Tuesday, April 18, 2017

                        ಪತ್ರಿಕಾ ಪ್ರಕಟಣೆ

          ಕೊಡಗು ಜಿಲ್ಲೆಯಲ್ಲಿ ರಾತ್ರಿಯ ವೇಳೆ ಕಳವು ಪ್ರಕರಣಗಳು ನೆಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರದಲ್ಲಿ ತಂಡಗಳನ್ನು ರಚಿಸಿ ವಿಶೇಷ ರಾತ್ರಿ ಗಸ್ತು ನೆಡೆಸುವ ಬಗ್ಗೆ ಈ ತಂಡಗಳಿಗೆ ತಿಳುವಳಿಕೆಯನ್ನು ನೀಡಿದ್ದು, ದಿನಾಂಕ: 17-04-2017 ರಂದು ರಾತ್ರಿ ಕುಶಾಲನಗರ ಟೌನ್ ಪಿಎಸ್ಐ ಶ್ರೀ ಪಿ. ಜಗದೀಶ್ ರವರು ಕುಶಾಲನಗರ ಪಟ್ಟಣದಲ್ಲಿ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ್ಗೆ, 17/18.04.2017 ರ 00.15 ಗಂಟೆಗೆ ಕುಶಾಲನಗರ ಗುಂಡೂರಾವ್ ಬಡಾವಣೆಯ ಜಾತ್ರೆ ಮೈದಾನದ ಬಳಿ ಇರುವ ಮರದ ಕೆಳಗೆ 5 ಜನ ವ್ಯಕ್ತಿಗಳು ಒಂದು ಆಟೋ ರಿಕ್ಷಾ ನಿಲ್ಲಿಸಿಕೊಂಡು ಅಪಾಯಕಾರಿ ಆಯುಧಗಳೊಂದಿಗೆ ಗುಂಪು ಸೇರಿಕೊಂಡು ದರೋಡೆ ನೆಡೆಸಲು ಸಂಚು ರೂಪಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಿಎಸ್ಐ ರವರು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಈ ಮಾಹಿತಿಯನ್ನು ಆಧರಿಸಿ ಕುಶಾಲನಗರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಕ್ಯಾತೇಗೌಡ ರವರು ಹಾಗೂ ಕುಶಾಲಕಗರ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಪಿ ಜಗದೀಶ್ ಹಾಗೂ ಸಿಬ್ಬಂದಿಯವರೊಂದಿಗೆ ಗುಂಡೂರಾವ್ ಬಡಾವಣೆಯ ಜಾತ್ರೆ ಮೈದಾನದಲ್ಲಿ ಮಾಹಿತಿ ಬಂದ ಜಾಗದಲ್ಲಿ ದಾಳಿ ಮಾಡಲಾಗಿ, ಸದರಿ ಸ್ಥಳದಲ್ಲಿ 5 ಜನರು ಒಂದು ಆಟೋ ರಿಕ್ಷಾ ಸಂಖ್ಯೆ. ಕೆಎ-12 ಎ-4940 ರಲ್ಲಿ ಇದ್ದು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿಯವರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ.

1. ಸಂಜಯ್ ಕುಮಾರ್ @ ಸಂಜಯ್ ಎಂ.ಎ ತಂದೆ ಅರವಿಂದ, 25 ವರ್ಷ, ವಾಸ ಗಾಂಧಿನಗರ, ಸೋಮವಾರಪೇಟೆ

2. ರವಿ ಪಿ.ಕೆ ತಂದೆ ಚಿದಂಬರನ್, 30 ವರ್ಷ, ಗಾರೆ ಕೆಲಸ, ವಾಸ ಗಾಂಧಿ ನಗರ ಬಾಣೆ, ಚೌಡ್ಲು ಗ್ರಾಮ, ಸೋಮವಾರಪೇಟೆ 

3. ಇಸ್ಮಾಯಿಲ್ .ಎ ತಂದೆ ಲೇ|| ಅನ್ವರ್, 28 ವರ್ಷ, ಆಟೋ ಚಾಲಕ, ವಾಸ ಎಣ್ಣೆ ವ್ಯಾಪಾರಿ ಮಧುರವರ ಬಾಡಿಗೆ            
    ಮನೆಯಲ್ಲಿ,  ಗೌಡ ಸಮಾಜ ರಸ್ತೆ, ಗಾಂಧಿನಗರ, ಸೋಮವಾರಪೇಟೆ.

