Sunday, April 2, 2017

 ಸಮಾಜದ ರಕ್ಷಣೆ ಪೊಲೀಸರ ಹೊಣೆ  - ವೈ.ಡಿ.ಕೇಶವಾನಂದ
                       ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ಇತರ ಇಲಾಖೆಯಂತಲ್ಲದೆ ದಿನದ 24 ಗಂಟೆಯೂ ಎಲ್ಲಾ ತುರ್ತು ಕರ್ತವ್ಯಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆ ಪೊಲೀಸ್‌ ಇಲಾಖೆಯ ಮೇಲಿದೆ ಎಂದು ನಿವೃತ್ತ ಡಿವೈಎಸ್‌ಪಿ ವೈ.ಡಿ.ಕೇಶವಾನಂದ ಅಭಿಪ್ರಾಯ ಪಟ್ಟರು.
 
                       ಇಂದು ಮಡಿಕೇರಿ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್‌ ಧವಜ ದಿನಾಚರಣೆ ಮತ್ತು ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಟ್ರೋಫಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ದಿನದ 24 ಗಂಟೆಯೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಹಾಗೂ ನಿವೃತ್ತ ಪೊಲೀಸ್‌ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರದಿಂದ ಹೆಚ್ಚಿನ ಯೋಜನೆಗಳ ಅಗತ್ಯತೆ ಇದೆ ಎಂದು ಅವರು ಹೇಳಿದರು.

                         ಸಮಾರಂಭವನ್ನು ಸ್ವಾಗತಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯ ಮತ್ತು ವೈದ್ಯಕೀಯ ವೆಚ್ಚಗಳಿಗೆ ಪೊಲೀಸ್‌ ಕ್ಷೇಮಾಭಿವೃದ್ದಿ ನಿಧಿಯಿಂದ ಆರ್ಥಿಕ ಸಹಾಯ ಒದಗಿಸುತ್ತಿದ್ದು ಪ್ರಸಕ್ತ ವರ್ಷದಲ್ಲಿ ಒದಗಿಸಲಾದ ಆರ್ಥಿಕ ಸಹಾಯದ ಬಗ್ಗೆ ಮಾಹಿತಿ ನೀಡಿದರು.

                    ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಶೇಷ ಆಹ್ವಾನಿತರಾದ ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ, ಪಿವಿಎಸ್‌ಎಂ, ವಿಎಂ.,ರವರು ನಾಗರಿಕಸಮಾಜದಲ್ಲಿ  ಸಮಾಜ ವಿದ್ರೋಹಿ ಶಕ್ತಿಗಳನ್ನು ಮಟ್ಟ ಹಾಕುವ ಮೂಲಕ ದೇಶ ರಕ್ಷಣೆ ಮಾಡುವ ಮಹತ್ತರ ಹೊಣೆಗಾರಿಕೆ ಪೊಲೀಸ್‌ ಇಲಾಖೆಯ ಮೇಲಿದೆ ಎಂದು ಕಿವಿ ಮಾತು ಹೇಳಿದರು.


                      ಈ ಸಂದರ್ಭದಲ್ಲಿ 2016-17ನೇ ಸಾಲಿನಲ್ಲಿ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ನೀಡಲಾಗುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ಗೋಣಿಕೊಪ್ಪ ವೃತ್ತ ಕಚೇರಿಯ ಪೊಲೀಸ್‌ ಕಾನ್ಸ್‌ಟೇಬಲ್‌ ಶ್ರೀ ಅಬ್ದುಲ್‌ ಮಜೀದ್‌ ರವರಿಗೆ ವಿಶೇಷ ಆಹ್ವಾನಿತರಾದ ನಿವೃತ್ತ  ಏರ್‌ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಪ್ರಧಾನ ಮಾಡಿದರು. ಇದೇ ಸಂದರ್ಭದಲ್ಲಿ 2016-17ನೇ ಸಾಲಿನಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.


                        ಆಕರ್ಷಕ ಪೊಲೀಸ್‌ ಪಥ ಸಂಚಲನದೊಂದಿಗೆ ಆರಂಭವಾದ ಸಮಾರಂಭದಲ್ಲಿ ನಿವೃತ್ತ ಸೇನಾಧಿಕಾರಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು ಮತ್ತು ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿರಾಜಪೇಟೆ ಡಿವೈಎಸ್‌ಪಿ ಶ್ರೀ ನಾಗಪ್ಪನವರು ವಂದನಾರ್ಪಣೆಯನ್ನು ಮಾಡಿದರು. 

