Monday, April 3, 2017


ಪತ್ರಿಕಾ ಪ್ರಕಟಣೆ
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳಲ್ಲಿ ಹಾಗೂ ಕಾಫಿ, ಕರಿಮೆಣಸು ಗೋದಾಮುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಕೆಳಕಂಡ ಸೂಚನೆಗಳನ್ನು ಪಾಲಿಸಿ ಕಳ್ಳತನ ಹತ್ತಿಕ್ಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿರುತ್ತಾರೆ
  • ದೀರ್ಘ ಕಾಲ ಮನೆಯಿಂದ ಹೊರಗೆ ಹೋಗುವಾಗ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು. ಹಾಗೂ ಮನೆಯಲ್ಲಿ ಪರಿಚಯಸ್ಥರೊಬ್ಬರನ್ನು ಬಿಟ್ಟು ಹೋಗುವುದು. ಅನುಕೂಲತೆ ಇರುವವರು ಕಾವಲುಗಾರರನ್ನು ನೇಮಿಸಿಕೊಳ್ಳುವುದು.
  •  ಮನೆಯಿಂದ ಹೊರಗೆ ಹೋಗುವಾಗ ಮನೆಯ ಬಾಗಿಲನ್ನು ಭದ್ರಪಡಿಸಲು ಬಾಗಿಲಿಗೆ ಹೊರಗೆ ಕಾಣುವ ಹಾಗೆ ಬೀಗ ಹಾಕದೆ ಬಾಗಿಲ ಒಳಗಡೆಯ ಬೀಗವನ್ನು (ಡೋರ್ಲಾಕ್) ಅಳವಡಿಸುವುದು. 
  •  ಕಳ್ಳತನವನ್ನು ಹತ್ತಿಕ್ಕಲು ಸಿ.ಸಿ ಟಿವಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಿ.ಸಿ ಟಿವಿ ಗಳನ್ನು ಅಳವಡಿಸುವುದು. 
  • ನಿಮ್ಮ ಒಡವೆ ಹಾಗೂ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ಸೌಲಭ್ಯವನ್ನು ಬಳಸಿಕೊಳ್ಳುವುದು. 
  • ನೀವು ಮನೆಯ ಕೆಲಸಗಾರರನ್ನು ಅಥವಾ ವಾಹನ ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಅವರ ಪೂರ್ವೋತ್ತರಗಳನ್ನು  ಪರಿಶೀಲಿಸಿ ವಿಳಾಸ, ಭಾವಚಿತ್ರ ಮತ್ತು ಬೆರಳಚ್ಚುಗಳನ್ನು ತೆಗೆದುಕೊಳ್ಳುವುದು.
  • ನೀವು ರಾತ್ರಿ ವೇಳೆ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗುವಂತಹ ಸಮಯದಲ್ಲಿ ಮನೆಯ ಒಳಗೆ ಮತ್ತು ಹೊರಗೆ ಒಂದು ಅಥವಾ ಎರಡು ದೀಪಗಳನ್ನು ಆರಿಸದೆ ಬಿಡುವುದು.
  • ನಿಮ್ಮ ಮನೆಯ ನೆರೆಹೊರೆಯವರಲ್ಲಿ ಸುಮಧುರ ಬಾಂಧವ್ಯವನ್ನು ಬೆಳೆಸಿಕೊಂಡು ನೀವು ಮನೆಯಲ್ಲಿಲ್ಲದ ವೇಳೆಯಲ್ಲಿ ನಿಮ್ಮ ಮನೆಯ ಕಡೆ ನಿಗಾ ಇಡುವಂತೆ ಮನವಿ ಮಾಡಿಕೊಳ್ಳುವುದು.
