Wednesday, May 31, 2017

ಅಕ್ರಮ ಮರಳು ಪತ್ತೆ :
                ಅಕ್ರಮವಾಗಿ ಮರಳು ಶೇಖರಣೆ ಮಾಡಿ ಲಾರಿಗೆ ತುಂಬಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ದಿನಾಂಕ 30-5-2017 ರಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಯಾದ ಕೆ ಎಸ್ ನಾಗೇಂದ್ರಪ್ಪ ಎಂಬುವವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಮುಖ್ಯಸ್ಥರಾದ  ರೇಷ್ಮಾ ರವರೊಂದಿಗೆ ಹಾಗೂ ಪೊಲೀಸ್ ಸಿಬ್ಬಂದಿಯವರೊಂದಿಗೆ ಕದನೂರು ಹೊಳೆಯಿಂದ ಅಕ್ರಮವಾಗಿ ಮರಳು ಶೇಖರಿಸಿ ಎರಡು ಲಾರಿಗಳಿಗೆ ತುಂಬಿಸುತ್ತಿದ್ದುದ್ದನ್ನು ಪತ್ತೆಹಚ್ಚಿ ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕರಿಮೆಣಸು ಕಳವು:
                ಗೋದಾಮಿನಲ್ಲಿ  ಶೇಖರಿಸಿಟ್ಟಿದ್ದ ಕಾಳು ಮೆಣಸನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ವರದಿಯಾಗಿದೆ.  ಸುಳುಗೋಡು ಗ್ರಾಮದ ನಿವಾಸಿ ಕಳ್ಳಿಚ್ಚಂಡ ತಿಮ್ಮಯ್ಯನವರು ತಮ್ಮ ಮನೆಯ ಹಿಂಭಾಗದ ಗೋಡೋನಿನಲ್ಲಿ 34 ಚೀಲದಷ್ಟು ಕರಿಮೆಣಸನ್ನು ಶೇಖರಿಸಿಟ್ಟಿದ್ದು ದಿನಾಂಕ 18-5-2017 ರಂದು ನೋಡಲಾಗಿ ಯಾರೋ ಕಳ್ಳರು ಸುಮಾರು 400 ಕೆ ಜಿ ಯಷ್ಟು ಕರಿಮೆಣಸನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ತಿಮ್ಮಯ್ಯನವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತಾರೆ.

Tuesday, May 30, 2017

ಗೋಣಿಕೊಪ್ಪ ಪೊಲೀಸರ ಕಾರ್ಯಾಚರಣೆ;

ಅಂತರ್ ಜಿಲ್ಲಾ ಕಳ್ಳರ ಬಂಧನ


ಸತೀಶ್ ಯಾನೆ ರಂಗಪ್ಪ
                ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಡಿಕೇರಿ, ಮೂರ್ನಾಡು , ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಕುಶಾಲನಗರ, ಸಿದ್ದಾಪುರ, ನೆಲ್ಲಿಹುದಿಕೇರಿಗಳಲ್ಲಿ ರಾತ್ರಿ ವೇಳೆ ವಾಣಿಜ್ಯ ಮಳಿಗೆಗಳ ಶೆಟರ್ಸ್ ಅನ್ನು ಎತ್ತಿ ಒಳನುಗ್ಗಿ ಸರಣಿ ಕಳ್ಳತನವನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ವರ್ತಕರಲ್ಲಿ ಆತಂಕ ಮೂಡಿಸಿ ಜಿಲ್ಲಾ ಪೊಲೀಸರಿಗೆ ಸವಾಲಾಗಿದ್ದ  ಮೂವರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಗೋಣಿಕೊಪ್ಪ ಪೊಲೀಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕಾಶ್ ಸಿದ್ದೇಶ್ ತಳವಾರ್
             ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಆರ್‌ ಸತೀಶ್‌ ಯಾನೆ ರಂಗಪ್ಪ ಯಾನೆ ಚಾಲಾಕಿ ರಂಗಪ್ಪ, ವಿಜಯಪುರ ಜಿಲ್ಲೆಯ ನಿಡಗುಂಡಿ ತಾಲೂಕಿನ ಹುಲ್ಲೂರು ಗ್ರಾಮದ ಪ್ರಕಾಶ್‌ ಸಿದ್ದಪ್ಪ ತಳವಾರ್ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆ ಬಳಿಯ ಕೋಕೇರಿ ಗ್ರಾಮದ ಚೇನಂಡ ಮುತ್ತಪ್ಪ ಎಂದು ಗುರುತಿಸಲಾಗಿದೆ.