ವಿಷ  ಸೇವಿಸಿ ವ್ಯಕ್ತಿ ಆತ್ಮಹತ್ಯೆ
                  ದಿನಾಂಕ 31/03/2017ರಂದು  ಕುಶಾಲನಗರ ಬಳಿಯ ಸೀಗೆಹೊಸೂರು ನಿವಾಸಿ ಗಣೇಶ ಎಂಬಾತನು ವಿಪರೀತ ಮದ್ಯಪಾನ ಮಾಡಿ ಯಾವುದೋ  ವಿಚಾರಕ್ಕೆ ವಿಷಪದಾರ್ಥ ಸೇವಿಸಿ ಅಸ್ವಸ್ಥನಾದವನನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಸೆಂಟ್‌ ಜೋಸೆಫ್ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕನ್ನ ಕಳವು
                ದಿನಾಂಕ 29/03/2017ರಂದು ಸೋಮವಾರಪೇಟೆ ನಗರದ ಆಲೆಕಟ್ಟೆ ನಿವಾಸಿ ಮಂಜುಳಾ ಎಂಬವರು ಕುಟುಂಬದೊಂದಿಗೆ ಅವರ ಸ್ವಂತ ಊರಾದ ಮಗೇರಿ ಗ್ರಾಮಕ್ಕೆ ಹೋಗಿದ್ದು ದಿನಾಂಕ 01/04/2017ರಂದು ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಒಡೆದಿರುವುದು  ಕಂಡು  ಬಂದಿದ್ದು  ಒಳಗೆ ನೋಡಿದಾಗ  ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯೊಳಗೆ ಬೀರುವಿನಲ್ಲಿಟ್ಟಿದ್ದ ಸುಮಾರು ರೂ.25,000/- ಮೌಲ್ಯದ ಚಿನ್ನಾಭರಣ ಮತ್ತು ರೂ.20,000/- ನಗದನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ.