4. ಸುದೇವ. ಸಿ.ಎಸ್ ತಂದೆ ಲೇ|| ಶಾಂತಪ್ಪ, 35 ವರ್ಷ, ವ್ಯವಸಾಯ, ವಾಸ ಆಲೇಕಟ್ಟೆ ರಸ್ತೆ, ಚೌಡ್ಲು ಗ್ರಾಮ,
    ಸೋಮವಾರಪೇಟೆ.

5. ಚಂದ್ರ .ಎನ್.ಸಿ ತಂದೆ ಲೇ|| ಚಂಗಪ್ಪ, 42 ವರ್ಷ, ಕೂಲಿ ಕೆಲಸ, ವಾಸ ಭಾರತಿ ಕಂಪೆನೆ ಎಸ್ಟೇಟ್ ಲೈನ್ ಮನೆ,
    ಹಾನಗಲ್ಲು   ಗ್ರಾಮ, ಸೋಮವಾರಪೇಟೆ.          

          ಸದರಿ ಸ್ಥಳದಲ್ಲಿದ್ದ ಆಟೋರಿಕ್ಷಾವನ್ನು ಪರಿಶೀಲಿಸಲಾಗಿ ಅದರಲ್ಲಿ 2 ಕಬ್ಬಿಣದ ಲಾಂಗ್ಗಳು, 2 ಕಾಡುಮರದ ದೊಣ್ಣೆಗಳು, ನೂಲಿನ ಹಗ್ಗ, ಮತ್ತು ಮೆಣಸಿನಪುಡಿಯ ಕವರ್ ಇವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

         ಸದರಿ ಆರೋಪಿಗಳು ವಿಚಾರಣಾ ವೇಳೆಯಲ್ಲಿ ಪ್ರಮುಖ ಆರೋಪಿ ಸಂಜಯ್ ಕುಮಾರ್ @ ಸಂಜಯ್ ಈತನು ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ, ಮೈಸೂರು ಮುಂತಾದ ಕಡೆಗಳಲ್ಲಿ 5 ಮನೆಕನ್ನಾಕಳವು, 1 ಕರಿಮೆಣಸು ಕಳವು, 3 ದೇವಸ್ಥಾನ ಕಳವು, 3 ಮೋಟಾರ್ಸೈಕಲ್ ಕಳವು ಪ್ರಕರಣಗಳು ಸೇರಿ ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯ ವೇಳೆ ತಿಳಿದುಬಂದಿರುತ್ತದೆ. ಉಳಿದ ಆರೋಪಿಗಳು ತಲಾ ಒಂದೊಂದು ಕನ್ನಾ ಕಳವು ಪ್ರಕರಣಗಳನ್ನು ಭಾಗಿಯಾಗಿರುವುದು ತಿಳಿದುಬಂದಿರುತ್ತದೆ.

        ಮೇಲ್ಕಂಡ ಆರೋಪಿಗಳು ಡಕಾಯಿತಿ ಮಾಡಲು ಸಂಚು ರೂಪಿಸುತ್ತಿದ್ದುದರ ಬಗ್ಗೆ ಕುಶಾಲನಗರ ನಗರ ಪೊಲೀಸ್ ಠಾಣೆ : ಮೊ.ಸಂ. 27/17 ಕಲಂ 399, 402 ಐಪಿಸಿ ರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.