  • ಚಿನ್ನ ಬೆಳ್ಳಿ ಅಂಗಡಿಯವರು ತಮ್ಮ ವ್ಯಾಪಾರ ವಹಿವಾಟು ಮುಗಿದ ಮೇಲೆ ಒಡವೆ ವಸ್ತುಗಳನ್ನು ಭದ್ರವಾದ ತಿಜೋರಿಯಲ್ಲಿಟ್ಟು ಜೋಪಾನ ಮಾಡುವುದು. ವ್ಯಾಪಾರ ವಹಿವಾಟು ಮಾಡುವವರು ತಮ್ಮ ವ್ಯಾಪಾರ ಮುಗಿದ ಮೇಲೆ ಹಣವನ್ನು ಅಂಗಡಿಯಲ್ಲಿಡಬಾರದು. ಅಂಗಡಿಗಳ ಬಾಗಿಲುಗಳಿಗೆ ಆಧುನಿಕ ಬಾಗಿಲುಗಳನ್ನು, ಗ್ರೌಂಡ್ ಲಾಕ್‌ಗಳನ್ನು ಬಳಸಿ ಜಾಗ್ರತಿ ಗಂಟೆ (ಬರ್ಗಲರ್ ಅಲಾರಂ) ಗಳನ್ನು ಅಂಗಡಿಗಳಲ್ಲಿ ಬಳಸುವುದು. 
  •  ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಕಾಫಿ ಕಣ ಮತ್ತು ಗೋದಾಮುಗಳಲ್ಲಿ ಸಿ.ಸಿ ಟಿವಿ ಅಳವಡಿಸಿಕೊಳ್ಳುವುದು.
 ಪೊಲೀಸರು ಅಪರಾಧಗಳನ್ನು ತಡೆಗಟ್ಟಲು ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಅವರು ಪ್ರತಿಯೊಬ್ಬ ನಾಗರೀಕರ ಮನೆಗಳನ್ನು ಸದಾ ಕಾವಲುಗಾರರಂತೆ ಕಾಯುವುದು ಕಷ್ಟ ಸಾಧ್ಯ. ಆದುದರಿಂದ ನಾಗರಿಕರು ಎಲ್ಲಾ ಸಲಹೆಗಳನ್ನು ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಕೋರಲಾಗಿದೆ.


ವಾಹನ ಅಪಘಾತ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
                     ವಾಹನ ಅಪಘಾತವಾಗಿ ಪ್ರಯಾಣಿಕರಿಗೆ ಸಣ್ಪುಟ್ಟ ಗಾಯಗಳಾಗಿರುವ ಘಟನೆ ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ಬಕ್ಕ ಎಂಬಲ್ಲಿ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಚಂದ್ರಶೇಖರ ಎಂಬುವವರು ನೆಲಮಂಗಲದಿಂದ ಪ್ರವಾಸಿಗರನ್ನು ಕರೆದುಕೊಂಡು ಕೊಡಗು ಜಿಲ್ಲೆಗೆ ಬಂದಿದ್ದು ದಿನಾಂಕ 1-4-2017 ರಂದು ಮಡಿಕೇರಿಯಿಂದ ಭಾಗಮಂಡಲಕ್ಕೆ ಹೋಗುತ್ತಿರುವಾಗ ಬಕ್ಕ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕಡಿಯತ್ತೂರು ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬುವವರು ಓಮಿನಿ ವ್ಯಾನನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಓಮಿನಿ ವ್ಯಾನಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಪ್ರತ್ಯೇಕ ರಡು ಪ್ರಕರಣಗಳು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುತ್ತದೆ.

