Tuesday, March 21, 2017

ರಸ್ತೆ ಅಪಘಾತ - ಸಾಮಾಜಿಕ ಜವಾಬ್ದಾರಿ  ಮುಖ್ಯ - ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌.
                  ರಸ್ತೆ ಅಪಘಾತಗಳಲ್ಲಿ ಪ್ರತಿ ನಾಗರಿಕನ ಜವಾಬ್ದಾರಿಯುತ ಪ್ರತಿಕ್ರಿಯೆಯು ಅನೇಕ ಪ್ರಾಣಗಳನ್ನು ಉಳಿಸಬಲ್ಲುದು ಎಂದು ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ  ಶ್ರೀ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರು ಅಭಿಪ್ರಾಯಪಟ್ಟರು.
ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡುತ್ತಿರುವ ಎಸ್‌.ಪಿ ರಾಜೇಂದ್ರ ಪ್ರಸಾದ್‌, ಐಪಿಎಸ್‌

               ಅವರು ಇಂದು ಮಡಿಕೇರಿ ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಸಹಯೋಗದೊಂದಿಗೆ ಪೊಲೀಸ್‌ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡುತ್ತಿದ್ದರು. 
ಸಿಬ್ಬಂದಿಗಳಿಗೆ ಮಾಹಿತಿ ನೀಡುತ್ತಿರುವ  ತಜ್ಞ ವೈದ್ಯರು
ಜೀವರಕ್ಷಕ ಸಾಮಗ್ರಿಗಳ  ಬಗ್ಗೆ ಮಾಹಿತಿ ನೀಡುತ್ತಿರುವ  ವೈದ್ಯಕೀಯ ಸಿಬ್ಬಂದಿಗಳು
             ಅಮೆರಿಕಾದಂತಹ ಮುಂದುವರೆದ ದೇಶದಲ್ಲಿ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹಾಗೂ ವಾಹನ ಅಪಘಾತಗಳು ಸಂಭವಿಸುತ್ತಿದ್ದರೂ ಸಹಾ ಅಲ್ಲಿ ಭಾರತಕ್ಕಿಂತ ವಾಹನ ಅಪಘಾತಗಳಿಂದ ಸಂಭವಿಸುವ ಮರಣಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಇದಕ್ಕೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಾಗರಿಕರ, ವೈದ್ಯರ ಮತ್ತು ಪೊಲೀಸ್‌ ಇಲಾಖೆಯ ತುರ್ತು ಸ್ಪಂದನೆಯೇ ಪ್ರಮುಖ ಕಾರಣವಾಗಿದ್ದು, ಇದೇ ರೀತಿ ಭಾರತದಲ್ಲೂ ಸಹಾ ಯಾವುದೇ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಿ ಗಾಯಾಳುಗಳ ಪ್ರಾಣ ಉಳಿಸಲು "ಅಮೃತ ಘಳಿಗೆ"ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಮಾಜದ, ವೈದ್ಯಾಧಿಕಾರಿಗಳ ಮತ್ತು ಪೊಲೀಸ್‌ ಇಲಾಖೆಯ ಪಾತ್ರ ಅತಿ  ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಪ್ರಕಾರ ಮಾನವೀಯ ನೆಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ತುರ್ತು ಚಿಕಿತ್ಸೆಗೆ ಸ್ಪಂದಿಸುವ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಯಾವುದೇ ಇಲಾಖೆಯಿಂದ ತೊಂದರೆಯುಂಟಾಗುವುದಿಲ್ಲ ಆದ್ದರಿಂದ ಅಪಘಾತದ ಸಂದರ್ಭದಲ್ಲಿ ಎಲ್ಲಾ ನಾಗರಿಕರು ಪೊಲೀಸರ  ಅಥವಾ ವೈದ್ಯರ ಬರುವಿಕೆಯನ್ನು ಕಾಯದೆ ಗಾಯಾಳುಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ಕರೆಯಿತ್ತರು.
              ಕಾರ್ಯಾಗಾರದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉತ್ತಮ ರೀತಿಯ ವಿವರಣೆ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ನೀಡಿದರು.