       ಅಲ್ಲದೇ ಪ್ರಮುಖ ಆರೋಪಿ ಸಂಜಯ್ಕುಮಾರ್ ವಿರುದ್ಧ ಕುಶಾಲನಗರ ನ್ಯಾಯಾಲಯದ 2 ಪ್ರಕರಣಗಳಲ್ಲಿ ಸೋಮವಾರಪೇಟೆ ನ್ಯಾಯಾಲಯದ 5 ಪ್ರಕರಣಗಳಲ್ಲಿ ಚೆನ್ನರಾಯಪಟ್ಟಣ ನ್ಯಾಯಾಲಯದ 1 ಪ್ರಕರಣದಲ್ಲಿ ಹಾಗೂ ಅರಕಲಗೂಡು ನ್ಯಾಯಾಲಯದ 1 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಲ್ಲಿ ದಸ್ತಗಿರಿ ವಾರಂಟ್ ಜಾರಿಯಾಗಿದ್ದು, ಆರೋಪಿಯು ಸದರಿ ಪ್ರಕರಣಗಳ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಮತ್ತೊಬ್ಬ ಆರೋಪಿ ರವಿ.ಪಿ.ಕೆ ಗೆ ಸೋಮವಾರಪೇಟೆ ಠಾಣೆಯ ಮೊಕದ್ದಮೆ ಸಂಖ್ಯೆ. 95/2009 ಕಲಂ. 457, 380 ಐಪಿಸಿ ಪ್ರಕರಣದಲ್ಲಿ 2010 ನೇ ಸಾಲಿನಲ್ಲಿ ಸಜೆ ಆಗಿದ್ದು, ಪೂರ್ವಸಜಾ ಆಸಾಮಿಯಾಗಿರುತ್ತಾನೆ.

        ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸೋಮವಾರಪೇಟೆ ರವರ ನೇತೃತ್ವದಲ್ಲಿ ಕುಶಾಲನಗರ ಸಿಪಿಐ, ಕುಶಾಲನಗರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಜಗದೀಶ್. ಪಿ, ಕುಶಾಲನಗರದ ವಿಶೇಷ ಅಪರಾಧ ಪತ್ತೆ ತಂಡದ ಎಎಸ್ಐ ಶ್ರೀ ಗೋಪಾಲ್ ಸಿಬ್ಬಂದಿಯವರಾದ ಶ್ರೀ. ಸಜಿ, ಶ್ರೀ.ಸುಧೀಶ್ ಕುಮಾರ್, ಶ್ರೀ. ಸುರೇಶ್, ಶ್ರೀ ಮುಸ್ತಾಫ, ಶ್ರೀ ಉದಯಕುಮಾರ್, ಶ್ರೀ ಸಂಪತ್ ರೈ, ಶ್ರೀ ಅಜಿತ್, ಶ್ರೀ.ಲೋಕೇಶ್, ಚಾಲಕರಾದ ಶ್ರೀ ಪ್ರವೀಣ್ ಮತ್ತು ಶ್ರೀ. ಗಣೇಶ್, ಶ್ರೀ ರಾಜೇಶ್ ಹಾಗೂ ಶ್ರೀ.ಗಿರೀಶ್ ರವರು ಸದರಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
       ಸದರಿ ಆರೋಪಿಗಳಿಂದ ರೂ. 8,81,000/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತದೆ.

