Tuesday, February 21, 2017

ಕಾರು ಅಪಘಾತ, ಇಬ್ಬರಿಗೆ ಗಾಯ:

    ಅಡ್ಡಬಂದ ನಾಯಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿ ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-2-2017 ರಂದು ಫಿರ್ಯಾದಿ ಕಟ್ಟೆಂಗಡ ಬಿ.ಪೂವಪ್ಪ ಮತ್ತು ಶತರ್ ಎಂಬವರು ತಮ್ಮ ಸ್ನೇಹಿತ ಕಾಳಿಮಾಡ ಮಾಚಯ್ಯರವರ ಕಾರಿನಲ್ಲಿ ಕುಟ್ಟ ಪಟ್ಟಣದಿಂದ ನಾಲ್ಕೇರಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕಾರಿಗೆ ಅಡ್ಡವಾಗಿ ನಾಯಿಯೊಂದು ಬಂದು ಅದಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕ ಕಾರಿನ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಅಪಘಾತಕ್ಕೀಡಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ, ಕಾಳಿಮಾಡ ಮಾಚಯ್ಯ ಮತ್ತು ಕೆ.ಬಿ. ಪೂವಪ್ಪರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶರತ್ ರವರಿಗೆ ಹೆಚ್ಚಿನ ಗಾಯವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ವತ್ತೊಕ್ಲು ಗ್ರಾಮದಲ್ಲಿ ವಾಸವಾಗಿದ್ದ ಪಣಿಎರವರ ಕರಿಯ ಎಂಬವರ ಮಗ ಚಿಮ್ಮಿ ಎಂಬಾತ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 19-2-2017 ರಂದು ತಾನು ವಾಸವಾಗಿದ್ದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಅಕ್ರಮ ಪ್ರವೇಶ, ಹಲ್ಲೆ:

       ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಳ್ಳೂರು ಗ್ರಾಮದ ವಾಸಿ ಶ್ರೀಮತಿ ಬಿ.ಸಿ. ಜ್ಯೋತಿ ಎಂಬವರು ದಿನಾಂಕ 20-02-2017 ರಂದು ತಮ್ಮ ಮನೆಯಲ್ಲಿದ್ದಾಗ ಸಮಯ 09 30 ಗಂಟೆಗೆ ಅವರ ಸಂಬಂಧಿಯಾದ ಸಂಬಂಧಿಯಾದ ಧನು ಎಂಬ ವ್ಯಕ್ತಿ ಜ್ಯೋತಿರವರ ಮನೆಗೆ ಅಕ್ರಮ ಪ್ರವೇಶ ಮಾಡಿ ದೂರವಾಣಿ ಕರೆಯನ್ನು ಸ್ವೀಕರಿಸದೇ ಇರುವ ವಿಚಾರದಲ್ಲಿ ಜಗಳ ಮಾಡಿ ಎಡಗೆನ್ನೆಗೆ ಹೊಡೆದು ನೋವು ಪಡಿಸಿದಲ್ಲದೆ ಚಾಕುವಿನಿಂದ ಬಲಗೈಬೆರಳಿಗೆ ಚುಚ್ಚಿ ಗಾಯ ಪಡಿಸಿ ತಳ್ಳಿ ಬೀಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರಿಮೆಣಸು ಕಳವು:

        ವಿರಾಜಪೇಟೆ ತಾಲೋಕು ಅಮ್ಮತ್ತಿ ಗ್ರಾಮದ ನಿವಾಸಿಗಳಾದ ಎಂ.ಕೆ.ಚಿಟ್ಟಿಯಪ್ಪ ಮತ್ತು ವಿಶ್ವನಾಥ ಎಂಬ ಸಹೋದರರ ನಡುವೆ ಆಸ್ತಿ ವಿವಾದವಿದ್ದು, ನ್ಯಾಯಾಲಯದಲ್ಲಿ ಸದರಿ ವಿವಾದದ ಸಂಬಂಧ ದಾವೆ ನಡೆಯುತ್ತಿದ್ದು, ದಿನಾಂಕ 19-2-2017 ರಂದು ಹಿರಿಯ ಸಹೋದರ ವಿಶ್ವನಾಥ, ಅವರ ಪತ್ನಿ ರೋಹಿಣಿ ಮತ್ತು ಮೇಸ್ತ್ರಿ ಮುರುಗನ್ ರವರುಗಳು ಸೇರಿ ಕಿರಿಯ ಸಹೋದರ ಎಂ.ಕೆ. ಚಿಟ್ಟಿಯಪ್ಪನವರ ತೋಟದಿಂದ ಸುಮಾರು 26,000/ ರೂ ಬೆಲೆಬಾಳುವ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಎಂ.ಕೆ. ಚಿಟ್ಟಿಯಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ:

         ಮಡಿಕೇರಿ ನಗರದ ಮಂಗಳಾದೇವಿನಗರದ ವಾಸಿ ಶ್ರೀಮತಿ ಟಿ.ಸುಧಾ ಎಂಬವರ ಪತಿ ಶಂಭುದೇವಯ್ಯ ಎಂಬವರು ದಿನಾಂಕ 19-2-2017 ರಂದು ರಾತ್ರಿ 9-45 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಮೈಸೂರು ರಸ್ತೆಯ ಕಾಫಿ ಡೇ ಬಳಿ ರಸ್ತೆಯ ಇನ್ನೊಂದು ಕಡೆಗೆ ದಾಟುತ್ತಿದ್ದಾಗ ಜನರಲ್ ತಿಮ್ಮಯ್ಯ ವೃತ್ತದ ಕಡೆಯಿಂದ ಬಂದ ಒಂದು ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಶಂಭುರವರ ತಲೆ ಹಾಗು ಶರೀರಕ್ಕೆ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.