Thursday, January 26, 2017

ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿಯ ಬಂಧನ
                ದಿನಾಂಕ 25-1-2017 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಯವರಾದ ಮಹೇಶರವರು ರಾತ್ರಿ ಕರ್ತವ್ಯದಲ್ಲಿರುವಾಗ ಶಿರಂಗಾಲ ಗ್ರಾಮದ ಕಾವೇರಿ ಹೊಳೆಯ ದಡದಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮರಳನ್ನು ತುಂಬಿಸಿದ್ದ ಟ್ರ್ಯಾಕ್ಟರ್ ಹಾಗೂ ಶಿರಂಗಾಲ ಗ್ರಾಮದ ಗಿರೀಶ ಎಂಬುವವರು ವಶಕ್ಕೆ ಪಡೆದು  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ಮಗನಿಂದ ತಂದೆಯ ಮೇಲೆ ಹಲ್ಲೆ
               ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ವಿರಾಜಪೇಟೆ ತಾಲೂಕಿನ  ಕಿರುಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 22-1-12017 ರಂದು ಕಿರುಗೂರುವಿನ ಪಂಜರಿ ಪೈಸಾರಿಯ ವಾಸಿ ಪುಟ್ಟಸ್ವಾಮಿ ಎಂಬುವವರು ಮನೆಯಲ್ಲಿರುವಾಗ ಆವರ ಮಗ ರಾಜೇಶ ಎಂಬುವವರು ಮನೆಯ ಹತ್ತಿರ ಬಂದು ನೀನು ತಾಯಿಯ ಜೊತೆ ಜಗಳ ಮಾಡುತ್ತೀಯಾ ಎಂದು ಹೇಳಿ ಕೈಯಿಂದ ಮೂಗಿನ ಭಾಗಕ್ಕೆ ಗುದ್ದಿದ್ದಲ್ಲದೇ, ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು  ಗಾಯಪಡಿಸಿ ಬೆದರಿಕೆ ಹಾಕಿರುವುದಾಗಿ ಪುಟ್ಟಸ್ವಾಮಿಯವರು ನೀಡಿದ ಪುಕಾರಿಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೆರೆಯಲ್ಲಿ ಮುಳುಗಿ ವ್ಯಕ್ತಿಯ ಸಾವು
                  ವಿರಾಜಪೇಟೆ ತಾಲೂಕಿನ ಕುಟ್ಟದ ತೈಲ ಗ್ರಾಮದಲ್ಲಿ  ವ್ಯಕ್ತಿಯೊಬ್ಬ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿರುತ್ತದೆ. ದಿನಾಂಕ 24-1-2017 ರಂದು ಸುಬ್ರಮಣಿ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ಪಂಜರಿಯರವರ ಬಾಲ ಮತ್ತು ಆತನ ಪತ್ನಿ ಕಾವೇರಿಯವರು ಸುಬ್ರಮಣಿಯವರ ಕೆರೆಗೆ ಬಟ್ಟೆ ಒಗೆಯಲು ಹೋಗಿದ್ದು, ಬಾಲರವರು ಕೆರೆಗೆ ಸ್ನಾನ ಮಾಡಲು ಇಳಿದವರು ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಕಾವೇರಿಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