Wednesday, March 15, 2017

ವಾಹನ ಅಪಘಾತ ಹೆಚ್ಚಳ - ಪತ್ರಿಕಾ ಪ್ರಕಟಣೆ
                   ಸುಗಮ ಸಂಚಾರ ವ್ಯವಸ್ಥೆ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ ಇಲಾಖೆಯಿಂದ ಅನೇಕ ಸಲಹೆ ಸೂಚನೆಗಳನ್ನು ನೀಡಿದರೂ ಸಹ ಜೀಪು/ಪಿಕ್ಅಪ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಕುರಿಗಳ ರೀತಿಯಲ್ಲಿ ತುಂಬಿಕೊಂಡು ಸಂಚರಿಸುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬಂದಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ದಿನಾಂಕ 02-03-2017 ರಂದು ಸುಂಟಿಕೊಪ್ಪದಲ್ಲಿ ಟ್ರಾಕ್ಟರ್ ವಾಹನ ಅಪಘಾತಕ್ಕೀಡಾಗಿ ಅದರಲ್ಲಿ ಸಂಚರಿಸುತ್ತಿದ್ದ ಇಬ್ಬರು ಕೆಲಸಗಾರರು ಮೃತಪಟ್ಟಿರುತ್ತಾರೆ, ಹಾಗೂ ದಿನಾಂಕ 13-03-2017 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಕುಕ್ಲೂರು ಬಳಿ 20 ಕ್ಕಿಂತ ಹೆಚ್ಚು ಕೆಲಸಗಾರರನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಮಾಡುವ ಪಿಕಪ್ ವಾಹನ ಅಪಘಾತಕ್ಕೀಡಾಗಿ ಎಲ್ಲಾ ಕೆಲಸಗಾರರಿಗೆ ತೀವ್ರತರವಾದ ಗಾಯವಾಗಿ ಮಡಿಕೇರಿ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
                ಆದ್ದರಿಂದ ವಾಹನದ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಎಲ್ಲಾ ವಾಹನಗಳು ಅಂದರೆ ಆಟೋ, ಶಾಲಾ ವಾಹನ, ಮ್ಯಾಕ್ಸಿ ಕ್ಯಾಬ್ ಹಾಗೂ ಸರಕು ಸಾಗಿಸುವ ವಾಹನಗಳಲ್ಲಿ ಕೆಲಸಗಾರರನ್ನು ಸಾಗಿಸುವುದು ಐಎಂವಿ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ಸದರಿ ವಾಹನದ ಮಾಲೀಕರು ಹಾಗೂ ಚಾಲಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಚಾಲಕನ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಆರ್.ಟಿ.ಓ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಈ ಬಗ್ಗೆ ಎಲ್ಲಾ ಆಟೋ, ಶಾಲಾ ವಾಹನ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರು/ಚಾಲಕರುಗಳು ಎಚ್ಚರ ವಹಿಸುವುದು.
                     ಅಲ್ಲದೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ಧೇಶನದನ್ವಯ ವಿಮೆ ಇಲ್ಲದ ವಾಹನಗಳನ್ನು ಜಫ್ತಿ ಮಾಡಿ ವಾಹನದ ಮಾಲೀಕರುಗಳು ವಿಮಾ ಪಾಲಿಸಿಗಳನ್ನು ತಂದು ಹಾಜರುಪಡಿಸುವವರೆಗೆ ಪೊಲೀಸ್ ವಶದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ. ಆದುದರಿಂದ ಎಲ್ಲಾ ವಾಹನ ಮಾಲೀಕರುಗಳು ಈ ಬಗ್ಗೆ ಎಚ್ಚರ ವಹಿಸಬೇಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ ರಾಜೇಂದ್ರ ಪ್ರಸಾದ್, ಐ.ಪಿ.ಎಸ್. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  
 