ಹಣ ಪಡೆದು ಬಸ್‌ ನೀಡದೆ ಮೋಸ
                  ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಗಾಗಿ ಎರಡು ಬಸ್‌ಗಳನ್ನು ಖರೀದಿಸುವ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಶಂಭುಲಿಂಗಪ್ಪನವರು ತುಮಕೂರಿನ  ಪ್ರಸನ್ನ  ಅಲಿಯಾಸ್  ಯುವರಾಜು ಎಂಬವರೊಂದಿಗೆ 05/04/2014ರಂದು  ಮಾತುಕತೆ ನಡೆಸಿ  ನಂತರ ತುಮಕೂರಿನ ಪಳನಿಸ್ವಾಮಿ, ರಘು, ಉದಯ ಮತ್ತು ರಾಜು ಎಂಬವರೊಂದಿಗೆ   ಎರಡು ಬಸ್‌ಗಳ  ಖರೀದಿಗಾಗಿ  ರೂ.15,20,000/- ಹಣವನ್ನು ನೀಡಿದ್ದು  ಪ್ರಸನ್ನ ಮತ್ತು ಇತರರು ಇದುವರೆಗೂ ಬಸ್‌ಗಳನ್ನು ನೀಡದೆ  ಮೋಸ ಮಾಡಿರುವುದಾಗಿನೀಡಿದ  ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ   ದಾಖಲಿಸಿ  ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                  ದಿನಾಂಕ 31/03/2017ರಂದು  ಕುಶಾಲನಗರದ ನಿವಾಸಿ ಯೋಗೇಶರವರು  ಕುಶಾಲನಗರದ ಮಾರ್ಕೆಟ್‌ ಬಳಿ ನಡೆಯುತ್ತಿದ್ದ ಲಾರಿ ಮಾಲೀಕರು ಮತ್ತು ಚಾಲಕರ ಮುಷ್ಕರದಲ್ಲಿ ಭಾಗವಹಿಸಲೆಂದು ಹೋಗಿ ಸ್ನೇಹಿತರಾದ ಜಗದೀಶ ಮತ್ತು ಜಾಹಿರುದ್ದೀನ್‌ರವರೊಂದಿಗೆ ಮಾತನಾಡಿಕೊಂಡಿರುವಾಗ ಜಗದಿಶ ಮತ್ತು ದಿನೇಶ ಎಂಬವರ ನಡುವೆ ಮಾತಿಗೆ ಮಾತು ಬೆಳೆದು ದಿನೇಶ್‌ರವರು ಏಕಾ ಏಕಿ ಬಾಟಲಿಯಿಂದ ಯೋಗೇಶ್‌ರವರ ಮೇಲೆ  ಹಲ್ಲೆ ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರಿ ಮೆಣಸು ದುರುಪಯೋಗ
                   ಸಿದ್ದಾಪುರ ಬಳಿಯ ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಬೆಳೆಗಾರರು ಮತ್ತು ವರ್ತಕರು ನೀಡಿದ ಕಾಫಿ ಮತ್ತು ಒಳ್ಳೆಮೆಣಸನ್ನು ಗೋದಾಮಿನಲ್ಲಿ  ದಾಸ್ತಾನು ಇರಿಸಿಕೊಂಡು ರಶೀದಿ ನೀಡುತ್ತಿದ್ದು ಈ ಕೆಲಸಕ್ಕೆ ಮೈಕಲ್‌ ಎಂಬವರನ್ನು 2012ನೇ ಸಾಲಿನಿಂದ ನಿಯಮಿಸಲಾಗಿತ್ತು. ಇತ್ತೀಚೆಗೆ  ಬಷೀರ್‌ ಎಂಬವರು ಸುಮಾರು 145 ಚೀಲಗಳಷ್ಟು ಕರಿ ಮೆಣಸನ್ನು ದಾಸ್ತಾನು ಇರಿಸಿದ್ದು ದಿನಾಂಕ 03/03/2017ರಂದು ಅವರ ಮಗ ಶಬೀರ್‌ರವರು ಕರಿ ಮೆಣಸನ್ನು ವಾಪಾಸು ಪಡೆಯಲೆಂದು ಹೋದಾಗ ಅಲ್ಲಿ ಕರಿ ಮೆಣಸು ಖೋತಾ ಇರುವುದು ಕಂಡು ಬಂದಿದ್ದು ಈ ಬಗ್ಗೆ ಗೋದಾಮಿನ ಉಸ್ತುವಾರಿ ಮೈಕಲ್‌ರವರನ್ನು ವಿಚಾರಿಸಲೆಂದು ಕರೆದಾಗ ಆತನು ಬಾರದೆ ರಜೆ ಅರ್ಜಿ ನೀಡಿ ನಂತರ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ನಂತರ ಸಂಘದ ಪದಾಧಿಕಾರಿಗಳು ಗೋದಾಮಿನಲ್ಲಿ ಪರಿಶೀಲಿಸಿದಾಗ ಸುಮಾರು ರೂ.48 ಲಕ್ಷ ಮೌಲ್ಯದ 104 ಚೀಲಗಳಷ್ಟು ಕರಿಮೆಣಸು  ಕಾಣೆಯಾಗಿದ್ದು ಗೋದಾಮಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ  ಮೈಕಲ್‌ರವರೇ ಕರಿ ಮೆಣಸನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಆಕಸ್ಮಿಕ ಸಾವು
                  ದಿನಾಂಕ 01/04/2017ರಂದು ಕೇರಳ ನಿವಾಸಿ ಮಹೇಶ್ ಎಂಬವರು ಸುಂಟಿಕೊಪ್ಪ ಬಳಿಯ ಗದ್ದೆಹಳ್ಳ ನಿವಾಸಿ ರಷೀದ್‌ರವರ ಮನೆಯಲ್ಲಿ ಬಾಗಿಲಿನ ಮರ ಕೆಲಸ ಮಾಡುತ್ತಿರುವಾಗ   ಪ್ಲೈನಿಂಗ್ ರೋಟರ್‌ಗೆ ಅಳವಡಿಸಿದ ಕಬ್ಬಿಣದ ನಟ್‌ ಕಳಚಿ ಆಕಸ್ಮಿಕವಾಗಿ ಮಹೇಶರವರ ಎದ್ದೆಗೆ ಬಿದ್ದು ತೀವ್ರವಾಗಿ  ಗಾಯಗೊಂಡಾತನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಮಹೇಶನು ಮೃತನಾಗಿರುವುದಾಗಿ ತಿಳಿಸಿರುವುದಾಗಿ  ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 31/03/2017ರಂದು ಸಂಪಾಜೆ ನಿವಾಸಿ ಚರಿತ್‌ ಎಂಬವರು ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ಅವರ ನೆರೆಮನೆಯ ರಂಜಿತ್‌ ಎಂಬಾತನು ದಾರಿ ತಡೆದು ಹಳೆಯ ವೈಷಮ್ಯದ ಕಾರಣದಿಂದ ಚರಿತ್‌ನನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.