ಚೇನಂಡ ಮುತ್ತಪ್ಪ  
            ಬಂಧಿತ ಆರೋಪಿಗಳ ಪೈಕಿ  ಸತೀಶ್ ಯಾನೆ ಚಾಲಾಕಿ ರಂಗಪ್ಪ ಹಾಗೂ ಪ್ರಕಾಶ್ ಸಿದ್ದಪ್ಪ ತಳವಾರ್‌ ರವರುಗಳನ್ನು 2015 ಜುಲೈ ತಿಂಗಳಿನಲ್ಲಿ ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಮಾರು 12 ವಾಣಿಜ್ಯ ಮಳಿಗೆಗಳ ಕಳ್ಳತನ ಮಾಡಿದ ಪ್ರಕರಣಗಳಲ್ಲಿ, ಹಾಗೂ ಹುಣಸೂರು ಭೇರ್ಯ, ಬೆಂಗಳೂರಿನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, 2016 ಅಕ್ಟೋಬರ್ ತಿಂಗಳಿನಲ್ಲಿ ಜಾಮೀನಿನ ಮೇಲೆ ಹೊರ ಬಂದು ಬೆಂಗಳೂರು ನಗರದ ಪೀಣ್ಯ ಬಳಿ ಇರುವ 8ನೇ ಮೈಲಿನಲ್ಲಿ ಇರುವ ಹೋಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರೆಂಬುದು ತಿಳಿದು ಬಂದಿರುತ್ತದೆ. ಇವರೊಂದಿಗೆ ಕೊಡಗು ಜಿಲ್ಲೆಯ ಚೇನಂಡ ಮುತ್ತಪ್ಪನೂ ಬೆಂಗಳೂರಿನಲ್ಲಿ ಸೇರಿಕೊಂಡಿದ್ದು ಬಿಕಾಂ ವಿದ್ಯಾರ್ಥಿಯಾದ ಈತ ಆರ್ಥಿಕ ಕಾರಣಗಳಿಂದ  ವಿದ್ಯಾಭ್ಯಾಸವನ್ನು ಅರ್ದಕ್ಕೆ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಸತೀಶ್‌ ಯಾನೆ ರಂಗಪ್ಪ ಹಾಗೂ ಪ್ರಕಾಶ್‌ ಸಿದ್ದಪ್ಪ ತಳವಾರ್‌ ರವರು ಕೆಲಸ ಮಾಡುತ್ತಿದ್ದ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನೆಂಬುದು ತಿಳಿದು ಬಂದಿದ್ದು, ಈ ರೀತಿ ಸ್ನೇಹಿತರಾದ ಈ ಮೂವರೂ ಬೆಂಗಳೂರಿನಲ್ಲಿ ಮದ್ಯಪಾನ, ಗಾಂಜಾ ಸೇದುವ ಮತ್ತು ಲೈವ್‌ ಬ್ಯಾಂಡುಗಳಿಗೆ ಹೋಗುವ ದುರಭ್ಯಾಸಗಳನ್ನು ಬೆಳೆಸಿಕೊಂಡು ಸಂಪಾದಿಸುವ ಹಣ ಸಾಲದೆ ಸುಲಭವಾಗಿ ಹಣ ಸಂಪಾದಿಸಲು ತೀರ್ಮಾನಿಸಿ ಓಡಾಟಕ್ಕೆ ಉಪಯೋಗಿಸಲು ಕೆಎ-09-ಇಬಿ-3566 ಸಂಖ್ಯೆಯ ಹೀರೋ ಹೋಂಡಾ ಬೈಕನ್ನು ಹಾಸನದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ಬೆಟ್ಟದ ಜಾತ್ರೆಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಕಳವು ಮಾಡುತ್ತಾರೆ. ನಂತರ ಅದೇ ಮೋಟಾರ್ ಸೈಕಲಿನಲ್ಲಿ ಮೂವರೂ ಕೊಡಗು ಜಿಲ್ಲೆಗೆ ಬಂದು ವಿವಿಧ ದಿನಗಳಲ್ಲಿ ಮದ್ಯ ರಾತ್ರಿಯ ವೇಳೆ ಜಿಲ್ಲೆಯ ಕೇಂದ್ರಗಳಾದ ಮಡಿಕೇರಿ, ಮೂರ್ನಾಡು , ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಕುಶಾಲನಗರ, ಸಿದ್ದಾಪುರ, ನೆಲ್ಲಿಹುದಿಕೇರಿ ವ್ಯಾಪ್ತಿಯ 22 ವಾಣಿಜ್ಯ ಮಳಿಗೆಗಳ ರೋಲಿಂಗ್ ಶಟರ್ಸ್ ಅನ್ನು ಕೈಗಳಿಂದ ಎತ್ತಿ ಬೆಂಡ್ ಮಾಡಿ ಒಬ್ಬ ವ್ಯಕ್ತಿ ಒಳ ನುಗ್ಗುವಷ್ಟು ಅವಕಾಶ ಮಾಡಿಕೊಂಡು ಮಳಿಗೆಗಳ ಒಳ ನುಗ್ಗಿ ಕ್ಯಾಷ್ ಕೌಂಟರಿನಲ್ಲಿ ಇಡುತ್ತಿದ್ದ ನಗದು ಹಣ, ಹಾಗೂ ದಿನಸಿ ಅಂಗಡಿಗಳಲ್ಲಿ ಇರುತ್ತಿದ್ದ ಸಿಗರೇಟು ಪ್ಯಾಕೇಟುಗಳನ್ನು ಬಂಡಲುಗಟ್ಟಲೆ ಕಳ್ಳತನ ಮಾಡಿಕೊಂಡು ಮೋಟಾರ್ ಸೈಕಲಿನಲ್ಲಿ ಪರಾರಿಯಾಗುತ್ತಿದ್ದರು.
 
                       ದಿನಾಂಕ 29/05/2017ರಂದು ಸಂಜೆ 05-00 ಗಂಟೆ ಸಮಯದಲ್ಲಿ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಸ್ ಶೆಲ್ಟರ್ ಬಳಿ ಕೆಎ-09-ಇಬಿ-3566 ರ ಮೋಟಾರು ಬೈಕಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದು  ತೀವ್ರ ವಿಚಾರಣೆಗೆ ಒಳಪಡಿಸಿದಾಗ ಒಟ್ಟು ಜಿಲ್ಲೆಯಲ್ಲಿ ನಡೆದ 22 ವಾಣಿಜ್ಯ ಮಳಿಗೆಗಳ ಕಳ್ಳತನ ಹಾಗೂ ಒಂದು ಬೈಕ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಇವರಿಂದ ಒಟ್ಟು 1,12,900/- ರೂ ನಗದು ಹಣ, 17,300 ರೂಗಳ ಸಿಗರೇಟುಗಳು, ಕಳ್ಳತನ ಮಾಡಿದ ರೂ.40,000/- ಬೆಲೆ ಬಾಳುವ ಹೀರೋ ಹೊಂಡಾ ಸ್ಲೆಂಡರ್ ಬೈಕ್, ಕೃತ್ಯಕ್ಕೆ ಉಪಯೋಗಿಸಿದ 25,000/- ರೂ ಬೆಲೆ  ಬಾಳುವ ಟಿ.ವಿ.ಎಸ್ ಸ್ಟಾರ್ ಸಿಟಿ ಬೈಕ್ ಮತ್ತು 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