1) 200 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ ರೂ. 600,000/-.
2) 150 ಗ್ರಾಂ ಬೆಳ್ಳಿ ಆಭರಣಗಳು, ಅಂದಾಜು ಮೌಲ್ಯ ರೂ. 6000/-.
3) 3 ಮೋಟಾರ್ ಸೈಕಲ್ಗಳು, ಅಂದಾಜು ವೌಲ್ಯ ರೂ 1.50,000/-.
4) 225 ಕೆಜಿ ಕರಿಮೆಣಸು, ಅಂದಾಜು ಮೌಲ್ಯ ರೂ. 1,25,000/-.
       ಮೇಲ್ಕಂಡ ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಿ ಹಲವಾರು ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ ಮೇಲ್ಕಂಡ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ಮಾನ್ಯ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ವ್ಯಕ್ತಿಯ ಆಕಸ್ಮಿಕ ಸಾವು
                  ದಿನಾಂಕ 16/04/2017ರಂದು ಪೊನ್ನಂಪೇಟೆ ಬಳಿಯ ನಲ್ಲೂರು ಗ್ರಾಮದಲ್ಲಿ ಸೇತುವೆ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ನಿವಾಸಿ ಬಸವಶೆಟ್ಟಿ ಎಂಬವರು ನಲ್ಲೂರು ಗ್ರಾಮದ ನಿವಾಸಿ ಪುಳ್ಳಂಗಡ ನರೇಂದ್ರ ಎಂಬವರ ತೋಟದ ಕೆರೆಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾಕಾನೆ ಧಾಳಿ, ವ್ಯಕ್ತಿ ಮರಣ
                 ದಿನಾಂಕ 17/04/2017ರಂದು ಸಿದ್ದಾಪುರ ಬಳಿಯ  ಕರಡಿಗೋಡು ಗ್ರಾಮದ ದುಬಾರೆ ಹಾಡಿಯ ನಿವಾಸಿ ಅಣ್ಣು ಎಂಬವರು ಅವರ ಮನೆಯ ಮುಂದೆ ಕಟ್ಟಿ ಹಾಕಿದ್ದ ರಂಜನ್ ಎಂಬ ಆನೆಯನ್ನು ಕ್ಯಾಂಪ್‌ಗೆ ಕರೆದುಕೊಂಡು ಹೋಗಲು ಸರಪಳಿ ಬಿಚ್ಚುತ್ತಿರುವಾಗ ಪಕ್ಕದಲ್ಲಿದ್ದ ಕಾರ್ತಿಕ್‌ ಎಂಬ ಸಾಕಾನೆಯು ಏಕಾ ಏಕಿ ಅಣ್ಣುರವರನ್ನು ಸೊಂಡಿಲಿನಿಂದ ಎಳೆದು ದಂತದಿಂದ ಹೊಟ್ಟೆಯ ಬಲಭಾಗಕ್ಕೆ ಚುಚ್ಚಿ ಗಾಯಗೊಳಿಸಿದ ಪರಿಣಾಮ ಅಣ್ಣುರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಟ್ಯಾಂಕರ್ ಡಿಕ್ಕಿ
                   ದಿನಾಂಕ 17/04/2017ರಂದು ಮಂಗಳೂರು ನಿವಾಸಿ ನಾಗೇಶ ಎಂಬವರು ಮಂಗಳೂರಿನಿಂದ ಇಂಡಿಯನ್‌ ಆಯಿಲ್ ಕಂಪೆನಿಯ ಡೀಸೆಲ್ನ್ನು ಕೆಎ-04-ಡಿ-8738ರ ಟ್ಯಾಂಕರ್ ಲಾರಿಯಲ್ಲಿ ತುಂಬಿಸಿಕೊಂಡು ಕೂಡಿಗೆಯ ಕಡೆಗೆ ಬರುತ್ತಿರುವಾಗ ಮಡಿಕೇರಿಯ ಬಳಿ ಜೋಡುಪಾಲ ಎಂಬಲ್ಲಿ ಎದುರಿನಿಂದ ಕೆಎ-30-8355 ಸಂಖ್ಯೆಯ ಟ್ಯಾಂಕರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗೇಶ್‌ರವರು ಚಾಲಿಸುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿಪಡಿಸಿದ ಪರಿಣಾಮ ನಾಗೇಶ್‌ರವರಿಗೆ ಗಾಯಗಳಾಗಿದ್ದು ಟ್ಯಾಂಕರ್‌ಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 17/04/2017ರಂದು ಕೊಡ್ಲಿಪೇಟೆ ಬಳಿಯ  ಶಿವಾರಳ್ಳಿ ನಿವಾಸಿ ಎಸ್‌.ಪಿ.ಸುಬ್ರಾಯ ಎಂಬವರು ಅವರ ಮನೆಯ ಮುಂದೆ ಅಳವಡಿಸಿದ್ದ ಪಂಚಾಯಿತಿಯ ನಲ್ಲಿಯಿಂದ ನೀರು ಹಿಡಿಯುತ್ತಿರುವಾಗ ಅದೇ ಗ್ರಾಮದ ಕುಶಾಲ ಮತ್ತು ಸವಿತ ಎಂಬವರು ಬಂದು ನೀರು ಹಿಡಿಯುವ ವಿಚಾರದಲ್ಲಿ ಜಗಳವಾಡಿ ಸುಬ್ರಾಯರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.