Wednesday, March 1, 2017

ಆಟೋ ರಿಕ್ಷಾಗಳ ಪರಸ್ಪರ ಡಿಕ್ಕಿ
         ಆಟೋ ರಿಕ್ಷಾಗಳು ಪರಸ್ಪರ ಡಿಕ್ಕಿಯಾಗಿ ಪ್ರಯಾಣಿಕರಿಗೆ ಮತ್ತು ಆಟೋ ಚಾಲಕನಿಗೆ ಗಾಯಗಳಾಗಿರುವ ಘಟನೆ ಕುಶಾಲನಗರದ ಬೈಚನಹಳ್ಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ದಿನಾಂಕ 27-2-2017 ರಂದು ಕುಶಾಲನಗರದ ಗಂಧದ ಕೋಠಿಯ ನಿವಾಸಿ ಮಂಜುಳಾರವರು ಕುಶಾಲನಗರದಿಂದ ಗಂಧದ ಕೋಠಿ ಕಡೆಗೆ ಕೆ ಎ-12-ಬಿ-4004 ರ ಆಟೋದಲ್ಲಿ ಹೋಗುತ್ತಿರುವಾಗ ಬೈಚನಹಳ್ಳಿ ಮಾರಿಯಮ್ಮ ದೇವಸ್ಥನ ಬಳಿ ಆಟೋ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯೋಗಾನಂದ ಬಡಾವಣೆ ಕಡೆಯಿಂದ ಬರುತ್ತಿದ್ದ ಕೆ ಎ-12-5740 ರ ಆಟೋ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋದಲ್ಲಿದ್ದ ಮಂಜುಳ ಮತ್ತು ಎದುರುಗಡೆ ಆಟೋದ ಚಾಲಕ ರಾಮಚಂದ್ರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ
         ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ನಡೆದಿದೆ. ಕಾವಾಡಿ ಗ್ರಾಮದ ಮಂಡೇಪಂಡ ವಿಜಯರವರ ಲೈನ್ ಮನೆಯಲ್ಲಿ ವಾಸವಿರುವ ಅಪ್ಪು ಎಂಬುವವರ ಪತ್ನಿ ಮನೆಬಿಟ್ಟು ಹೋಗಿದ್ದು ಈ ವಿಚಾರದಲ್ಲಿ ಅಪ್ಪುರವರು ಬೇಜಾರುಗೊಂಡಿದ್ದು, ಇದೇ ವಿಚಾರದಲ್ಲಿ ಮನನೊಂದು ದಿನಾಂಕ 28-2-2017 ರಂದು ಮನೆಯ ಪಕ್ಕದ ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ಮಗ ರಾಣುರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಕಳವು
            ಮನೆಯ ಮುಂದಿನ ಕಣದಲ್ಲಿ ಒಣಗಲು ಹಾಕಿದ್ದ ಕರಿಮೆಣಸನ್ನು ಯಾರೋ ಕಳ್ಳರು ಕಳವು ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಸಿಂಗತ್ತೂರು ಗ್ರಾಮದಲ್ಲಿ ನಡೆದಿದೆ. ಸಿಂಗತ್ತೂರು ಗ್ರಾಮದ ನಿವಾಸಿ ಕುಶಾಲಪ್ಪನವರು ತಮ್ಮ ಮನೆಯ ಮುಂದಿನ ಕಣದಲ್ಲಿ ಕರಿಮೆಣಸನ್ನು ಒಣಗಲು ಹಾಕಿದ್ದು, ದಿನಾಂಕ 28-2-2017 ರ ರಾತ್ರಿ ಯಾರೋ ಕಳ್ಳರು ಅಂಗಳದಿಂದ ಸುಮಾರು 60 ಕೆ. ಜಿ. ಯಷ್ಟು ಕರಿಮೆಣಸನ್ನು ಕಳವು ಮಾಡಿರುವುದಾಗಿ ಕುಶಾಲಪ್ಪನವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೊಳೆಯಲ್ಲಿ ಮುಳುಗಿ ಇಬ್ಬರ ದುರ್ಮರಣ
             ಹೊಳೆಯಲ್ಲಿ ಸ್ನಾನಕ್ಕೆಂದು ತೆರಳಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಕುಶಾಲನಗರದ ದುಬಾರೆಯ ಕಾವೇರಿ ನದಿಯಲ್ಲಿ ಜರುಗಿದೆ. ದಿನಾಂಕ 28-2-2017 ರಂದು ಸುಂಟಿಕೊಪ್ಪಲುವಿನ 7ನೇ ಹೊಸಕೋಟೆಯ ಊರುಗುಪ್ಪೆ ಪೈಸಾರಿಯ ನಿವಾಸಿಗಳಾದ ಗಿರೀಶ ಮತ್ತು ದುರ್ಗಾಪ್ರಸಾದ್ ರವರು ಗಾರೆ ಕೆಲಸಕ್ಕೆ ಹೋಗಿದ್ದವರು ದುಬಾರೆಯ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆ ದುರ್ಗಾಪ್ರಸಾದ್ ರವರ ತಂದೆ ದಿನೇಶರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ವಾಹನ ಅಪಘಾತ
           ದಿನಾಂಕ 28-2-2017 ರಂದು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಮಲ್ಲಹಳ್ಳಿ ಗ್ರಾಮದ ನಿವಾಸಿ ದಯಾನಂದರವರು ಟವೆರಾ ವಾಹನ ಸಂಖ್ಯೆ ಕೆಎ-12-ಎನ್-8571 ರಲ್ಲಿ ದೇವಿಶ್ ಗೌಡರವರೊಂದಿಗೆ ಹೋಗುತ್ತಿರುವಾಗ ಶನಿವಾರಸಂತೆಯ ಕೆರೆಹಳ್ಳಿ ಗ್ರಾಮಕ್ಕೆ ತಲುಪುವಾಗ ಎದುರುಗಡೆಯಿಂದ ಬರುತ್ತಿದ್ದ ಬಸ್ಸನ್ನು ಓವರ್ ಟೇಕ್ ಮಾಡಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹೊಂಡಾ ಆಕ್ಟಿವಾ ಸ್ಕೂಟರನ್ನು ಸವಾರ ಮಹೇಶರವರು ಚಾಲನೆ ಮಾಡಿ ಟವೆರಾ ವಾಹನಕ್ಕೆ ಡಿಕ್ಕಿಪಡಿಸಿದ್ದು, ಸ್ಕೂಟರಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಈ ಬಗ್ಗೆ ದಯಾನಂದರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಬೈಕಿಗೆ ಕಾರು ಡಿಕ್ಕಿ
              ದಿನಾಂಕ 28-2-2017 ರಂದು ಸೋಮವಾರಪೇಟೆ ತಾಲೂಕಿನ ಕಣೆವೆ ಗ್ರಾಮದ ನಿವಾಸಿಯಾದ ಸಂಜಯ್ ಮತ್ತು ವಿಜಯ್ ರವರು ಬೈಕಿನಲ್ಲಿ ಕೂಡ್ಲೂರಿನ ಕೈಗಾರಿಕಾ ಬಡಾವಣೆಗೆ ಕೆಲಸಕ್ಕೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಕೂಡುಮಂಗಳೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬಂದ ಕೆಎ-02-ಜೆಡ್-2556 ರ ಕಾರನ್ನು ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಸಂಜಯ್ ರವರ ತಂದೆ ಚಲ್ಲಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.