Monday, April 17, 2017

 ಪತ್ರಿಕಾ ಪ್ರಕಟಣೆ
ಸುಧಾರಿತ ಗಸ್ತು - ಜನಸ್ನೇಹಿ ಪೊಲೀಸ್‌
                        ಏಪ್ರಿಲ್ 01, 2017 ರಿಂದ ರ್ನಾಟಕ ರಾಜ್ಯಾದ್ಯಂತ ಪೊಲೀಸ್‌ ಇಲಾಖೆಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದಿದ್ದು, ಹಿಂದೆ ನಡೆಸುತ್ತಿದ್ದ ಬೀಟ್ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ "ಜನಸ್ನೇಹಿ ಪೊಲೀಸ್" ಮತ್ತು "ಸಮುದಾಯದತ್ತ ಪೊಲೀಸ್" ಎಂಬ ಪರಿಕಲ್ಪನೆಯಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಒಂದು ಅಥವಾ ಎರಡು ಗ್ರಾಮಗಳಿಗೆ ಒಬ್ಬರು ಸಿಬ್ಬಂದಿಯಂತೆ ನೇಮಿಸಲಾಗಿದೆ. "ಪ್ರದೇಶಕೊಬ್ಬ ಪೊಲೀಸ್" ಎಂಬ ತತ್ವದಡಿಯಲ್ಲಿ ಗ್ರಾಮ ಗಸ್ತಿಗೆ ನೇಮಿಸಲ್ಪಟ್ಟ ಸಿಬ್ಬಂದಿಯವರು ಗಸ್ತಿನಲ್ಲಿ ಒಂದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದಾರೆ. ಸದರಿ ಸಿಬ್ಬಂದಿಯವರು ತಿಂಗಳಲ್ಲಿ ಎರಡು ಗ್ರಾಮ ಗಸ್ತುಗಳನ್ನು ನಿರ್ವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ತಿಂಗಳಿಗೆ ಒಂದು ಬಾರಿ ಸದರಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಗಳಲ್ಲಿ ಒಳ್ಳೆಯ ಚಾರಿತ್ರ್ಯ ಉಳ್ಳವರನ್ನು ಬೀಟ್ ಸದಸ್ಯರನ್ನಾಗಿ ನೇಮಿಸಿಕೊಂಡು ಅವರಿಂದ ಗ್ರಾಮಗಳ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ, ಹಾಗೂ ಸದರಿ ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ದೂರು ಅರ್ಜಿ, ಪಾಸ್‌ಪೋರ್ಟ್‌  ವಿಚಾರಣೆ, ಗುಣ ನಡತೆ ವಿಚಾರಣೆ, ಇತ್ಯಾದಿಗಳನ್ನು ಸಿಬ್ಬಂದಿಯವರೇ ಮಾಡಲಿದ್ದಾರೆ. ಗ್ರಾಮ ಗಸ್ತಿಗೆ ನೇಮಿಸಿದ ಸಿಬ್ಬಂದಿಯವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರು ಸದರಿ ಗ್ರಾಮದ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸುವ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿದ್ದು ಇದರಿಂದಾಗಿ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಸಾಮರಸ್ಯವೇರ್ಪಟ್ಟು ಉತ್ತಮ ಬಾಂಧವ್ಯ ನಿರ್ಮಾಣವಾಗಲು  ಸಹಕಾರಿಯಾಗುತ್ತದೆ. ಪೊಲೀಸ್ ಠಾಣೆಗಳಲ್ಲಿರುವ ಗ್ರಾಮಗಳಿಗೆ ಗಸ್ತು ಕರ್ತವ್ಯಕ್ಕೆ ನೇಮಕವಾಗುವ ಸಿಬ್ಬಂದಿಯವರ ಹೆಸರು, ಹುದ್ದೆ ಹಾಗೂ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಯ ಮುಖ್ಯದ್ವಾರದ ಬಳಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲಾಗಿರುತ್ತದೆ . ಕೊಡಗು ಜಿಲ್ಲಾ ಪೊಲೀಸ್ ಉಪ-ವಿಭಾಗ, ವೃತ್ತ ಹಾಗೂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ನೂತನ ಸಿಮ್‌ ಕಾರ್ಡ್‌ಗಳನ್ನು  ನೀಡಲಾಗಿದ್ದು, ದೂರವಾಣಿ ಸಂಖ್ಯೆಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್ ಐಪಿಎಸ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾದಚಾರಿಗೆ ಬೈಕ್ ಡಿಕ್ಕಿ
                     ದಿನಾಂಕ 15/04/2017ರಂದು ಕುಶಾಲನಗರ ಬಳಿಯ ಕೂಡಿಗೆ ನಿವಾಸಿ ರಾಮು ಎಂಬವರು ಕೂಡಿಗೆ ಕ್ರೀಡಾ ಶಾಲೆಗೆ ಕೆಲಸಕ್ಕೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರ ಕಡೆಯಿಂದ ಕೆಎ-12-ಕ್ಯು-6061ರ ಮೋಟಾರು ಬೈಕನ್ನು ಅದರ ಚಾಲಕ ಯಲಕನೂರು ಹೊಸಳ್ಳಿ ನಿವಾಸಿ ವೆಂಕಟೇಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                    ದಿನಾಂಕ 16/04/2017ರಂದು ಶ್ರೀಮಂಗಲ ಬಳಿಯ ಬೀರುಗ ನಿವಾಸಿ ನಾಗ ಎಂಬವರು ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ನಾಗ ಅನಾರೋಗ್ಯಪೀಡಿತನಾಗಿದ್ದು  ವಿಪರೀತ ಮದ್ಯವ್ಯಸನಿಯಾಗಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಸಾವು
                     ಪೊನ್ನಂಪೇಟೆ ನಗರದ ಜನತಾ ಕಾಲೋನಿ ನಿವಾಸಿ ಸೈದಾಲಿ ಎಂಬವರು ಸುಮಾರು ಒಂದು ವರ್ಷದಿಂದ ಗ್ಯಾಸ್ಟ್ರಿಕ್ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 14/04/2017ರಂದು ವಿಪರೀತ ಹೊಟ್ಟೆನೋವು  ಬಂದಿದ್ದು  ಅದನ್ನು ತಾಳಲಾರದೆ ಮನೆಯಲ್ಲಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ಅವರನ್ನು ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16/04/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.