                  ಜಿಲ್ಲಾ ಪೊಲೀಸ್‌ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದ ಈ ಎಲ್ಲಾ ಕಳವು ಪ್ರಕರಣಗಳನ್ನು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ಪಿ ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರ  ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೋಲೀಸ್ ಉಪಾಧೀಕ್ಷಕರಾದ ಶ್ರೀ. ನಾಗಪ್ಪ ರವರ ಮುಂದಾಳತ್ವದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶ್ರೀ ಪಿ.ಕೆ ರಾಜು ಮತ್ತು ಅವರ ತಂಡವು  ಬಂಧಿಸಿರುತ್ತದೆ. ಕಾರ್ಯಾಚರಣೆಯಲ್ಲಿ ಶ್ರೀ ಪಿ.ಕೆ ರಾಜು ಸಿ.ಪಿ. ಗೋಣಿಕೊಪ್ಪ ವೃತ್ತ, ಶ್ರೀ ಹೆಚ್.ವೈ ರಾಜು, ಪಿ.ಎಸ್. ಗೋಣಿಕೊಪ್ಪ ಠಾಣೆ, ಶ್ರೀ ಜಯರಾಮ್ ಪಿ.ಎಸ್. ಪೊನ್ನಂಪೇಟೆ ಠಾಣೆ, ಸಿಬ್ಬಂದಿಗಳಾದ ಹೆಚ್.ಕೆ ಕೃಷ್ಣ, ಕೆ.ಕೆ ಕುಶಾಲಪ್ಪ, ಮಹಮದ್ಆಲಿ, ಅಬ್ದುಲ್ ಮಜೀದ್ ಕೆ., ನಾಣಯ್ಯ, ಕುಮಾರ್, ಮನು,  ಸುಬ್ರಮಣಿ,  ಮೋಹನ ಟಿ.ಕೆ,  ಹರೀಶ,  ಸುಗಂಧ,  ಬಿ.ಟಿ. ಮಂಜುನಾಥ, ಕೃಷ್ಣ ಮೂರ್ತಿ, ಶೋಭ ಕೆ.ಟಿ ಹಾಗೂ ಚಾಲಕರಾದ ಕೃಷ್ಣಪ್ಪ, ಮಹೇಶ್, ರಾಜೇಶ್ ರವರುಗಳು ಪಾಲ್ಗೊಂಡಿದ್ದು ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ ರಾಜೇಂದ್ರ ಪ್ರಸಾದ್‌ರವರು ಶ್ಲಾಘಿಸಿ ತಂಡಕ್ಕೆ ರೂ.10,000 ನಗದು ಬಹುಮಾನ ಘೋಷಿಸಿದ್ದಾರೆ. 


