Thursday, March 9, 2017

 ಕಳವು ಪ್ರಕರಣ                     ಕುಶಾಲನಗರದ ಕೂಡುಮಗಳೂರು ಗ್ರಾಮದ ನಿವಾಸಿಯಾದ ರೀಟಾರವರು ಸಿದ್ದಾಪುರದಲ್ಲಿರುವ ರಿಲಾಯನ್ಸ್ ಕಾಫಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 6-3-2017 ರಂದು ಎಂದಿನಂತೆ ಕೆಲಸಕ್ಕೆ ಬರುವಾಗ ಬ್ಯಾಂಕಿಗೆ ಸಾಲವನ್ನು ಕಟ್ಟಲು ರೂ.15000/- ನಗದನ್ನು ಹಾಗೂ ಅವರು ಧರಿಸಿಕೊಂಡಿದ್ದ 65,000 ರೂ ಮೌಲ್ಯದ ಚಿನ್ನದಾಭರಣಗಳನ್ನು ಒಂದು ಬ್ಯಾಗಿನಲ್ಲಿ ಹಾಕಿ ಅಂಗಡಿಯ ಒಳಗೆ ಕ್ಯಾಬಿನ್ ನ ಹೊರಭಾಗದ ಟೇಬಲ್ ನ ಮೇಲೆ ಇಟ್ಟು ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ 3 ಜನ ಅಪರಿಚಿತ ವ್ಯಕ್ತಿಗಳು ಕಾಫಿ ದರ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದು ಅವರು ಬಂದು ಹೋದ ನಂತರ ರೀಟಾರವರು ಇಟ್ಟಿದ್ದ ಬ್ಯಾಗು ಕಾಣೆಯಾಗಿದ್ದು ಸದರಿ 3 ಜನ ವ್ಯಕ್ತಿಗಳು ಬ್ಯಾಗನ್ನು ತೆಗೆದುಕೊಂಡು ಹೋಗಿರುವುದಾಗಿ ಸಂಶಯವಿರುವುದಾಗಿ ನೀಡಿದ ಪುಕಾರಿಗೆ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿಯ ದುರ್ಮರಣ
                    ವಿರಾಜಪೇಟೆ ತಾಲೂಕಿನ ಅಮ್ಮತ್ತಿಯ ಹೊಸಕೋಟೆ ಎಂಬಲ್ಲಿ ಕರಿಮೆಣಸನ್ನು ಕುಯ್ಯಲು ಕಬ್ಬಿಣದ ಏಣಿಯನ್ನು ಬಳಸಿ ಏಣಿಯು ವಿದ್ಯುತ್ ತಂತಿಗೆ ತಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ದಿನಾಂಕ 8-3-2017 ರಂದು ಹೊಸಕೋಟೆಯ ನಿವಾಸಿ ಸೈಯದ್ ರವರು ಹೊಸಕೋಟೆ ಗ್ರಾಮದ ಗಣಪತಿಯವರ ತೋಟದಲ್ಲಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                 ದಿನಾಂಕ 7-3-2017 ರಂದು ವಿರಾಜಪೇಟೆ ತಾಲೂಕಿನ ತಾವಳಗೇರಿಯ ತಟ್ಟಂಗಡ ಚಾಮಿಯವರ ಲೈನ್ ಮನೆಯಲ್ಲಿ ವಾಸವಿರುವ ಪಣಿಯರವರ ಪಾಲಿ ಎಂಬುವವರು ಮನೆಯಲ್ಲಿರುವಾಗ ಪಕ್ಕದ ಲೈನ್ ಮನೆಯ ವಾಸಿ ಪಣಿಯರವರ ಜಪ್ಪು ಎಂಬುವವರು ಮದ್ಯಪಾನ ಮಾಡಿ ಬೊಬ್ಬೆ ಹಾಕುತ್ತಿದ್ದುದನ್ನು ವಿಚಾರಿಸಿದ ಕಾರಣಕ್ಕೆ ಜಪ್ಪುವು ಏಕಾ ಏಕಿ ಕಬ್ಬಿಣದ ರಾಡಿನಿಂದ ಪಾಲಿಯವರಿಗೆ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಮೋಟಾರು ಸೈಕಲ್ ಡಿಕ್ಕಿ
              ಪಾದಚಾರಿಯೊಬ್ಬರಿಗೆ ಮೋಟಾರು ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ಸಂಭವಿಸಿದೆ. ದಿನಾಂಕ 8-3-2017 ರಂದು ತಮಿಳುನಾಡು ರಾಜ್ಯದ ತಿರುವಣ್ಣಾಮಲೈ ಜಿಲ್ಲೆಯ ನಿವಾಸಿಯಾದ ರಾಜುರವರು ವಿರಾಜಪೇಟೆ ನಗರದ ಮೋಹನ್ ಪೆಟ್ರೋಲ್ ಬಂಕ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಾಜುರವರಿಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ರಾಜುರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ.