Wednesday, April 12, 2017


ಗುಂಡು ಹಾರಿಸಿದ ವ್ಯಕ್ತಿಯ ಬಂಧನ
                       ದಿನಾಂಕ 10/04/2017ರ ರಾತ್ರಿ ವೇಳೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ದಿಡ್ಡಳ್ಳಿಯಲ್ಲಿ ಧರಣಿ ನಿರತ ವಸತಿ ರಹಿತರ ಪ್ಲಾಸ್ಟಿಕ್ ಶೆಡ್‌ಗಳ ಮೇಲೆ ಯಾರೋ ಅಪರಿಚಿತರು ಗುಂಡು ಹಾರಿಸಿ ನಕ್ಸಲ್ ಸಂಬಂಧಿ ಬರಹಗಳನ್ನು ಸ್ಥಳದಲ್ಲಿ ಎಸೆದು ಹೋಗಿರುವುದಾಗಿ  ಮಾಹಿತಿ  ದೊರೆತ ಕೂಡಲೇ ಸಿದ್ದಾಪುರ ಠಾಣೆಯ ಪಿಎಸ್‌ಐ ಜಿ.ಕೆ.ಸುಬ್ರಮಣ್ಯರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಶಪಡಿಸಿಕೊಂಡು ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಆರೋಪಿಯ ಪತ್ತೆಗಾಗಿ ತನಿಖೆ  ಕೈಗೊಳ್ಳಲಾಗಿತ್ತು. 

                     ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ ಮಾರ್ಗದರ್ಶನದಲ್ಲಿ  ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಸೋಮಲಿಂಗಪ್ಪ ಬಿ ಛಬ್ಬಿಯವರ ನೇತೃತ್ವದಲ್ಲಿ ತನಿಖೆ ನಡೆಸಿದ ಸಿದ್ದಾಪುರ ಪೊಲೀಸರು ಕೃತ್ಯ ನಡೆದ ಎರಡನೇ ದಿನವಾದ 12/04/2017ರಂದು  ದಿಡ್ಡಳ್ಳಿಯಲ್ಲಿ ಧರಣಿ ನಡೆಯುತ್ತಿದ್ದ ಸ್ಥಳದಲ್ಲಿ ಶೆಡ್‌ಗಳ ಮೇಲೆ ಗುಂಡು ಹಾರಿಸಿದ ಚಿನ್ನಂಗಿ ಗ್ರಾಮದ ಮೂಡಬೈಲು ನಿವಾಸಿ ಎ.ಎನ್‌.ಪೂಣಚ್ಚ ಎಂಬಾತನನ್ನು ಬಂಧಿಸಿದ್ದಾರೆ.

                    ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ದಿನಾಂಕ 08/04/2017ರಂದು ಆರೋಪಿ ಎ.ಎನ್‌. ಪೂಣಚ್ಚನು ನಡುರಾತ್ರಿ ವೇಳೆ ದಿಡ್ಡಳ್ಳಿಯಲ್ಲಿ ಧರಣಿ ನಡೆಸುತ್ತಿರುವ ಸ್ಥಳದ ಬಳಿ ಆತನ ಕಾರಿನಲ್ಲಿ ಹೋಗಿ ಅಲ್ಲಿದ್ದ ನಿವಾಸಿಗಳಲ್ಲಿ ಅಣ್ಣಪ್ಪ, ಸುಬ್ಬ ಹಾಗೂ ಮಣಿರವರಿಗೆ ತಾನು ನೀಡಿದ್ದ ಸಾಲವನ್ನು ಮರಳಿ ಕೇಳಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಅಲ್ಲಿದ್ದ ಡಿಎಆರ್‌ ಪೊಲೀಸ್‌ ಸಿಬ್ಬಂದಿಗಳು ಸಮಾಧಾನ ಮಾಡಿ ಕಳುಹಿಸಿದ್ದು ನಂತರ ದಿನಾಂಕ 10/04/2017ರ ರಾತ್ರಿ 10:00 ಗಂಟೆ ವೇಳೆಗೆ ಪೂಣಚ್ಚನು ಆತನ ಮೋಟಾರು ಬೈಕ್‌ ಸಂಖ್ಯೆ ಕೆಎ-12-ಕ್ಯು-2803ರಲ್ಲಿ ಕೋವಿಯೊಂದಿಗೆ ಹೋಗಿ ದಿಡ್ಡಳ್ಳಿಯ ಕಾಂಕ್ರೀಟ್‌ ರಸ್ತೆಯ ತಿರುವಿನಲ್ಲಿದ್ದ ಪ್ಲಾಸ್ಟಿಕ್ ಶೆಡ್‌ಗೆ ಹಾಗೂ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದು ಆಗ ಅಲ್ಲಿದ್ದ ನಿವಾಸಿಗಳು ಟಾರ್ಚ್‌ ಬೆಳಕು ಹರಿಸಿದಾಗ ಅಲ್ಲಿಂದ ಹೋಗಿರುವುದಾಗಿ ಹೇಳಿಕೆ ನೀಡಿದ್ದು ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