ವ್ಯಕ್ತಿ ಆತ್ಮಹತ್ಯೆ
                       ದಿನಾಂಕ 28/05/2017ರಂದು ಶ್ರೀಮಂಗಲ ಬಳಿಯ ಬಿರುನಾಣಿ ನಿವಾಸಿ ಪಣಿ ಎರವರ   ಮಾರ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಮಾರವರು ಅತೀವ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ  ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಕಳವು
                         ದಿನಾಂಕ 27/05/2017ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ನಿವಾಸಿ ಬಿ.ಜಿ.ಪುರುಷೋತ್ತಮ ಎಂಬವರು ಸೋಮವಾರಪೇಟೆ ನಗರದ ಸಿ.ಕೆ.ಸುಬ್ಬಯ್ಯ ರಸ್ತೆಯ ಹರ್ಷ ಟ್ರೇಡರ್ಸ್‌ ಅಂಗಡಿಯ ಮುಂಭಾಗ ಅವರ ಕೆಎ-12-6554ರ ಹೀರೋ ಹೋಂಡಾ ಮೋಟಾರು ಬೈಕನ್ನು ನಿಲ್ಲಿಸದ್ದು ದಿನಾಂಕ 29/05/2017ರಂದು ಬೆಳಿಗ್ಗೆ ಹೋಗಿ ನೋಡಿದಾಗ ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸಿಸಿಟಿವಿ ಕಳವು
                     ಶನಿವಾರಸಂತೆ ನಗರ ನಿವಾಸಿ ಸ್ವಾತಿ ಎಂಬವರಿಗೆ ಸೇರಿದ ಗುಡುಗಳಲೆ ಗ್ರಾಮದ ಅಕ್ಕಿ ಗಿರಣಿಯನ್ನು ದಿನಾಂಕ 28/05/2017ರ ಸಂಜೆ ಮುಚ್ಚಿ ಮನೆಗೆ ಹೋಗಿದ್ದು ದಿನಾಂಕ 29/05/2017ರಂದು ಗಿರಣಿಯ ಕೆಲಸಗಾರ ಪ್ರಸಾದ್‌ ಎಂಬವರು ಗಿರಣಿ ತೆರೆಯಲೆಂದು ಹೋದಾಗ ಯಾರೋ ಕಳ್ಳರು ಗಿರಣಿಯ ಮುಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಒಳಗಡೆ ಅಳವಡಿಸಿದ್ದ ಸುಮಾರು ರೂ.10,000/- ಮೌಲ್ಯದ ಸಿಸಿ ಕ್ಯಾಮೆರಾದ ಉಪಕರಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                   ದಿನಾಂಕ 29/05/2017ರಂದು ಸೋಮವಾರಪೇಟೆ ಬಳಿಯ ಹಂಡ್ಲಿ ನಿವಾಸಿ ಆನಂದ ಎಂಬವರು ಅವರ ಸ್ನೇಹಿತ ಚಂದ್ರು ಎಂಬವರೊಡನೆ ಕೆಎ-12-ಕೆ-7788ರ ಮೋಟಾರು ಬೈಕಿನಲ್ಲಿ ಕಾರ್ಯ ನಿಮಿತ್ತ ಕೊಡ್ಲಿಪೇಟೆಗೆ ಹೋಗಿ ವಾಪಾಸು ಶನಿವಾರಸಂತೆ ಕಡೆಗೆ ಬರುತ್ತಿರುವಾಗ ಮೂದರವಳ್ಳಿ ಗ್ರಾಮದ ಬಳಿ ಎದುರುಗಡೆಯಿಂದ ಕೆಎ-02-ಜೆಡ್-9280ರ ಕಾರನ್ನು ಅದರ ಚಾಲಕ ಪ್ರೇಕ್ಷಿತ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆನಂದರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಆನಂದ ಮತ್ತು ಚಂದ್ರುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 28/05/2017ರಂದು ಕೊಣನೂರು ಹೋಬಳಿಯ ಕಾಡನೂರು ಗ್ರಾಮದ ನಿವಾಸಿ ದರ್ಶನ್‌ ಎಂಬವರು ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ಶೃತಿ ಎಂಬವರೊಡನೆ ಬೈಕಿನಲ್ಲಿ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಮಹೇಶ ಎಂಬಾತನು ಬೈಕಿನಲ್ಲಿ ಬಂದು ದರ್ಶನ್‌ರವರನ್ನು ತಡೆದು ನಿಲ್ಲಿಸಿ ಶೃತಿಯವರನ್ನು  ನಿಂದಿಸಿ ದರ್ಶನ್‌ರವರಿಗೆ ಬೈಕಿನ ಕೀಯಿಂದ ಚುಚ್ಚಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಕಲಿ ದಾಖಲೆ, ವಂಚನೆ
                     ಮೈಸೂರು ನಿವಾಸಿ ಅಂತೋಣಿ  ಕ್ರೂಸ್‌ ಎಂಬವರಿಗೆ ನಾಪೋಕ್ಲು  ಬಳಿಯ ಚೇಲಾವರ ಗ್ರಾಮದಲ್ಲಿ ಮೂರು ಏಕರೆ ಜಾಗವಿದ್ದು ಅದನ್ನು ನೋಡಿಕೊಳ್ಳಲು ಚೇಲಾವರ ನಿವಾಸಿ ಉಲ್ಲಾಸ್‌ ಎಂಬವರನ್ನು ನೇಮಿಸಿದ್ದು ಉಲ್ಲಾಸ್‌ರವರು ತಾನು ಅಂತೋಣಿ ಕ್ರೂಸ್‌ರವರ ಮಗನೆಂದೂ, ಅಂತೋಣಿ ಕ್ರೂಸ್‌ರವರು ನಿಧನ ಹೊಂದಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗವನ್ನು ಉಲ್ಲಾಸ್‌ರವರ ಹೆಸರಿಗೆ ವರ್ಗಾವಣೆ ಮಾಡಿಕೊಂಡು  ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಹಲ್ಲೆ ಪ್ರಕರಣ
                  ದಿನಾಂಕ 29/05/2017ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಸಿ.ಎ.ಪೂಣಚ್ಚ ಎಂಬವರು ಅವರ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅಲ್ಲಿಗೆ ಅದೇ ಗ್ರಾಮದ ನಿವಾಸಿಗಳಾದ ಮಣಿ ನಾಣಯ್ಯ, ಅವರ ಪತ್ನಿ ಕನ್ನಿಕೆ ಮತ್ತು ಮಗ  ಸುಧಿ ಸುಬ್ಬಯ್ಯ ಮುಂತಾದವರು ಸೇರಿಕೊಂಡು ಆಸ್ತಿಯ ವಿಚಾರವಾಗಿ ಜಗಳವಾಡಿ ಸುಧಿ ಸುಬ್ಬಯ್ಯನು ಕತ್ತಿಯಿಂದ ಪೂಣಚ್ಚನವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಸಿ.ಎ.ಪೂಣಚ್ಚನವರು ಮಣಿ ನಾಣಯ್ಯನವರ ಮೇಲೆ ಹಲ್ಲೆ ಮಾಡಿ ಮಣಿ ನಾಣಯ್ಯನವರ ಮಗ  ಸುಧಿ ಸುಬ್ಬಯ್ಯನವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ದೂರುಗಳಿಗೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆ
                ದಿನಾಂಕ 28/05/2017ರಂದು ಮಡಿಕೇರಿ ಬಳಿಯ ಹೆಬ್ಬೆಟ್ಟಗೇರಿ ನಿವಾಸಿ ಪಿ.ಕೆ.ರಜಿತ್ ಎಂಬವರು ಮಡಿಕೇರಿಯಿಂದ ಅವರ ಮನೆಗೆ ಹೋಗುತ್ತಿರುವಾಗ ಅಬ್ಬಿಧಾಮ ಎಸ್ಟೇಟಿನ ಬಳಿ ಹೆಬ್ಬೆಟ್ಟಗೇರಿ ಗ್ರಾಮದ ಕಾಶಿ ಮತ್ತು ಚಂಗಪ್ಪ ಎಂಬವರು ರಜಿತ್‌ರವರನ್ನು ದಾರಿ ತಡೆದು ದಿನಾಂಕ 27/05/2017ರಂದು ನಡೆದ ಜೀಪುಗಳ ಪ್ರತಿಭಟನೆ ವಿಚಾರವಾಗಿ ಜಗಳವಾಡಿ ದೊಣ್ಣೆಯಿಂದ ರಜಿತ್‌ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, May 29, 2017

