Saturday, March 4, 2017

ಅಕ್ರಮಮರಳು ಸಾಗಾಟ, 
ಆರೋಪಿಗಳ ಬಂಧನ:
     ಕೊಡಗು ಜಿಲ್ಲೆಯ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕೂತಿ-ಶಾಂತಳ್ಳಿ ಕಡೆಯಿಂದ ಸೋಮವಾರಪೇಟೆ ಕಡೆಗೆ  ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀ ಶಿವಣ್ಣರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ  ದಿನಾಂಕ 4-3-2017 ರಂದು ಬೆಳಗಿನ ಜಾವ 4-00 ಗಂಟೆಯ ಸಮಯದಲ್ಲಿ ಕೂತಿ-ಶಾಂತಳ್ಳಿ ಕಡೆಗೆ ಹೋಗುವ ರಸ್ತೆಯ ಕೂಡು ರಸ್ತೆ ಜಂಕ್ಷನ್ ನಲ್ಲಿ ಕೆ.ಎ.12ಎ7694 ಮತ್ತು ಕೆಎ-46 6839 ರ ಎರಡು    ಟಿಪ್ಪರ್ ಲಾರಿಗಳಲ್ಲಿ ಹಾಸನ ಜಿಲ್ಲೆಯ ಯಸಳೂರು ಹೋಬಳಿಯ ಕೊಂಗಳ್ಳಿ ಗ್ರಾಮದಲ್ಲಿ ಹರಿಯುತ್ತಿರುವ ಕೂಡು ರಸ್ತೆ ಹೊಳೆಯಿಂದ ಸರಕಾರದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕಳ್ಳತನದ ಮೂಲಕ ಮರಳನ್ನು ತುಂಬಿಕೊಂಡು ಕೆಎ-01-ಎಂಈ 1024ರ ಮಾರುತಿ ಆಲ್ಟೋ ಕಾರಿನಲ್ಲಿ ಹೆಚ್.ಎಸ್.ಚಂದ್ರಶೇಖರ್, ಹೆತ್ತೂರು ಗ್ರಾಮ ಎಂಬವರು ಸದರಿ  ಮರಳು ತುಂಬಿದ ಲಾರಿಗಳಿಗೆ ಬೆಂಗಾವಲಾಗಿ  ಸೋಮವಾರಪೇಟೆ ಕಡೆಗೆ ಬರುತ್ತಿದ್ದಾಗ ಸೋಮವಾರಪೇಟೆ ಠಾಣಾಧಿಕಾರಿ ಎಂ.ಶಿವಣ್ಣ ಮತ್ತು ಸಿಬ್ದಂದಿಗಳು ದಾಳಿ ಮಾಡಿ ಮರಳು ತುಂಬಿದ ಎರಡು ಲಾರಿಗಳನ್ನು ಮತ್ತು ಲಾರಿ ಚಾಲಕರಾದ ಇ.ಜಿ.ಅಶೋಕ, ಕೂಡು ರಸ್ತೆ ಸಕಲೇಶಪುರ, ಹಾಸನ, ಮತ್ತು ಹೆಚ್.ಪಿ.ಕೃತಿಕ, ಹಳ್ಳಿಬೈಲು ಗ್ರಾಮ ಯಸಳೂರು ಹೋಬಳಿ ಸಕಲೇಶಪುರ, ಹಾಸನ ಜಿಲ್ಲೆ ಮತ್ತು ಬೆಂಗಾವಲು ಮಾಡಿಕೊಂಡು ಬಂದ ಹೆಚ್.ಎಸ್. ಚಂದ್ರಶೇಖರ್ ರವರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 
 
          ಮೇಲ್ಕಾಣಿಸಿದ ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್. ರವರ ಮಾರ್ಗದರ್ಶನ ಮೇರೆಗೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀ ಶಿವಣ್ಣ, ಸಿಬ್ಬಂದಿಗಳಾದ ಸಿ.ಹೆಚ್.ಸಿ. ಶಿವಕುಮಾರ್, ಸಿಪಿಸಿ ಮಹೇಂದ್ರ, ಮಹೇಶ್ ಮತ್ತು ಜಗದೀಶ್ ರವರುಗಳು ಭಾಗವಹಿಸಿದ್ದರು.
 
  
ನೀರಿನಲ್ಲಿ ಮುಳುಗಿ ಶಾಲಾ ಬಾಲಕನ ಸಾವು:

      ಮೈಸೂರು ಜಿಲ್ಲೆಯ ಬೈಲುಕುಪ್ಪೆ ನಿವಾಸಿ ಪೌದ ತಮಾಂಗ್ ಎಂಬವರ ಮಗ ಚುಯಿಂಗ್ ತಾಶಿ ಎಂಬಾತ ದಿನಾಂಕ 2-3-2017 ರಂದು ತನ್ನ ಸ್ನೇಹಿತ ಚುಯಿಂಗ್ ಮಕಲ್ ಸಾಂಗ್ ಎಂಬಾತನೊಂದಿಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದಲ್ಲಿರುವ ಕಾವೇರಿ ಹೊಳೆಗೆ ಬಟ್ಟೆತೊಳೆಯಲೆಂದು ಹೋಗಿದ್ದು ಬಟ್ಟೆ ತೊಳೆಯಿತ್ತಿದ್ದವೇಳೆ ಆಕಸ್ಮಿಕವಾಗಿ ಚುಯಿಂಗ್ ತಾಶಿ ನೀರಿಗೆ ಬಿದ್ದು ಸಾವನಪ್ಪಿದ್ದು, ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ನಲ್ವತ್ತೊಕ್ಲು ಗ್ರಾಮದ ನಿವಾಸಿ ನೆಲ್ಲಚಂಡ ಸುಬ್ರಮಣಿ ಎಂಬವರು ದಿನಾಂಕ 3-3-2017 ರಂದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿ ಸುನಿಲ್ ಪೂಣಚ್ಚ ಎಂಬವರು ದಾರಿ ತಡೆದು ಹಲ್ಲೆ ಮಾಡಿದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.