ಸಂಶಯಾಸ್ಪದ ವ್ಯಕ್ತಿಗಳ ಬಂಧನ
                  ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ವರದಿಯಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಬೋಜಪ್ಪರವರು ಸಿಬ್ಬಂದಿಯವರೊಂದಿಗೆ ದಿನಾಂಕ 1-4-2017 ರಂದು ರಾತ್ರಿ ಗಸ್ತು ಮಾಡುತ್ತಿರುವಾಗ ಸಂಪಾಜೆಯ ಪೆಟ್ರೋಲ್ ಬಂಕ್ ಹತ್ತಿರ ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಗಳಾದ ಕಾಸರಗೋಡು ಕೇರಳ ರಾಜ್ಯದವರಾದ ಅಖಿಲ್, ಜೀವನ್ ಕುಮಾರ್, ಸಂದೀಪ್, ದೀಪಕ್ ಎಂಬುವವರನ್ನು ಕಾರಿನೊಂದಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಾರಿಗೆ ಮೋಟಾರು ಸೈಕಲ್ ಡಿಕ್ಕಿ

                     ಕಾರಿಗೆ ಹಿಂದಿನಿಂದ ಮೋಟಾರು ಸೈಕಲ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮಡಿಕೇರಿ ನಗರದ ಈಸ್ಟ್ ಎಂಡ್ ಪೆಟ್ರೋಲ್ ಬಂಕ್ ಹತ್ತಿರ ವರದಿಯಾಗಿದೆ. ದಿನಾಂಕ 2-4-2017 ರಂದು ಬೆಂಗಳೂರಿನ ನಿವಾಸಿ ವಿಷನ್ ಎಂಬುವವರು ಮಡಿಕೇರಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಈಸ್ಟ್ ಎಂಡ್ ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ ದಕ್ಷಿತ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಹಿಂದಿನಿಂದ ಕಾರಿಗೆ ಡಿಕ್ಕಿ ಪಡಿಸಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಕಳ್ಳತನ
                      ನಿಲ್ಲಿಸಿದ್ದ ಪಿಕ್ ಅಪ್ ವಾಹನವನ್ನು ಕಳವು ಮಾಡಿದ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಬಿ ಸಿ ರೋಡ್ ಮಂಗಳೂರಿನ ನಿವಾಸಿಯಾದ ಮಹಮ್ಮದ್ ಸಿರಾಜುದ್ದೀನ್ ಎಂಬುವವರು ಕಂಪೆನಿಗೆ ಸೇರಿದ ಪಿಕ್ ಅಪ್ ವಾಹನದಲ್ಲಿ ಜ್ಯೂಸ್ ಬಾಟಲಿಗಳನ್ನು ತುಂಬಿಸಿಕೊಂಡು ಮೈಸೂರಿಗೆ ಹೋಗುತ್ತಿರುವಾಗ ರಾತ್ರಿಯಾದ್ದರಿಂದ ಕುಶಾಲನಗರದ ಸಾಪಲ್ಯ ಲಾಡ್ಜ್ ನಲ್ಲಿ ರೂಂ ಮಾಡಿ ವಾಹನವನ್ನು ಲಾಡ್ಜ್ ನ ಹೊರಗಡೆ ನಿಲ್ಲಿಸಿದ್ದು ದಿನಾಂಕ 2-4-2017 ರಂದು ಬೆಳಿಗ್ಗೆ ನೋಡುವಾಗ ವಾಹನವನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿಮೆಣಸು ಕಳವು
                       ಗೋಡೌನಿನಲ್ಲಿ ಶೇಖರಿಸಿಟ್ಟಿದ್ದ ಕರಿ ಮೆಣಸನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಎಂಬಲ್ಲಿ ವರದಿಯಾಗಿದೆ. ಹಾನಗಲ್ ಗ್ರಾಮದ ನಿವಾಸಿ ಸೀತಾರಾಂ ಎಂಬುವವರಿಗೆ ಸೇರಿದ ಗೋಡೌನಿನ ಬೀಗ ಮುರಿದು ದಿನಾಂಕ 1-4-2017 ರ ರಾತ್ರಿ ಯಾರೋ ಕಳ್ಳರು ಒಳನುಗ್ಗಿ ಸುಮಾರು 215 ಕೆ ಜಿ ಯಷ್ಟು ಕಾಳು ಮೆಣಸನ್ನು ಕಳವು ಮಾಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು
                          ಮನೆಯ ಬೀಗವನ್ನು ಮುರಿದು ಕಳವು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದಲ್ಲಿ ವರದಿಯಾಗಿದೆ. ಚೌಡ್ಲು ಗ್ರಾಮದ ನಿವಾಸಿ ಚೇತನ್ ರರು ಸಂಸಾರದೊಂದಿಗೆ ಸಕಲೇಶಪುರಕ್ಕೆ ಹೋಗಿದ್ದು ದಿನಾಂಕ 2-4-2017 ರಂದು ವಾಪಾಸ್ಸು ಮನೆಗೆ ಬಂದು ನೋಡಿದಾಗ ಮನೆಯ ಮುಂಭಾಗದ ಬೀಗವನ್ನು ಮುರಿದು ಯಾರೋ ಕಳ್ಳರು ಒಡೆದು ಒಳ ನುಗ್ಗಿ 32 ಗ್ರಾಂ ತೂಕದ ಚಿನ್ನಾಭರಣ, ನಗದು 3,500 ರೂ ಮತ್ತು 12 ಕೆ ಜಿ ಯಷ್ಟು ಕಾಳು ಮೆಣಸನ್ನು ಕಳವು ಮಾಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                        ಮೋಟಾರು ಸೈಕಲಿಗೆ ಜೀಪು ಡಿಕ್ಕಿಯಾಗಿ ಮೋಟಾರು ಸೈಕಲ್ ಸವಾರ ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಗದ್ದೆಹಳ್ಳದಲ್ಲಿ ವರದಿಯಾಗಿದೆ. ಸುಂಟಿಕೊಪ್ಪದ ನಿವಾಸಿ ಸೂರ್ಜಿತ್ ಎಂಬುವವರು ದಿನಾಂಕ 1-4-2017 ರಂದು ಸುಂಟಿಕೊಪ್ಪದಿಂದ ಮಡಿಕೇರಿಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಗದ್ದೆಹಳ್ಳ ಎಂಬಲ್ಲಿಗೆ ತಲುಪುವಾಗ ವರ್ಕ್ ಶಾಪ್ ಕಡೆಯಿಂದ ಜೀಪವನ್ನು ಪೆರಿಯಸ್ವಾಮಿ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸೂರ್ಜಿತ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಂಪೌಂಡ್ ಬಿದ್ದು ಮಗುವಿನ ದುರ್ಮರಣ

                        ಟ್ರ್ಯಾಕ್ಟರ್ ಕಾಪೌಂಡ್ ಗೆ ಡಿಕ್ಕಿಯಾಗಿ ಕಾಪೌಂಡ್ ಬಿದ್ದು 6 ವರ್ಷದ ಮಗು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಸುಳುಗಳಲೆ ಎಂಬಲ್ಲಿ ವರದಿಯಾಗಿದೆ. ದಿನಾಂಕ 2-4-2017 ರಂದು ಸುಳುಗಳಲೆ ಗ್ರಾಮದ ನಿವಾಸಿಯಾದ ಪ್ರವೀಣ್ ರವರ ಮಗ ಮನೆಯ ಮುಂದೆ ಇರುವಾಗ ಮಹೇಶ ಎಂಬುವವರು ಟ್ರ್ಯಾಕ್ಟರ್ ನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪ್ರವೀಣ್ ರವರ ಮನೆಯ ಮುಂದಿನ ಕಾಪೌಂಡ್ ಗೆ ಡಿಕ್ಕಿ ಪಡಿಸಿ ಕಾಪೌಂಡ್ ಚರಣನ ಮೇಲೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ
                  ಪಾದಚಾರಿಗೆ ಮೋಟಾರು ಸೈಕಲ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ವರದಿಯಾಗಿದೆ. ಕಳತ್ಮಾಡು ಗ್ರಾಮದ ನಿವಾಸಿಯಾದ ಜಗಪತಿ ಎಂಬುವವರು ದಿನಾಂಕ 1-4-2017 ರಂದು ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಇದ್ದ ಮದುವೆ ಕಾರ್ಯ ಮುಗಿಸಿ ತಾವು ನಿಲ್ಲಿಸಿದ್ದ ಜೀಪಿನ ಹತ್ತಿರ ಮೋಹನ್ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದೊಡ್ಡಟ್ಟಿ ಚೌಕಿ ಕಡೆಯಿಂದ ಮೋಟಾರು ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಜಗಪತಿಯವರಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.