ಪಾದಚಾರಿಗೆ ಬೈಕ್ ಡಿಕ್ಕಿ
                          ದಿನಾಂಕ 27/05/2017ರಂದು ಸಿದ್ದಾಪುರ ಬಳಿಯ ಅಭ್ಯತ್‌ಮಂಗಲ ಪೈಸಾರಿ ನಿವಾಸಿ ಮಣಿ ಯಾನೆ ಸೆಲ್ವಮುತ್ತು ಎಂಬವರು ಸಿದ್ದಾಪುರ ನಗರದ ಐಸ್‌ ಕ್ರೀಮ್ ಕೂಲ್ ಬಾರ್ ಅಂಗಡಿಯ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಎಲ್-3186ರ ಸಂಖ್ಯೆಯ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಣಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಣಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                         ದಿನಾಂಕ 28/05/2017ರಂದು ಸಿದ್ದಾಪುರ ನಗರದ ನಿವಾಸಿ ಬಿ.ಬಿ.ರಮೇಶ್‌ ಎಂಬವರು ಅವರಿಗೆ ಸೇರಿದ ಪೂಜಾ ಡ್ರೈವಿಂಗ್ ಸ್ಕೂಲ್‌ನ ಕಚೇರಿಯಲ್ಲಿರುವಾಗ ಅಲ್ಲಿಗೆ ಬಂದ ಪ್ರಭಾಕರ ಎಂಬವರು ಅವರ ಪತ್ನಿ ಅವರ ವಿರುದ್ದ ಪೊಲೀಸ್‌ ದೂರು ನೀಡಿದ ಬಗ್ಗೆ ಜಗಳವಾಡಿ ರಮೇಶ್‌ರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಚಿನ್ನದ ಸರ ಕಳ್ಳತನ
                   ವಿರಾಜಪೇಟೆ ನಗರದ ನಿವಾಸಿ ಪಾಲೇಕಂಡ ಜೀವನ್ ಎಂಬವರ ತಾಯಿ ಗಂಗಮ್ಮ ಎಂಬವರು ದಿನಾಂಕ 17/05/2017ರಂದು ಅವರ ನೆಂಟರ ಮನೆಗೆ ಹೋಗಿ ಮರಳಿ ಬಂದು ಅವರ ಚಿನ್ನದ ಸರವನ್ನು ಅವರ ಮಲಗುವ ಕೋಣೆಯ ಮೇಜಿನ  ಡ್ರಾಯರಿನಲ್ಲಿಟ್ಟಿದ್ದು  ನಂತರ ದಿನಾಂಕ 28/05/2017ರಂದು ನೋಡುವಾಗ ಚಿನ್ನದ ಸರ ಕಾಣೆಯಾಗಿದ್ದು ಮನೆ ಕೆಲಸ ಮಾಡುವ ಬೋಯಿಕೇರಿ ನಿವಾಸಿ ಸೀತಮ್ಮ ಎಂಬವರು ಸುಮಾರು ರೂ.3,00,000/- ಬೆಲೆ ಬಾಳುವ ಚಿನ್ನದ ಸರವನ್ನು ಕಳವು ಮಾಡಿರಬಹುದಾಗಿ ಸಂಶಯವಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ
                       ದಿನಾಂಕ 27/05/2017ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ನಿವಾಸಿ ಕಾವೇರಿ ಎಂಬವರ ತಂದೆ ರಾಜು ಎಂಬವರು ಯಾವುದೋ ಕಾರಣಕ್ಕೆ ತಿಮೆಟ್  ಕ್ರಿಮಿ ನಾಶಕ ಔಷಧಿಯನ್ನು  ಸೇವಿಸಿದ್ದು ಚಿಕಿತ್ಸೆಗಾಗಿ  ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ಸಿಗೆ ಬೈಕು ಡಿಕ್ಕಿ
                     ದಿನಾಂಕ 28/05/2017ರಂದು ಮೂರ್ನಾಡು ನಿವಾಸಿ ಕೆ.ಎಂ.ಅಬ್ದುಲ್ ಜಲೀಲ್‌ ಎಂಬವರು ಕೆಎ-12-ಬಿ-1555ರ ಖಾಸಗಿ ಬಸ್ಸನ್ನು ಚಾಲಿಸಿಕೊಂಡು ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಬರುತ್ತಿರುವಾಗ ದಾರಿ ಮಧ್ಯೆ ಅಂಬಟ್ಟಿ ಎಂಬಲ್ಲಿ ಕೆಎ-09-ಇಬಿ-716ರ ಮೋಟಾರು ಬೈಕನ್ನು ಅದರ ಚಾಲಕ ಹೇಮಂತ್‌ ಗೌಡ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಹೇಮಂತ್ ಗೌಡ ಹಾಗೂ ಹಿಂಬದಿ ಸವಾರನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ರಿಕ್ಷಾ ಡಿಕ್ಕಿ
                     ದಿನಾಂಕ 28/05/2017ರಂದು ಭಾಗಮಂಡಲ ಬಳಿಯ ಕಾರುಗುಂದ ನಿವಾಸಿ ನಬೀಯುಲ್ ಇಸ್ಲಾಂ ಎಂಬವರು ಕುಮಾರ್ ಎಂಬವರೊಡನೆ ಕೆಎ-12-ಎಲ್-9592ರ ಮೋಟಾರು ಬೈಕಿನಲ್ಲಿ ಚೇರಂಬಾಣೆಗೆ ಹೋಗುತ್ತಿರುವಾಗ ಕೊಟ್ಟೂರು ಬಳಿ ಕೆಎ-12-ಎ-4232ರ ರಿಕ್ಷಾವನ್ನು ಅದರ ಚಾಲಕ ಚಂದ್ರಶೇಖರ್ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಾಲಿಸಿಕೊಂಡು ಬಂದು ನಬೀಯುಲ್ ಇಸ್ಲಾಂರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿದ್ಯುತ್ ಸ್ಪರ್ಶ,ವ್ಯಕ್ತಿಯ ಮರಣ  
                       ದಿನಾಂಕ 28/05/2017ರಂದು  ವಿರಾಜಪೇಟೆ ಬಳಿಯ ನಲ್ವತೊಕ್ಲು ನಿವಾಸಿ ಅಬ್ದುಲ್ಲಾ ಎಂಬವರು ನಲ್ವತೊಕ್ಲು ನಿವಾಸಿ ಎಲಿಜಾ ಎಂಬವರ ತೋಟದಲ್ಲಿ ಮರ ಕಪಾತು  ಕೆಲಸ ಮಾಡುತ್ತಿರುವಾಗ ಮರದ ರೆಂಬೆ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದು ಅಬ್ದುಲ್ಲಾರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿಗೆ ಕಾರು ಡಿಕ್ಕಿ
                      ದಿನಾಂಕ 28/05/2017ರಂದು ಸೋಮವಾರಪೇಟೆ ನಿವಾಸಿ ವಿಕ್ಟರ್ ಡಿ'ಸೋಜಾ ಎಂಬವರು ಕೆಎ-12-7006ರ ಲಾರಿಯಲ್ಲಿ ಸಿಲ್ವರ್ ಓಕ್ ಮರಗಳನ್ನು ಸಾಗಿಸುತ್ತಿರುವಾಗ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಲಾರಿಯ ಚಕ್ರದ ಗಾಳಿಯನ್ನು ಪರೀಕ್ಷಿಸುತ್ತಿರುವಾಗ ಕೆಎ-02-ಪಿ-9352ರ ಕಾರನ್ನು ಅದರ ಚಾಲಕ ಮಂಜುನಾಥ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಯ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿ ಹಾಗೂ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, May 28, 2017

