಾಗಿದ್ದ ಐನ್ ಮನೆಯ ಮುಂಭಾಗದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಿಕ್ಷುಕ ವ್ಯಕ್ತಿ ಸಾವು:
     ಗೋಣಿಕೊಪ್ಪ ನಗರದಲ್ಲಿ ಸುಮಾರು ಒಂದು ತಿಂಗಳಿಂದ ಬಿಕ್ಷಾಟನೆ ಮಾಡಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಸಂಜೆ ಹೊತ್ತಿನಲ್ಲಿ ಗೋಣಿಕೊಪ್ಪ ನಗರದ ಪ್ಯಾರಾಗನ್ ಕಟ್ಟಡದ ಒಂದು ಕಡೆ ಮಲಗುತ್ತಿದ್ದು ಸದರಿ ವ್ಯಕ್ತಿ ಊಟ ತಿಂಡಿ ಮಾಡದೆ ನಿತ್ರಾಣಗೊಂಡು ದಿನಾಂಕ 2-1-2017 ರಂದು ಗೋಣಿಕೊಪ್ಪ ನಗರದ ಅಟ್ರಾಲ್ ಜ್ಯುವೆಲ್ಲರಿ ಅಂಗಡಿಯ ಮುಂದಿನ ಮೆಟ್ಟಲುಗಳ ಕೆಳಗೆ ಮೃತಪಟ್ಟಿರುವುದು ಕಂಡು ಬಂದಿದ್ದು, ಅಟ್ರಾಲ್ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂ. ಫೈಸಲ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಎರಡು ಬೈಕ್ ಗಳ ನಡುವೆ ಅಪಘಾತ ಒಬ್ಬನ ಸಾವು: 

     ಪರಸ್ಪರ ಎರಡು ಮೋಟಾರ್ ಸೈಕಲ್ ಗಳ ನಡುವೆ ಡಿಕ್ಕಿ ಸಂಭವಿಸಿ ಒಬ್ಬ ವ್ಯಕ್ತಿ ಸಾವನಪ್ಪಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಅವರೆದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 2-1-2017 ರಂದು ಅಪರಾಹ್ನ 3-45 ಗಂಟೆ ಸಮಯದಲ್ಲಿ ಚಿಕ್ಕಾಕುಂದ ಗ್ರಾಮದ ನಿವಾಸಿ ದೊಡ್ಡಪ್ಪ ಎಂಬವರ ಮಗ ತ್ಯಾಗರಾಜ ಎಂಬವರು ಮೋಟಾರ್ ಸೈಕಲ್ ನಲ್ಲಿ ಕೆರೇಕೇರಿ-ಅವರೆದಾಳು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ರಫೀಕ್ ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದಾಗ ಪರಸ್ಪರ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ತ್ಯಾಗರಾಜರವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.