ಪತಿಯಿಂದ ಪತ್ನಿಯ ಕೊಲೆ

                 ಪತಿಯು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಹಚ್ಚಿನಾಡು ಗ್ರಾಮದ ಐನಂಡ ಚೇತನ್ ರವರ ಪಳ್ಳೆಕೆರೆ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ವಾಸವಿರುವ ಪಶ್ಚಿಮ ಬಂಗಾಳ ರಾಜ್ಯದವರಾದ ಮುಲಿಯಾಸ್ ಮುಂಡ ಹಾಗೂ ಬೀನಾ ಮುಂಡ ದಂಪತಿಗಳು ವಾಸವಿದ್ದು ದಿನಾಂಕ 13-3-2017 ರಂದು ರಾತ್ರಿ ಮುಲಿಯಾಸ್ ಮುಂಡ ಹಾಗೂ ಬೀನಾ ಮುಂಡ ರವರು ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡಿಕೊಂಡಿದ್ದು, ಮುಲಿಯಾಸ್ ಮುಂಡರವರು ಪತ್ನಿ ಬೀನಾ ಮುಂಡರವರ ಕತ್ತು ಹಿಸುಕಿ ಕೊಲೆ ಮಾಡಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಲಾರಿಗೆ ಕಾರು ಡಿಕ್ಕಿ
               ದಿನಾಂಕ 14-3-2017 ರಂದು ಪುತ್ತೂರಿನ ನಿವಾಸಿ ನೋಣಯ್ಯ ಎಂಬುವವರು ಶೇಖರ್ ಎಂಬುವವರೊಂದಿಗೆ ಟ್ಯಾಂಕರ್ ಲಾರಿಯಲ್ಲಿ ಕೂಡಿಗೆಯಿಂದ ಮಂಗಳೂರಿಗೆ ಹೋಗುತ್ತಿರುವಾಗ ಕಾಟಕೇರಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕಾರನ್ನು ಚಾಲಕ ವಿನಯ್ ಪ್ರಸಾದ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿ ಟ್ಯಾಂಕರ್ ಲಾರಿ ಹಾಗೂ ಕಾರು ಜಖಂಗೊಂಡಿದ್ದು, ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಮಹಿಳೆಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕಾರುಗಳು ಮುಖಾಮುಖಿ ಡಿಕ್ಕಿ
            ತಮಿಳುನಾಡು ರಾಜ್ಯದ ಚೆನ್ನೈ ನ ನಿವಾಸಿ ಮುರುಗೇಶನ್ ಎಂಬುವವರು ಸಂಸಾರದೊಂದಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದು, ದಿನಾಂಕ 14-3-2017 ರಂದು ತಲಕಾವೇರಿಗೆ ಹೋಗಿ ವಾಪಾಸ್ಸು ಮೂರ್ನಾಡು ಮೂಲಕ ಮಡಿಕೇರಿಗೆ ಬರುತ್ತಿರುವಾಗ ಮೇಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಕಾರನ್ನು ಚಾಲಕ ನಂಜಪ್ಪರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮುರುಗೇಶನ್ ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಮುರುಗೇಶನ್, ಭಾರತಿಯವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಹೊಳೆಗೆ ಸ್ನಾನಕ್ಕೆ ತೆರಳಿ ವ್ಯಕ್ತಿಯ ಆಕಸ್ಮಿಕ ಮರಣ

               ದಿನಾಂಕ 12-3-2017 ರಂದು ಸೋಮವಾರಪೇಟೆ ತಾಲೂಕಿನ ಬಾಳುಗೋಡುವಿನ ನಿವಾಸಿ ಮುಕ್ಕಾಟಿರ ಮೇದಪ್ಪ ಎಂಬುವವರು ಬಾಳುಗೋಡು ಗ್ರಾಮದ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅಕ್ರಮ ಮರಳು ಸಾಗಾಟ ಲಾರಿ ವಶಕ್ಕೆ

                ದಿನಾಂಕ 14-3-2017 ರಂದು ಸೋಮವಾರಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶಿವಣ್ಣರವರಿಗೆ ಸಿಕ್ಕಿದ  ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಶಾಂತಳ್ಳಿ ಬಸ್ಸು ತಂಗುದಾಣದ ಹತ್ತಿರ ಕುಂದಳ್ಳಿ ಕಡೆಯಿಂದ ಬಂದ ಕೆಎ-12-ಬಿ-1268 ರ ಟಿಪ್ಪರ್ ಲಾರಿಯನ್ನು ಪರಿಶೀಲಿಸಿ ಅಕ್ರಮವಾಗಿ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದುದ್ದು ಕಂಡು ಬಂದು ಚಾಲಕನನ್ನು ವಶಕ್ಕೆ ಪಡೆದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಮೋಟಾರು ಸೈಕಲ್ ಗಳ  ಡಿಕ್ಕಿ
            ಪಿರಿಯಾಪಟ್ಟಣ ತಾಲೂಕಿನ ಶಾನುಬೋಗನ ಹಳ್ಳಿಯ ನಿವಾಸಿಯಾದ ನಿಂಗಪ್ಪ ಎಂಬುವವರು ಜಲೇಂದ್ರ ರವರೊಂದಿಗೆ ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿರುವ ಬಸವಣ್ಣ ಪೆಟ್ರೋಲ್ ಬಂಕ್ ಹತ್ತಿರ ಬಲಕ್ಕೆ ಸಿಗ್ನಲ್ ಕೊಟ್ಟು ತಿರುಗುವಾಗ ಹಿಂಬದಿಯಿಂದ ಚೇತನ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ಮಗುಚಿ ಬಿದ್ದ ಪರಿಣಾಮ ನಿಂಗಪ್ಪ, ಜಲೇಂದ್ರ ಮತ್ತು ಡಿಕ್ಕಿಪಡಿಸಿದ ಮೋಟಾರು ಸೈಕಲ್ ಸವಾರ ಮತ್ತು ಹಿಂಬದಿಯಲ್ಲಿ ಕುಳಿತ್ತಿದ್ದ ಮಂಜುನಾಥ ಎಂಬುವವರಿಗೆ ಗಾಯಗಳಾಗಿದ್ದು ಈ ಬಗ್ಗೆ ನಿಂಗಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಪಾದಾಚಾರಿಗೆ ಆಟೋ ಡಿಕ್ಕಿ