ಸೇತುವೆಗೆ ಕಾರು ಡಿಕ್ಕಿ
                       ದಿನಾಂಕ 27/05/2017ರಂದು ಮುಂಜಾನೆ ವೇಳೆ ವಿರಾಜಪೇಟೆ ಬಳಿಯ ಮಾಕುಟ್ಟ ಬಳಿ ಕೆಎಲ್-08-ಬಿಎಫ್-1122ರ ಕಾರನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ಮಾಕುಟ್ಟದ ಅಂಬು ಹೋಟೆಲ್‌ನ ಬಳಿ ಇರುವ ಸೇತುವೆಗೆ ಡಿಕ್ಕಿಪಡಿಸಿದ ಪರಿಣಾಮ ಸೇತುವೆಗೆ ಸುಮಾರು ರೂ.50 ಸಾವಿರದಷ್ಟು ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಡಾನೆ ಧಾಳಿ, ವ್ಯಕ್ತಿ ಮರಣ
                       ದಿನಾಂಕ 27/05/2017ರಂದು ವಿರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಮಾಳೇಟಿರ ಚುಕ್ಕು ದೇವಯ್ಯ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಬಳಪಂಡ ತಿಮ್ಮಯ್ಯ ಎಂಬವರ ಮೇಲೆ ಮಾಳೇಟಿರ ಬಿದ್ದಪ್ಪ ಎಂಬವರ ಗದ್ದೆ ಬಳಿ ಇರುವ ಕಾಡು ಜಾಗದಲ್ಲಿ ಕಾಡಾನೆಯು ತುಳಿದು ಧಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ತಿಮ್ಮಯ್ಯನವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪಿಗೆ ಸ್ಕೂಟರ್ ಡಿಕ್ಕಿ
                  ದಿನಾಂಕ 27/05/2017ರಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಜೀಪು ಚಾಲಕ ರವಿಕುಮಾರ್‌ ಎಂಬವರು ಅವರ ಮೇಲಧಿಕಾರಿ ಪ್ರಕಾಶ್‌ ಎಂಬವರನ್ನು ಕರೆದುಕೊಂಡು ಕೆಎ-12-ಜಿ-457ರ ಜೀಪಿನಲ್ಲಿ ಮಡಿಕೇರಿಯಿಂದ ಕುಶಾಲನಗರ ಕಡೆಗಾಗಿ ಬ್ಯಾಡಗೊಟ್ಟಕ್ಕೆ ಹೋಗುತ್ತಿರುವಾಗ ಕುಶಲನಗರದ ತಾವರೆಕೆರೆ ಬಳಿ ಕೆಎ-12-ಕ್ಯು-3798ರ ಸ್ಕೂಟರನ್ನು ಅದರ ಚಾಲಕ ಅನಿಲ್ ಕುಮಾರ್ ಎಂಬಾತನು ಜೀಪಿನ ಹಿಂದಿನಿಂದ ಜೀಪನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೀಪಿನ ಮುಂದಿನ ಬಂಪರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಚಾಲಕ ಅನಿಲ್‌ ಕುಮಾರ್‌ರವರು ಗಾಯಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                     ದಿನಾಂಕ 27/05/2017ರಂದು ಬೆಂಗಳೂರು ನಿವಾಸಿ ಅಂಕುಶ್ ಎಂಬವರು ಅವರ ಸ್ನೇಹಿತ ಶರತ್‌ ಎಂಬವರ ಕೆಎ-53-ಎಂಡಿ-4832ರ ಕಾರಿನಲ್ಲಿ ಶರತ್ ಮತ್ತು ಶರತ್‌ರ  ಪತ್ನಿ ಮಕ್ಕಳೊಂದಿಗೆ  ತಲ ಕಾವೇರಿಗೆ ಬಂದು ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಗೆ ಹೋಗುತ್ತಿರುವಾಗ ಮೂರ್ನಾಡು ಬಳಿ ಎದುರುಗಡೆಯಿಂದ ಕೆಎ-12-ಪಿ-6962ರ ಕಾರನ್ನು ಅದರ ಚಾಲಕ ಬಲಗಡೆಯಲ್ಲಿ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಂಕುಶ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯಾಗಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, May 27, 2017

