Monday, February 13, 2017

ಮೋಟಾರ್ ಸೈಕಲಿಗೆ ಲಾರಿ ಡಿಕ್ಕಿ ಸವಾರ ಸಾವು:
     ಮೋಟಾರ್ ಸೈಕಲ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಸವಾರ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ.  ಶ್ರೀಮಂಗಲ ವ್ಯಾಪ್ತಿಯ ತೂಚಮಕೇರಿ ಗ್ರಾಮದ ನಿವಾಸಿ ರವಿ ಎಂಬವರ ಮಗ ರೋಷನ್ ಎಂಬವರು ದಿನಾಂಕ 12-2-2017 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಪೊನ್ನಂಪೇಟೆ ಕಡೆಯಿಂದ ತೂಚಮಕೇರಿಯಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಚಿಕ್ಕಮಂಡೂರು ಗ್ರಾಮದಲ್ಲಿ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ರೋಷನ್ ರವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿಗೆ ಬೈಕ್ ಡಿಕ್ಕಿ, ಗಾಯ:
     ದಿನಾಂಕ 11-2-2017 ರಂದು ಶಿವ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ನಿಲ್ದಾಣದ ಕಡೆಯಿಂದ ವ್ಯಕ್ತಿಯೋರ್ವ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶಿವರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಶಿವರವರು ಗಾಯಗೊಂಡಿದ್ದು, ಅವರನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆ:
     ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ಯಲ್ಲಿ ವಾಸವಾಗಿರುವ ಶ್ರೀಮತಿ ಜಯಲಕ್ಷ್ಮಿ ಎಂಬವರ ಪತಿ 49 ವರ್ಷ ಪ್ರಾಯದ ಲೋಕೇಶ್ ಎಂಬ ವ್ಯಕ್ತಿ ದಿನಾಂಕ 1-2-2017 ರಂದು ಮನೆಯಿಂದ ಹೊರಗಡೆ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಶ್ರೀಮತಿ ಜಯಲಕ್ಷ್ಮಿರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗಮುರಿದು ಕಳ್ಳತನ:
    ಸೋಮವಾರಪೇಟೆ ಠಾಣಾ ಸರಹದ್ದಿನ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಕೆ.ಗಣೇಶ್ ಎಂಬವರ ಮನೆಗೆ ದಿನಾಂಕ 10-2-2017 ರಿಂದ 12-2-2017ರ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಗೆ ಪ್ರವೇಶಿಸಿ ಮನೆಯ  ಗಾಡ್ರೇಜ್ ಬೀರ್ ಮತ್ತು ಟ್ರಂಕ್ ಗಳನ್ನು ಒಡೆದು ಅದರಲ್ಲಿದ್ದ  ಬಟ್ಟೆ ಹಾಗೂ ಇತರೇ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ  ಸುಮಾರು 2,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಣದ ವಿಚಾರದಲ್ಲಿ ಜಗಳ, ವ್ಯಕ್ತಿಯ ಕೊಲೆಗೆ ಯತ್ನ:
     ಹಣದ ವಿಚಾರದಲ್ಲಿ ಜಗಳ ಮಾಡಿ ವ್ಯಕ್ತಿಯ ದಾರಿ ತಡೆದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರಪೇಟೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. ಜನತಾ ಕಾಲೋನಿ ನಿವಾಸಿ ಪ್ರಮೋದ್ ಕುಮಾರ್ ಎಂಬವರು ದಿನಾಂಕ 7-2-2017 ರಂದು ರಾತ್ರಿ 11-30 ಗಂಟೆಯ ಸಮಯದಲ್ಲಿ ನಗರದ ಸುವಿಧ್ ಬಾರಿನ ಮುಂದುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಹರ್ಷಿತ್ ಎಂಬವರು ಸ್ಕೂಟರಿನಲ್ಲಿ ಬಂದು ಪ್ರಮೋದ್ ಕುಮಾರ್ ರವರನ್ನು ತಡೆದು ನಿಲ್ಲಿಸಿ ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಪ್ರಮೋದ್ ಕುಮಾರ್ ರವರ ತಲೆಯ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.