               ದಿನಾಂಕ 14-3-2017 ರಂದು ಕುಶಾಲನಗರದ ಮಾರ್ಕೆಟ್ ರಸ್ತೆಯ ನಿವಾಸಿಯಾದ ಆಲ್ಬೆರ್ಟ್ ಎಂಬುವವರು ಕೊಪ್ಪ ಗೇಟ್ ಕಡೆಯಿಂದ ಮಾರ್ಕೆಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಆಲ್ಬೆರ್ಟ್ ರವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಮುಖಾಮುಖಿ ಡಿಕ್ಕಿ

                 ಸುಂಟಿಕೊಪ್ಪದ ನಿವಾಸಿ ಮಹಮ್ಮದ್ ಇರ್ಷಾದ್ ಎಂಬುವವರು ಅಣ್ಣ ಮಹಮ್ಮದ್ ರಫಿ ಎಂಬುವವರೊಂದಿಗೆ ದಿನಾಂಕ 14-3-2017 ರಂದು ಮೋಟಾರು ಸೈಕಲಿನಲ್ಲಿ ಕುಶಾಲನಗರಕ್ಕೆ ಹೋಗುತ್ತಿರುವಾಗ ನಿಸರ್ಗಧಾಮದ ಹತ್ತಿರ ತಲುಪುವಾಗ ಎದುರುಗಡೆಯಿಂದ ಮೋಟಾರು ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮಹಮ್ಮದ್ ರಫಿ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದು ಮಹಮ್ಮದ್ ಇರ್ಷಾದ್ ಮತ್ತು ಮಹಮ್ಮದ್ ರಫಿರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಮೋಟಾರು ಸೈಕಲ್ ಅಪಘಾತ

                   ಸೋಮವಾರಪೇಟೆ ತಾಲೂಕಿನ ಮುವತ್ತೋಕ್ಲು ಗ್ರಾಮದ ನಿವಾಸಿ ರವಿಯವರು ದಿನಾಂಕ 11-3-2017 ರಂದು ಸುಂಟಿಕೊಪ್ಪದಿಂದ ಮನೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಗರಗಂದೂರು ಎಂಬಲ್ಲಿಗೆ ತಲುಪುವಾಗ ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಅಕ್ರಮ ಜೂಜಾಟ ಆರೋಪಿಗಳ ಬಂಧನ

                      ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕುವೆಂಪು ಶಾಲೆಯ ಹತ್ತಿರ ಇರುವ ದೇವರಕಾಡಿನಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸೋಮವಾರಪೇಟೆ ಠಾಣೆಯ ಉಪನಿರೀಕ್ಷಕರಾದ ಶೀವಣ್ಣರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ನಗದು 2,110 ರೂ ಮತ್ತು ಎಂಟು ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 ಅಕ್ರಮ ಮದ್ಯ ಮಾರಾಟ

            ಕುಟ್ಟ ವೃತ್ತ ನಿರೀಕ್ಷಕರಾದ ದಿವಾಕರರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಶ್ರೀಮಂಗಲ ಠಾಣಾ ಸರಹದ್ದಿನ ತೂಚಮಕೇರಿ ಗ್ರಾಮದ ನಿವಾಸಿ ಚಿನ್ನಮಾಡ ಅಶೋಕರವರು ಅವರ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಲಾಟರಿ ಟಿಕೆಟ್ ಮಾರಾಟ ವ್ಯಕ್ತಿಯ ಬಂಧನ.

                   ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಗಳನ್ನು ಪೊನ್ನಂಪೇಟೆ ನಗರದಲ್ಲಿ ಮಾರಾಟ ಮಾಡುತ್ತಿದ್ದ ಕುಟ್ಟ ಗ್ರಾಮದ ನಿವಾಸಿ ರಾಜ ಎಂಬುವವರನ್ನು ಪೊನ್ನಂಪೇಟೆ ಠಾಣೆಯ ಉಪನಿರೀಕ್ಷಕರಾದ ಜಯರಾಮ್ ರವರು ಪತ್ತೆಹಚ್ಚಿ ರಾಜರವರಿಂದ ಕೇರಳ ರಾಜ್ಯದ 150 ಲಾಟರಿ ಟಿಕೆಟ್ ಗಳನ್ನು ಹಾಗೂ ನಗದು 2,520 ರೂಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.