ಕ್ಷುಲ್ಲಕ ಕಾರಣಕ್ಕೆ ಗಲಾಟೆ
                         ದಿನಾಂಕ 24/05/2017ರಂದು ರಾತ್ರಿ  ವೇಳೆ  ಭಾಗಮಂಡಲ ಠಾಣಾ ವ್ಯಾಪ್ತಿಯ ಕರಿಕೆಯ ಬಾರ್‌ವೊಂದಕ್ಕೆ ಕರಿಕೆ ತೋಟಂ ನಿವಾಸಿಗಳಾದ ಕಾಟೂರ್ ಪ್ರಸನ್ನ, ನಿಶಾಂತ್ ಮತ್ತು ಮತ್ತೋರ್ವ ವ್ಯಕ್ತಿಯು ಬಂದು ಬಾರ್‌ನಲ್ಲಿ ಮದ್ಯಪಾನ ಮಾಡಿ ಹಣ ಕೊಡುವುದಿಲ್ಲವೆಂದು ಗಲಾಟೆ ಮಾಡಿದ್ದು ವಿಚಾರಿಸಿದ ಬಾರ್‌ ಮ್ಯಾನೇಜರ್ ಜಾನ್ಸನ್ ಎಂಬವರನ್ನು ಅಶ್ಲೀಲ ಶಬ್ದಗಳಿಂದ ಬೈದು ಬಾರಿನಲ್ಲಿದ್ದ ಸುಮಾರು ರೂ.5,000/- ಮೌಲ್ಯದ ಮದ್ಯದ ಬಾಟಲಿಗಳನ್ನು ಒಡೆದುಹಾಕಿ ನಷ್ಟಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಅಸ್ವಾಭಾವಿಕ ಸಾವು
                    ವಿರಾಜಪೇಟೆ ಬಳಿಯ ನಾಂಗಾಲ ಗ್ರಾಮದ ನಿವಾಸಿ ಶಶಿಕುಮಾರ್ ಎಂಬವರ ಪತ್ನಿ ಉಷಾ ಎಂಬವರು ದಿನಾಂಕ 26/05/2017ರಂದು ಬುಟ್ಟಿಯಂಡ ತಿಮ್ಮಯ್ಯ ಎಂಬವರ ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದು ಸಂಜೆಯಾದರೂ ಮರಳಿ ಬಾರದ ಕಾರಣ ಶಶಿಕುಮಾರ್ ಮತ್ತು ಕುಟುಂಬದವರು ತೋಟಕ್ಕೆ ಹೋಗಿ ಹುಡುಕಾಡಿದಾಗ ತೋಟದಲ್ಲಿ ಉಷಾರವರ  ಮೃತ ದೇಹವು ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, May 26, 2017

ಅಕ್ರಮ ಮರಳು ಸಾಗಾಟ:

       ಶನಿವಾರಸಂತೆ ಠಾಣಾ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಹಿನ್ನೀರಿನ ಹೊಳೆಯಿಂದ ದಿನಾಂಕ 25-5-2017 ರಂದು
ನಿಲುವಾಗಿಲು ಗ್ರಾಮದ ಚಿದಾನಂದ,ರಾಜೇಶ್, ವರಣ್ ಮತ್ತು ಕಟ್ಟೆಪುರ ಗ್ರಾಮದ ಮಂಜುನಾಥರವರುಗಳು ಸೇರಿಕೊಂಡು ಸರ್ಕಾರದ ಸೊತ್ತಾದ ಮರಳನ್ನು ಕಳವು ಮಾಡಿ ಕೆಎ-02 ಎಬಿ-3695ರ ಟಿಪ್ಪರ್, ಟ್ಯ್ರಾಕ್ಟರ್ ನಂ ಕೆಎ-13 ಟಿ-6249 ಹಾಗೂ ಟ್ರೈಲರ್ ನಂ ಕೆಎ-13 ಟಿ-6250ರ ಟ್ರೈಲರ್ ಗೆ ತುಂಬಿಸಿಕೊಂಡು ಸದರಿ ವಾಹನಗಳಿಗೆ ಕಳವು ಮಾಡಿದ ಮರಳನ್ನು ಸಾಗಾಟ ಮಾಡಲು ಕೆಎ-13 ಎಂ-5998 ರ ಕಾರನ್ನು ಬೆಂಗವಾಲಾಗಿ ಉಪಯೋಗಿಸಿ ಕೊಂಡು ಮರಳು ಕಳವು ಮಾಡಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಶನಿವಾರಸಂತೆ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಮರಳು ಸಾಗಾಟ ಮಾಡಲು ಉಪಯೋಗಿಸಿದ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಂಚಾಯ್ತಿ ನೌಕರನ ಮೇಲೆ ಹಲ್ಲೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಕಲ್ಕಂದೂರು ಗ್ರಾಮದಲ್ಲಿ ದಿನಾಂಕ 25-5-2017 ರಂದು ಹಾನಗಲ್ಲು ಪಂಚಾಯ್ತಿಯಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಕೆ.ಕೆ.ಕುಮಾರ್ ರವರು ಕಲ್ಕಂದೂರು ಗ್ರಾಮದ ಜಯಮ್ಮ ಎಂಬವರ ಮನೆಯ ಹತ್ತಿರ ಹಾನಿಗೊಳಗಾದ ನೀರಿನ ಪೈಪ್ ಲೈನ್ ನ್ನು ಗುದ್ದಲಿಯಿಂದ ಮಣ್ಣನು ಅಗೆದು ಸರಿಪಡಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಜಯಮ್ಮನವರು, ಕೆ.ಕೆ. ಕುಮಾರ್ ರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೈಗೆ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ:

     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಆಲೆಕಟ್ಟೆ ರಸ್ತೆ ನಿವಾಸಿ ಪಿ. ಲೋಕೇಶ ರವರು ದಿನಾಂಕ 25-5-2017 ರಂದು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ನಗರದ ವಿವೇಕಾನಂದ ವೃತ್ತದ ಬಳಿ ನಿಲ್ಲಿಸಿ ಮೋಟಾರ್ ಸೈಕಲಿನಲ್ಲಿ ಹೊರಡುವ ವೇಳೆ ಯಡೂರು ಕಡೆಯಿಂದ ಬಂದ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದ ಪಿ.ಲೋಕೇಶ ಹಾಗು ಹಿಂಬದಿಯಲ್ಲಿ ಕುಳಿತಿದ್ದ ಮಣಿ ಎಂಬವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿಗಾಗಿ ತಾಯಿಗೆ ಕೊಲೆ ಬೆದರಿಕೆ:
 
      ಆಸ್ತಿ ಪಾಲು ಮತ್ತು ನಿವೃತ್ತಿ ಹಣದ ವಿಚಾರದಲ್ಲಿ ವ್ಯಕ್ತಿಯೋರ್ವ ತನ್ನ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ನಿವಾಸಿ ಶ್ರೀಮತಿ ಕಾವೇರಮ್ಮ ಎಂಬವರೊಂದಿಗೆ ಅವರ ಮಗ ಡಿ.ಎನ್. ಈಶ್ವರ ಎಂಬಾತ ಆಸ್ತಿ ವಿಚಾರದಲ್ಲಿ ಮತ್ತು ನಿವೃತ್ತಿ ಹಣದ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮರದಿಂದ ಬಿದ್ದು ವ್ಯಕ್ತಿ ಸಾವು: 

      ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದ ನಿವಾಸಿ ಶ್ರೀಮತಿ ವನಜ ಎಂಬವರ ಪತಿ ಹೆಚ್. ಮಾಚಯ್ಯ ಎಂಬವರು ದಿನಾಂಕ 25-5-2017 ರಂದು ತಮ್ಮ ಮೆನೆಯ ಮುಂಭಾಗದಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿ ಕುಯ್ಯಲು ಪಕ್ಕದ ಮರಕ್ಕೆ ಹತ್ತಿ ತೆಂಗಿನ ಕಾಯಿಯನ್ನು ಕುಯ್ಯುತ್ತಿರುವಾಗ ಮರದ ಕೊಂಬೆ ಮುರಿದು ಮರದಿಂದ ಕೆಳಗೆ ಬಿದ್ದ ಸದರಿ ,ಮಾಚಯ್ಯನವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, May 25, 2017

ರಸ್ತೆ ಅಪಘಾತ, ಸಾವು
                       ದಿನಾಂಕ 23.05.2017 ರಂದು ಸೋಮವಾರಪೇಟೆ ಬಳಿಯ ಬಳಗುಂದ ನಿವಾಸಿ ಚೆರಿ ಕೊರಿಯಾ ಎಂಬವರು ಸೋಮವಾರಪೇಟೆ ಬಳಿಯ ನ್ಯಾಯಾಲಯದ ರಸ್ತೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-02-ಎಎಫ್-9809 ರ ಪೋರ್ಡ್‌ ಪಿಗೋ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಚೆರಿ ಕೊರಿಯಾರವರಿಗೆ ಅಪಘಾತಪಡಿಸಿ ಕಾರನ್ನು ನಿಲ್ಲಿಸದೆ ಹೋಗಿದ್ದು, ತೀವ್ರವಾಗಿ ಗಾಯಗೊಂಡ ಚೆರಿ ಕೊರಿಯಾರವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ, ಕೊಲೆ ಬೆದರಿಕೆ
                    ದಿನಾಂಕ 24/05/2017ರಂದು ಶನಿವಾರಸಂತೆ ನಿವಾಸಿ ಹರೀಶ್ ಎಂಬವರು ಗುಡುಗಳಲೆಯ ಅಕ್ಕಿಗಿರಣಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮಹೇಶ ಮತ್ತು ಲತಾ ಎಂಬವರು ಬಂದು ಹಳೆ ವೈಷಮ್ಯದಿಂದ ಹರೀಶರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಹರೀಶರವರು ದೂರು ನೀಡಿದ್ದು ಅದೇ ರೀತಿ ಮಹೇಶರವರು ರಸ್ತೆಯಲ್ಲಿ ಟ್ರ್ಯಾಕ್ಟರ್ ಚಾಲಿಸಿಕೊಂಡು ಹೋಗುತ್ತಿದ್ದಾಗ ಹರೀಶ್ ಮತ್ತು ಇತರ ಇಬ್ಬರು ಸೇರಿಕೊಂಡು ಮಹೇಶರವರ ಮೇಲೆ ಹಲ್ಲೆ ನಡೆಸಿರುವುದಾಗಿ ಮಹೇಶರವರು ಸಹಾ ದೂರು ನೀಡಿದ್ದು ಶನಿವಾರಸಂತೆ ಪೊಲೀಸರು ಎರಡೂ ದೂರುಗಳಿಗೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಹರಿದು ವ್ಯಕ್ತಿ ಸಾವು
                      ದಿನಾಂಕ 23/05/2017ರಂದು ಪೊನ್ನಂಪೇಟೆ ಬಳಿಯ ಪೊನ್ನಪ್ಪಸಂತೆ ಗ್ರಾಮದಲ್ಲಿ ಚೆಸ್ಕಾಂ ಲೈನ್ ಮ್ಯಾನ್ ರಮೇಶ್ ನೇಗಿನಾಳ ಎಂಬವರು ವಿದ್ಯುತ್ ಕಂಬ ಹತ್ತಿ ದುರಸ್ತಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿ ಡಿಕ್ಕಿ, ಸಾವು
                        ದಿನಾಂಕ 23/05/2017ರ ರಾತ್ರಿ ವೇಳೆ ಗೋಣಿಕೊಪ್ಪ ನಿವಾಸಿ ಮಣಿ ಎಂಬವರು ಅವರ ಸ್ನೇಹಿತರಾದ ಬಷೀರ್ ಹಾಗೂ ಗೌಸ್ ಎಂಬವರೊಂದಿಗೆ ಕೆಎ-09-ಎನ್-2965ರ ಕಾರಿನಲ್ಲಿ ಕುಶಾಲನಗರಕ್ಕೆ ಹೋಗುತ್ತಿರುವಾಗ ಮತ್ತಿಗೋಡು ಆನೆ ಕ್ಯಾಂಪ್ ಬಳಿ ಎದುರುಗಡೆಯಿಂದ ಕೆಎ-01-ಎ-2336ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಣಿರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಚಾಲಕ ಬಷೀರ್ ರವರ ನಿಯಂತ್ರಣ ತಪ್ಪಿ ಲಾರಿಯ ಹಿಂದೆ ಬರುತ್ತಿದ್ದ ಕೆಎಲ್-64-ಎ-5743ರ ಟೆಂಪೋ ಟ್ರಾವೆಲರ್ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರಿಗೂ ಗಾಯಗಳಾಗಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೀವ್ರವಾಗಿ ಗಾಯಗೊಂಡಿದ್ದ ಗೌಸ್ ರವರನ್ನು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಿದ್ದು ಅಲ್ಲಿ ಗೌಸ್ ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.