Saturday, February 4, 2017

ಅಕ್ರಮ ಜೂಜಾಟ:

     ಅಕ್ರಮ ಜೂಜಾಟವಾಡುತ್ತಿದ್ದ ವ್ಯಕ್ತಿಗಳ ಮೇಲೆ ಡಿಸಿಐಬಿ ಪೊಲೀಸರು ದಾಳಿ ಮಾಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೆರಿ ಗ್ರಾಮದ ಬನ್ನೂರು ಚಾಮುಂಡಿ ದೇವಸ್ಥಾನದ ಸಮೀಪದ ಕೆಳ ಭಾಗದ ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಗಿ ಇಲ್ಲದೆ 6 ಜನರು ಹಣವನ್ನು ಪಣಕ್ಕಿಟ್ಟು ಜೂಜಟವಾಡುತ್ತಿದ್ದುದನ್ನು ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಕರೀಂ ರಾವುತರ್ ಹಾಗು ಸಿಬ್ಬ್ಂದಿಯವರು ಪತ್ತೆ ಹಚ್ಚೆ ದಾಳಿ ನಡೆಸಿ ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ ನಗದು ರೂ.19,000/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

     ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಪುಟಾಣಿನಗರ ನಿವಾಸಿ ಶ್ರೀಮತಿ ಶಿವಮ್ಮ ಎಂಬವರ ಪತಿ 55 ವರ್ಷ ಪ್ರಾಯದ ವೆಂಕಟೇಶ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 3-2-2017 ರಂದು ತಮ್ಮ ಮನೆಯ ಸ್ನಾನದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಬಾಗಿಲು ಮುರಿದು ನಗದು ಮತ್ತು ಚಿನ್ನಾಭರಣ ಕಳವು:
 
      ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಲ್ಯಮಂಡೂರು ಗ್ರಾಮದ ವಾಸಿ ಎಂ.ಸಿ. ನಾರಾಯಣ ಶೆಟ್ಟಿ ಎಂಬವರ ವಾಸದ ಮನೆಯ ಹಿಂಬಾಗಿಲನ್ನು ಕೆಲಸದ ಆಳು ಮಣಿ @ ಗಣೇಶ ಎಂಬಾತ ಮುರಿದು ಒಳಗೆ ಪ್ರವೇಶಿಸಿ ನಗದು ರೂ. 24,000/- ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ನಾರಾಯಣ ಶೆಟ್ಟಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.