                    ಪ್ರಕರಣವನ್ನು ಕ್ಷಿಪ್ರವಾಗಿ  ಭೇದಿಸಿದ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ರೂ.10,000/- ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಬೈಕ್ ಕಳ್ಳತನ
                ಮನೆಯ ಮುಂದೆ ನಿಲ್ಲಿಸಿದ ಬೈಕನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆಯ ಜನತಾ ಕಾಲೋನಿ ಎಂಬಲ್ಲಿ ವರದಿಯಾಗಿದೆ. ಜನತಾ ಕಾಲೋನಿಯ ನಿವಾಸಿ ಶುಭಕರ ಎಂಬುವವರು ತಮ್ಮ ಬಾಪ್ತು ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಜೆ-1512 ರನ್ನು ದಿನಾಂಕ 19-2-2017 ರಂದು ಮನೆಯ ಮುಂದೆ ನಿಲ್ಲಿಸಿದ್ದು ಮಾರನೆಯ ದಿನ ಬೆಳಿಗ್ಗೆ ನೋಡುವಾಗ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿದ್ದು ಈ ಬಗ್ಗೆ ದಿನಾಂಕ 11-4-2017 ರಂದು ಶುಭಕರರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ
                    ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿದ ಘಟನೆ ಗೋಣಿಕೊಪ್ಪ ನಗರದಲ್ಲಿ ವರದಿಯಾಗಿದೆ. ಸಾರ್ವಜನಿಕ ಸ್ಥಳವಾದ ಗೋಣಿಕೊಪ್ಪ ಠಾಣೆಯ ಮುಂದುಗಡೆ ವ್ಯಕ್ತಿಗಳಿಬ್ಬರು ಅವಾಚ್ಯ ಶಬ್ದಗಳಿಂದ ಒಬ್ಬರನ್ನೊಬ್ಬರು ಬೈಯುತ್ತಾ ಕೈಕೈ ಮಿಲಾಯಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಗೋಣಿಕೊಪ್ಪ ನಗರದ ವ್ಯಾಪಾರಿಗಳಾದ ರಾಜ ಮತ್ತು ಅಶ್ರಫ್ ರವರ ಮೇಲೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರಿಗೆ ಜೀಪು ಡಿಕ್ಕಿ
                     ಕಾರಿಗೆ ಜೀಪು ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಮಾಲ್ದಾರೆ ಎಂಬಲ್ಲಿ ನಡೆದಿದೆ. ದಿನಾಂಕ 11-4-2017 ರಂದು ನೆಲ್ಲಿಹುದಿಕೇರಿಯ ನಿವಾಸಿಯಾದ ಸಯ್ಯದ್ ಸಿಮಾಕ್ ಎಂಬುವವರು ಬೆಂಗಳುರಿಗೆ ಹೋಗಿದ್ದವರು ವಾಪಾಸ್ಸು ಬರುತ್ತಿರುವಾಗ ಮಾಲ್ದಾರೆ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಸಿದ್ದಾಪುರ ಕಡೆಯಿಂದ ಜೀಪನ್ನು ಚಾಲಕ ಅರುಣ್ ಕುಮಾರ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿ ಡಿಕ್ಕಿಪಡಿಸಿ ಕಾರು ಜಖಂ ಗೊಂಡಿದ್ದು ಈ ಸಂಬಂದ ಸಯ್ಯದ್ ಸಿಮಾಕ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ
                  ಮರ ಹತ್ತಿ ಕಪಾತು ಕಪಾತು ಮಾಡುತ್ತಿರುವಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ವಿ ಬಾಡಗ ಬಲ್ಲಿ ವರದಿಯಾಗಿದೆ. ದಿನಾಂಕ 11-4-2017 ರಂದು ವಿ ಬಾಡಗ ಗ್ರಾಮದ ನಿವಾಸಿಯಾದ ಕಾವೇರಪ್ಪನವರ ತೋಟದಲ್ಲಿ ಮರ ಕಪಾತು ಕೆಲಸ ಮಾಡುತ್ತಿದ್ದ ಕೆ ಆರ್ ನಗರದ ಮಿರ್ಲೆ ಗ್ರಾಮದ ನಿವಾಸಿಯಾದ ಪಾಪಣ್ಣ ಶೆಟ್ಟಿ ಎಂಬುವವರು ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                   ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ವರದಿಯಾಗಿದೆ. ಮಾಯಮುಡಿ ಗ್ರಾಮದ ನಿವಾಸಿಯಾದ ವೆಂಕಟೇಶ್ ಮತ್ತು ಶಿವಕಮಾರ್ ರವರು ಕೆಲಸಕ್ಕೆ ತೆರಳುವ ಸಲುವಾಗಿ ಗೋಣಿಕೊಪ್ಪ ನಗರದ ಪೊನ್ನಂಪೇಟೆ ರಸ್ತೆಯಲ್ಲಿ ಇರುವ ಜೈಹಿಂದ್ ಟ್ರೇಡರ್ಸ್ ಅಂಗಡಿಯ ಮುಂದೆ ಕುಳಿತುಕೊಂಡಿರುವಾಗ ಅಲ್ಲಿಗೆ ಗೋಣಿಕೊಪ್ಪ ನಗರದ ನಿವಾಸಿಯಾದ ರಾಜರವರು ಮೋಟಾರು ಸೈಕಲಿನಲ್ಲಿ ಹೋಗಿ ಕೆಲಸಕ್ಕೆ ಬರುವಂತೆ ಹೇಳಿದಾಗ ಸಾಹುಕಾರರ ಮನೆಯಲ್ಲಿ ಕೆಲಸವಿದೆ ಬರುವುದಿಲ್ಲ ಎಂದು ಹೇಳಿದಾಗ ರಾಜರವರು ಏಕಾ ಏಕಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