              ಕಾರ್ಯಾಗಾರದಲ್ಲಿ ಕೊಡಗು ಜಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಕ್ರಮ ಮರಳು ಸಾಗಾಟ
                     ದಿನಾಂಕ 20/03/2017ರಂದು ಶನಿವಾರಸಂತೆ ನಗರದ ಪ್ರದೀಪ್‌ ಮತ್ತು ಲೋಹಿತ್‌ ಎಂಬವರು ಕೆಎ-21-ಎ-9178ರ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿಯಿಲ್ಲದೆ ಮರಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಠಾಣೆ ಎಸ್‌ಐ ಬಿ.ಎಸ್‌.ಜನಾರ್ಧನರವರು ಟಿಪ್ಪರ್ ಸಮೇತ ಮರಳನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
              ದಿನಾಂಕ 19/03/2017ರಂದು ಸೋಮವಾರಪೇಟೆ ಬಳಿಯ ಯಡವಾರೆ ಗ್ರಾಮದ ನಿವಾಸಿ ಲೋಕೇಶ್‌ ಎಂಬವರು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಎರೆಪಾರೆ ಗ್ರಾಮದ ಬಳಿ ಬಾಣಾವಾರ ಗ್ರಾಮದ  ರಾಕೇಶ್‌, ಪ್ರಸಿದ್ದ್, ಮಧು ಮತ್ತು ರವಿ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಲೋಕೇಶ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
              ದಿನಾಂಕ 20/03/2017ರಂದು ಸೋಮವಾರಪೇಟೆ ಬಳಿಯ ಯಡವನಾಡು ನಿವಾಸಿ ಪ್ರವೀಣ ಎಂಬವರು ಸೋಮವಾರಪೇಟೆ ನಗರದಲ್ಲಿ ರಿಕ್ಷಾವೊಂದರಲ್ಲಿ ಹೋಗುತ್ತಿರುವಾಗ ಲೋಕೇಶ್ ಎಂಬಾತನು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಪ್ರವೀಣರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                 ದಿನಾಂಕ 19/03/2017ರಂದು ಶ್ರೀಮಂಗಲ ಬಳಿಯ ವೆಸ್ಟ್‌ ನೆಮ್ಮಲೆ ಗ್ರಾಮದ ನಿವಾಸಿ ಸಿ.ಎ.ಬೋಪಣ್ಣ ಎಂಬವರು ಕಾಫಿ ಕಣದಲ್ಲಿ  ಕೆಲಸ ಮಾಡಿಕೊಂಡಿರುವಾಗ ಅಲ್ಲಿಗೆ ಬಂದ ಪಣಿ ಎರವರ ಬೋಜ ಎಂಬಾತನನ್ನು ಕುರಿತು ಕಣಕ್ಕೆ ಬಾರದಂತೆ ಹೇಳಿದ ಕಾರಣಕ್ಕೆ ಬೋಜ ಮತ್ತು ಆತನ  ತೋಟದ  ಮಾಲೀಕರಾದ  ಅಚ್ಚಪ್ಪ ಮತ್ತು ನಂದಪ್ಪ ಎಂಬವರು ಸೇರಿಕೊಂಡು ಬೋಪಣ್ಣರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 12/03/2017ರಂದು ಮಡಿಕೇರಿ ನಗರದ ಚೈನ್‌ ಗೇಟ್ ಬಳಿಯ ನಿವಾಸಿ ಸ್ವಾಮಿ ಎಂಬವರ ಮನೆಯ ಪಕ್ಕದ ಜಾಗದಲ್ಲಿದ್ದ ಗುರುತಿನ ಕಲ್ಲನ್ನು ಸುರೇಂದ್ರ ಎಂಬವರು ಅಕ್ರಮವಾಗಿ ಕಿತ್ತುಹಾಕಿ ಅವರ ಕಲ್ಲನ್ನು ನೆಟ್ಟು ಜಾಗ ಗುರುತಿಸಿದ್ದು ನಂತರ ಸುರೇಂದ್ರರವರು ಸ್ವಾಮಿಯನ್ನು ಕುರಿತು ಅಲ್ಲಿಂದ ಖಾಲಿ ಮಾಡುವಂತೆ ತಿಳಿಸಿ ಸ್ವಾಮಿಯವರು ಸೇರಿದ ಪರಿಶಿಷ್ಟ ಜಾತಿಯನ್ನು ನಿಂದಿಸಿದುದಲ್ಲದೆ ಸುರೇಂದ್ರರವರ ಅಣ್ಣ ಮತ್ತು ತಂಗಿ ಮೂವರೂ ಸೇರಿಕೊಂಡು ಹಲ್ಲೆ ಮಾಡಿ ಸ್ವಾಮಿಯವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ  ದೂರು ನೀಡಿದ್ದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟಾಣಿ  ನಗರದ ನಿವಾಸಿ ಎನ್‌.ಎಸ್‌.ಪುಷ್ಪ ಎಂಬವರು  ಸ್ವಾಮಿ, ಕಾವ್ಯ, ತಂಗಚ್ಚನ್ ಮತ್ತು ಸ್ವಾಮಿಯ ಭಾವ ಸೇರಿಕೊಂಡು ಪುಷ್ಪರವರ ಮೇಲೆ ಹಲ್ಲೆ ಮಾಡಿರುವುದಾಗಿಯೂ  ಮಡಿಕೇರಿ ನಗರ  ಠಾಣೆಯಲ್ಲಿ  ದೂರು ನೀಡಿದ್ದು  ಮಡಿಕೇರಿ  ನಗರ ಪೊಲೀಸರು ಎರಡೂ ದೂರುಗಳ ಮೇಲೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                ದಿನಾಂಕ 19/03/2017ರಂದು  ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ನಿವಾಸಿ ವೈ.ಟಿ. ಮಾರ ಎಂಬಾತನು ಯಾವುದೋ ಕಾರಣಕ್ಕೆ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ
                 ಸೋಮವಾರಪೇಟೆ ಬಳಿಯ ಹಂಪಾಪುರ ಬಳಿಯ ನಿವಾಸಿ ತಮ್ಮಣಿ ಎಂಬವರು ದಿನಾಂಕ  02/02/2017ರಂದು  ಗಾರೆ ಕೆಲಸಕ್ಕೆಂದು ಹೋದವರು ಇದುವರೆಗೂ ಮರಳಿ ಮನೆಗೆ ಬಾರದಿದ್ದು, ನೆಂಟರಿಷ್ಟರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ತಮ್ಮಣಿಯವರ ಪತ್ನಿ ಸೌಮ್ಯರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ
              ದಿನಾಂಕ 20/03/2017ರಂದು ಮೈಸೂರು ನಿವಾಸಿ ಮುತ್ತುಮೈಲ್ ಎಂಬವರು ಅವರ ಕಾರಿನಲ್ಲಿ ಭಾಗಮಂಡಲದಿಂದ  ತಲಕಾವೇರಿ ಕಡೆಗೆ  ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-03-ಎಂಎನ್‌-6981ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮುತ್ತುಮೈಲ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿ ಕಾರಿನಲ್ಲಿದ್ದ ಮುತ್ತುಮೈಲ್‌ರವರ ಪತ್ನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್‌ ಡಿಕ್ಕಿ
                     ದಿನಾಂಕ 20/03/2017ರಂದು ಕುಶಾಲನಗರ ಬಳಿಯ ಕೂಡುಮಂಗಳೂರು ನಿವಾಸಿ ಕೃಷ್ಣಪ್ಪ ಎಂಬವರು ಅವರ ಮೋಟಾರು ಬೈಕ್‌ ಸಂಖ್ಯೆ ಕೆಎ-12-ಕೆ-5863ರಲ್ಲಿ ಕೂಡಿಗೆ ಕಡೆಯಿಂದ ಅವರ ಮನೆಗೆ ಹೋಗುತ್ತಿರುವಾಗ ವಿಜಯಪುರ ಜಂಕ್ಷನ್‌ ಬಳಿ ಹಿಂದುಗಡೆಯಿಂದ ಕೆಎ-12-ಎಲ್‌-9380ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ಕೃಷ್ಣಪ್ಪನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಬೈಕ್‌ಗಳ ಸವಾರರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿಯ ಹಲ್ಲೆ
                       ದಿನಾಂಕ 20/03/2017ರಂದು ಸೋಮವಾರಪೇಟೆ ಬಳಿಯ ಶಾಂತಳ್ಳಿ ನಿವಾಸಿ ಧರ್ಮಪ್ಪ ಎಂಬವರು ಆತನ ಪತ್ನಿ ಪಾರ್ವತಿ ಎಂಬಾಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಜೀಪು ಡಿಕ್ಕಿ
                 ದಿನಾಂಕ 18/03/2017ರಂದು ಪೊನ್ನಂಪೇಟೆ ನಿವಾಸಿ ಹೆಚ್‌.ಡಿ.ಜವರಯ್ಯ ಎಂಬವರು ಅವರ ಸ್ಕೂಟರನ್ನು ಚಾಲಿಸಿಕೊಂಡು ಹೋಗುತ್ತಿರುವಾಗ ಜೋಡುಬೆಟ್ಟಿಯ ಬಳಿ ಅವರ ಹಿಂದುಗಡೆಯಿಂದ ಕೆಎ-12-ಬಿ-3256ರ ಪಿಕ್‌ಅಪ್‌ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜವರಯ್ಯನವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಜವರಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ಕಳ್ಳತನ
                    ಕುಶಾಲನಗರ ಬಳಿಯ ಬೊಳ್ಳೂರು ಗ್ರಾಮದಲ್ಲಿರುವ ಅಮನ್‌ವನ ರೆಸಾರ್ಟಿಗೆ ದಿನಾಂಕ 20/03/2017ರಂದು ಬಂದಿದ್ದ ಉತ್ತರ ಭಾರತದ ನಿವಾಸಿ ಶಶಾಂಕ್‌ ಜೈನ್‌ರವರು ಪಡೆದಿದ್ದ ಕೊಠಡಿ ಸಂಖ್ಯೆ 203ರಲ್ಲಿ ಇರಿಸಿದ್ದ ಅವರ ಹಣದ ಪರ್ಸಿನಿಂದ ರೂ.9,000/-ದಷ್ಟು ಹಣ ಕಳುವಾಗಿರುವುದಾಗಿ ತಿಳಿಸಿದ್ದು, ಈ ಹಿಂದೆಯೂ ರೆಸಾರ್ಟಿನಲ್ಲಿ ಚಿನ್ನದ ಆಭರಣಗಳು ಕಳವಾಗಿದ್ದು, ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿರುವ ಬೈರಪ್ಪ ಮತ್ತು ಕೀರ್ತಿ ಎಂಬವರು ಕಳವು ಮಾಡಿರುವ ಸಂಶಯವಿರುವುದಾಗಿ ರೆಸಾರ್ಟಿನ ಅಧಿಕಾರಿ ನವೀನ್‌ ಕುಮಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.